ಬೆಂಗಳೂರು: ಮಹಾಮಾರಿ ಕೊರೊನಾ ಎರಡನೇ ಅಲೆ ರಾಜ್ಯದಲ್ಲಿ ಬಿರುಗಾಳಿ ಸೃಷ್ಟಿಸಿದೆ. ಕೊರೊನಾ ಪ್ರಭಾವ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಇದನ್ನು ಕಟ್ಟಿ ಹಾಕುವ ನಿಟ್ಟಿನಲ್ಲಿ ಸರ್ಕಾರ ತಯಾರಿ ನಡೆಸುತ್ತಿದೆ. ಇಂದು ಜ್ಯೋತಿಬಾ ಫುಲೆ ಜನ್ಮದಿನ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಇಂದಿನಿಂದ ಕೊವಿಡ್ ಲಸಿಕೆ ಉತ್ಸವ ಆರಂಭವಾಗಿದೆ. ಏಪ್ರಿಲ್ 11ರಿಂದ ಏಪ್ರಿಲ್ 14ರವರೆಗೆ ಕೊವಿಡ್ ಲಸಿಕೆ ಉತ್ಸವ ನಡೆಯಲಿದೆ.
ಆರೋಗ್ಯ ಇಲಾಖೆ ಸಚಿವ ಡಾ.ಕೆ.ಸುಧಾಕರ್ ಇಂದು ಬೆಂಗಳೂರಿನ ಶಿವಾಜಿನಗರದ ಅಟಲ್ ಬಿಹಾರಿ ವಾಜಪೇಯಿ ಮೆಡಿಕಲ್ ಸೆಂಟರ್ನಲ್ಲಿ ಲಸಿಕೆ ಉತ್ಸವಕ್ಕೆ ಚಾಲನೆ ನೀಡಿದ್ದಾರೆ. ಜ್ಯೋತಿಬಾ ಫುಲೆ ಜನ್ಮದಿನದಂದು ಶುರುವಾದ ಲಸಿಕೆ ಉತ್ಸವ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯಂದು ಅಂತ್ಯಗೊಳ್ಳಲಿದೆ. ಲಸಿಕೆ ಉತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಿದ್ದರು. ಅದರಂತೆ ಲಸಿಕೆ ಪ್ರಮಾಣ ಹೆಚ್ಚಳ ಹಾಗೂ ಜಾಗೃತಿಗಾಗಿ ಇಂದು ಬೆಳಗ್ಗೆ ಆರೋಗ್ಯ ಇಲಾಖೆ ಸಚಿವ ಡಾ.ಕೆ.ಸುಧಾಕರ್ ಲಸಿಕೆ ಉತ್ಸವಕ್ಕೆ ಚಾಲನೆ ನೀಡಿದ್ರು. 45 ವರ್ಷದ ಮೇಲಿನ ಎಲ್ಲರೂ ತಪ್ಪದೆ ಇಂದೆ ಕರೋನ ಲಸಿಕೆ ಹಾಕಿಸಿ. ಬನ್ನಿ, ಕರೋನಾ ಯುಗಕ್ಕೆ ಅಂತ್ಯ ಹಾಡೋಣ ಎಂದು ಡಾ.ಕೆ.ಸುಧಾಕರ್ ಕರೆ ನೀಡಿದ್ದಾರೆ.
ಏಪ್ರಿಲ್ 11 ರಿಂದ ಏಪ್ರಿಲ್ 14 ರವರೆಗೆ ಕರೋನಾ ಲಸಿಕಾ ಉತ್ಸವವನ್ನು ಆಚರಿಸುತ್ತಿದ್ದೇವೆ. 45 ವರ್ಷದ ಮೇಲಿನ ಎಲ್ಲರೂ ತಪ್ಪದೆ ಇಂದೆ ಕರೋನ ಲಸಿಕೆ ಹಾಕಿಸಿ. ಬನ್ನಿ, ಕರೋನಾ ಯುಗಕ್ಕೆ ಅಂತ್ಯ ಹಾಡೋಣ.#LasikaUtsav #Covid @CMofKarnataka pic.twitter.com/mCoWzEiSNF
— Dr Sudhakar K (@mla_sudhakar) April 11, 2021
ಇನ್ನು ಮೋದಿ ಕರೆ ಕೊಟ್ಟ ಹಿನ್ನೆಲೆಯಲ್ಲಿ ಇಂದಿನಿಂದ ದೇಶಾದ್ಯಂತ ವಿಶ್ವದ ಬೃಹತ್ ಕೋವಿಡ್ -19 ಲಸಿಕಾ ಅಭಿಯಾನ ನಡೆಯಲಿದೆ. ಸದ್ಯ ಇದಕ್ಕಾಗಿ ಬೆಂಗಳೂರಿನಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಮತ್ತು ಲಸಿಕೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಇದಾಗಿದ್ದು ಬೆಂಗಳೂರಿನ ಅಟಲ್ ಬಿಹಾರಿ ವಾಜಪೇಯಿ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿವ ಲಸಿಕಾ ಮಹೋತ್ಸವಕ್ಕೆ ಚಾಲನೆ ಬಳಿಕ ನಗರದಾದ್ಯಂತ ಲಸಿಕಾ ಮಹೋತ್ಸವ ಆರಂಭವಾಗಲಿದೆ.
ಲಸಿಕಾ ಮಹೋತ್ಸವದ ದಿನಗಳಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ನಿತ್ಯ 1 ಲಕ್ಷ ಮಂದಿಗೆ ವ್ಯಾಕ್ಸಿನೇಶನ್ ಹಾಕಲು ಟಾರ್ಗೆಟ್ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ಸರ್ಕಾರಿ, ಖಾಸಗಿ, PHC ಜತೆಗೆ ಅಪಾರ್ಟ್‌ಮೆಂಟ್, ಕೈಗಾರಿಕಾ ಪ್ರದೇಶ, ಲೇಔಟ್ಗಳಲ್ಲೂ ಲಸಿಕೆ ನೀಡಲು ಬಿಬಿಎಂಪಿ ಸಿದ್ಧತೆ ಮಾಡಿಕೊಂಡಿದೆ. ವ್ಯಾಕ್ಸಿನೇಶನ್ ಅಭಿಯಾನಕ್ಕಾಗಿ ಮೆಡಿಕಲ್ ವಿದ್ಯಾರ್ಥಿಗಳನ್ನೂ ಬಳಕೆ ಮಾಡಿಕೊಳ್ಳಲಾಗಿದೆ.
ಕರ್ನಾಟಕದ ಲಸಿಕಾ ಉತ್ಸವಕ್ಕೆ ಇಲ್ಲಿಂದ ಚಾಲನೆ ನೀಡಿದ್ದೇವೆ. ಎಲ್ಲಾ ಧರ್ಮದ ಮಹಿಳೆಯರಿಗೆ ಲಸಿಕೆ ನೀಡಲಾಗಿದೆ. ಸಾಮಾಜಿಕ ಸುಧಾರಕರಾದ ಜ್ಯೋತಿಬಾ ಫುಲೆ ಮಹಿಳಾ ಸಬಲೀಕರಣಕ್ಕೆ ಹೋರಾಟ ಮಾಡಿದ ಮಹಾನುಭಾವರು. ಅವರ ಆಲೋಚನೆಗೆ ಹೆಚ್ಚು ಶಕ್ತಿ ನೀಡಬೇಕು ಎನ್ನುವ ಯೋಚನೆ ನಮ್ಮ ಸರ್ಕಾರದ್ದು. ಎಲ್ಲ ಧರ್ಮದ ಮಹಿಳೆಯರಿಗೆ ಸಾಂಕೇತಿಕವಾಗಿ ಲಸಿಕೆ ನೀಡಿ ಚಾಲನೆ ನೀಡಲಾಗಿದೆ. ಪ್ರಧಾನಿ ಕೂಡ ನಮ್ಮ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೈಕ್ರೊ ಕಂಟೋನ್ಮೆಂಟ್ ಝೋನ್ ಹೆಚ್ಚು ಮಾಡಬೇಕು ಅಂತ ಪ್ರಧಾನಿ ಸಲಹೆಕೊಟ್ಟಿದ್ದಾರೆ. ಇನ್ನಷ್ಟು ಗಂಭೀರ ಯೋಚನೆ ಮಾಡಿ ತಾಂತ್ರಿಕ ಸಲಹಾ ಸಮಿತಿ ಸಭೆ ಮಾಡಿ ಪ್ರಧಾನಿ ಕೊಟ್ಟಿರುವ ಸೂಚನೆ ಪಾಲನೆ ಮಾಡಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ತೇವೆ. ಮೈಕ್ರೋ ಕಂಟೇನ್ಮೆಂಟ್ ಝೋನ್ ಹೆಚ್ಚಳ ಮಾಡ್ತೇವೆ. ಎರಡನೇ ಅಲೆ ಮಣಿಸುವಂತ ಕೆಲಸ ಮಾಡ್ತೇವೆ ಎಂದು ಕೊರೊನಾ ಉತ್ಸವ ಚಾಲನೆ ವೇಳೆ ಸಚಿವ ಸುಧಾಕರ್ ಹೇಳಿದ್ರು.
ಇದನ್ನೂ ಓದಿ: ಕೊರೊನಾಗೆ ಲಸಿಕೆ ಬದಲಿಗೆ ಬರಲಿದೆಯಾ ಗುಳಿಗೆ? ಚುಚ್ಚುಮದ್ದಿಗೆ ಹೆದರುವವರಿಗೆ ಇಲ್ಲಿದೆ ಸಿಹಿಸುದ್ದಿ
(Minister Dr K Sudhakar Inaugurates Corona Lasike Utsav in Bengaluru)
Published On - 10:48 am, Sun, 11 April 21