ಮಂಡ್ಯ: ಹಾಲಿಗೆ ನೀರು ಮಿಶ್ರಣ ಆಯ್ತು, ಈಗ ರಾಸಾಯನಿಕ ಬೆರಕೆ ಕೂಡ ಮಾಡಲಾಗುತ್ತಿದೆ. ಮಂಡ್ಯ ಜಿಲ್ಲಾ ಹಾಲು ಒಕ್ಕೂಟದಲ್ಲಿ ಕಳೆದ ವರ್ಷವಷ್ಟೇ ಹಾಲಿಗೆ ನೀರು ಮಿಶ್ರಣ ಹಗರಣ ಬೆಳಕಿಗೆ ಬಂದಿತ್ತು ಈಗ ಮತ್ತೆ ಹಾಲಿನಲ್ಲಿ ರಾಸಾಯನಿಕ ಬೆರಕೆ ಕೂಡ ಪತ್ತೆಯಾಗಿದೆ. ಸದ್ಯ ಈ ಬಗ್ಗೆ ನೋಟಿಸ್ ನೀಡಿದ್ದು ಹಾಲು ಶೇಖರಣೆ ಸ್ಥಗಿತಗೊಳಿಸಲಾಗಿದೆ.
ಮದ್ದೂರು ತಾಲೂಕಿನ ಕೆ.ಹೊನ್ನಗೆರೆ ಡೈರಿಯಿಂದ ಪೂರೈಕೆಯಾಗುತ್ತಿದ್ದ ಹಾಲಿನಲ್ಲಿ ರಾಸಾಯನಿಕ ಮಿಶ್ರಣ ಪತ್ತೆಯಾಗಿದೆ. ಟ್ಯಾಂಕರ್ ನೊಳಗೆ ಮತ್ತೊಂದು ಬೇಬಿ ಟ್ಯಾಂಕ್ ನಿರ್ಮಿಸಿ ಕೋಟಿ ಕೋಟಿ ವಂಚಿಸಲಾಗುತ್ತಿತ್ತು. ನೀರು ಮಿಶ್ರಣ ಪ್ರಕರಣ ಸಿಐಡಿ ತನಿಖೆಯಲ್ಲಿರುವಾಗಲೇ ರಾಸಾಯನಿಕ ಕಲಬೆರಕೆ ಹಗರಣ ಬೆಳಕಿಗೆ ಬಂದಿತ್ತು. ಪರೀಕ್ಷೆಯಲ್ಲಿ ಹಾಲಿನ ಗುಣಮಟ್ಟ ಹೆಚ್ಚು ತೋರಿಸುವಂತೆ ರಾಸಾಯನಿಕ ಬೆರಕೆ ಮಾಡಲಾಗುತ್ತಿತ್ತು. ಹಾಲಿಗೆ ನೀರು ಹಾಕಿದಾಗ ಕಡಿಮೆ ಕೊಬ್ಬಿನಾಂಶ ತೋರಬಾರದೆಂದು ರಾಸಾಯನಿಕ ಬೆರಕೆ ಮಾಡಲಾಗುತ್ತಿತ್ತು. ಅಧಿಕಾರಿಗಳು ಉಪ್ಪಿನಾಂಶದ ರಾಸಾಯನಿಕ ಕಲಬೆರಕೆ ಪತ್ತೆ ಹಚ್ಚಿದ್ದಾರೆ.
ಪ್ರತಿ ನಿತ್ಯ ಒಟ್ಟು 35 ಕ್ಯಾನುಗಳಲ್ಲಿ 1374 ಕೆ.ಜಿ ಹಾಲನ್ನು ಸಂಗ್ರಹಣೆ ಮಾಡಿ ಒಕ್ಕೋಟಕ್ಕೆ ಸರಬರಾಜು ಮಾಡಲಾಗುತ್ತಿತ್ತು. ಎಲ್ಲಾ ಕ್ಯಾನುಗಳನ್ನು ಪರೀಕ್ಷೆಗೆ ಒಳಪಡಿಸಿದಾಗ 04 ಕ್ಯಾನುಗಳಲ್ಲಿ ರಾಸಾಯನಿಕೆ ಕಲಬೆರಕೆ ಅಂಶಗಳು ಕಂಡು ಬಂದ ಹಿನ್ನೆಲೆ ಒಕ್ಕೂಟ ನೋಟಿಸ್ ನೀಡಿತ್ತು. ಸದ್ಯ ಮನ್ಮುಲ್ ಆಡಳಿತ ಮಂಡಳಿ ಕೆ.ಹೊನ್ನಲಗೆರೆ ಡೈರಿಯಲ್ಲಿ ಹಾಲು ಶೇಖರಣೆ ಸ್ಥಗಿತಗೊಳಿಸಿದೆ.
Published On - 9:04 am, Fri, 21 January 22