ಮಂಡ್ಯಕ್ಕೆ ಪ್ರಧಾನಿ ಮೋದಿ ಭೇಟಿ: ಮಾ 12 ರಂದು ಮೈಸೂರು-ಬೆಂಗಳೂರು ಸಂಚಾರ ಮಾರ್ಗ ಬದಲಾವಣೆ
ಬೆಂಗಳೂರು-ಮೈಸೂರು ಹೈವೇ ಲೋಕಾರ್ಪಣೆ ಹಿನ್ನೆಲೆ ಮಾರ್ಚ್ 12 ರಂದು ಪ್ರಧಾನಿ ನರೇಂದ್ರ ಮೋದಿ ಮಂಡ್ಯ ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆ ಮೈಸೂರು-ಬೆಂಗಳೂರಿಗೆ ಸಂಚರಿಸುವ ವಾಹನಗಳ ಮಾರ್ಗ ಬದಲಾವಣೆ ಮಾಡಲಾಗಿದೆ.
ಮಂಡ್ಯ: ಕರ್ನಾಟಕ ವಿಧಾನ ಸಭೆ ಚುನಾವಣೆ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ (Narendra Modi) ಮಾರ್ಚ್ 12 ರಂದು ಸಕ್ಕರೆ ನಗರಿ ಮಂಡ್ಯ ಜಿಲ್ಲೆ ಮದ್ದೂರಿಗೆ ಆಗಮಿಸುತ್ತಿದ್ದಾರೆ. ಹಾಗಾಗಿ ಮೈಸೂರು-ಬೆಂಗಳೂರಿಗೆ ಸಂಚರಿಸುವ ವಾಹನಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಮೈಸೂರಿನಿಂದ ಬೆಂಗಳೂರಿಗೆ ಸಂಚರಿಸುವ ವಾಹನಗಳು ಬನ್ನೂರು ಕಿರುಗಾವಲು, ಮಳವಳ್ಳಿ, ಹಲಗೂರು, ಕನಕಪುರದಿಂದ ಸಾಗಿ ಬೆಂಗಳೂರು ತಲುಪಬಹುದಾಗಿದೆ. ಮೈಸೂರಿನಿಂದ ಮಂಡ್ಯ ಮೂಲಕ ತುಮಕೂರಿಗೆ ಹೋಗುವ ವಾಹನಗಳು ಮೈಸೂರಿನಿಂದ ಶ್ರೀರಂಗಪಟ್ಟಣ, ಪಾಂಡವಪುರ, ನಾಗಮಂಗಲ, ಬೆಳ್ಳೂರು ಕ್ರಾಸ್ ಮೂಲಕ ತುಮಕೂರಿಗೆ ಹೋಗಲು ಅವಕಾಶ ಕಲ್ಪಿಸಲಾಗಿದೆ.
ಬೆಂಗಳೂರು ನಗರದಿಂದ ಮೈಸೂರಿಗೆ ತೆರಳುವ ವಾಹನಗಳು ಚನ್ನಪಟ್ಟಣ, ಹಲಗೂರು, ಮಳವಳ್ಳಿ, ಕಿರುಗಾವಲು ಬನ್ನೂರು ಮೂಲಕ ಮೈಸೂರಿಗೆ ವಾಹನಗಳು ತೆರಳಬಹುದಾಗಿದೆ. ಬೆಂಗಳೂರಿನಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುವ ವಾಹನಗಳು ಚನ್ನಪಟ್ಟಣ, ಹಲಗೂರು, ಮಳವಳ್ಳಿ ಮೂಲಕ ಕೊಳ್ಳೇಗಾಲ ಮೂಲಕ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಬಹುದಾಗಿದೆ.
ಇದನ್ನೂ ಓದಿ: Narendra Modi: ಮಾ. 12ರಂದು ಮಂಡ್ಯಕ್ಕೆ ಮೋದಿ ಆಗಮನ, ಸಕ್ಕರೆ ನಾಡಲ್ಲಿ ಭರ್ಜರಿ ಸಿದ್ಧತೆ
ಮಂಡ್ಯಕ್ಕೆ ಆಗಮಿಸಿದ ವಿಶೇಷ ಭದ್ರತಾ ಎಸ್ಪಿಜಿ ತಂಡ
ಪ್ರಧಾನಿ ಮೋದಿ ಆಗಮನ ಹಿನ್ನೆಲೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಗೆಜ್ಜಲಗೆರೆಗೆ ವಿಶೇಷ ಭದ್ರತಾ ಎಸ್ಪಿಜಿ ತಂಡ ಆಗಮಿಸಿದೆ. ಸಮಾವೇಶ ನಡೆಯುವ ಸ್ಥಳ, ಪಾರ್ಕಿಂಗ್ ಸ್ಥಳ, ಮೋದಿ ಬರುವ ಮಾರ್ಗ ಪರಿಶೀಲನೆ ಮಾಡಲಾಯಿತು. ಬಳಿಕ ಮಂಡ್ಯ ಜಿಲ್ಲಾಧಿಕಾರಿ ಗೋಪಾಲಕೃಷ್ಣ ಹಾಗೂ ಮಂಡ್ಯ ಎಸ್ಪಿಎನ್.ಯತೀಶ್ ಜೊತೆ ಸಭೆ ಮಾಡಿದ ಎಸ್ಪಿಜಿ ತಂಡ ಕಾರ್ಯಕ್ರಮದ ಮಾಹಿತಿ ಪಡೆದುಕೊಂಡರು.
ಬೆಂಗಳೂರು-ಮೈಸೂರು ಹೈವೇ ಲೋಕಾರ್ಪಣೆ
ಬೆಂಗಳೂರು-ಮೈಸೂರು ಹೈವೇಯನ್ನು ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ. ಈಗಾಗಲೇ ಮದ್ದೂರು ತಾಲೂಕಿನ ಗೆಜ್ಜಲಗೆರೆ ಕಾಲೋನಿಯಲ್ಲಿ ನಡೆಯುವ ಸಮಾವೇಶಕ್ಕೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. 16 ಎಕರೆ ವಿಸ್ತೀರ್ಣದಲ್ಲಿ ಬೃಹತ್ ಸಮಾವೇಶ ಮಾಡಲಾಗುತ್ತಿದೆ. ಪ್ರಧಾನಿ ಮೋದಿ ಆಗಮನ ಹಿನ್ನಲೆ ಜಿಲ್ಲಾಡಳಿತ ಭಾರಿ ಎಚ್ಚರಿಕೆ ವಹಿಸುತ್ತಿದೆ.
ಸಮಾವೇಶ ನಡೆಯುವ ಸ್ಥಳಕ್ಕೆ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಎಡಿಜಿಪಿ ಅಲೋಕ್ ಕುಮಾರ್ ಕೂಡ ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಂದು ಎಸ್ಪಿಜಿ ಟೀಂ ಸಮಾವೇಶದ ಸ್ಥಳ ಪರಿಶೀಲನೆ ಮಾಡಲಿದೆ. ಪಾರ್ಕಿಂಗ್ ವ್ಯವಸ್ಥೆ, ವೇದಿಕೆ ಪ್ರಧಾನಿ ಸಂಚರಿಸುವ ಮಾರ್ಗ ಪರಿಶೀಲನೆ ಮಾಡಿ ಎಸ್ಪಿ, ಡಿಸಿ ಜೊತೆ ಸಭೆ ನಡೆಸಲಿದೆ.
ಇದನ್ನೂ ಓದಿ: ಮಾ.12 ರಂದು ಮಂಡ್ಯಕ್ಕೆ ಮೋದಿ ಆಗಮನ, ಕಬ್ಬು ಬೆಳೆಗಾರರಿಂದ ಪ್ರತಿಭಟನೆಗೆ ಸಜ್ಜು; ಸಚಿವ ಗೋಪಾಲಯ್ಯ ಮೀಟಿಂಗ್
ಮಂಡ್ಯದಲ್ಲಿ ಮೋದಿ ರೋಡ್ ಶೋ
ಜೆಡಿಎಸ್ ಭದ್ರಕೋಟೆ ಮಂಡ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ನಡೆಸಲಿದ್ದಾರೆ. ಕಳೆದ ಫೆಬ್ರವರಿ ತಿಂಗಳಿನಲ್ಲಿ ಮೋದಿ ಅವರು ಶಿವಮೊಗ್ಗ, ಬೆಳಗಾವಿಗೆ ಭೇಟಿ ನೀಡಿ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದ್ದರು. ಹಾಗೂ ಫಲಾನುಭವಿಗಳ ಸಮಾವೇಶ ಉದ್ದೇಶಿಸಿ ಮಾತನಾಡಿದ್ದರು. ಸದ್ಯ ಮಂಡ್ಯದ ಜನರ ಮನ ಸೆಳೆಯಲು ಸಕ್ಕರೆ ನಾಡಿಗೆ ಭೇಟಿ ನೀಡುತ್ತಿದ್ದಾರೆ. ಇದಕ್ಕಾಗಿ ಎಲ್ಲಾ ರೀತಿಯ ತಯಾರಿ ಮಾಡಿಕೊಳ್ಳಲಾಗುತ್ತಿದೆ.
ಇನ್ನು ಕಾರ್ಯಕ್ರಮದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ. ವಾಹನ ನಿಲುಗಡೆ, ಕುಡಿಯುವ ನೀರು, ತಾತ್ಕಾಲಿಕ ಶೌಚಾಲಯದ ವ್ಯವಸ್ಥೆಗಳಾಗಬೇಕು ಎಂದು ಅಧಿಕಾರಿಗಳಿಗೆ ಈಗಾಗಲೇ ಹೆಚ್.ಎನ್. ಗೋಪಾಲಕೃಷ್ಣ ಸೂಚನೆ ನೀಡಿದ್ದಾರೆ.
ರಸ್ತೆಯಲ್ಲಿ ಬೆಳೆದು ನಿಂತಿದ್ದ ಕೊಂಬೆಗಳ ತೆರವು ಮಾಡಿದ ಅಧಿಕಾರಿಗಳು
ಪ್ರಧಾನಿ ನರೇಂದ್ರ ಮೋದಿಯವರ ರೋಡ್ ಶೋ ಹಿನ್ನಲೆ ಭದ್ರತಾ ದೃಷ್ಟಿಯಿಂದ ಎಸ್ಪಿಜಿ ನಿರ್ದೇಶನದಂತೆ ರಸ್ತೆಯಲ್ಲಿ ಬೆಳೆದು ನಿಂತಿದ್ದ ಕೊಂಬೆಗಳನ್ನು ತೆರವು ಮಾಡಲಾಗುತ್ತಿದೆ. ಮರಗಳ ಕೊಂಬೆ ತೆರವು ಹಿನ್ನೆಲೆ ಕೈ ಕಾರ್ಯಕರ್ತರು ಹೈ ಡ್ರಾಮ ಮಾಡಿದ್ದಾರೆ. ಮೋದಿಗಾಗಿ ಮರಗಳ ಮಾರಣ ಹೋಮ ಎಂದು ಕಿಡಿಕಾರಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:47 pm, Wed, 8 March 23