ಮಂಗಳೂರು, ಜೂನ್ 12: ಬಿಜೆಪಿ (BJP) ವಿಜಯೋತ್ಸವ ವೇಳೆ ಇಬ್ಬರಿಗೆ ಚೂರಿ ಇರಿತ ಪ್ರಕರಣಕ್ಕೆ (stabbing case) ಸಂಬಂಧಿಸಿದಂತೆ ಮತ್ತೆ 7 ಆರೋಪಿಗಳನ್ನು ಕೊಣಾಜೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇಮ್ರಾನ್, ಇರ್ಷಾದ್, ಶರ್ವಾನ್, ತಾಜುದ್ದೀನ್, ಮುಬಾರಕ್, ಅಶ್ರಫ್, ತಲ್ಲತ್ ಬಂಧಿತರು. ಆ ಮೂಲಕ ಚೂರಿ ಇರಿತ ಪ್ರಕರಣದಲ್ಲಿ ಇದುವರೆಗೆ 13 ಆರೋಪಿಗಳನ್ನು ಬಂಧಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬೋಳಿಯಾರ್ ಪ್ರದೇಶದಲ್ಲಿ ಜೂನ್ 9ರಂದು ಘೋಷಣೆ ವಿಚಾರವಾಗಿ ಇಬ್ಬರಿಗೆ ಚೂರಿ ಇರಿತವಾಗಿತ್ತು.
ಮೊನ್ನೆ ದೇಶಾದ್ಯಂತ ಬಿಜೆಪಿ ಕಾರ್ಯಕರ್ತರ ಸಂಭ್ರಮ ಜೋರಾಗಿತ್ತು. ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಹಿನ್ನೆಲೆ ಸಂಭ್ರಮಾಚರಣೆ ನಡೆದಿತ್ತು. ಅದೇ ರೀತಿ ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬೋಳಿಯಾರ್‌ನಲ್ಲಿ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವದ ಮೆರವಣಿಗೆ ನಡೆಸಿದ್ದರು. ಆದ್ರೆ ಇದೇ ಮೆರವಣಿಗೆಯಲ್ಲಿ ಭಾಗವಹಿಸಿದ ಇಬ್ಬರು ಬಿಜೆಪಿ ಕಾರ್ಯಕರ್ತರು ಚೂರಿ ಇರಿತಕ್ಕೆ ಒಳಗಾಗಿದ್ರು.
ಇದನ್ನೂ ಓದಿ: ಮಂಗಳೂರಿನಲ್ಲಿ ಬಿಜೆಪಿ ವಿಜಯೋತ್ಸವ ಮೆರವಣಿಗೆ ಬಳಿಕ ಇಬ್ಬರಿಗೆ ಚೂರಿ ಇರಿತ ಪ್ರಕರಣ; ಆರು ಮಂದಿ ಬಂಧನ, 20 ಜನ ವಶಕ್ಕೆ
ಅಷ್ಟಕ್ಕೂ ಆಗಿದ್ದೇನೆಂದ್ರೆ, ಬಿಜೆಪಿ ಮೆರವಣಿಗೆ ಬೋಳಿಯಾರ್ ಮಸೀದಿ ಮುಂದೆ ಸಾಗಿ ಬರುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಘೋಷಣೆಗಳನ್ನು ಕೂಗುತ್ತಾ ಸಾಗಿದ್ದರು. ಇದೇ ಸಂದರ್ಭ ಮಸೀದಿ ಮುಂದೆ ಇದ್ದ ಯುವಕರ ಗುಂಪೊಂದು ಘೋಷಣೆ ಕೂಗುವುದಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಬಳಿಕ ಮೆರವಣಿಗೆ ಮುಂದೆ ಸಾಗಿತ್ತು. ವಿಜಯೋತ್ಸವ ಮುಗಿಸಿ ಮಸೀದಿ ಬಳಿ ಹೋಂಡಾ ಆ್ಯಕ್ಟೀವಾದಲ್ಲಿ ಬಂದ ಮೂವರು ಬಿಜೆಪಿ ಕಾರ್ಯಕರ್ತರಾದ ಹರೀಶ್, ನಂದಕುಮಾರ್, ಕೃಷ್ಣಕುಮಾರ್ ಬೋಲೋ ಭಾರತ್ ಮಾತಾ ಕೀ ಜೈ ಎಂಬ ಘೋಷಣೆ ಕೂಗಿದ್ದರು.
ಇದನ್ನೂ ಓದಿ: ಮಂಗಳೂರಿನಲ್ಲಿ ಬಿಜೆಪಿ ವಿಜಯೋತ್ಸವ ಮೆರವಣಿಗೆ ಬಳಿಕ ಚೂರಿ ಇರಿತ ಕೇಸ್: ಐವರ ಬಂಧನ
ಈ ಸಂದರ್ಭ ಮಸೀದಿ ಮುಂದೆ ಮೊದಲೇ ಗುಂಪು ಸೇರಿದ್ದ ಸುಮಾರು 25ಕ್ಕೂ ಹೆಚ್ಚು ಯುವಕರ ಗುಂಪು ಈ ಮೂವರನ್ನು ಅಟ್ಟಾಡಿಸಿಕೊಂಡು ಹೋಗಿದ್ದರು. ಬೋಳಿಯಾರ್‌ನ ಬಾರ್ ಮುಂಭಾಗ ತಲುಪುತ್ತಿದ್ದಂತೆ ಯುವಕರ ಗುಂಪು ಹಾಗೂ ಈ ಮೂವರ ನಡುವೆ ವಾಗ್ವಾದ ನಡೆದು ಹರೀಶ್ ಹಾಗೂ ನಂದಕುಮಾರ್‌ಗೆ ಚೂರಿಯಿಂದ ಇರಿಯಲಾಗಿತ್ತು. ಕೃಷ್ಣಕುಮಾರ್‌ಗೆ ಹಿಗ್ಗಾಮುಗ್ಗಾ ಹಲ್ಲೆ ನಡೆಸಲಾಗಿದ್ದು ಘಟನೆಯ ಸಂಪೂರ್ಣ ದೃಶ್ಯ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿತ್ತು.
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.