ಮಂಡ್ಯ: ಮಳವಳ್ಳಿಯಲ್ಲಿ ಬಾಲಕಿ ಮೇಲೆ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸಿಎಂ ಪರಿಹಾರ ನಿಧಿಯಿಂದ 10 ಲಕ್ಷ ರೂಪಾಯಿ ಬಿಡುಗಡೆ ಮಾಡಲಾಗಿದೆ. ಸಂಸದೆ ಸುಮಲತಾ(Sumalatha Ambareesh), ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ(Gopalaiah) ನೇತೃತ್ವದಲ್ಲಿ ಇಂದು ಬಾಲಕಿ ಕುಟುಂಬಕ್ಕೆ ₹10 ಲಕ್ಷ ಪರಿಹಾರದ ಚೆಕ್ ವಿತರಣೆ ಮಾಡಲಾಗುತ್ತೆ. ಬಾಲಕಿ ಮನೆಗೆ ಇಂದು ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಭೇಟಿ ನೀಡಲಿದ್ದಾರೆ.
ಅ.11 ರಂದು ಟ್ಯೂಷನ್ ಗೆ ಹೋಗಿದ್ದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆಗೈಯಲಾಗಿತ್ತು. ಈ ಸಂಬಂಧ ಕುಂಭಮೇಳದಲ್ಲಿ ಸಿಎಂ ಬೊಮ್ಮಾಯಿ ಮೃತ ಬಾಲಕಿ ಕುಟುಂಬಕ್ಕೆ 10 ಲಕ್ಷ ಪರಿಹಾರ ಘೋಷಿಸಿದ್ದರು. ತಕ್ಷಣವೇ ಜಿಲ್ಲಾಡಳಿತ ಖಾತೆಗೆ ಪರಿಹಾರ ನಿಧಿ ವರ್ಗಾವಣೆ ಮಾಡಲಾಗಿತ್ತು. ಇಂದು ಸಂಸದೆ ಸುಮಲತಾ ಹಾಗೂ ಸಚಿವ ಕೆ.ಗೋಪಾಲಯ್ಯ ನೇತೃತ್ವದಲ್ಲಿ ಚೆಕ್ ಹಸ್ತಾಂತರಿಸಲಾಗುತ್ತೆ.
5 ಲಕ್ಷ ರೂ. ನೆರವು ನೀಡಿದ ಶಾಸಕ ಜಮೀರ್ ಅಹ್ಮದ್
ಮಂಡ್ಯ ಜಿಲ್ಲೆ ಮಳವಳ್ಳಿಯಲ್ಲಿರುವ ಮೃತ ಬಾಲಕಿ ನಿವಾಸಕ್ಕೆ ಶಾಸಕ ಜಮೀರ್ ಭೇಟಿ ನೀಡಿ ಮೃತ ಬಾಲಕಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಹಾಗೂ 5 ಲಕ್ಷ ರೂ. ನೆರವು ನೀಡಿದ್ದಾರೆ. ಕೃತ್ಯವೆಸಗಿದ ಪಾಪಿಯನ್ನ ತುಂಡು ತುಂಡಾಗಿ ಕತ್ತರಿಸಬೇಕು. ಮನುಷ್ಯರು ಯಾರೂ ಈ ಕೃತ್ಯ ಮಾಡಲ್ಲ. ಇಂತಹ ಪ್ರಕರಣಗಳಿಗೆ ಪ್ರತ್ಯೇಕ ಕಾನೂನು ಜಾರಿಗೆ ತರಬೇಕು ಎಂದು ಜಮೀರ್ ಆಕ್ರೋಶ ಹೊರ ಹಾಕಿದರು.
ಘಟನೆ ಹಿನ್ನೆಲೆ
ಮಂಡ್ಯ ಜಿಲ್ಲೆ ಮಳವಳ್ಳಿ ಪಟ್ಟಣದಲ್ಲಿ ನಿರ್ಮಾಣ ಹಂತದ ಮನೆಯ ಸಂಪ್ನಲ್ಲಿ ಬಾಲಕಿ ಶವಪತ್ತೆಯಾಗಿತ್ತು. ಈ ಸಂಬಂಧ ಕೇಸ್ ದಾಖಲಿಸಿಕೊಂಡು ತನಿಖೆಗೆ ಇಳಿದಾಗ ಇದು ರೇಪ್ ಅಂಡ್ ಮರ್ಡರ್ ಕೇಸ್ ಎಂಬುವುದು ಬಯಾಲಾಯಿತು. ಮಧ್ಯಾಹ್ನ ಟ್ಯೂಷನ್ಗೆ ತೆರಳಿದ್ದ ಬಾಲಕಿ ಎಷ್ಟು ಸಮಯ ಕಳೆದರೂ ಮನೆಗೆ ಬಾರದ ಹಿನ್ನೆಲೆ ಕುಟುಂಬಸ್ಥರು ಹುಡುಕಾಡಿದ್ದಾರೆ. ಈ ವೇಳೆ ಟ್ಯೂಷನ್ ಹಿಂಭಾಗದಲ್ಲಿ ನಿರ್ಮಾಣ ಹಂತದ ಮನೆಯ ಸಂಪ್ನಲ್ಲಿ ಬಾಲಕಿ ಶವ ಪತ್ತೆಯಾಗಿತ್ತು. ಸ್ಥಳಕ್ಕೆ ಮಳವಳ್ಳಿ ಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ಮಿಮ್ಸ್ ಶವಾಗಾರಕ್ಕೆ ರವಾನಿಸಿದ್ದರು. ಇದರ ನಡುವೆ ಬಾಲಕಿಯನ್ನ ಅತ್ಯಾಚಾರವೆಸಗಿ ಕೊಲೆಗೈದಿರುವ ಬಗ್ಗೆ ಪೋಷಕರು ಆರೋಪ ಮಾಡಿದ್ದರು. ಸದ್ಯ ಈಗ ಪೊಲೀಸರ ವಿಚಾರಣೆ ವೇಳೆ ಸತ್ಯ ಬಯಲಾಗಿದೆ. ಬಾಲಕಿಯನ್ನು ಕರೆಸಿಕೊಂಡು ಅತ್ಯಾಚಾರವೆಸಗಿ ಕೊಲೆ ಮಾಡಿದ್ದ ಟ್ಯೂಷನ್ ನಡೆಸುತ್ತಿದ್ದವನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:15 am, Wed, 19 October 22