ಮಂಡ್ಯ: ರಾಷ್ಟ್ರೀಯ ಹೆದ್ದಾರಿಗಳಲ್ಲಿ 60 ಕಿಲೋ ಮೀಟರ್ಗೆ ಒಂದು ಟೋಲ್ ಗೇಟ್ ನಿರ್ಮಾಣ ಮಾಡಬೇಕು ಎನ್ನುವುದು ಕೇಂದ್ರ ಸರ್ಕಾರದ ನಿಯಮ. ಸರ್ಕಾರದ ಆ ನಿಯಮ ಪಾಲಿಸಬೇಕಾದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(national highway authority)ವೇ ಅವೈಜ್ಞಾನಿಕ ಮತ್ತು ಅಕ್ರಮ ಟೋಲ್ಗಳಿಗೆ ಅವಕಾಶ ನೀಡಿ, ನಿತ್ಯವೂ ಕೋಟ್ಯಾಂತರ ರೂಪಾಯಿ ಹಣವನ್ನ ವಸೂಲಿ ಮಾಡುತ್ತಿದೆ. ಈ ಅವೈಜ್ಞಾನಿಕ ಮತ್ತು ಅಕ್ರಮ ಟೋಲ್ಗಳಿಂದ ಬೆಂಗಳೂರು ಮತ್ತು ಮಂಗಳೂರು ರಾಷ್ಟ್ರೀಯ ಹೆದ್ದಾರಿ ನಡುವಿನ ಪ್ರಯಾಣಿಕರು ಹಾಗೂ ಸ್ಥಳೀಯರು ನಿತ್ಯವೂ ಕಿರಿಕಿರಿ ಅನುಭವಿಸುತ್ತಿದ್ದಾರೆ. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಎರಡೂ ಗಡಿ ಭಾಗಗಳಲ್ಲಿ ಅಂದರೆ ಕೇವಲ 15 ಕಿ.ಮೀ. ಅಂತರದಲ್ಲಿಯೇ ಎರಡು ಪ್ರತ್ಯೇಕ ಟೋಲ್ಗಳನ್ನು ತೆರೆಯಲಾಗಿದೆ.
ಬೆಂಗಳೂರಿನಿಂದ ಹೊರಟು ನೆಲ್ಲಿಗೆರೆ ಸಮೀಪ ಕ್ಯೂಬ್ ಸಂಸ್ಥೆಗೆ ಸೇರಿದ ಒಂದು ಟೋಲ್ ಇದ್ದು, ಅದರಿಂದ ಕೇವಲ 15 ಕಿ.ಮೀ. ಅಂತರದಲ್ಲಿ ಕದಬಹಳ್ಳಿ ಬಳಿ IND-INFRAVIT ಸಂಸ್ಥೆಗೆ ಸೇರಿದ ಮತ್ತೊಂದು ಟೋಲ್ ನಿರ್ಮಾಣವಾಗಿದೆ. ಈ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರು ಎರಡೂ ಟೋಲ್ಗಳಲ್ಲೂ ಟೋಲ್ ಪಾವತಿಸಬೇಕಾಗಿದೆ. ಕದಬಹಳ್ಳಿ ಬಳಿ ಇರುವ IND-INFRAVIT ಸಂಸ್ಥೆಗೆ ಸೇರಿದ ಟೋಲ್ನಿಂದ ಸ್ಥಳೀಯರು ನಿತ್ಯವೂ ಕಿರಿಕಿರಿ ಅನುಭವಿಸುತ್ತಿದ್ದಾರೆ.
ಯಾವುದೇ ಟೋಲ್ ಮಾಡಿದರು ಸ್ಥಳೀಯರ ಅನುಕೂಲಕ್ಕಾಗಿ ಹಾಗೂ ಬೈಕ್ಗಳ ಸಂಚಾರಕ್ಕೆ ಪ್ರತ್ಯೇಕ ಸರ್ವೀಸ್ ರಸ್ತೆ ಮಾಡಬೇಕು.ಆದರೆ ಈ ಟೋಲ್ನವರು ಯಾವುದೇ ಸರ್ವೀಸ್ ರಸ್ತೆ ಮಾಡಿಲ್ಲ. ಮಾಡಿರುವ ಲೇನ್ ಅತ್ಯಂತ ಕಿರಿದಾಗಿದ್ದು, ಸಾಕಷ್ಟು ಅಪಘಾತಗಳು ನಡೆದು ಕೆಲವರು ಅಂಗವಿಕಲರಾಗಿದ್ದಾರೆ. ಸ್ಥಳೀಯರಿಗೆ ನೆಪ ಮಾತ್ರಕ್ಕಷ್ಟೇ ಪಾಸ್ ಕೊಟ್ಟಿದ್ದಾರೆ. ಅದನ್ನು ತೋರಿಸಿದರೂ ಪ್ರಯೋಜನವಿಲ್ಲ. ಶನಿವಾರ–ಭಾನುವಾರ ಸ್ಥಳೀಯರು ಸಂಚರಿಸುವುದಕ್ಕೆ ತೀವ್ರ ಕಷ್ಟವಾಗುತ್ತಿದೆ. ರೈತರು, ವ್ಯಾಪಾರಸ್ಥರು ಸಂತೆಗೆ ಹೋಗುವುದಕ್ಕೂ ಪರದಾಡಬೇಕಾಗಿದೆ ಎನ್ನುತ್ತಾರೆ ಸ್ಥಳೀಯರು.
ಇದನ್ನೂ ಓದಿ:ಮಂಡ್ಯ: ವಿಕಲಚೇತನ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಮುಸ್ಲಿಂ ಯುವಕನಿಂದ ಮತಾಂತರಕ್ಕೆ ಒತ್ತಾಯ
ಒಟ್ಟಿನಲ್ಲಿ ಸರ್ಕಾರದ ಆದೇಶದಂತೆ 15 ಕಿ.ಮೀ ಅಂತರದಲ್ಲಿ ಇರುವ ಅವೈಜ್ಞಾನಿಕ ಟೋಲ್ ತೆರವಿಗೆ ಹೆದ್ದಾರಿ ಪ್ರಾಧಿಕಾರ ಮುಂದಾಗುತ್ತದೆಯೇ? ಅಥವಾ ಸುರತ್ಕಲ್ ಟೋಲ್ ಮಾದರಿ ಹೋರಾಟಕ್ಕೆ ಅವಕಾಶ ನೀಡುತ್ತದೆಯೇ ಎಂದು ಕಾದು ನೋಡಬೇಕಾಗಿದೆ.
ವರದಿ: ಸೂರಜ್ ಪ್ರಸಾದ್ ಟಿವಿ9 ಮಂಡ್ಯ
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ