ಮಂಗಳೂರು: ಪುದುವೆಟ್ಟು ಗ್ರಾಮದಲ್ಲಿ ವಿಷಕಾರಿ ಅಣಬೆ ತಿಂದು ತಂದೆ, ಮಗ ಸಾವು
Mangaluru news: ವಿಷಕಾರಿ ಅಣಬೆ ತಿಂದು ತಂದೆ, ಮಗ ಸಾವನ್ನಪ್ಪಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಗ್ರಾಮದಲ್ಲಿ ನಡೆದಿದೆ.
ಬೆಳ್ತಂಗಡಿ: ವಿಷಕಾರಿ ಅಣಬೆ (Poisonous mushroom) ಸೇವನೆ ಮಾಡಿ ತಂದೆ ಮತ್ತು ಮಗ ಸಾವನ್ನಪ್ಪಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಗ್ರಾಮದಲ್ಲಿ ನಡೆದಿದೆ. ಮಿಯ್ಯಾರು ಪಲ್ಲದಪಲಿಕೆ ನಿವಾಸಿಗಳಾಗಿರುವ ಗುರುವ ಮೇರ(80) ಮತ್ತು ಇವರ ಪುತ್ರ ಓಡಿಯಪ್ಪ(41) ಸಾವನ್ನಪ್ಪಿದವರು. ಮಳೆಗಾಲದಲ್ಲಿ ಸಾಮಾನ್ಯವಾಗಿ ಗುಡ್ಡಗಾಡು ಪ್ರದೇಶದಲ್ಲಿ ವಿವಿಧ ರೀತಿಯ ಅಣಬೆಗಳು ಬೆಳೆಯುತ್ತವೆ. ಅದರಂತೆ ಗುರುವ ಮೇರ ಮತ್ತು ಮಗ ಓಡಿಯಪ್ಪ ಅವರು ಕಾಡಿನಿಂದ ಅಣಬೆ ತಂದು ಸಾಂಬಾರ್ ಮಾಡಿ ತಿಂದು ಸಾವನ್ನಪ್ಪಿದ್ದಾರೆ.
ಕಾಡಿನಲ್ಲಿ ಬೆಳೆದ ಅಣಬೆಗಳಲ್ಲಿ ವಿಷಕಾರಿ ಅಣಬೆಗಳು ಇರುತ್ತವೆ. ಆದರೆ ಇವೆಲ್ಲವೂ ನೋಡಲು ಕೊಂಚ ಒಂದೇ ರೀತಿಯಲ್ಲಿ ಇರುವುದರಿಂದ ಸೇವನೆಗೆ ಯೋಗ್ಯವಾದ ಅಣಬೆಯೇ ಎಂಬುದನ್ನು ಖಚಿತಪಡಿಸಬೇಕು. ಆದರೆ ಗುರುವ ಮೇರ ಅವರು ನಿನ್ನೆ ಕಾಡಿನಿಂದ ತಂದಿದ್ದ ಅಣಬೆ ವಿಷಕಾರಿಯಾಗಿತ್ತು. ಈ ಬಗ್ಗೆ ಅರಿವಿಲ್ಲದೆ ಅವರು ಸಾಂಬಾರು ಮಾಡಿ ತಿಂದಿದ್ದಾರೆ. ಇಂದು ಬೆಳಗ್ಗೆ ಗುರುವ ಮೇರ ಅವರ ಮತ್ತೋರ್ವ ಮಗ ಮನೆಯಿಂದ ಹೊರಗೆ ಬಂದು ನೋಡಿದಾಗ ಅಂಗಳದಲ್ಲಿ ಇಬ್ಬರು ಶವವಾಗಿ ಪತ್ತೆಯಾಗಿದ್ದರು.
ಅಂಗಳದಲ್ಲಿ ತಂದೆ ಮತ್ತು ಸಹೋದರ ಸಾವನ್ನಪ್ಪಿರುವುದನ್ನು ನೋಡಿದ ಕರ್ತ, ಧರ್ಮಸ್ಥಳ ಠಾಣಾ ಪೊಲೀಸರಿಗೆ ದೂರು ನೀಡಿದ್ದಾರೆ. ಸಾವು ಪ್ರಕರಣ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಷಕಾರಿ ಅಣಬೆ ಸೇವಿಸಿರುವ ಹಿನ್ನೆಲೆ ಸಾವಿನ ಹಿಂದೆ ಯಾವುದೇ ಸಂಶಯವಿಲ್ಲ ಅಂತಾ ಗುರವ ಮೇರ ಮಗ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:27 pm, Tue, 22 November 22