ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರಕ್ಕೆ ಅವಕಾಶ: ಭಾರೀ ವಾಹನ ಸಂಚಾರಕ್ಕೆ ನಿಷೇಧ

| Updated By: ಗಂಗಾಧರ​ ಬ. ಸಾಬೋಜಿ

Updated on: Aug 04, 2022 | 8:15 AM

ಬೆಳಗ್ಗೆಯಿಂದ ವಾಹನ ಸಂಚಾರ ಆರಂಭಗೊಂಡಿದೆ. ಇದರಿಂದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಯಿತು.

ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರಕ್ಕೆ ಅವಕಾಶ: ಭಾರೀ ವಾಹನ ಸಂಚಾರಕ್ಕೆ ನಿಷೇಧ
ಮೈಸೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆ ನೀರು ನಿಂತ್ತಿರುವುದು.
Follow us on

ಮಂಡ್ಯ: ರಾಜ್ಯದಲ್ಲಿ ಕಳೆದೆರಡು ದಿನಗಳಿಂದ ಮಳೆರಾಯನ (rain) ಅಬ್ಬರ ಜೋರಾಗಿದ್ದು, ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿತ್ತು. ಭಾರೀ ಮಳೆಯಿಂದಾಗಿ ಮಂಡ್ಯ ಹಾಗೂ ಮದ್ದೂರು ನಡುವೆ ಹೆದ್ದಾರಿ ಮೇಲೆ ನೀರು ಹರಿಯುತ್ತಿತ್ತು. ಸದ್ಯ ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಬೆಳಗ್ಗೆಯಿಂದ ವಾಹನ ಸಂಚಾರ ಆರಂಭಗೊಂಡಿದೆ. ಇದರಿಂದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಯಿತು. ಮಂಡ್ಯದ ಬೂದನೂರು ಹಾಗೂ ಮದ್ದೂರಿನ ಕೊಲ್ಲಿ ಸೇತುವೆ ಮೇಲೆ ನೀರು ಹರಿಯುತ್ತಿದ್ದು, ಇದೀಗ ನೀರಿನ ಪ್ರ‌ಮಾಣ ಕಡಿಮೆಯಾದ್ದರಿಂದ ಸಂಚಾರಕ್ಕೆ‌ ಅವಕಾಶ ಮಾಡಲಾಗಿದೆ. ಸದ್ಯ ಭಾರಿ ವಾಹನಗಳಿಗೆ ಮಾತ್ರ ಸಂಚಾರ ನಿಷೇಧಿಸಲಾಗಿದ್ದು, ಭಾರಿ ವಾಹನಗಳಿಗೆ ಬದಲಿ ಮಾರ್ಗದ ಮೂಲಕ ಓಡಾಡಲು ಅವಕಾಶ ಕಲ್ಪಿಸಲಾಗಿದೆ.

ಜಿಲ್ಲೆಯಲ್ಲಿ ಮಳೆಯ ಆರ್ಭಟ ತಗ್ಗಿದ್ದು, ಕಳೆದ ಮೂರು ದಿನಗಳಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ಕಳೆದ ರಾತ್ರಿ ಕೊಂಚ ಪ್ರಮಾಣದಲ್ಲಿ ಮಳೆ ತಗ್ಗಿದೆ. ಮೂರು ದಿನಗಳಿಂದ ಜಿಲ್ಲೆಯಾದ್ಯಂತ ಪ್ರವಾಹ ಎದುರಾಗಿದ್ದು, ಪ್ರವಾಹದಿಂದ ಜನರು ಕಂಗಾಲಾಗಿದ್ದರು. ಇದೀಗ ಮಳೆ ಪ್ರಮಾಣ ಕಡಿಮೆಯಾದ ಹಿನ್ನೆಲೆ ಜನರು ನಿಟ್ಟುಸಿರುವ ಬಿಡುತ್ತಿದ್ದಾರೆ.

ನಿಮಿಷಾಂಭಾ ದೇವಾಲಯದ ಸ್ನಾನ ಘಟ್ಟ ಮುಳುಗಡೆ

ಕೆ.ಆರ್.ಎಸ್​ನಿಂದ ಹೊರ ಹರಿವಿನ ಪ್ರಮಾಣ ಹೆಚ್ಚಳ ಹಿನ್ನೆಲೆ ಶ್ರೀರಂಗಪಟ್ಟಣ ಪಟ್ಟಣದ ನಿಮಿಷಾಂಭಾ ದೇವಾಲಯದ ಸ್ನಾನ ಘಟ್ಟ ಮುಳುಗಡೆಯಾಗಿದೆ. ನದಿಯಲ್ಲಿ ರಭಸವಾಗಿ ನೀರು ಹರಿಯುತ್ತಿದ್ದು, 81 ಸಾವಿರ ಕ್ಯೂಸೆಕ್ ನೀರನ್ನು ಬಿಟ್ಟಿರುವ ಹಿನ್ನೆಲೆ ತಿಂಗಳ ಅಂತರದಲ್ಲಿ ಎರಡನೇ ಬಾರಿ ಪ್ರವಾಹ ಎದುರಾಗಿದೆ. ಸದ್ಯ ನದಿ ಪಾತ್ರದ ಜನರಿಗೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದ್ದು,
ನದಿಗೆ ಯಾರು ಇಳಿಯದಂತೆ ಸೂಚನೆ ನೀಡಲಾಗಿದೆ. ನದಿಯಲ್ಲಿ ಉಕ್ಕಿ ಹರಿಯುತ್ತಿರುವ ನೀರಿನಿಂದ ಜಮೀನುಗಳಿಗೆ ನೀರು ನುಗ್ಗಿದೆ.

ಕೆರೆಗಳು ತುಂಬಿ ಕೋಡಿ ಬಿದ್ದು ಜಮೀನುಗಳಿಗೆ ನುಗ್ಗಿದ ಕೆರೆ ನೀರು

ರಾಮನಗರ: ಜಿಲ್ಲೆಯಲ್ಲಿ ಧಾರಕಾರ ಮಳೆ ಹಿನ್ನೆಲೆ ಕೆರೆಗಳು ತುಂಬಿ ಕೋಡಿ ಬಿದ್ದು ಜಮೀನುಗಳಿಗೆ ಕೆರೆ ನೀರು ನುಗ್ಗಿದ್ದು, ಜಮೀನುಗಳು ಜಲಾವೃತವಾಗಿವೆ. ನೀರಿನ ರಭಸಕ್ಕೆ ತೆಂಗಿನ ಮರಗಳು ಕೊಚ್ಚಿ ಹೋಗಿದ್ದು, ವಿದ್ಯುತ್ ಕಂಬ‌ಗಳು ನೆಲಕ್ಕೆ ಉರುಳಿರುವಂತಹ ಘಟನೆ ಚನ್ನಪಟ್ಟಣ ತಾಲ್ಲೂಕಿನ ಗ್ರಾಮದ ತಿಟ್ಟಮಾರನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ವೇಣುಗೋಪಾಲ್, ಭಾಗ್ಯಮ್ಮ, ಹನುಮಂತೇಗೌಡ ಎಂಬುವವರ‌ ಜಮೀನಿನಲ್ಲಿ ತೆಂಗಿನ ಮರಗಳು ನೆಲಕ್ಕೆ ಉರುಳಿವೆ. ಇನ್ನೂ ನೀರಿನಲ್ಲಿ ಎರಡು ಜಾನುವಾರುಗಳು ಕೊಚ್ಚಿ ಹೋಗಿರುವಂತಹ ಘಟನೆ ಕೋಳಮಾರನಕುಪ್ಪೆ ಗ್ರಾಮದ ಬಳಿ ನಡೆದಿದೆ. ಸೇತುವೆ ಮೇಲೆ ಬರುವಾಗ ನೀರಿನ‌ ರಭಸಕ್ಕೆ ಜಾನುವಾರು ಹಳ್ಳಕ್ಕೆ ಬಿದ್ದಿವೆ. ನರಸಿಂಹಯ್ಯ ಎಂಬುವವರಿಗೆ ಜಾನುವಾರುಗಳು ಸೇರಿದ್ದು,
ಮಳೆಯಿಂದಾಗಿ ಹಳ್ಳದಲ್ಲಿ ನೀರು ರಭಸವಾಗಿ ಹರಿಯುತ್ತಿತ್ತು.

Published On - 7:57 am, Thu, 4 August 22