ಮಂಡ್ಯ, ಜು.03: ಸಾಕಷ್ಟು ವಿರೋಧದ ನಡುವೆ ಮಂಡ್ಯ ಜಿಲ್ಲೆಯ ಪಾಂಡವಪುರ(Pandavapura) ತಾಲೂಕಿನ ವಿವಾದಿತ ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್ಗೆ ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿಕೊಂಡಿದೆ. ಅಂದಹಾಗೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್(KRS) ಜಲಾಶಯ, ಹಳೇ ಮೈಸೂರು ಭಾಗದ ರೈತರ ಜೀವನಾಡಿ. ಅಷ್ಟೇ ಅಲ್ಲದೆ ಮಂಡ್ಯ, ಮೈಸೂರು, ಬೆಂಗಳೂರು ನಗರದ ಜನರ ನೀರಿನ ದಾಹವನ್ನ ತಣಿಸುವ ಜೀವನದಿ. ಇದೇ ಜಲಾಶಯಕ್ಕೆ ಅಪಾಯ ಎದುರಾಗುತ್ತದೆ ಎಂದು ಬೇಬಿ ಬೆಟ್ಟದಲ್ಲಿ ಗಣಿಗಾರಿಯನ್ನ ಈ ಹಿಂದೆ ಹೈಕೋರ್ಟ್ ಸೂಚನೆ ಮೇರೆಗೆ ಸ್ಥಗಿತ ಮಾಡಲಾಗಿದೆ.
ಕಳೆದ ಎರಡು ವರ್ಷಗಳಿಂದ ವಿವಾದಿತ ಸ್ಥಳದಲ್ಲಿ ಗಣಿಗಾರಿಕೆ ನಡೆಯುತ್ತಿಲ್ಲ. ಈ ಮಧ್ಯೆ ಕೆಲ ಗಣಿ ಮಾಲೀಕರು ಹೈಕೋರ್ಟ್ ಮೊರೆ ಹೋಗಿ, ರಿಟ್ ಪಿಟಿಶನ್ ಸಲ್ಲಿಸಿದ್ದರು. ಹೀಗಾಗಿ ಟ್ರಯಲ್ ಬ್ಲಾಸ್ಟ್ ನಡೆಸಿ, ಜಲಾಶಯಕ್ಕೆ ಅಪಾಯ ಎದುರಾಗುತ್ತಾ ಅಥವಾ ಇಲ್ಲವಾ, ಅದರ ಸಾಧಕ-ಬಾಧಕಗಳ ಬಗ್ಗೆ ವರದಿ ನೀಡುವಂತೆ ಹೈಕೋರ್ಟ್, ಮಂಡ್ಯ ಜಿಲ್ಲಾಡಳಿತಕ್ಕೆ ಸೂಚನೆ ನೀಡಿತ್ತು. ಈ
ಹಿನ್ನೆಲೆಯಲ್ಲಿ ಇದೀಗ ಸಾಕಷ್ಟು ವಿರೋಧದ ನಡುವೆ ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್ ನಡೆಸಲು ಮಂಡ್ಯ ಜಿಲ್ಲಾಡಳಿತ ಮುಂದಾಗಿದೆ. ಕಾವೇರಿ ನೀರಾವರಿ ನಿಗಮ ಹಾಗೂ ಮಂಡ್ಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಬೇಬಿ ಬೆಟ್ಟದಲ್ಲಿ ಮಷಿನ್ಗಳ ಮೂಲಕ ಆಯ್ದ ಐದು ಸ್ಥಳಗಳಲ್ಲಿ ಕುಳಿಗಳನ್ನ ಸಹ ಕೊರಿಸಲಾಗುತ್ತಿದೆ. ಎರಡು ಮೂರು ದಿನಗಳಲ್ಲಿ ಜಾರ್ಖಂಡ್ ಮೂಲದ ತಜ್ಞರನ್ನ ಕರೆಯಿಸಿ ಟ್ರಯಲ್ ಬ್ಲಾಸ್ಟ್ ಕೂಡ ನಡೆಸಲಾಗುತ್ತದೆ.
ಅಂದಹಾಗೆ 2018ರಲ್ಲಿ ಗಣಿಗಾರಿಕೆಯಿಂದಾಗಿ ದೊಡ್ಡಮಟ್ಟಿನ ಸದ್ದು ಬಂದಿತ್ತು. ಇದರಿಂದಾಗಿ ಜಲಾಶಯಕ್ಕೆ ಅಪಾಯ ಎದುರಾಗುತ್ತದೆ ಎಂದು ಮಾಜಿ ಸಂಸದೆ ಸುಮಲತಾ ಸೇರಿದಂತೆ ರೈತ ಸಂಘಟನೆಗಳು ಬೇಬಿ ಬೆಟ್ಟದಲ್ಲಿ ಗಣಿಗಾರಿಕೆಯನ್ನ ಸ್ಥಗಿತ ಮಾಡುವಂತೆ ದೊಡ್ಡ ಮಟ್ಟಿನ ಹೋರಾಟವನ್ನು ಕೂಡ ನಡೆಸಿದ್ದರು. ಹೈಕೋರ್ಟ್ ಕೂಡ ಗಣಿಗಾರಿಕೆ ಸ್ಥಗಿತ ಮಾಡುವಂತೆ
ಆದೇಶಿಸಿತ್ತು. ಹೀಗಾಗಿ ಎರಡು ವರ್ಷಗಳಿಂದ ಯಾವುದೇ ರೀತಿಯ ಗಣಿಗಾರಿಕೆ ನಡೆಯುತ್ತಿಲ್ಲ. ಆದರೆ, ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಈ ಹಿಂದೆ ಟ್ರಯಲ್ ಬ್ಲಾಸ್ಟ್ ನಡೆಸಲು ಮುಂದಾದ ವೇಳೆ ಗೋ ಬ್ಯಾಕ್ ಚಳುವಳಿ ನಡೆಸಲಾಗಿತ್ತು. ಆ ನಂತರ ಲೋಕಸಭಾ ಚುನಾವಣೆಗೂ ಮೊದಲು ಸಹಾ ವಿಜ್ಷಾನಿಗಳು ಬಂದಂತಹ ವೇಳೆ ಕೂಡ ರೈತರು ವಿರೋಧ ವ್ಯಕ್ತಪಡಿಸಿದ್ದರು.
ಹೀಗಾಗಿ ಈ ಸಮಯದಲ್ಲೂ ಕೂಡ ಟ್ರಯಲ್ ಬ್ಲಾಸ್ಟ್ ಸ್ಥಗಿತ ಮಾಡಲಾಗಿತ್ತು. ಆದರೆ, ಇದೀಗ ವಿರೋಧದ ನಡುವೆ ಸಹ ಸಾಕಷ್ಟು ಪೊಲೀಸ್ ಭದ್ರತೆಯಲ್ಲಿ ಟ್ರಯಲ್ ಬ್ಲಾಸ್ಟ್ಗೆ ಜಿಲ್ಲಾಡಳಿತ ಕೂಡ ಮುಂದಾಗಿದೆ. ಮತ್ತೊಂದು ಕಡೆ ಟ್ರಯಲ್ ಬ್ಲಾಸ್ಟ್ ನಡೆಸುವುದನ್ನ ವಿರೋಧಿಸಿ ಕೆಆರ್ಎಸ್ನ ಬೃಂದಾವನ ಗೇಟ್ ಬಳಿ ರೈತ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ಕೂಡ ನಡೆಸುತ್ತಿದ್ದಾರೆ. ಒಟ್ಟಾರೆ ಸಾಕಷ್ಟು ವಿರೋಧದ ನಡುವೆ ಕೆಆರ್ಎಸ್ ಜಲಾಶಯದ ಸಮೀಪವೇ ಇರುವ ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್ಗೆ ಮಂಡ್ಯ ಜಿಲ್ಲಾಡಳಿತ ಮುಂದಾಗಿದ್ದು, ಸಾಕಷ್ಟು ಟೀಕೆಗೂ ಕೂಡ ಕಾರಣವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:53 pm, Wed, 3 July 24