ಬದುಕಿದ್ದಾಗಲೇ ವ್ಯಕ್ತಿಗೆ ಮರಣ ಪ್ರಮಾಣ ಪತ್ರ: ಅಧಿಕಾರಿಗಳ ಎಡವಟ್ಟಿಗೆ ರೇಷನ್, ಬ್ಯಾಂಕ್ ಖಾತೆ ಕಳೆದುಕೊಂಡು ವ್ಯಕ್ತಿ ಪರದಾಟ!
ಮಂಡ್ಯದಲ್ಲಿ ಜೀವಂತವಾಗಿರುವ ವ್ಯಕ್ತಿಯನ್ನು ಸತ್ತಿದ್ದಾನೆಂದು ದಾಖಲೆಗಳಲ್ಲಿ ಉಲ್ಲೇಖಿಸಿರುವ ವಿಚಿತ್ರ ಘಟನೆ ನಡೆದಿದೆ. ಅಧಿಕಾರಿಗಳ ಈ ಎಡವಟ್ಟಿನಿಂದಾಗಿ ಸಂತ್ರಸ್ತ ಶಫಿಉಲ್ಲಾ ಖಾನ್ ಅವರ ರೇಷನ್ ಕಾರ್ಡ್, ಮತದಾರರ ಹಕ್ಕು ಹಾಗೂ ಬ್ಯಾಂಕ್ ಖಾತೆಗಳು ರದ್ದಾಗಿದ್ದು, ಬಡ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ನ್ಯಾಯಕ್ಕಾಗಿ ಸರ್ಕಾರಿ ಕಚೇರಿ ಹಾಗೂ ಪೊಲೀಸ್ ಠಾಣೆಗೆ ಅಲೆಯುತ್ತಿರುವ ಶಫಿಉಲ್ಲಾ ಕಣ್ಣೀರಿಡುತ್ತಿದ್ದಾರೆ.

ಮುಖ್ಯಾಂಶಗಳು
- ಮಂಡ್ಯದಲ್ಲಿ ಬದುಕಿರುವ ವ್ಯಕ್ತಿಗೆ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು.
- ಇ-ಕೆವೈಸಿ ಮಾಡಿಸಲು ಹೋದಾಗ ದಾಖಲೆಯಲ್ಲಿ ಸತ್ತಿರುವುದು ಬೆಳಕಿಗೆ ಬಂದಿದೆ.
- ರೇಷನ್, ಬ್ಯಾಂಕ್ ಖಾತೆ ರದ್ದಾಗಿ ಸಂಕಷ್ಟಕ್ಕೊಳಗಾದ ವ್ಯಕ್ತಿ ಕಣ್ಣೀರಿಟ್ಟಿದ್ದಾರೆ.
ಮಂಡ್ಯ, ಸೆಪ್ಟೆಂಬರ್ 27: ಸರಕಾರಿ ಅಧಿಕಾರಿಗಳ ಬೇಜವಾಬ್ದಾರಿ ಮತ್ತು ಎಡವಟ್ಟಿನಿಂದಾಗಿ ಬದುಕಿರುವ ವ್ಯಕ್ತಿಯೊಬ್ಬರ ದಾಖಲೆಗಳಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಉಲ್ಲೇಖಿಸಿರುವ ಘಟನೆ ಮಂಡ್ಯದಲ್ಲಿ ಬೆಳಕಿಗೆ ಬಂದಿದೆ. ಅಧಿಕಾರಿಗಳು ಮಾಡಿದ ಈ ಒಂದು ತಪ್ಪಿನಿಂದಾಗಿ ಬಡ ಕುಟುಂಬವೊಂದು ರೇಷನ್ ಕಾರ್ಡ್, ಮತದಾರರ ಹಕ್ಕು ಹಾಗೂ ಬ್ಯಾಂಕ್ ವಹಿವಾಟುಗಳನ್ನು ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿದೆ.
ರೇಷನ್ ಸಿಗದೆ ಪರದಾಟ
ಮಂಡ್ಯ ನಗರದ ಗುತ್ತಲು ಬಡಾವಣೆಯ ಟಿಪ್ಪು ರಸ್ತೆ ನಿವಾಸಿ ಶಫಿಉಲ್ಲಾ ಖಾನ್ ಎಂಬವರೇ ಅಧಿಕಾರಿಗಳ ಎಡವಟ್ಟಿನಿಂದ ಪೆಚೆಗೆ ಸಿಲುಕಿದವರು. ಶಫಿಉಲ್ಲಾ ಖಾನ್ ಅವರಿಗೆ ಕಳೆದ ಎರಡು ತಿಂಗಳಿಂದ ನ್ಯಾಯಬೆಲೆ ಅಂಗಡಿಯಲ್ಲಿ ರೇಷನ್ ಸಿಗುತ್ತಿರಲಿಲ್ಲ. ಇದರಿಂದ ಸಂಶಯಗೊಂಡು ರೇಷನ್ ಕಾರ್ಡ್ ಇ-ಕೆವೈಸಿ ಮಾಡಿಸಲು ಹೋದಾಗ ಅಧಿಕಾರಿಗಳು ನೀಡಿದ ಮಾಹಿತಿ ಕೇಳಿ ಶಫಿಉಲ್ಲಾ ಖಾನ್ ಆಘಾತಕ್ಕೊಳಗಾಗಿದ್ದಾರೆ. “ನೀವು 2024ರಲ್ಲಿಯೇ ಸಾವನ್ನಪ್ಪಿದ್ದೀರಿ ಎಂದು ವ್ಯವಸ್ಥೆಯಲ್ಲಿ ಅಪ್‌ಡೇಟ್ ಆಗಿದೆ” ಎಂದು ಸಿಬ್ಬಂದಿ ಹೇಳಿದ್ದಾರೆ.
ಮಿಮ್ಸ್ ಆಸ್ಪತ್ರೆ ಮತ್ತು ನಗರಸಭೆಯ ಎಡವಟ್ಟು
ಈ ವಿಷಯ ತಿಳಿಯುತ್ತಿದ್ದಂತೆ ಶಫಿಉಲ್ಲಾ ಖಾನ್ ನಗರಸಭೆಗೆ ತೆರಳಿ ವಿಚಾರಣೆ ನಡೆಸಿದ್ದಾರೆ. ಆಗ ಮಂಡ್ಯದ ಮಿಮ್ಸ್ ಆಸ್ಪತ್ರೆ ನೀಡಿದ ಮರಣ ವರದಿಯ ಆಧಾರದ ಮೇಲೆ ನಗರಸಭೆಯಿಂದ ‘ಡೆತ್ ಸರ್ಟಿಫಿಕೇಟ್’ (ಮರಣ ಪ್ರಮಾಣ ಪತ್ರ) ನೀಡಲಾಗಿದೆ ಎಂಬ ಸಿದ್ಧ ಸೂತ್ರದ ಉತ್ತರ ಬಂದಿದೆ. ಯಾರೋ ಮಾಡಿದ ತಪ್ಪಿಗೆ ಶಫಿಉಲ್ಲಾ ಖಾನ್ ಅವರ ಹೆಸರು ರೇಷನ್ ಕಾರ್ಡ್ ಹಾಗೂ ಮತದಾರರ ಪಟ್ಟಿಯಿಂದ ಸಂಪೂರ್ಣವಾಗಿ ಡಿಲೀಟ್ ಆಗಿದೆ. ಅಷ್ಟೇ ಅಲ್ಲದೆ, ಜೀವಂತವಾಗಿದ್ದರೂ ಸತ್ತಿದ್ದಾರೆ ಎಂದು ದಾಖಲಾಗಿರುವುದರಿಂದ ಅವರ ಬ್ಯಾಂಕ್ ಖಾತೆ ವಹಿವಾಟುಗಳೂ ಸ್ತಬ್ಧವಾಗಿವೆ.
ಕಣ್ಣೀರಿಟ್ಟ ಸಂತ್ರಸ್ತ!
ತಮ್ಮ ತಪ್ಪನ್ನು ತಿದ್ದುಪಡಿ ಮಾಡಿಕೊಡುವಂತೆ ಶಫಿಉಲ್ಲಾ ಖಾನ್ ಸರಕಾರಿ ಕಚೇರಿಗಳಿಗೆ ಪ್ರತಿದಿನ ಅಲೆಯುತ್ತಿದ್ದರೂ ಅಧಿಕಾರಿಗಳು ಕನಿಷ್ಠ ಸ್ಪಂದನೆ ನೀಡುತ್ತಿಲ್ಲ. ಇನ್ನು ಈ ಕುರಿತು ದೂರು ನೀಡಲು ಪೊಲೀಸ್ ಠಾಣೆಗೆ ತೆರಳಿದರೆ ಪೋಲಿಸರೂ ಜಾರಿಕೊಳ್ಳುತ್ತಿದ್ದಾರೆ. ಪಶ್ಚಿಮ ಠಾಣೆಗೆ ಹೋದರೆ “ನಮ್ಮ ವ್ಯಾಪ್ತಿಗೆ ಬರಲ್ಲ, ಪೂರ್ವ ಠಾಣೆಗೆ ಹೋಗಿ” ಎನ್ನುತ್ತಾರೆ. ಪೂರ್ವ ಠಾಣೆಗೆ ತೆರಳಿದರೆ ಮತ್ತೆ ಪಶ್ಚಿಮ ಠಾಣೆಗೆ ಕಳುಹಿಸುತ್ತಿದ್ದಾರೆ.
ಯಾರೋ ಮಾಡಿದ ಎಡವಟ್ಟಿನಿಂದಾಗಿ ಪ್ರತಿಯೊಂದಕ್ಕೂ ಪರದಾಡುವಂತಾಗಿದ್ದು, “ನಾನು ಜೀವಂತವಾಗಿದ್ದೇನೆ, ನನ್ನ ದಾಖಲೆಗಳನ್ನು ಸರಿಪಡಿಸಿ ನನಗೆ ನ್ಯಾಯ ಕೊಡಿಸಿ” ಎಂದು ಶಫಿಉಲ್ಲಾ ಖಾನ್ ಕಣ್ಣೀರಿಡುತ್ತಿದ್ದಾರೆ. ಜಿಲ್ಲಾಡಳಿತ ಹಾಗೂ ಹಿರಿಯ ಅಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ ಈ ಸಮಸ್ಯೆಯನ್ನು ಬಗೆಹರಿಸಬೇಕಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




