ಮಂಡ್ಯದಿಂದ ಸ್ಪರ್ಧೆಯೋ? ಮದ್ದೂರಿನಿಂದಲೋ?; ಚುನಾವಣೆ ಬಗ್ಗೆ ಪರೋಕ್ಷ ಸುಳಿವು ನೀಡಿದ ಅಭಿಷೇಕ್​ ಅಂಬರೀಷ್

| Updated By: Skanda

Updated on: Sep 01, 2021 | 1:11 PM

ಮಂಡ್ಯದಿಂದ ಸ್ಪರ್ಧೆ ಮಾಡುತ್ತೀರೋ? ಅಥವಾ ಮದ್ದೂರಿನಿಂದಲೋ? ಎಂಬ ಪ್ರಶ್ನೆಗೆ ಉತ್ತರಿಸುವಾಗ ಮುಂದೆ ಗೊತ್ತಾಗಲಿದೆ ಎಂದು ಅಭಿಷೇಕ್​ ಹೇಳಿದ್ದು, ಮುಂಬರುವ ಚುನಾವಣೆ ಸ್ಪರ್ಧೆಗೆ ಪರೋಕ್ಷ ಸುಳಿವು ನೀಡಿದಂತಿದೆ.

ಮಂಡ್ಯದಿಂದ ಸ್ಪರ್ಧೆಯೋ? ಮದ್ದೂರಿನಿಂದಲೋ?; ಚುನಾವಣೆ ಬಗ್ಗೆ ಪರೋಕ್ಷ ಸುಳಿವು ನೀಡಿದ ಅಭಿಷೇಕ್​ ಅಂಬರೀಷ್
ಅಭಿಷೇಕ್​ ಅಂಬರೀಷ್​
Follow us on

ಮಂಡ್ಯ: ಸಂಸದೆ‌ ಸುಮಲತಾ ಅಂಬರೀಷ್ ಇಂದು ಮಂಡ್ಯ ತಾಲೂಕಿನ ಹನಕೆರೆ ಗ್ರಾಮದ ಬಳಿ ತಮ್ಮ ಸ್ವಂತ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ್ದಾರೆ. ಚುನಾವಣೆಯಲ್ಲಿ ಕೊಟ್ಟ ಮಾತಿನಂತೆ ಮಂಡ್ಯದಲ್ಲೇ ಮನೆ ನಿರ್ಮಾಣ ಮಾಡಲಿದ್ದೇನೆ ಎಂದು ಅವರು ಹೇಳಿದ್ದು, ಮಗನ ರಾಜಕೀಯ ಪ್ರವೇಶದ ಬಗ್ಗೆ ಅವರನ್ನೇ ಕೇಳಬೇಕು ಎಂದಿದ್ದಾರೆ. ಇತ್ತ, ರಾಜಕೀಯಕ್ಕೆ ಕಾಲಿಡುವ ಬಗ್ಗೆ ಅಭಿಷೇಕ್​ ಅಂಬರೀಷ್​ ಅವರನ್ನೇ ಕೇಳಿದಾಗ ‘ಸುಮ್ನೆ ಇರಣ್ಣ ಅದೆಲ್ಲಾ ಬೇಡ’ ಎಂದು ಹಾಸ್ಯ ಮಾಡಿದರಾದರೂ ಚುನಾವಣೆಗೆ ಸ್ಪರ್ಧೆ ಮಾಡುವುದು ಜನರ ಇಚ್ಛೆಗೆ ಬಿಟ್ಟಿದ್ದು, ಸಮಯ ಸಂಧರ್ಭ ಬಂದಾಗ ನೋಡೋಣ ಎನ್ನುವ ಮೂಲಕ ಮುಂದೆ ರಾಜಕೀಯದಲ್ಲಿ ಕಾಣಿಸಿಕೊಳ್ಳಬಹುದು ಎನ್ನುವುದಕ್ಕೆ ಪರೋಕ್ಷವಾಗಿ ಸುಳಿವು ನೀಡಿದ್ದಾರೆ.

ಸುಮಲತಾ ನಿವಾಸದ ಗುದ್ದಲಿ ಪೂಜೆ ಬೆನ್ನಲ್ಲೇ ರಾಜಕೀಯ ವಲಯದಲ್ಲಿ ಚರ್ಚೆ ಶುರುವಾಗಿದ್ದು, ಸ್ವಂತ ಮನೆ ನಿರ್ಮಾಣದ ಮೂಲಕ ಪುತ್ರ ಅಭಿಷೇಕ್​ ಅಂಬರೀಷ್ ಅವರ ರಾಜಕೀಯ ಪ್ರವೇಶಕ್ಕೆ ಸಿದ್ಧತೆಯೂ ಆರಂಭವಾಯ್ತಾ ಎಂಬ ಕುತೂಹಲ ಮೂಡಿದೆ. ಅದಕ್ಕೆ ಪೂರಕವಾಗಿಯೇ ಅಭಿಷೇಕ್​ ಅಂಬರೀಷ್​ ಮಾತನಾಡಿದ್ದು, ಯಾಕಣ್ಣ ಸುಮ್ನೆ ಕರೆದು ಮೈಕ್ ಮುಂದೆ ನಿಲ್ಲಿಸ್ತೀಯಾ? ಎಂದು ತಮ್ಮ ಶೈಲಿಯಲ್ಲಿ ಹಾಸ್ಯ ಮಾಡುತ್ತಲೇ ಅಭಿಮಾನಿಗಳಿಗೆ ನಮ್ಮನ್ನ ಬೆಳೆಸುವ ಆಸೆ, ನಮಗೆ ಅವರೊಂದಿಗೆ ಇರುವ ಆಸೆ. ಇಲ್ಲಿಯವರೆಗೆ ಬೆಳೆಸಿದ್ದಾರೆ ಮುಂದೆಯು ಬೆಳೆಸಲಿದ್ದಾರೆ. ಮುಂದೆ ಸಮಯ ಬಂದಾಗ ಎಲ್ಲವೂ ಗೊತ್ತಾಗಲಿದೆ ಎಂದು ಹೇಳಿದ್ದಾರೆ.

ಅಲ್ಲದೇ, ಮಂಡ್ಯದಿಂದ ಸ್ಪರ್ಧೆ ಮಾಡುತ್ತೀರೋ? ಅಥವಾ ಮದ್ದೂರಿನಿಂದಲೋ? ಎಂಬ ಪ್ರಶ್ನೆಗೆ ಉತ್ತರಿಸುವಾಗ ಮುಂದೆ ಗೊತ್ತಾಗಲಿದೆ ಎಂದು ಅಭಿಷೇಕ್​ ಹೇಳಿದ್ದು, ಮುಂಬರುವ ಚುನಾವಣೆ ಸ್ಪರ್ಧೆಗೆ ಪರೋಕ್ಷ ಸುಳಿವು ನೀಡಿದಂತಿದೆ. ಜತೆಗೆ ಮನೆಯ ಬಗ್ಗೆ ಮಾತನಾಡಿದ ಅವರು, ಅಮ್ಮ ಮಾತುಕೊಟ್ಟಂತೆ ಮನೆ ಮಾಡ್ತಿದ್ದೇವೆ. ಇಷ್ಟು ವರ್ಷ ಮಂಡ್ಯದಲ್ಲಿ ಬಾಡಿಗೆಗೆ ಇದ್ದೆವು. ಪ್ಲಾನಿಂಗ್ ಬಗ್ಗೆ ನನಗೇನು ಗೊತ್ತಿಲ್ಲ, ಗ್ರಾಂಡ್ ಆಗಿದ್ರೆ ನಿರ್ವಹಣೆ ಕಷ್ಟ ಅದಕ್ಕೆ ಮನೆ ಸಿಂಪಲ್ ಆಗಿರುತ್ತೆ ಅಷ್ಟೇ. ಮನೆ ಮಾಡಿ ತೋರಿಸುತ್ತೇವೆ, ಇದ್ದು ತೋರಿಸುತ್ತೇವೆ ಎಂದು ತಿಳಿಸಿದ್ದಾರೆ.

ಮನೆ ನಿರ್ಮಾಣಕ್ಕೆ‌ ಭೂಮಿ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಸಂಸದೆ ಸುಮಲತಾ, ಚುನಾವಣೆ ವೇಳೆ ಹೇಳಿದಂತೆ ಮನೆ ನಿರ್ಮಾಣ ಮಾಡ್ತಿದ್ದೇವೆ. ಅಭಿ ಚುನಾವಣೆಗೆ ಸ್ಪರ್ಧಿಸಬೇಕೆಂದು ಮನೆ ನಿರ್ಮಿಸುತ್ತಿಲ್ಲ. ಚುನಾವಣೆ ವೇಳೆ ನೀಡಿದ್ದ ವಾಗ್ದಾನ ಒಂದೊಂದೇ ಈಡೇರಿಕೆ ಆಗುತ್ತಿದೆ. ನಾನೂ ಚುನಾವಣೆಗೆ ಸ್ಪರ್ಧಿಸಬೇಕೆಂದು ನಿರೀಕ್ಷಿಸಿರಲಿಲ್ಲ. ಈಗ ಅಭಿ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಅವರನ್ನೇ ಕೇಳಬೇಕು ಎಂದಿದ್ದಾರೆ.

ಇಲ್ಲಿ ಮನೆ ನಿರ್ಮಾಣ ಮಾಡಬೇಕೆಂಬುದು ಇದ್ದಕ್ಕಿದ್ದ ಹಾಗೆ ನಿರ್ಧರಿಸಿದ್ದಲ್ಲ. ಇದ್ದಕ್ಕಿದ್ದ ಹಾಗೆ ಮನೆ ನಿರ್ಮಿಸ್ತಿದ್ದಾರೆ ಅನ್ನೋದನ್ನ ನಾನು ಒಪ್ಪಲ್ಲ. ಚುನಾವಣೆ ಸಮಯದಲ್ಲೇ ನಾನು ಹೇಳಿದ್ದೆ. ಮನೆ ನಿರ್ಮಿಸುವುದಕ್ಕಾಗಿ ಜಾಗ ಹುಡುಕುತ್ತಿದ್ದೆವು. ನಮ್ಮ ಹನಕೆರೆ ಶಶಿ ಅವರಿಗೆ ಸೇರಿದ್ದ ಜಾಗ ಇದೆ ಅನ್ನೋದು ಗೊತ್ತಾಯ್ತು. ಹೀಗಾಗಿ ಈಗ ಮನೆ ನಿರ್ಮಾಣಕ್ಕೆ ಮುಂದಾಗಿದ್ದೀವಿ. ಮಂಡ್ಯ, ಮದ್ದೂರಿಗೂ ಹತ್ತಿರ ಇದೆ ಎಲ್ರಿಗೂ ಅನುಕೂಲವಾಗ್ತಿದೆ ಅನ್ನೋದಕ್ಕೆ ಹನಕೆರೆ ಗ್ರಾಮದಲ್ಲೇ ಮನೆ ಮಾಡ್ತಿದ್ದೀವಿ. ಅಭಿ ಮದ್ದೂರಿನಲ್ಲಿ ಚುನಾವಣೆಗೆ ನಿಲ್ತಾರೆ. ಹಾಗಾಗಿ ಹನಕೆರೆಯಲ್ಲಿ ಮನೆ ಮಾಡ್ತಿದ್ದಾರೆ ಎಂದು ಊಹೆ ಮಾಡ್ಕೊಂಡು ಮಾತಾಡೋರ ಬಗೆಗೆ ನಾನು ವಿವರ ನೀಡಬೇಕು ಎಂದೆನಿಸ್ತಿಲ್ಲ. ಈ ಪ್ರಶ್ನೆ ಕೇಳೋರಿಗೆ ನಾನು ಚುನಾವಣೆ ಸಮಯದಲ್ಲಿ ಏನೇನು ಹೇಳಿದ್ದೆ ಅದನ್ನ ಈಡೇರಿಸಿಕೊಂಡು ಬರ್ತಿದ್ದೀನಿ ಅನ್ನೋದು ಗಮನದಲ್ಲಿರಬೇಕು ಎನ್ನುವ ಉತ್ತರ ಕೊಟ್ಟಿದ್ದಾರೆ.

ಪ್ರತಿಯೊಂದು ಕೆಲಸದ ಹಿಂದೆ ರಾಜಕೀಯ ಇದೆ ಅನ್ನೋದು ಕೆಲವರ ಉದ್ದೇಶ ಇರಬಹುದು. ಆದ್ರೆ ನಾನು ಆ ರೀತಿ ಅಂದುಕೊಳ್ಳಲ್ಲ. ಮನೆ ಇನ್ನೊಂದು ಹತ್ತು ತಿಂಗಳಲ್ಲಿ ಪೂರ್ತಿಯಾಗಬಹುದು. ಅಭಿ ಚುನಾವಣೆಗೆ ನಿಲ್ಲೊ ವಿಚಾರ ಅಭಿಷೇಕ್ ಅವರನ್ನೇ ಕೇಳಬೇಕು. ಅವರು ಚುನಾವಣೆಗೆ ನಿಲ್ಲೊ ವಿಚಾರದಲ್ಲಿ ಒಪ್ಪಿಗೆ ನೀಡಬೇಕು ಅನ್ನೋದೇನಿಲ್ಲ. ಸಮಯ ಸಂದರ್ಭ ಹೇಗೊ ಗೊತ್ತಿಲ್ಲ. ನಾನು ರಾಜಕೀಯಕ್ಕೆ ಬರಬೇಕು ಅಂತಾನೋ ಮಂಡ್ಯದಲ್ಲಿ ಎಂಪಿ ಆಗ್ತಿನಿ ಅಂತಾನೋ ಕನಸಲ್ಲೂ ಅಂದುಕೊಂಡಿರಲಿಲ್ಲ. ಎಲ್ಲವೂ ನಮ್ಮ ಕೈಯಲ್ಲಿ ಇಲ್ಲ, ಮೇಲೊಬ್ಬರಿದ್ದಾರೆ. ಅವರು ಭವಿಷ್ಯದಲ್ಲಿ ಯಾರು ಏನಾಗಬೇಕೆಂದು ಬರೆದಿರ್ತಾರೆ ಅದರ ಪ್ರಕಾರ ನಡೆಯುತ್ತೆ ಅನ್ನೋದು ನನ್ನ ನಂಬಿಕೆ ಎಂದು ತಿಳಿಸಿದ್ದಾರೆ.

ಅಂತೆಯೇ, ಗಣೇಶ ಚತುರ್ಥಿ ಬಗ್ಗೆ ಮಾತನಾಡಿ, ಜಾತ್ರೆ ರೀತಿ ಮಾಡಿದರೆ ಮಾತ್ರ ಗಣೇಶ ಹಬ್ಬ ಅಲ್ಲ. ಮನೆಯಲ್ಲೇ ಪೂಜಿಸಿದರೂ ಗಣೇಶ ಸಂತೋಷ ಪಡುತ್ತಾನೆ. ಪರಿಸ್ಥಿತಿ ಅರ್ಥ ಮಾಡಿಕೊಂಡು ನಾವು ಹಬ್ಬ ಆಚರಿಸಬೇಕು. ಹಬ್ಬದ ಸಂದರ್ಭದಲ್ಲಿ ಕೇರಳದಲ್ಲಿ ರಿಲ್ಯಾಕ್ಸ್ ನೀಡಿದ್ದರು. ಹೀಗಾಗಿ ಕೇರಳದಲ್ಲಿ ಪ್ರತಿನಿತ್ಯ 30 ಸಾವಿರ ಕೇಸ್ ಬರುತ್ತಿದೆ. ಅಂತಹ ಪರಿಸ್ಥಿತಿ ರಾಜ್ಯದಲ್ಲಿ ಬರಬಾರದು ಎಂದು ಸುಮಲತಾ ಹೇಳಿದ್ದಾರೆ. ಕಾವೇರಿ ಪ್ರಾಧಿಕಾರ ಸೂಚನೆಯಂತೆ ತಮಿಳುನಾಡಿಗೆ ನೀರು ಬಿಡುವ ವಿಷಯಕ್ಕೆ ಪ್ರತಿಕ್ರಿಯಿಸಿ ರೈತರಿಗೆ ಅನ್ಯಾಯವಾಗುವ ವಿಚಾರಕ್ಕೆ ನನ್ನ ವಿರೋಧ ಇದೆ ಎಂದು ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ:
ಮಂಡ್ಯದಲ್ಲಿ ಸ್ವಂತ ಮನೆ ನಿರ್ಮಾಣಕ್ಕೆ ಸುಮಲತಾ ಗುದ್ದಲಿ ಪೂಜೆ; ಪುತ್ರನ ರಾಜಕೀಯ ಅಭಿಷೇಕಕ್ಕೆ ಅಡಿಪಾಯ ಹಾಕಿದರಾ? 

ನನ್ನನ್ನು ಟಾರ್ಗೆಟ್​ ಮಾಡಿದೋರು ಮಣ್ಣಲ್ಲಿ ಮಣ್ಣಾಗಿದ್ದಾರೆ: ಸುಮಲತಾ ವಿರುದ್ದ ಶಾಸಕ ಪುಟ್ಟರಾಜು ಪರೋಕ್ಷವಾಗಿ ಆಕ್ರೋಶ

(Sumalatha Ambareesh and Abhishek Ambareesh reaction over constructing new house in Mandya and contesting in election)

Published On - 12:55 pm, Wed, 1 September 21