ಬಯಲಾಗುತ್ತಲೇ ಇದೆ ಮಂಗಳೂರು ಸಿಸಿಬಿ ಪೊಲೀಸರ ಅಕ್ರಮಗಳು: ಮಗನ ಸ್ಕೂಲ್ ಫೀ ಕಟ್ಟಲು ಎತ್ತಿಟ್ಟಿದ್ದ ಹಣ ಲೂಟಿ

| Updated By: ಸಾಧು ಶ್ರೀನಾಥ್​

Updated on: Mar 06, 2021 | 1:52 PM

ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ವಿನಯ ಗಾಂವ್ಕರ್​ಗೆ ವಿನಯಾ ಎನ್ನುವ ಮಹಿಳೆ ದೂರು ನೀಡಿದ್ದು, ಕಬ್ಬಾಳ್ ರಾಜ್ ಮಂಗಳೂರು ಸಿಸಿಬಿ ಪಿಎಸ್ಐ ಆಗಿದ್ದಾಗ ಈ ಲೂಟಿ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದು, ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಿದ್ದಾರೆ.

ಬಯಲಾಗುತ್ತಲೇ ಇದೆ ಮಂಗಳೂರು ಸಿಸಿಬಿ ಪೊಲೀಸರ ಅಕ್ರಮಗಳು: ಮಗನ ಸ್ಕೂಲ್ ಫೀ ಕಟ್ಟಲು ಎತ್ತಿಟ್ಟಿದ್ದ ಹಣ ಲೂಟಿ
ಪಾಂಡೇಶ್ವರ ನಿವಾಸಿ ವಿನಯಾ
Follow us on

ಮಂಗಳೂರು: ಮಗನ ಸ್ಕೂಲ್ ಫೀಸ್ ಕಟ್ಟಲು ಎತ್ತಿಟ್ಟಿದ್ದ ಹಣ ಲೂಟಿ ಮಾಡಿದ್ದಾರೆ ಎಂದು ಮಂಗಳೂರು ನಗರ ಉಪ ಪೊಲೀಸ್ ಆಯುಕ್ತರಿಗೆ ಪಾಂಡೇಶ್ವರ ನಿವಾಸಿ ವಿನಯಾ ಎಂಬುವವರು ದೂರು ನೀಡಿದ್ದಾರೆ. ಈ ಹಿಂದಿನ ಸಿಸಿಬಿಯಿಂದ ಅನ್ಯಾಯವಾಗಿದೆ ನನಗೆ ನ್ಯಾಯ ಕೊಡಿಸಿ ಎಂದು ಸದ್ಯ ಅನ್ಯಾಯಕ್ಕೊಳಗಾದ ಮಹಿಳೆ ದೂರು ನೀಡಿದ್ದು, ಆ ಮೂಲಕ ಹಿಂದಿನ ಸಿಸಿಬಿ ಪೊಲೀಸರ ವಿರುದ್ಧ ಮತ್ತೊಂದು ಆರೋಪ ಕೇಳಿಬಂದಿದೆ.

2019ರ ಅಕ್ಟೋಬರ್‌ನಲ್ಲಿ ಸಿಸಿಬಿ ಅಧಿಕಾರಿಗಳಿಂದ ಕ್ರಿಕೆಟ್ ಬೆಟ್ಟಿಂಗ್ ಆರೋಪದ ಅಡಿ ಅಂಗಡಿಯ ಮೇಲೆ ದಾಳಿ ನಡೆದಿದ್ದು, ದಾಳಿ ವೇಳೆ ಅಂಗಡಿಯಲ್ಲಿದ್ದ ಬ್ಯಾಗ್​ನಿಂದ 86000 ರೂಪಾಯಿ ಹಣವನ್ನು ತೆಗೆದುಕೊಂಡು ಹೋಗಿದ್ದಾರೆ. ಈ ಹಣ ಮಗನ ಶಾಲಾ ಶುಲ್ಕಕ್ಕೆ ಇಟ್ಟಿದ್ದಾಗಿತ್ತು. ತನಗೆ ನ್ಯಾಯ ದೊರಕಿಸಿಕೊಡಿ ಎಂದು ಮಹಿಳೆ ಈ ಹಿಂದಿನ ಸಿಸಿಬಿ ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ವಿನಯ ಗಾಂವ್ಕರ್​ಗೆ ವಿನಯಾ ಎನ್ನುವ ಮಹಿಳೆ ದೂರು ನೀಡಿದ್ದು, ಕಬ್ಬಾಳ್ ರಾಜ್ ಮಂಗಳೂರು ಸಿಸಿಬಿ ಪಿಎಸ್ಐ ಆಗಿದ್ದಾಗ ಈ ಲೂಟಿ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದು, ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಿದ್ದಾರೆ.

ಮಂಗಳೂರು ಪೊಲೀಸ್ ಠಾಣೆಯ ದೃಶ್ಯ

ಈ ಹಿಂದೆಯೂ ಕೂಡ ಸಿಸಿಬಿ ಅಧಿಕಾರಿಗಳ ವಿರುದ್ಧ ಆರೋಪ ಕೇಳಿ ಬಂದಿದ್ದು, ಪೊಲೀಸ್ ವಶದಲ್ಲಿದ್ದ ಐಷಾರಾಮಿ ಕಾರಗಳ ದುರ್ಬಳಕೆ ಮತ್ತು ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಪಿ ವಿನಯ್ ಗಾಂವ್ಕರ್ ನೀಡಿರುವ ವರದಿ ಆಧರಿಸಿ, ಸಿಐಡಿಯಿಂದ ಡಿಜಿಪಿಗೆ ವರದಿ ಸಲ್ಲಿಕೆ ಮಾಡಲಾಗಿದೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದಿನ ಮಂಗಳೂರು ಸಿಸಿಬಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ವಿರುದ್ಧ ವರದಿ ದಾಖಲಾಗಿತ್ತು.

ಮೂರು ಕಾರುಗಳಲ್ಲಿ ಒಂದು ಕಾರನ್ನು ಮಾರಾಟ ಮಾಡಿರುವ ಅರೋಪವೂ ಕೇಳಿ ಬಂದಿದ್ದು, ಸಿಐಡಿಗೆ ಮಂಗಳೂರು ಪೊಲೀಸ್ ಅಧಿಕಾರಿಗಳ ತಂಡ ವರದಿ ಸಲ್ಲಿಸಿದೆ. ಪಿಎಸ್ಸೈ ಕಬ್ಬಾಳ್ ರಾಜ್, ನಾರ್ಕೋಟಿಕ್ ಇನ್ಸ್ಪೆಕ್ಟರ್ ರಾಮಕೃಷ್ಣ, ಸಿಸಿಬಿ ಸಿಬ್ಬಂದಿ ಆಶೀತ್ ಡಿಸೋಜಾ ಮತ್ತು ರಾಜಾ ವಿರುದ್ಧ ವರದಿ ದಾಖಲಾಗಿದ್ದು, ಪೊಲೀಸ್ ಬ್ರೋಕರ್ ದಿವ್ಯದರ್ಶನ್ ವಿರುದ್ಧ ಕೂಡ ವರದಿ ದಾಖಲಾಗಿದೆ.

ಇದನ್ನೂ ಓದಿ:ಸಿಸಿಬಿ ವಶದಲ್ಲಿದ್ದ ಜಾಗ್ವಾರ್ ಕಾರು ಮಾರಿದ ಇಬ್ಬರು ಪೊಲೀಸ್ ಅಧಿಕಾರಿಗಳು ಸಸ್ಪೆಂಡ್​

ಜಾಗ್ವಾರ್, ಬಿಎಂಡಬ್ಲೂ, ಪೋರ್ಷೆ ಕಾರ್ ವಶ ಪಡಿಸಿಕೊಂಡಿದ್ದ ಅಧಿಕಾರಿಗಳು, ತಮ್ಮ ವಶದಲ್ಲಿದ್ದ ಜಾಗ್ವಾರ್ ಕಾರನ್ನು ಸಿಸಿಬಿ ಅಧಿಕಾರಿಗಳು ಮಾರಾಟ ಮಾಡಿದ್ದಾರೆ. ಜೊತೆಗೆ ಪೋರ್ಷೆ ಹಾಗೂ ಬಿಎಂಡಬ್ಲೂ ಕಾರನ್ನು ಸ್ವಂತಕ್ಕೆ ಬಳಸಿಕೊಂಡಿದ್ದಾರೆ. ಎಂಬ ದೂರು ಕೇಳಿಬಂದಿತ್ತು. ಇನ್ನು ಮಂಗಳೂರು ಸಿಸಿಬಿ ವಿಭಾಗದಿಂದ ಈಗಾಗಲೇ ವರ್ಗಾವಣೆ ಗೊಂಡಿರುವ ಅಧಿಕಾರಿಗಳಿಂದ ಈ ರೀತಿಯ ವಂಚನೆ ನಡೆದಿದ್ದು, ವಿಚಾರಣೆಗೆ ಒಳಪಡಲಿರುವ ಸಿಸಿಬಿಯಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ವರದಿ ತಯಾರಿಸಿದ್ದ ಡಿಸಿಪಿ ವಿನಯ್ ಗಾಂವ್ಕರ್, ಪ್ರಕರಣದ ತನಿಖಾ ವರದಿಯನ್ನು ಡಿಜಿಪಿಗೆ ರವಾನಿಸಿದ್ದರು.

ಇನ್ನೂ ಏನೇನು ಬಾನಗಡಿಗಳೋ..

ಮಂಗಳೂರು ಸಿಸಿಬಿ ಪೊಲೀಸರ ಅಕ್ರಮಗಳು ಬಗೆದಷ್ಟೂ ಹೊರಬರುತ್ತಿದ್ದು, ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ಉದ್ಯಮಿಯನ್ನು ಸಿಲುಕಿಸಿ ಲಕ್ಷ ಲಕ್ಷ ಹಣ ಸುಲಿಗೆ ಮಾಡಿದ್ದಾರೆ ಎಂದು ಸಿಸಿಬಿ ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಲಾಗಿತ್ತು. ಇಲ್ಲಿ ಉದ್ಯಮಿ ಕರುಣಾಕರ ಭಂಡಾರಿ ಎಂಬವರ ಮೇಲೆ ಬೆಟ್ಟಿಂಗ್ ವಿಚಾರದಲ್ಲಿ ದಾಳಿ ಮಾಡಿದ್ದರು. ಆಗ ಅವರಿಂದ ಸಿಸಿಬಿ ಪಿಎಸ್​ಐ ಕಬ್ಬಾಳ್ ರಾಜ್ 55 ಲಕ್ಷ ಹಣ ಪಡೆದಿದ್ದರು. ನನ್ನ ಮುಂಬೈ ಗೆಳೆಯರಿಬ್ಬರ ಮನೆಗೂ ಕ್ರಿಕೆಟ್ ಬೆಟ್ಟಿಂಗ್ ಹೆಸರಲ್ಲಿ ದಾಳಿ ಮಾಡಿದ್ದಾರೆ. ಈ ವೇಳೆಯೂ ಸುಳ್ಳು ಕೇಸ್ ಹಾಕಿ ಮಾನ ಮರ್ಯಾದೆ ತೆಗೆಯುವುದಾಗಿ ಬೆದರಿಸಿ ಒಬ್ಬರಿಂದ 35 ಲಕ್ಷ ಮತ್ತು ಇನ್ನೊಬ್ಬರಿಂದ 25 ಲಕ್ಷ ಪಡೆದಿದ್ದಾರೆ ಎಂದು ಆರೋಪಿಸಲಾಗಿತ್ತು.

ನಂತರದ ದಿನಗಳಲ್ಲಿ ಕಾರು ಮಾರಾಟ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಅಧಿಕಾರಿಗಳನ್ನು ಡಿಜಿ ಮತ್ತು ಐಜಿಪಿ ಅಮಾನತುಗೊಳಿಸಿದ್ದು, ಕ್ರಿಕೆಟ್ ಬೆಟ್ಟಿಂಗ್ ದಂಧೆ ಆರೋಪದ ಅಡಿಯಲ್ಲಿ ಮಂಗಳೂರು ನಾರ್ಕೋಟಿಕ್ ಠಾಣೆಯ ಇನ್ಸ್​ಪೆಕ್ಟರ್​ ರಾಮಕೃಷ್ಣ ಮತ್ತು ಸಿಸಿಬಿಯ ಹಿಂದಿನ ಎಸ್ಐ ಕಬ್ಬಾಳ್ ರಾಜ್ ಅಮಾನತುಗೊಂಡಿದ್ದರು.ಮತ್ತೆ ಈಗ ಹಿಂದಿನ ಸಿಸಿಬಿಗಳ ವಿರುದ್ಧ ಕ್ರಿಕೆಟ್ ಬೆಟ್ಟಿಂಗ್ ಆರೋಪ ಕೇಳಿ ಬಂದಿದ್ದು, ಇನ್ನೂ ಏನೇನು ಬಾನಗಡಿಗಳು ಆಗಿದ್ದಾವೋ ಈ ಸಿಸಿಬಿ ಪೊಲೀಸರಿಂದ ಕಾದು ನೋಡಬೇಕಿದೆ.

ಇದನ್ನೂ ಓದಿ: ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ಉದ್ಯಮಿಗಳನ್ನ ಸಿಲುಕಿಸಿ ಲಕ್ಷ ಲಕ್ಷ ಹಣ ಸುಲಿಗೆ: ಮಂಗಳೂರು ಸಿಸಿಬಿ ಪೊಲೀಸರ ವಿರುದ್ಧ ಗಂಭೀರ ಆರೋಪ