ಮಂಗಳೂರಿನಲ್ಲಿ ಬಿಜೆಪಿ ವಿಜಯೋತ್ಸವ ಮೆರವಣಿಗೆ ಬಳಿಕ ಇಬ್ಬರಿಗೆ ಚೂರಿ ಇರಿತ ಪ್ರಕರಣ; ಆರು ಮಂದಿ ಬಂಧನ, 20 ಜನ ವಶಕ್ಕೆ
ಬಿಜೆಪಿ ವಿಜಯೋತ್ಸವ ಮೆರವಣಿಗೆ ಬಳಿಕ ಇಬ್ಬರಿಗೆ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಮಂಗಳೂರು ನಗರ ಪೊಲೀಸ್ ಕಮೀಷನರ್, ‘ಮೆರವಣಿಗೆ ನಂತರ ಮೂರು ಮಂದಿ ಮಸೀದಿ ಮುಂದೆ ಘೋಷಣೆ ಕೂಗಿದ್ದಾರೆ. ನಂತರ ಅವರಿಗೆ ಹಲ್ಲೆ ನಡೆಸಲಾಗಿದೆ. ಆರೋಪಿಗಳಲ್ಲಿ ಒಬ್ಬ ರೌಡಿ ಶೀಟರ್ ಇದ್ದ, ಆತ ಚೂರಿ ಇಟ್ಟುಕೊಂಡಿದ್ದ ಎಂದಿದ್ದಾರೆ.
ದಕ್ಷಿಣ ಕನ್ನಡ, ಜೂ.11: ಬಿಜೆಪಿ ವಿಜಯೋತ್ಸವ ಮೆರವಣಿಗೆ ಬಳಿಕ ಇಬ್ಬರಿಗೆ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ ವಾಲ್(Mangalore Police Commissioner Anupam Agarwal) ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ‘ಸಿಸಿಟಿವಿ ವಿಡಿಯೋ ಆಧಾರದಲ್ಲಿ 20 ಜನರನ್ನು ವಶಕ್ಕೆ ಪಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿ ಒಟ್ಟು ಆರು ಮಂದಿಯನ್ನು ಬಂಧಿಸಿದ್ದೇವೆ. ಮೂರು ತಂಡದ ಮೂಲಕ ತನಿಖೆ ನಡೆಯುತ್ತಿದ್ದು, ಇನ್ನುಳಿದವರ ಬಂಧನ ಪ್ರಕ್ರಿಯೆ ನಡೆಯುತ್ತಿದೆ ಎಂದರು.
ಭಾರತ್ ಮಾತಾ ಕೀ ಜೈ ಎನ್ನುವ ಘೋಷಣೆಗೂ ಮೊದಲು ಬೇರೆ ಪ್ರಚೋದನಾಕಾರಿ ಘೋಷಣೆ
ಇನ್ನು ಮೆರವಣಿಗೆ ನಂತರ ಮೂರು ಮಂದಿ ಮಸೀದಿ ಮುಂದೆ ಘೋಷಣೆ ಕೂಗಿದ್ದಾರೆ. ನಂತರ ಅವರಿಗೆ ಹಲ್ಲೆ ನಡೆಸಲಾಗಿದೆ. ಆರೋಪಿಗಳಲ್ಲಿ ಒಬ್ಬ ರೌಡಿ ಶೀಟರ್ ಇದ್ದ, ಆತ ಚೂರಿ ಇಟ್ಟುಕೊಂಡಿದ್ದ. ಭಾರತ್ ಮಾತಾ ಕೀ ಜೈ ಎನ್ನುವ ಘೋಷಣೆಗೂ ಮೊದಲು ಬೇರೆ ಪ್ರಚೋದನಾಕಾರಿ ಘೋಷಣೆ ಕೂಗಿದ್ದರು. ಮುಂದಿನ ದಿನಗಳಲ್ಲಿ ಎಲ್ಲಾ ಠಾಣೆಗಳಲ್ಲಿ, ಎಲ್ಲ ಧರ್ಮದ ಪ್ರಮುಖರನ್ನು ಕರೆದು ಶಾಂತಿ ಸಭೆ ನಡೆಸುತ್ತೇವೆ. ಸಾಮಾಜಿಕ ಜಾಲತಾಣಗಳ ಮೇಲೂ ನಿಗಾ ಇರಿಸಿದ್ದೇವೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್‌ವಾಲ್ ಹೇಳಿದರು.
ಇದನ್ನೂ ಓದಿ:ಮಂಗಳೂರು: ಬಿಜೆಪಿ ವಿಜಯೋತ್ಸವ ಮುಗಿಸಿ ಮನೆಗೆ ಹೋಗುತ್ತಿದ್ದ ಇಬ್ಬರಿಗೆ ಚಾಕು ಇರಿತ, ಮೂವರು ವಶಕ್ಕೆ
ಪ್ರಕರಣದ ಕುರಿತು ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ ಮಾತನಾಡಿ, ‘ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿದಕ್ಕೆ ದೇಶದ ಎಲ್ಲಾ ಭಾಗದಲ್ಲೂ ಸಂಭ್ರಮಾಚರಣೆ ನಡೆದಿದೆ. ಅದರಂತೆ ಬಂಟ್ವಾಳದ ಬೋಳಿಯಾರ್ ನಲ್ಲಿಯು ಸಂಭ್ರಮ ನಡೆದಿದೆ. ಚೂರಿ ಇರಿತ ಘಟನೆಯ ಸಮಗ್ರ ತನಿಖೆ ಮಾಡಬೇಕು. ಡ್ರ್ಯಾಗರ್ ಯಾರು ಕೊಟ್ರು, ಪ್ರೇರಣೆ ನೀಡಿದವರು ಯಾರೆಂಬ ತನಿಖೆ ಮಾಡಬೇಕು. ತಪ್ಪು ಮಾಡಿದವರಿಗೆ ಸೂಕ್ತ ಶಿಕ್ಷೆ ನೀಡಬೇಕು. ಘಟನೆಯ ಹಿಂದಿರುವ ಶಕ್ತಿಗಳ ವಿರುದ್ಧವೂ ಕ್ರಮ ಆಗಬೇಕು. ಮಾರಣಾಂತಿಕ ಹಲ್ಲೆ ನಡೆದು ನಮ್ಮ ಇಬ್ಬರು ಕಾರ್ಯಕರ್ತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದೇ ಆಸ್ಪತ್ರೆಗೆ ಜಿಲ್ಲಾ ಉಸ್ತುವಾರಿ ಸಚಿವರು ಬಂದ್ರು ಗಾಯಗೊಂಡವರನ್ನು ವಿಚಾರಿಸಿಲ್ಲ.
ಕಾಂಗ್ರೆಸ್ ಪಾರ್ಟಿಯ ಒತ್ತಡದಿಂದ ನಮ್ಮ ಕಾರ್ಯಕರ್ತರ ಮೇಲೆ ಎಫ್.ಐ.ಆರ್ ಆಗಿದೆ. ಸಿದ್ದರಾಮಯ್ಯ ಸರ್ಕಾರ ಬಂದ ಬಳಿಕ ಹಿಂದೂ ವಿರೋಧಿ ನೀತಿ ಅನುಸರಿಸಲಾಗುತ್ತಿದೆ. ಕಾನೂನಿನ ಮುಖಾಂತರ ಸಂವಿಧಾನದ ಅಡಿಯಲ್ಲಿ ಪೊಲೀಸರು ಕೆಲಸ ಮಾಡಬೇಕು. ರಾಜಕೀಯ ಪುಡಾರಿಗಳ ಒತ್ತಡಕ್ಕೆ ಮಣಿದು ಕೆಲಸ ಮಾಡಿದ್ರೆ ಇದನ್ನು ಸಹಿಸಲು ಸಾದ್ಯವಿಲ್ಲ ಎಂದು ಮಂಗಳೂರಿನಲ್ಲಿ ದಕ್ಷಿಣಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:13 pm, Tue, 11 June 24