ದರ್ಶನ್​​ ಪುಟ್ಟಣ್ಣಯ್ಯ ಪದೇ ಪದೇ ಅಮೆರಿಕಕ್ಕೆ ತೆರಳುವ ಆರೋಪ: ಶಾಸಕರ ಭೇಟಿಯಾಗಲು ಉಚಿತ ವೀಸಾಗೆ ಆಗ್ರಹಿಸಿ ಡಿಸಿಗೆ ಕ್ಷೇತ್ರದ ಜನರಿಂದ ಮನವಿ

ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಪದೇ ಪದೇ ಅಮೆರಿಕಕ್ಕೆ ತೆರಳುತ್ತಿದ್ದು, ಕ್ಷೇತ್ರದ ಜನರ ಸಮಸ್ಯೆ ಆಲಿಸಲು ಲಭ್ಯವಿಲ್ಲದ ಕಾರಣ ಅವರನ್ನು ಭೇಟಿಯಾಗಲು ಉಚಿತ ವೀಸಾ ಕೊಡಿಸುವಂತೆ ಮಂಡ್ಯ ಜಿಲ್ಲಾಧಿಕಾರಿಗೆ ಸ್ಥಳೀಯರು ವಿಚಿತ್ರ ಮನವಿ ಸಲ್ಲಿಸಿದ್ದಾರೆ. ದರ್ಶನ್ ಪುಟ್ಟಣ್ಣಯ್ಯರವರ ಕುಟುಂಬ ವಿದೇಶದಲ್ಲಿ ನೆಲೆಸಿರುವ ಹಿನ್ನೆಲೆಯಲ್ಲಿ ಅವರು ಹೆಚ್ಚಿನ ಸಮಯವನ್ನು ವಿದೇಶದಲ್ಲಿ ಕಳೆಯುತ್ತಿರುವುದಿಂದ ಕ್ಷೇತ್ರದ ಜನರ ಸಮಸ್ಯೆ ಆಲಿಸಲು ಶಾಸಕರು ಇಲ್ಲದಂತಾಗಿದೆ ಎಂದೂ ದೂರಿದ್ದಾರೆ.

ದರ್ಶನ್​​ ಪುಟ್ಟಣ್ಣಯ್ಯ ಪದೇ ಪದೇ ಅಮೆರಿಕಕ್ಕೆ ತೆರಳುವ ಆರೋಪ: ಶಾಸಕರ ಭೇಟಿಯಾಗಲು ಉಚಿತ ವೀಸಾಗೆ ಆಗ್ರಹಿಸಿ ಡಿಸಿಗೆ ಕ್ಷೇತ್ರದ ಜನರಿಂದ ಮನವಿ
ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ
Image Credit source: Darshan Puttannaiah facebook page
Edited By:

Updated on: Sep 30, 2026 | 3:18 PM

ಮಂಡ್ಯ, ಸೆಪ್ಟೆಂಬರ್​​ 30: ತೀವ್ರ ಬರಗಾಲದ ಪರಿಣಾಮ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆರೆ-ಕಟ್ಟೆಗಳಲ್ಲಿ ನೀರಿಲ್ಲದೆ ಪರದಾಟ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿಯೂ ಜನ ಕಷ್ಟ ಆಲಿಸುವ ಬದಲು ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಮೆರಿಕಗೆ ತೆರಳಿದ್ದಾರೆ. ಹೀಗಾಗಿ ಶಾಸಕರನ್ನು ಭೇಟಿಯಾಗಲು ತೆರಳಬೇಕಿರುವ ಕಾರಣ ನಮಗೆ ಉಚಿತ ವೀಸಾ ಮಾಡಿಕೊಡಿ ಎಂದು ಜನರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿರುವ ಪ್ರಸಂಗ ನಡೆದಿದೆ. ಶಾಸಕರು ಪದೇ ಪದೇ ವಿದೇಶಕ್ಕೆ ಹೋಗುತ್ತಾರೆ. ಎಂಎಲ್​​ಎ ಆದಾಗಿನಿಂದ 18 ಬಾರಿ ಅಮೆರಿಕಕ್ಕೆ ತೆರಳಿದ್ದಾರೆ ಎಂದೂ ದೂರಲಾಗಿದೆ.

ಜಿಲ್ಲಾಧಿಕಾರಿಗೆ ಜನರು ನೀಡಿದ ಮನವಿಯಲ್ಲಿ ಏನಿದೆ?

ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ವಿದೇಶದಲ್ಲಿರುವ ಕಾರಣ ಅವರನ್ನು ವಿದೇಶದಲ್ಲಿ ಭೇಟಿ ಯಾಗಲು ಅನುಕೂಲವಾಗುವಂತೆ ಕ್ಷೇತ್ರದ ಎಲ್ಲಾ ಜನರಿಗೆ ಉಚಿತ ವೀಸಾ ಮಾಡಿಕೊಡುವಂತೆ ಮನವಿ ಮಾಡುತ್ತೇವೆ. ದರ್ಶನ್ ಪುಟ್ಟಣ್ಣಯ್ಯರವರ ಕುಟುಂಬ ವಿದೇಶದಲ್ಲಿ ನೆಲೆಸಿರುವ ಹಿನ್ನೆಲೆಯಲ್ಲಿ ಅವರು ಹೆಚ್ಚಿನ ಸಮಯವನ್ನು ವಿದೇಶದಲ್ಲಿ ಕಳೆಯುತ್ತಿರುವುದಿಂದ ಕ್ಷೇತ್ರದ ಜನರ ಸಮಸ್ಯೆ ಆಲಿಸಲು ಶಾಸಕರು ಇಲ್ಲದಂತಾಗಿದೆ. ಕ್ಷೇತ್ರಕ್ಕೆ ಬಂದಾಗ ನಾಲೈದು ಹಳ್ಳಿಗೆ ತೆರಳಿ ಕಾಮಗಾರಿ ಗುದ್ದಲಿ ಪೂಜೆ ನಡೆಸಿ ಅದನ್ನೇ ವೈಭವಿಕರಿಸಿಕೊಂಡು ಕಾಲ ಕಳೆಯುತ್ತಿದ್ದಾರೆ. ಬರಗಾಲ ಎದುರಾಗಿ ರೈತರು ಸಂಕಷ್ಟ ಸ್ಥಿತಿಯಲ್ಲಿದ್ದಾರೆ. ಕೆರೆ ಕಟ್ಟೆಗಳಲ್ಲಿ ನೀರಿಲ್ಲ, ಜಾನುವಾರುಗಳು ಕುಡಿಯಲು ನೀರಿಲ್ಲದೆ ಪರಿತಪಿಸುತ್ತಿದೆ. ಹೇಮಾವತಿ ನಾಲೆಗಳಿಗೆ ನೀರು ಹರಿಸಿ ಕೆರೆ ಕಟ್ಟೆ ತುಂಬಿಸಲು ಒತ್ತಡ ಹಾಕಬೇಕಾದ ಶಾಸಕರು KRS ನೀರೆಲ್ಲ ತಮಿಳುನಾಡಿಗೆ ಹರಿದು ಹೋಗುತ್ತಿದ್ದರೂ ಕಂಡು ಕಾಣದಂತಿದ್ದಾರೆ. ಸರ್ಕಾರ ಪಾಂಡವಪುರ ತಾಲೂಕನ್ನು ಬರಪೀಡಿತ ಎಂದು ಘೋಷಿಸಲು ಮೀನಾ ಮೇಷ ಮಾಡಿದ್ದು, ಸರ್ಕಾರದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದರಿಂದ ಎರಡನೇ ಪಟ್ಟಿಯಲ್ಲಿ ಬರಪೀಡಿತ ತಾಲೂಕು ಎಂದು ಘೋಷಿಸಿರುವುದು ಶಾಸಕರ ವೈಫಲ್ಯತೆಯನ್ನು ತೋರ್ಪಡಿಸಿದೆ.

ಇದನ್ನೂ ಓದಿ: ಬದುಕಿದ್ದಾಗಲೇ ವ್ಯಕ್ತಿಗೆ ಮರಣ ಪ್ರಮಾಣ ಪತ್ರ: ಅಧಿಕಾರಿಗಳ ಎಡವಟ್ಟಿಗೆ ರೇಷನ್, ಬ್ಯಾಂಕ್ ಖಾತೆ ಕಳೆದುಕೊಂಡು ವ್ಯಕ್ತಿ ಪರದಾಟ!

ವೃದ್ಧಾಪ್ಯ ವೇತನ ಸೇರಿದಂತೆ ಸಾಮಾಜಿಕ ಪಿಂಚಣಿ ಯೋಜನೆ ಫಲಾನುಭವಿಗಳು ಸರ್ಕಾರಿ ಕಚೇರಿಗೆ ಅಲೆದಾಡುತ್ತಿದ್ದಾರೆ. ವಿದ್ಯಾರ್ಥಿಗಳು ಜಾತಿ, ಆದಾಯ ಪ್ರಮಾಣ ಪತ್ರಕ್ಕೆ ವಾರಗಟ್ಟಲೆ ಕಾಯಬೇಕಿದೆ. ಹೀಗಿದ್ದರೂ ಜನಸಾಮಾನ್ಯರ ಸಂಕಷ್ಟವನ್ನು ಪರಿಹರಿಸಲು ಶಾಸಕರು ಮುಂದಾಗುತ್ತಿಲ್ಲ. ಇವರ ತಂದೆ ಕೆ.ಎಸ್. ಪುಟ್ಟಣ್ಣಯ್ಯ ಬೀದಿಯಲ್ಲಿ ನಿಂತು ಹೋರಾಟ ಮಾಡಿದ್ದಾರೆ. ಅದೇ ರೀತಿ ಸದನದಲ್ಲಿಯೂ ಜನರಿಗಾಗಿ ಧ್ವನಿ ಎತ್ತುತ್ತಿದ್ದರು. ಆದರೆ ಅವರ ಮಗ ದರ್ಶನ್‌ ಪಟ್ಟಣ್ಣಯ್ಯ ಏಕೆ ಕ್ಷೇತ್ರದ ಜನರನ್ನು ನಿರ್ಲಕ್ಷಿಸುತ್ತಿದ್ದಾರೆ? ರೈತ ಸಂಘದ ಹೋರಾಟದಿಂದ ಶಾಸಕರಾದ ಇವರು ಇದೀಗ ರೈತರ ಕಷ್ಟಕ್ಕೆ ಸ್ಪಂದಿಸದಿರುವುದು ರೈತರಲ್ಲಿಯೂ ಅಸಮಾಧಾನ ಮೂಡಿಸಿದೆ. ಬರಗಾಲದ ಸಂಕಷ್ಟ ಪರಿಸ್ಥಿತಿಯಲ್ಲಿ ರೈತರ ಜೊತೆ ನಿಲ್ಲದ ಮೇಲೆ ಇಂತವರು ಏಕೆ ಶಾಸಕರಾಗಬೇಕು? ಎಂದು ಪ್ರಶ್ನಿಸಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 3:14 pm, Wed, 30 September 26

ದಿಲೀಪ್​, ಚೌಡಹಳ್ಳಿ

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ಗ್ರಾಮದವನು. ಕಳೆದ 13 ವರ್ಷದಿಂದ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ.‌ಪತ್ರಿಕೋಧ್ಯಮ ಪದವಿದರನಾಗಿದ್ದೇನೆ.ಮೊದಲಿಗೆ ಮೈಸೂರಿನ ಸ್ಥಳಿಯ ವಾಹಿನ ಹಾಗೂ ಪತ್ರಿಕೆಯಲ್ಲಿ ಕೆಲಸ ನಿರ್ವಹಿಸಿದ್ದೆ.ನಂತರ ಪಬ್ಲಿಕ್ ಟಿವಿಯಲ್ಲಿ ಚಾಮರಾಜನಗರ ಜಿಲ್ಲಾವರದಿಗಾರನಾಗುವ ಅವಕಾಶ ಸಿಕ್ಕಿತು. ಅದಾದ ಬಳಿಕ ಐದು ವರ್ಷಗಳ ಕಾಲ ಚಾಮರಾಜನಗರದಲ್ಲಿ ಕೆಲಸ ನಿರ್ವಹಿಸಿದ್ದೇನೆ. ಬಳಿಕ 2018 ರಲ್ಲಿ ಟಿರ್ವಿ ಮೈಸೂರು ವರದಿಗಾರನಾಗುವ ಅವಕಾಶ ಸಿಕ್ಕಿತು. ಅಂದಿನಿಂದ ಮೈಸೂರು ಜಿಲ್ಲಾ ವರದಿಗಾರರನಾಗಿ ಕೆಲಸ ನಿರ್ವಹಿಸಿದ್ದೇನೆ. ಸಧ್ಯ ಮಂಡ್ಯ ಜಿಲ್ಲಾ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಕೃಷಿ, ಸಾಹಿತ್ಯ ಆಸಕ್ತಿ ಇದೆ.

Read More
Loading...
Unable to load recommendations.
Follow Us