ನನ್ನನ್ನು ಟಾರ್ಗೆಟ್ ಮಾಡಿದೋರು ಮಣ್ಣಲ್ಲಿ ಮಣ್ಣಾಗಿದ್ದಾರೆ: ಸುಮಲತಾ ವಿರುದ್ದ ಶಾಸಕ ಪುಟ್ಟರಾಜು ಪರೋಕ್ಷವಾಗಿ ಆಕ್ರೋಶ
ಮಣ್ಣಲ್ಲಿ ಮಣ್ಣಾಗಿ ಹೋಗಿದ್ದಾರೆ ಎಂಬ ಮಾತಿನ ಅರ್ಥಕ್ಕೆ ಸ್ಪಷ್ಟನೆ ನೀಡಿರುವ ಅವರು, ನನ್ನ 37 ವರ್ಷದ ರಾಜಕೀಯ ಜೀವನದ ಎದುರಾಳಿಗಳು ಈಗ ನಮ್ಮ ಮುಂದೆ ಇಲ್ಲ. ಹಾಗಾಗಿ ನನ್ನನ್ನು ಟಾರ್ಗೆಟ್ ಮಾಡುವುದಕ್ಕೆ ಬಂದವರೆಲ್ಲಾ ಮಣ್ಣಲ್ಲಿ ಮಣ್ಣಾಗಿ ಹೋಗಿದ್ದಾರೆ ಎಂದು ಹೇಳಿದ್ದಾಗಿ ತಿಳಿಸಿದ್ದಾರೆ.
ಮೈಸೂರು: ಬಿಜೆಪಿ ಸಂಸದೆ ಸುಮಲತಾ ಅಂಬರೀಶ್ ಹಾಗೂ ಜೆಡಿಎಸ್ ನಾಯಕರ ನಡುವಿನ ವೈಮನಸ್ಸು ಇನ್ನೂ ಕರಗಿಲ್ಲ. ಇದೇ ಕಾರಣಕ್ಕಾಗಿ ಅನೇಕ ಸಂದರ್ಭದಲ್ಲಿ ಪರಸ್ಪರ ವಾಗ್ದಾಳಿ ನಡೆಯುತ್ತಲೇ ಇದೆ. ನೇರವಾಗಿ ಏನೂ ಹೇಳದಿದ್ದರೂ ಪರೋಕ್ಷವಾಗಿ ಚಾಟಿ ಬೀಸುವುದನ್ನು ರಾಜಕೀಯ ನಾಯಕರು ಇನ್ನೂ ಬಿಟ್ಟಿಲ್ಲ. ಇಂದು ಕೂಡಾ ಜೆಡಿಎಸ್ ಶಾಸಕ ಸಿ.ಎಸ್.ಪುಟ್ಟರಾಜು ಸಂಸದೆ ಸುಮಲತಾ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದು, ಅಕ್ರಮ ಗಣಿಗಾರಿಕೆ ಎಂದು ಎರಡು ತಿಂಗಳಿಂದ ಅಭಿವೃದ್ಧಿ ಕೆಲಸ ಆಗುತ್ತಿಲ್ಲ. ಗಣಿಗಾರಿಕೆ ವಿಚಾರದಲ್ಲಿ ಯಾರೇ ಅಕ್ರಮ ಮಾಡಿದರೂ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಿ. ಆದರೆ, ಸಕ್ರಮ ಇರುವ ಕ್ರಷರ್ಗಳನ್ನು ಅಭಿವೃದ್ಧಿ ದೃಷ್ಠಿಯಿಂದ ಆರಂಭಿಸಬೇಕು. 1983ರಲ್ಲೇ ನಾನು ಸಕ್ರಿಯವಾಗಿ ರಾಜಕೀಯಕ್ಕೆ ಬಂದವನು. ನನ್ನನ್ನು ಟಾರ್ಗೆಟ್ ಮಾಡುವುದಕ್ಕೆ ಬಂದವರೆಲ್ಲಾ ಈಗ ಮಣ್ಣಲ್ಲಿ ಮಣ್ಣಾಗಿ ಹೋಗಿದ್ದಾರೆ ಎಂದಿದ್ದಾರೆ.
ಜತೆಗೆ, ಮಣ್ಣಲ್ಲಿ ಮಣ್ಣಾಗಿ ಹೋಗಿದ್ದಾರೆ ಎಂಬ ಮಾತಿನ ಅರ್ಥಕ್ಕೆ ಸ್ಪಷ್ಟನೆ ನೀಡಿರುವ ಅವರು, ನನ್ನ 37 ವರ್ಷದ ರಾಜಕೀಯ ಜೀವನದ ಎದುರಾಳಿಗಳು ಈಗ ನಮ್ಮ ಮುಂದೆ ಇಲ್ಲ. ಹಾಗಾಗಿ ನನ್ನನ್ನು ಟಾರ್ಗೆಟ್ ಮಾಡುವುದಕ್ಕೆ ಬಂದವರೆಲ್ಲಾ ಮಣ್ಣಲ್ಲಿ ಮಣ್ಣಾಗಿ ಹೋಗಿದ್ದಾರೆ ಎಂದೆ. ನನಗೆ ಬುದ್ದಿ ಹೇಳಿ ಸರಿ ದಾರಿ ತೋರಿದವರೂ ಇದ್ದಾರೆ, ಕ್ಯಾತೆ ತೆಗೆದು ಕಣ್ಮರೆಯಾದವರೂ ಇದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಇದು ಪರೋಕ್ಷವಾಗಿ ಸಂಸದೆ ಸುಮಲತಾ ವಿರುದ್ಧ ಆಕ್ರೋಶ ಹೊರಹಾಕಿದಂತೆ ಕಾಣುತ್ತಿತ್ತಾದರೂ ಎಲ್ಲಿಯೂ ನೇರವಾಗಿ ವಾಗ್ದಾಳಿ ನಡೆಸಿಲ್ಲ.
ಅಕ್ರಮ ಗಣಿಗಾರಿಕೆ ಎಂದು ಕಳೆದ ಎರಡು ತಿಂಗಳಿಂದ ಅಭಿವೃದ್ಧಿ ಕೆಲಸಗಳು ಸ್ಥಗಿತಗೊಂಡಿವೆ. ಗಣಿಗಾರಿಕೆ ವಿಚಾರದಲ್ಲಿ ಯಾರೇ ಅಕ್ರಮ ಮಾಡಿದ್ದರೂ ಮುಲಾಜಿಲ್ಲದೇ ಕ್ರಮ ತೆಗೆದುಕೊಳ್ಳಲಿ. ಆದರೆ, ಸಕ್ರಮ ಇರುವ ಕ್ರಷರ್ಗಳನ್ನು ಅಭಿವೃದ್ಧಿ ದೃಷ್ಠಿಯಿಂದ ಆರಂಭಿಸುವುದು ಒಳ್ಳೆಯದು. ಈ ಬಗ್ಗೆ ದಿಶಾ ಮೀಟಿಂಗ್ನಲ್ಲಿ ಚರ್ಚೆ ಮಾಡಿದ್ದೇವೆ. ದಿಶಾ ಸಭೆಯಲ್ಲಿ ಜಿಲ್ಲೆ ಅಭಿವೃದ್ಧಿಗೆ ಒತ್ತು ನೀಡುವಂತೆ ತೀರ್ಮಾನ ಮಾಡಲಾಗಿದೆ. ಕಾನೂನು ಚೌಕಟ್ಟಿನಲ್ಲೇ ಎಲ್ಲರೂ ಒಟ್ಟಾಗಿ ಅಭಿವೃದ್ಧಿ ಕೆಲಸ ಮಾಡುತ್ತಿದ್ದೇವೆ ಎಂದು ಮೈಸೂರಿನಲ್ಲಿ ಶಾಸಕ ಸಿ.ಎಸ್.ಪುಟ್ಟರಾಜು ಹೇಳಿಕೆ ನೀಡಿದ್ದಾರೆ.
ರವೀಂದ್ರ ಶ್ರೀಕಂಠಯ್ಯಗೆ ಟ್ರೀಟ್ಮೆಂಟ್ ಅಗತ್ಯವಿದೆ; ಸಂಸದೆ ಸುಮಲತಾ ವಾಗ್ದಾಳಿ
(CS Puttaraju indirectly slams Sumalatha Ambareesh in Mysuru)