ಶಿವಮೊಗ್ಗ: ಶಿವಮೊಗ್ಗ (Shivamogga) ಜಿಲ್ಲೆಯಲ್ಲಿ ಮಳೆರಾಯನ ಆರ್ಭಟ ಮುಂದುವರೆದಿದ್ದು , ಭಾರೀ ಮಳೆಗೆ ತೀರ್ಥಹಳ್ಳಿ (Thirthahalli) ತಾಲೂಕಿನ ಆಗುಂಬೆ (Agumbe) ಸಮೀಪ, ಆಗುಂಬೆಯಿಂದ ಮಲ್ಲಂದೂರು ಸಂಪರ್ಕಿಸುವ ರಸ್ತೆಗೆ ಮರಗಳು ಅಡ್ಡಲಾಗಿ ಬಿದ್ದಿವೆ. ಮರದ ಜೊತೆಗೆ ವಿದ್ಯುತ್ ಕಂಬಗಳು (Street lights) ಸಹ ಧರೆಗುರುಳಿದ್ದು, ವಿದ್ಯುತ್ ತಂತಿಗಳು ಕಟ್ ಆಗಿವೆ. ಮರ ಬಿದ್ದಿದ್ದರಿಂದ ಸುಮಾರು 75 ಮನೆಗಳಿಗೆ ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ಬಿದರಗೋಡು ಗ್ರಾ.ಪಂ ವ್ಯಾಪ್ತಿಯ ಬಾಳೆಹಳ್ಳ ಗ್ರಾಮಕ್ಕೆ ಸಹ ಸಂಪರ್ಕ ಕಡಿತಗೊಂಡಿದೆ. ಗ್ರಾಮಸ್ಥರು ಮರಗಳ ತೆರವು ಕಾರ್ಯಾಚರಣೆ ಮಾಡುತ್ತಿದ್ದಾರೆ.
ಜಿಲ್ಲೆಯ ಮಳೆಯ ಅವಾಂತರದಿಂದ ಸುಣ್ಣದಬಸ್ತಿ ಬಳಿ ಕೋಣಂದೂರುದಿಂದ ರಿಪ್ಪನ್‌ಪೇಟೆಗೆ ಸಂಪರ್ಕಿಸುವ ಹೆದ್ದಾರಿಯಲ್ಲಿ ಮರ ಬಿದ್ದಿದೆ. ಪರಿಣಾಮ ರಸ್ತೆ ಸಂಪರ್ಕ ಬಂದಾಗಿದೆ. ಈ ಹಿನ್ನೆಲೆಯಲ್ಲಿ ಬದಲಿ ಮಾರ್ಗವಾಗಿ ಹೆದ್ದಾರಿಪುರ – ಬಿದರಹಳ್ಳಿ ಮಾರ್ಗದಿಂದ ಗರ್ತಿಕೆರೆ ಮೂಲಕ ವಾಹನಗಳ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಮಾರ್ಗವು ಕಿರಿದಾಗಿರುವ ಕಾರಣ ವಾಹನ ಸವಾರರು ಪರದಾಡುತ್ತಿದ್ದಾರೆ. ಮರ ತೆರವುಗೊಳಿಸುವ ಕಾರ್ಯಾಚರಣೆ ಮುಂದುವರೆದಿದೆ. ಬೃಹತ್ ಮರವಾಗಿರುವ ಕಾರಣ ತೆರವು ಕಾರ್ಯಚರಣೆ ವಿಳಂಬವಾಗುತ್ತಿದೆ.
ಕಾಗಿನೆಲೆ ಕೆರೆ ಕೋಡಿ ಒಡೆದು ತೋಟಗಳಿಗೆ ನುಗ್ಗಿದ ನೀರು; ಬೆಳೆ ನಾಶ
ಹಾವೇರಿ: ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕಾಗಿನೆಲೆ ಕೆರೆ ಕೋಡಿ ಹೊಡೆದು 200 ಎಕರೆ ಜಮೀನು ಜಲಾವೃತಗೊಂಡಿರುವ ಘಟನೆ ಹಾವೇರಿ ತಾಲೂಕಿನ ಬೆನಕನಹಳ್ಳಿ ಬಳಿ ನಡೆದಿದೆ. ಕೆರೆ ಕೋಡಿ ಒಡೆದು ಪದೇಪದೆ ಬೆಳೆಗಳು ಹಾಳಾಗುತ್ತಿವೆ. ಇದಕ್ಕೆ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮಲೆನಾಡು ಭಾಗದಲ್ಲಿ ಮಳೆ ಹೆಚ್ಚಳ ಹಿನ್ನೆಲೆ ಕೆರೆಗಳು ಭರ್ತಿಯಾಗಿವೆ.