ಅವು ಬಡವರಿಗಾಗಿ ಕೋಟ್ಯಾಂತರ ರೂ ವೆಚ್ಚದಲ್ಲಿ ನಿರ್ಮಾಣವಾಗುತ್ತಿರೋ ಮನೆಗಳು. ಆದರೆ ಮನೆಗಳ ನಿರ್ಮಾಣ ಕಾರ್ಯ ಆರಂಭಗೊಂಡು ವರ್ಷಗಳು ಕಳೆಯುತ್ತಾ ಬಂದಿದ್ದರೂ ಮನೆ ನಿರ್ಮಾಣ ಕಾರ್ಯ ಸಂಪೂರ್ಣಗೊಂಡಿಲ್ಲ. ನಿರ್ಮಾಣಗೊಂಡಿರೋ ಮನೆಗಳು ಸಹ ಇದೀಗ ಹಾಳುಕೊಂಪೆಯಾಗಿದ್ದು, ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಡುತ್ತಿದೆ. ನಿರ್ಮಾಣಗೊಂಡು ಹಂಚಿಕೆಯಾಗದೇ ಇರೋ ನೂರಾರು ಮನೆಗಳು. ನಿರ್ಮಾಣಗೊಂಡಿರೋ ಮನೆಗಳಿಗೆ ತೆಪೆ ಹಾಕುತ್ತಿರೋ ಕೆಲಸಗಾರರು. ಪುಡಿಪುಡಿಯಾಗಿರೋ ಕಿಟಕಿ ಗ್ಲಾಸ್ ಗಳು. ಅಂದಹಾಗೆ ಇಂತಹ ದೃಶ್ಯ ಕಂಡು ಬಂದಿರುವುದು ಸಕ್ಕರೆನಗರಿ ಮಂಡ್ಯದಲ್ಲಿ. ಹೌದು ಬಡವರಿಗೆ ಸೂರು ಕಲ್ಪಿಸುವ ನಿಟ್ಟಿನಲ್ಲಿ ಕೊಳಚೆ ನಿರ್ಮೂಲನೆ ಮಂಡಳಿ ವತಿಯಿಂದ ಮಂಡ್ಯದ ಚಿಕ್ಕಮಂಡ್ಯ ಬಳಿ ಕೆರೆ ಅಂಗಳದಲ್ಲಿ ಸುಮಾರು 80 ಕೋಟಿ ವೆಚ್ಚದಲ್ಲಿ 576 ಮನೆಗಳ ನಿರ್ಮಾಣ ಮಾಡಲಾಗುತ್ತಿದೆ.
ಅಂದಹಾಗೆ 2016ರಲ್ಲೇ ಮನೆಗಳ ನಿರ್ಮಾಣಕ್ಕೆ ಅನುಮತಿ ಪಡೆದು ಮನೆಗಳ ಕಾರ್ಯ ಕಳೆದ ಮೂರು ವರ್ಷಗಳಿಂದ ನಡೆಯುತ್ತಿದೆ. ಒಂದೆಡೆ ಮನೆಗಳ ನಿರ್ಮಾಣ ಕಾರ್ಯ ಕಳೆದ ಮೂರು ವರ್ಷಗಳಿಂದ ಪೂರ್ಣಗೊಂಡಿಲ್ಲ. ಮತ್ತೊಂದೆಡೆ ಪೂರ್ಣಗೊಂಡಿರೋ ಮನೆಗಳ ಇದೀಗ ಅನೈತಿಕ ಚಟುವಟಿಕೆಯ ತಾಣವಾಗಿದೆ. ಅಲ್ಲದೆ ಬಾಗಿಲುಗಳು ಸಹಾ ಮುರಿದು ಬಂದಿವೆ, ಮತ್ತೊಂದು ಕಡೆ ಕಿಡಿಗೇಡಿಗಳು ಮನೆಗಳ ಕಿಟಿಕಿ ಗ್ಲ್ಯಾಸ್ ಗಳನ್ನ ಹೊಡೆದು ಹಾಕಿದ್ದಾರೆ. ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಳಿಸಿ ಬಡವರಿಗೆ ಹಂಚಿಕೆ ಮಾಡಿದ್ರೆ ಬಡವರು ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದರು. ಆದರೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಇದುವರೆಗೂ ಮನೆಗಳ ಹಂಚಿಕೆ ಕಾರ್ಯ ಮಾತ್ರ ಆಗಿಲ್ಲ. ಇದು ಸ್ಥಳೀಯರ ಆಕ್ರೋಶಕ್ಕೂ ಕಾರಣವಾಗಿದೆ.
ಅಂದಹಾಗೆ ಮಂಡ್ಯದ ಸಾರ್ವಜನಿಕ ಆಸ್ಪತ್ರೆ ಪಕ್ಕದಲ್ಲಿ ತಮಿಳು ಕಾಲೋನಿ ಇದ್ದು, ಜಾಗ ಸಾಕಷ್ಟು ವಿವಾದವಾಗಿದೆ. ಇಲ್ಲಿರುವ ನಿವಾಸಿಗಳಿಗೆ ಈ ಮನೆಗಳನ್ನ ಕೊಡಲೆಂದು ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ ಮನೆಗಳ ನಿರ್ಮಾಣ ಮಾಡಲಾಗುತ್ತಿದೆ. ಆದರೆ ಮೂಲಭೂತ ಸೌಕರ್ಯಗಳ ಕೊರತೆ ಹಾಗೂ ಕಳಪೆ ಕಾಮಗಾರಿಯೆಂದು ಅಲ್ಲಿನ ನಿವಾಸಿಗಳು ಈ ಮನೆಗಳಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಕೋಟ್ಯಾಂತರ ರೂ ವೆಚ್ಚದಲ್ಲಿ ನಿರ್ಮಾಣ ಮಾಡಿರೋ ಮನೆಗಳು ಹೊಳೆಯಲ್ಲಿ ಹುಣಸೆಯನ್ನ ಹಿಂಡಿದಂತೆ ಆಗಿದೆ. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಸ್ಥಳೀಯ ಶಾಸಕ ರವಿಕುಮಾರ್ ಗಣಿಗಾ, ಈ ಸಂಬಂಧ ಮೂರು ಬಾರಿ ಭೇಟಿ ನೀಡಿದ್ದೇನೆ. ಹಣದ ಅಭಾವ ಇದೆ. ಶೀಘ್ರವೇ ಕಾಮಗಾರಿ ಮುಗಿಸಿ ಹಸ್ತಾಂತರ ಮಾಡಲಾಗುವುದು ಎನ್ನುತ್ತಿದ್ದಾರೆ. ಒಟ್ಟಾರೆ ಬಡವರಿಗಾಗಿ ನಿರ್ಮಾಣ ಮಾಡುತ್ತಿರೋ ಮನೆಗಳು ಕಾಮಗಾರಿಗೂ ಪೂರ್ಣಗೊಳ್ಳದೇ, ಬಡವರಿಗೆ ಹಂಚಿಕೆಯಾಗದೇ ಹಾಳುಕೊಂಪೆಯಾಗುತ್ತಿದೆ.
ಮಂಡ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ