ಮಂಡ್ಯ: ಪ್ರಧಾನ ಮಂತ್ರಿ ನರೇಂದ್ರ ಮೋದಿಯೇ ಮೆಚ್ಚಿದ್ದ ಆಧುನಿಕ ಭಗೀರಥರೊಬ್ಬರ ಸಾಮಾಜಿಕ ಸೇವೆಗೆ ಅಧಿಕಾರಿಗಳ ಅಡ್ಡಿಪಡಿಸುತ್ತಿದ್ದಾರಾ? ಎಂಬ ಗುಮಾನಿ ಎದ್ದಿದೆ. ಸ್ವತಃ ಆ ಆಧುನಿಕ ಭಗೀರಥ ಕಲ್ಮನೆ ಕಾಮೇಗೌಡರೇ ಅಧಿಕಾರಿಗಳ ವರ್ತನೆಯ ಬಗ್ಗೆ ಬೇಸರಗೊಂಡಿದ್ದು, ಅನ್ನ ನೀರು ಬಿಟ್ಟು ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಖುದ್ದು ತಾಲೂಕು ಆಡಳಿತವೇ ಕಾಮೇಗೌಡರನ್ನು ಆಸ್ಪತ್ರೆಗೆ ಸೇರಿಸಿದೆ.
ಅಂತರ್ಜಲ ಅಭಿವೃದ್ಧಿಗೆ ಕೆರೆ ಕಟ್ಟೆ ನಿರ್ಮಿಸಿ ಲಕ್ಷಾಂತರ ಪ್ರಾಣಿ ಪಕ್ಷಿಗಳಿಗೆ ನೀರುಣಿಸುವ ಕಾಯಕದಲ್ಲಿ ತೊಡಗಿದ್ದ ಕಾಮೇಗೌಡರು ಕಳೆದ 40-50 ವರ್ಷಗಳಿಂದ ಸ್ವಂತ ಖರ್ಚಿನಲ್ಲಿ ಮರ ಗಿಡಗಳ ಪೋಷಣೆ ಮಾಡುತ್ತಾ ಬಂದಿದ್ದಾರೆ. ಪರಿಸರ ಪ್ರೇಮಿ, ಆಧುನಿಕ ಭಗೀರಥ ಕಾಮೇಗೌಡರ ಈ ಕಾರ್ಯಗಳನ್ನು ಮೆಚ್ಚಿ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಕಾಮೇಗೌಡರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದರು.
ಆಗ ಯಡಿಯೂರಪ್ಪ ಅವರು ಕಾಮೇಗೌಡರಿಗೆ ಮನೆ, ಮಕ್ಕಳಿಗೆ ಉದ್ಯೋಗ, ತಮ್ಮ ಸೇವೆಗೆ ಆರ್ಥಿಕ ನೆರವು ಭರವಸೆ ನೀಡಿದ್ದರು. ಆದ್ರೆ ಈವರೆಗೂ ಆ ಭರವಸೆಗಳು ಯಾವುವೂ ಈಡೇರಿಲ್ಲ. ಈ ಮಧ್ಯೆ ಕೆಲವರು ಕಾಮೇಗೌಡರ ವಿರುದ್ಧ ಮರಳು ಗಣಿಗಾರಿಕೆ ಆರೋಪವನ್ನು ಹೊರಿಸಿದ್ದರು. ಇದರಿಂದ ಇಳಿವಯಸ್ಸಿನಲ್ಲೂ ಗೌಡರಿಗೆ ತನಿಖೆ ಎದುರಿಸಬೇಕಾದ ಪರಿಸ್ಥಿತಿ ಎದುರಾಗಿತ್ತು.
ಇದೇ ವೇಳೆ ತಮ್ಮ ಸಾಮಾಜಿಕ ಸೇವೆಗಳನ್ನು ಮುಂದುವರೆಸಲು ಕಾಮೇಗೌಡರಿಗೆ ಅಧಿಕಾರಿಗಳಿಂದ ಅಡ್ಡಿಆತಂಕಗಳು ಎದುರಾಗಿದ್ದವು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ವರ್ತನೆಗೆ ಬೇಸತ್ತು ಕಾಮೇಗೌಡರು ಆಹಾರ ತ್ಯಜಿಸಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಗೌಡರನ್ನ ಮಳವಳ್ಳಿ ತಾಲೂಕು ಆಡಳಿತ ಇದೀಗ ಆಸ್ಪತ್ರೆಗೆ ದಾಖಲಿಸಿದೆ.
Also Read:
ಆರೋಪಿಯ ಅರೆಸ್ಟ್ ಮಾಡಲು ತಮ್ಮದೇ ಕಾರು ಕೊಟ್ಟ ತುಮಕೂರು ಜಿಲ್ಲಾ ಎಸ್ಪಿ, ಬೆಳಗಿನ ಜಾವಕ್ಕೆ ಆರೋಪಿ ಕೊನೆಗೂ ಅಂದರ್!