ಮಂಗಳೂರು: ಅಕ್ರಮ ಕಸಾಯಿ ಖಾನೆಗೆ ಬೆಳ್ಳಂಬೆಳಗ್ಗೆ ಹಿಂದೂ ಜಾಗರಣಾ ವೇದಿಕೆ ದಾಳಿ

ಅಕ್ರಮ ಕಸಾಯಿ ಖಾನೆಗೆ ಬೆಳ್ಳಂಬೆಳಗ್ಗೆ ಹಿಂದೂ ಜಾಗರಣಾ ವೇದಿಕೆ ದಾಳಿ ನಡೆಸಿದ ಘಟನೆ ಮಂಗಳೂರಿನಲ್ಲಿ ನಡೆದಿದ್ದು, ವಿಜಯಪುರದಲ್ಲಿ ಅಂಗನವಾಡಿ ಕೇಂದ್ರದ ಆಹಾರದಲ್ಲಿ ಹುಳಗಳು ಪತ್ತೆಯಾಗಿವೆ. ಬೆಂಗಳೂರಿಗೆ ಗಾಂಜಾ ತರುತ್ತಿದ್ದ ಇಬ್ಬರು ಅರೆಸ್ಟ್, ಹಾಸನದಲ್ಲಿ ಹಾವು ಕಡಿತಕ್ಕೆ ಬಾಲಕ ಸಾವನ್ನಪ್ಪಿದ್ದಾನೆ.

ಮಂಗಳೂರು: ಅಕ್ರಮ ಕಸಾಯಿ ಖಾನೆಗೆ ಬೆಳ್ಳಂಬೆಳಗ್ಗೆ ಹಿಂದೂ ಜಾಗರಣಾ ವೇದಿಕೆ ದಾಳಿ
ಅಕ್ರಮ ಕಸಾಯಿಖಾನೆ ಮೇಲೆ ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಪೊಲೀಸರಿಗೆ ಒಪ್ಪಿಸಿದ ಹಿಂಜಾವೇ ಕಾರ್ಯಕರ್ತರು
Follow us
TV9 Web
| Updated By: Rakesh Nayak Manchi

Updated on: Dec 24, 2022 | 1:17 PM

ಮಂಗಳೂರು: ಅಕ್ರಮ ಕಸಾಯಿ ಖಾನೆ (Illegal slaughterhouse)ಗೆ ಹಿಂದೂ ಜಾಗರಣಾ ವೇದಿಕೆ ಬೆಳ್ಳಂಬೆಳಗ್ಗೆ ದಾಳಿ (Hindu Jagarana Vedike Raid) ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ತಾಲೂಕಿನ ಅಲಂಗಾರು ಬಳಿ ನಡೆದಿದೆ. ಅಲಂಗಾರು ಆಶ್ರಯ ಕಾಲೋನಿಯಲ್ಲಿರುವ ಗಿಲ್ಬರ್ಟ್ ಮಿರಾಂದ ಎಂಬವನ ಅಕ್ರಮ ಕಸಾಯಿ ಖಾನೆ ಮೇಲೆ ಬೆಳಿಗ್ಗೆ 4 ಗಂಟೆಗೆ ಹಿಂಜಾವೇ ಕಾರ್ಯಕರ್ತರು ದಾಳಿ ನಡೆಸಿದ್ದು, ವಧೆ ಮಾಡಲು ತಂದಿದ್ದ 4 ಗೋವು ಮತ್ತು ಭಾರೀ ಪ್ರಮಾಣ ಮಾಂಸ, ದನದ ತಲೆ ಭಾಗಗಳು ಪತ್ತೆಯಾಗಿವೆ. ಈ ಬಗ್ಗೆ ಪೊಲೀಸರಿಗೂ ಮಾಹಿತಿ ನೀಡಲಾಗಿದ್ದು, ಕೆ.ಜಿ ಗಟ್ಟಲೇ ಮಾಂಸ ಸಹಿತ ಕ್ಲಾರಿನ್ ಅಲ್ವಿನ್ ಮತ್ತು ಗಿಲ್ಬರ್ಟ್ ಮಿರಂದ ಎಂಬ ಆರೋಪಿಗಳನ್ನು ಪೊಲೀಸರ ವಶಕ್ಕೆ ನೀಡಿದ್ದಾರೆ. ಘಟನೆ ಸಂಬಂಧ ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೊಸ ವರ್ಷ ಆಚರಣೆ; ಮಂಗಳೂರಿನ ಮೇಲೆ ಡ್ರಗ್​ ಪೆಡ್ಲರ್​ಗಳ ಕಣ್ಣು (New Year)

ಹೊಸ ವರ್ಷಾಚರಣೆ ಆಚರಿಸಲು ಮಂಗಳೂರಿಗೆ ಭಾರೀ ಸಂಖ್ಯೆಯಲ್ಲಿ ಜನರು ಆಗಮಿಸುವ ಸಾಧ್ಯತೆ ಹಿನ್ನೆಲೆ ಡ್ರಗ್ ಪೆಡ್ಲರ್​ಗಳ ಕಣ್ಣು ಮಂಗಳೂರಿನ ಮೇಲೆ ಬಿದ್ದಿದೆ. ಕೇರಳ ಸೇರಿದಂತೆ ವಿವಿಧ ಕಡೆಯಿಂದ ಗಾಂಜಾ, ಡ್ರಗ್ಸ್ ಅಪಾರ ಪ್ರಮಾಣದಲ್ಲಿ ಬರುವ ಸಾಧ್ಯತೆ ಇದ್ದು, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ.

ವಿಜಯಪುರದಲ್ಲಿ ಅಂಗನವಾಡಿ ಆಹಾರದಲ್ಲಿ ಹುಳುಗಳು

ವಿಜಯಪುರ: ಅಂಗನವಾಡಿ ಮಕ್ಕಳಿಗೆ ನೀಡುವ ಆಹಾರದಲ್ಲಿ ಹುಳುಗಳು ಪತ್ತೆಯಾದ ಘಟನೆ ಜಿಲ್ಲೆಯ ಬಸವಬಾಗೇವಾಡಿ ತಾಲೂಕಿನ ಮನಗೂಳಿಯಲ್ಲಿ ನಡೆದಿದೆ. ಬಹುಧಾನ್ಯಳಿಂದ ತಯಾರಿಸಿದ ಪೌಡರ್ ಪುಷ್ಠಿ ಆಹಾರ ಕಳಪೆಯಾಗಿದೆ ಎಂದು ಆರೋಪಿಸಲಾಗಿದೆ. ಮನಗೂಳಿ ಪಟ್ಟಣದ ವಾರ್ಡ್ ನಂಬರ್ 15 ರ ಅಂಗನಾಡಿ ಕೇಂದ್ರಕ್ಕೆ ನೀಡಿರುವ ಪುಷ್ಠಿ ಪೌಡರ್​​ನಲ್ಲಿ ಹುಳುಗಳು ಪತ್ತೆಯಾಗಿದೆ.

Worms in food

ಅಂಗನವಾಡಿ ಆಹಾರದಲ್ಲಿ ಹುಳ ಪತ್ತೆ

ಮಕ್ಕಳಲ್ಲಿ ಅಪೌಷ್ಟಿಕತೆ ಉಂಟಾಗಬಾರದೆಂದು ಎಂಬ ಉದ್ದೇಶದಿಂದ ಮಹಿಳಾ ಹಾಗೂ ಮಕ್ಕಳ‌ ಅಭಿವೃದ್ಧಿ ಇಲಾಖೆ ಮೂರು ವರ್ಷಗಳ ಒಳಗಿನ ಅಂಗನವಾಡಿ ಮಕ್ಕಳಿಗೆ ನೀಡುವ ಪೌಷ್ಟಿಕಾಂಶದ ಪೌಡರ್​ನಲ್ಲೇ ಹುಳು ಪತ್ತೆಯಾದ ಕಾರಣ ಪೋಷಕರ ಅಸಮಾಧಾನ ಹೊರಹಾಕಿದ್ದಾರೆ. ಈ ಪೌಡರ್ ಅನ್ನು ವಾರದಲ್ಲಿ ಐದು ದಿನಗಳ ಕಾಲ ಮಕ್ಕಳಿಗೆ ನೀಡಲಾಗುತ್ತದೆ. ಈ ಬಗ್ಗೆ ಮೇಲಾಧಿಕಾರಿಗಳು ಇತ್ತ ಗಮನ ಹರಿಸಬೇಕೆಂದು‌ ಪೋಷಕರ ಒತ್ತಾಯಿಸಿದ್ದಾರೆ.

ಅಂಕೋಲದಲ್ಲಿ ಹೊತ್ತಿ ಉರಿದ ರಾಸಾಯನಿಕ ತುಂಬಿದ್ದ ಲಾರಿ

ಅಂಕೋಲಾ: ಮಂಗಳೂರಿಗೆ ತೆರಳುತ್ತಿದ್ದ ರಾಸಾಯನಿಕ ತುಂಬಿದ್ದ ಲಾರಿ ಹೊತ್ತಿ ಉರಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ‌ ತಾಲೂಕಿನ ವಜ್ರಳ್ಳಿ ಗ್ರಾಮದಲ್ಲಿ ನಡೆದಿದ್ದು, ಅದೃಷ್ಟವಶಾತ್​​ ಲಾರಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಾಹನಗಳು ಡಿಕ್ಕಿಯಾಗಿ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಬೆಂಕಿಯ ಕೆನ್ನಾಲೆಗೆ ಲಾರಿ ಸಂಪೂರ್ಣ ಸುಟ್ಟುಕರಕಲಾಗಿದೆ. ಲಾರಿಗೆ ಹತ್ತಿರವ ಬೆಂಕಿ ಪಕ್ಕದ ಜಮೀನಿಗೂ ವ್ಯಾಪಿಸಿದ್ದು, ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತವನ್ನು ತಡೆದರು.

Ankola lorry Fire

ಅಂಕೋಲದಲ್ಲಿ ಹೊತ್ತಿ ಉರಿದ ರಾಸಾಯನಿಕ ತುಂಬಿದ್ದ ಲಾರಿ

ಹಾಸನದಲ್ಲಿ ಹಾವು ಕಡಿತಕ್ಕೊಳಗಾಗಿ ಬಾಲಕ ಸಾವು

ಹಾಸನ: ಹಾವು ಕಚ್ಚಿ ತೀವೃ ಅಸ್ವಸ್ಥಗೊಂಡಿದ್ದ ಬಾಲಕ ಸಾವನ್ನಪ್ಪಿದ ಘಟನೆ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ದೊಡ್ಡಕಲ್ಲೂರು ಗ್ರಾಮದಲ್ಲಿ ನಡೆದಿದೆ. ರೋಷನ್(4) ಎಂಬ ಬಾಲಕನಿಗೆ ನಿನ್ನೆ ಗ್ರಾಮದ ಅಂಗನವಾಡಿ ಆವರಣದಲ್ಲಿ ಹಾವು ಕಡಿದಿದೆ. ಹಾವು ಕಚ್ಚಿ ತೀವೃ ಅಸ್ವಸ್ಥಗೊಂಡಿದ್ದ ರೋಷನ್​ನನ್ನು ಆಸ್ಪತ್ರೆಗೆ ದಾಖಲಿಸಲು ಸರಿಯಾದ ಸಮಯಕ್ಕೆ ಆ್ಯಂಬುಲೆನ್ಸ್ ಸಿಗದೆ ಪರದಾಟ ನಡೆಸಲಾಗಿದೆ.

ಆ್ಯಂಬುಲೆನ್ಸ್ ಸಿಗದೆ ಬಾಲಕನ ತಂದೆ ಬೈಕ್​ನಲ್ಲೇ ಸಮುದಾಯ ಅರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಇಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ತಾಲೂಕು ಆಸ್ಪತ್ರೆಗೆ ಕರೆದೊಯ್ಯುವಾಗಲೂ ಆ್ಯಂಬುಲೆನ್ಸ್ ಲಭ್ಯವಾಗಿಲ್ಲ. ಹೆತ್ತೂರಿನಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಸಕಲೇಶಪುರಕ್ಕೆ ಬೈಕ್​ನಲ್ಲೇ ಕರೆದೊಯ್ಯುವ ದಾರಿ ಮಧ್ಯೆ ಆ್ಯಂಬುಲೆನ್ಸ್ ಬಂದಿದೆ. ಬಳಿಕ ಆಸ್ಪತ್ರೆಗೆ ಕೊಂಡೊಯ್ದಿದ್ದರೂ ಅಷ್ಟರಲ್ಲಾಗಲೇ ಪರಿಸ್ಥಿತಿ ಕೈಮೀರಿ ಹೋಗಿತ್ತು. ಚಿಕಿತ್ಸೆ ಫಲಿಸದೆ ಬಾಕಲ ಸಾವನ್ನಪ್ಪಿದ್ದಾನೆ. ಸರಿಯಾದ ಸಮಯಕ್ಕೆ ಆ್ಯಂಬುಲೆನ್ಸ್ ಸಿಗದೇ ಬಾಲಕ ಸಾವನ್ನಪ್ಪಿರುವುದಾಗಿ ಆರೋಪಿಸಲಾಗಿದೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ