
ಮಂಡ್ಯ, ನವೆಂಬರ್ 5: ಸರ್ಕಾರದಿಂದ ಪರಿಹಾರಕ್ಕಾಗಿ ಹಲವು ವರ್ಷಗಳಿಂದ ಕಚೇರಿ ತಿರುಗಾಡಿದ್ದ ರೈತ ನಿರಾಶೆಯಲ್ಲಿ ಡಿಸಿ ಕಚೇರಿ ಎದುರೇ ಆತ್ಮಹತ್ಯೆಗೆ ಯತ್ನಿಸಿ ನಂತರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ (Mandya Farmer Death) ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ಕೆ.ಆರ್. ಪೇಟೆ ತಾಲೂಕಿನ ಮೂಡನಹಳ್ಳಿ ಗ್ರಾಮದ ಮಂಜೇಗೌಡ ಮಂಗಳವಾರ ಡಿಸಿ ಕಚೇರಿ ಮುಂದೆ ಆತ್ಮಹತ್ಯೆಗೆ ಯತ್ನಿಸಿದ್ದರು.
1970ರ ದಶಕದಲ್ಲಿ ಮಂಜೇಗೌಡ ಅವರ ತಾತನಿಗೆ ಸೇರಿದ ಸುಮಾರು 2.5 ಎಕರೆ ಜಮೀನನ್ನು ಸರ್ಕಾರ ವಶಪಡಿಸಿಕೊಂಡು ಆಶ್ರಯ ಯೋಜನೆ ಅಡಿಯಲ್ಲಿ ಸೈಟ್‌ಗಳ ರೂಪದಲ್ಲಿ ಹಂಚಿಕೆ ಮಾಡಿತ್ತು. ಈ ಹಿನ್ನೆಲೆ ಸೋಮವಾರವಿಡೀ ಡಿಸಿ ಕಚೇರಿಯಲ್ಲಿ ಕಾದಿದ್ದರೂ ಸ್ಪಂದನೆ ಸಿಗದೆ ಬೇಸತ್ತ ರೈತ ಮಂಜೇಗೌಡ, ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರಿನ ಪಾರ್ಕ್‌ನಲ್ಲಿ ತನ್ನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡಿದ್ದರು. ಸ್ಥಳೀಯರು ತಕ್ಷಣ ಬೆಂಕಿ ನಂದಿಸಿ ಅಂಬುಲೆನ್ಸ್ ಮೂಲಕ ಮಿಮ್ಸ್ ಆಸ್ಪತ್ರೆಗೆ ರವಾನಿಸಿದ್ದರು. ದೇಹದ 60 ಪ್ರತಿಶತಕ್ಕಿಂತ ಹೆಚ್ಚು ಭಾಗ ಸುಟ್ಟಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಂಜೇಗೌಡ ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆ.
ಪರಿಹಾರದ ಬದಲಾಗಿ ಗೋಮಾಳ ಜಾಗ ನೀಡಬೇಕೆಂದು ಮಂಜೇಗೌಡ ಹಲವಾರು ವರ್ಷಗಳಿಂದ ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಾ ಬಂದಿದ್ದರು. ಮಲ್ಲೇಹಳ್ಳಿ ಬಳಿ ಇರುವ 2.5 ಎಕರೆ ಗೋಮಾಳ ಜಾಗವನ್ನು ಕಳೆದ 20 ವರ್ಷಗಳಿಂದ ಅಧಿಕೃತವಾಗಿ ಮಂಜೂರು ಮಾಡುವಂತೆ ತಹಶಿಲ್ದಾರ್ ಹಾಗೂ ಜಿಲ್ಲಾಧಿಕಾರಿ ಕಚೇರಿಗಳಿಗೆ ಹಲವು ಬಾರಿ ಅರ್ಜಿ ಸಲ್ಲಿಸಿದ್ದರೂ ಯಾವುದೇ ಸ್ಪಂದನೆ ದೊರೆತಿರಲಿಲ್ಲ. ಕುಟುಂಬದವರ ಹೇಳಿಕೆಯಂತೆ ಅಧಿಕಾರಿಗಳು ದಾಖಲೆ ಪರಿಶೀಲನೆ ಹಾಗೂ ಪ್ರಕ್ರಿಯೆ ಹೆಸರಿನಲ್ಲಿ ಓಡಾಡಿಸುವುದರ ಜೊತೆಗೆ ಲಂಚಕ್ಕಾಗಿ ಒತ್ತಡ ಹೇರಿದ್ದರು. ಬ್ಯಾಂಕ್ ಸೇರಿದಂತೆ ಹಲವೆಡೆ 7-8 ಲಕ್ಷ ರೂಪಾಯಿ ಸಾಲ ಮಾಡಿದ್ದ ಮಂಜೇಗೌಡ, ಪರಿಹಾರವೂ ಸಿಗದೇ ಭೂಮಿಯೂ ಮಂಜೂರಾಗದೆ ಹತಾಶರಾಗಿದ್ದರು.
ಮೃತರ ಪುತ್ರ ಪುನೀತ್ ಮಾತನಾಡಿ, ನಮ್ಮ ಕುಟುಂಬಕ್ಕೆ ಸೇರಿದ ಜಮೀನನ್ನು ಸರ್ಕಾರ ತೆಗೆದುಕೊಂಡು ಪರಿಹಾರ ಕೊಡಲಿಲ್ಲ. ಬದಲಿಗೆ ಗೋಮಾಳ ಜಾಗ ಬೇಕೆಂದಾಗ ಅರ್ಜಿ ಹಾಕಿದರೂ ಅಧಿಕಾರಿಗಳು ಸ್ಪಂದಿಸಲಿಲ್ಲ. ಅನ್ಯಾಯದಿಂದ ಬೇಸತ್ತ ನನ್ನ ತಂದೆ, ಈ ಹೆಜ್ಜೆ ಇಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:57 pm, Wed, 5 November 25