Bus Strike 5ನೇ ದಿನಕ್ಕೆ ಕಾಲಿಟ್ಟ ಸರ್ಕಾರಿ ಸಾರಥಿಗಳ ಮುಷ್ಕರ.. ಸಿಬ್ಬಂದಿ ಫಿಟ್ನೆಸ್ ಸರ್ಟಿಫಿಕೇಟ್ ಕೇಳಿದ ಬಿಎಂಟಿಸಿ
ಸಾರಿಗೆ ಸಿಬ್ಬಂದಿ ಮುಷ್ಕರಕ್ಕೆ ಕೂತು, ನಾಲ್ಕು ದಿನ ಕಳೆದಿದೆ. ಆದ್ರೆ, ಹೋರಾಟ ನಿಲ್ಲುವ ಲಕ್ಷಣಗಳು ಕಾಣ್ತಿಲ್ಲ. ಸಾರಥಿಗಳ ವಿರುದ್ಧ ಹೊಸ ಹೊಸ ಅಸ್ತ್ರವನ್ನ ಸರ್ಕಾರ ಪ್ರಯೋಗಿಸ್ತಿದೆ. ಕೆಲಸಕ್ಕೆ ಕರೆತರಲು ಬೆದರಿಕೆ ತಂತ್ರಗಳು ನಡೀತಿದೆ. ಇದೆಲ್ಲದರ ನಡುವೆ ಹಬ್ಬದ ಖುಷಿಯಲ್ಲಿದ್ದ ಪ್ರಯಾಣಿಕರಿಗೆ ಬಂದ್ ಬಿಸಿ ಸರಿಯಾಗೇ ತಟ್ಟಿದೆ.
ಒಂದಲ್ಲ.. ಎರಡಲ್ಲ.. ನಾಲ್ಕು ದಿನವಾಯ್ತು.. ಸರ್ಕಾರ ಬಗ್ಗುತ್ತಿಲ್ಲ.. ಸಾರಿಗೆ ಸಿಬ್ಬಂದಿ ಜಗ್ಗುತ್ತಿಲ್ಲ. ಮನೆಯಲ್ಲೇ ಕೂತು ಸಾರಥಿಗಳು ಮುಷ್ಕರ ನಡೆಸ್ತಿದ್ರೆ, ಸರ್ಕಾರ ಖಾಸಗಿ ವಾಹನಗಳ ಬೆನ್ನು ತಟ್ಟುತ್ತಾ, ಮೊಂಡುತನಕ್ಕೆ ನಿಂತಿದೆ. ಇಬ್ಬರ ನಡುವಿನ ಸಂಘರ್ಷದಿಂದ ಬೀದಿ ಬೀದಿಯಲ್ಲೂ ಜನರು ಪರದಾಡ್ತಿದ್ದಾರೆ. ಊರಿಗೆ ತಲುಪೋಕಾಗದೆ, ಕೆಲಸ ಕಾರ್ಯಕ್ಕೆ ತೆರಳೋಕಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಬ್ಬಕ್ಕೆ ಊರಿಗೆ ಹೋಗಲು ಪರದಾಡುತ್ತಿದ್ದಾರೆ.
ಸರ್ಕಾರಿ ಬಸ್‌ಗಳು ಇಲ್ಲದೇ ಪ್ರಯಾಣಿಕರ ಪರದಾಟ ಒಂದ್ಕಡೆ ವೀಕೆಂಡ್.. ಎರಡು ದಿನ ಕಳೆದ್ರೆ ಯುಗಾದಿ ಬೇರೆ.. ಸಾಲು ಸಾಲು ರಜೆ ಇದ್ರೂ, ಊರಿಗೆ ಹೋಗಲು ಜನ ಪರದಾಡ್ತಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಸಾರಿಗೆ ಸಿಬ್ಬಂದಿ ಮುಷ್ಕರದಿಂದ ಜಿಲ್ಲೆ ಜಿಲ್ಲೆಯಲ್ಲೂ ಬಸ್ಗಾಗಿ ಜನ ಹೈರಾಣಾಗಿ ಹೋಗಿದ್ದಾರೆ.
55 ವರ್ಷ ಮೇಲ್ಪಟ್ಟ ಸಾರಿಗೆ ಸಿಬ್ಬಂದಿ ಫಿಟ್ನೆಸ್ ಸರ್ಟಿಫಿಕೇಟ್ ರಾಜ್ಯದಲ್ಲಿ 5 ದಿನಗಳಿಂದ ಸಾರಿಗೆ ನೌಕರರ ಮುಷ್ಕರ ನಡೆಸುತ್ತಿದ್ದಾರೆ. ಹೀಗಾಗಿ ಸರ್ಕಾರ ಸಾರಿಗೆ ನೌಕರರ ಮೇಲೆ ಮತ್ತಷ್ಟು ಕ್ರಮ ಕೈಗೊಳ್ಳಲು ಮುಂದಾಗಿದೆ. 55 ವರ್ಷ ಮೇಲ್ಪಟ್ಟ ಸಾರಿಗೆ ಸಿಬ್ಬಂದಿ ನಾಳೆಯೊಳಗೆ ಫಿಟ್ನೆಸ್ ಸರ್ಟಿಫಿಕೇಟ್ ನೀಡುವಂತೆ ಬಿಎಂಟಿಸಿ ಸೂಚಿಸಿದೆ. BMTCಯ 1,772 ಸಿಬ್ಬಂದಿ ಫಿಟ್ನೆಸ್ ಸರ್ಟಿಫಿಕೇಟ್ ಕೇಳಿದ್ದು, ಸೇವೆಯಲ್ಲಿ ಉಳಿಯಲು ದೈಹಿಕವಾಗಿ ಸದೃಢವಾಗಿರಲೇಬೇಕು. ವೈದ್ಯಕೀಯ, ದೇಹದಾರ್ಢ್ಯತೆ ಸ್ಥಿರವಾಗಿದ್ದಲ್ಲಿ ಮಾತ್ರ ಕೆಲಸ. ಫಿಟ್ನೆಸ್ ಸರ್ಟಿಫಿಕೇಟ್ ಸಲ್ಲಿಸಲು ವಿಫಲವಾದರೆ ಗೇಟ್‌ಪಾಸ್. ಫಿಟ್ನೆಸ್ ಸರ್ಟಿಫಿಕೇಟ್ ನೀಡಲು ನಾಳೆಯೇ ಕೊನೆಯ ದಿನ ಎಂದು ಸೂಚಿಸಿದೆ.
ಕಂಡಕ್ಟರ್, ಡ್ರೈವರ್‌ಗಳಿಗೆ ಸಂಬಳವೇ ಆಗಿಲ್ಲ ಹೋರಾಟಗಾರರ ಬಂಧನ ಒಂದ್ಕಡೆಯಾದ್ರೆ, ಸಾರಿಗೆ ನೌಕರರ ವಿರುದ್ಧ ಅನೇಕ ಅಸ್ತ್ರವನ್ನೂ ಪ್ರಯೋಗಿಸ್ತಿದ್ದಾರೆ.. ಯಾಕಂದ್ರೆ, ಮುಷ್ಕರದಲ್ಲಿ ತೊಡಗಿರೋ ಕಂಡೆಕ್ಟರ್, ಡ್ರೈವರ್‌ಗಳಿಗೆ ಈ ತಿಂಗಳು ಸಂಬಳವೇ ಆಗಿಲ್ಲ. ಹೀಗಾಗಿ ಈ ಬಾರಿಯ ಯುಗಾದಿ ಕತ್ತಲೆಯಲ್ಲಿ ಕಳೆಯುವಂತಾಗಿದೆ. ನಾಲ್ಕು ನಿಗಮಗಳಲ್ಲಿ ಅಧಿಕಾರಿಗಳು, ಭದ್ರತೆ, ಕಚೇರಿ, ಮೆಕಾನಿಕಲ್ ಸಿಬ್ಬಂದಿಗೆಲ್ಲ ಏಪ್ರಿಲ್ 1ರಂದೇ ವೇತನ ಪಾವತಿ ಆಗಿದೆ. ಆದ್ರೆ, ಕಂಡೆಕ್ಟರ್, ಡ್ರೈವರ್‌ಗಳಿಗೆ ಮಾತ್ರ ಸಂಬಳ ನೀಡದಿರೋದು ಅನೇಕ ಪ್ರಶ್ನೆ ಹುಟ್ಟಿಸಿದೆ. ಹಾಗೇ, ಅನೇಕ ಡಿಪೋಗಳಲ್ಲಿ 100ಕ್ಕೂ ಹೆಚ್ಚು ನೌಕರರನ್ನು ದಿಢೀರ್ ವರ್ಗಾವಣೆ ಮಾಡಿ ಶಾಕ್ ಕೊಟ್ಟಿದ್ದಾರೆ.
ಬಿಎಂಟಿಸಿ ಇಲ್ಲಿವರೆಗೆ 334 ಟ್ರೈನಿ ಹಾಗೂ ಪ್ರೊಬೇಷನರಿ ನೌಕರರನ್ನು ವಜಾಗೊಳಿಸಿದೆ. ಸಾರಿಗೆ ನೌಕರರ ಮುಷ್ಕರದಿಂದ ಪ್ರಯಾಣಿಕರು ತೊಂದ್ರೆ ಅನುಭವಿಸ್ತಿದ್ರೆ, ಸರ್ಕಾರವೇ ಕಂಡ್ಕೊಂಡಿರು ಪರ್ಯಾಯ ಮಾರ್ಗ ನಿಗಮಗಳಿಗೆ ತಲೆನೋವಾಗಿ ಪರಿಣಮಿಸಿದೆ. ಖಾಸಗಿ ಬಸ್ಗಳಿಂದ ಹಿಡಿದು ಕ್ಯಾಬ್, ಆಟೋಗಳು ದುಪ್ಪಟ್ಟು ಹಣ ಪಡೆಯುತ್ತಿವೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ. ಇದ್ರಿಂದ ಎಚ್ಚೆತ್ತ ಅಪರ ಸಾರಿಗೆ ಆಯುಕ್ತ ನರೇಂದ್ರ ಹೊಳಲ್ಕರ್ ಮಫ್ತಿಯಲ್ಲಿ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್ಗಳ ಪರಿಶೀಲನೆ ನಡೆಸಿ, ಬಸ್ ಮಾಲೀಕರಿಗೆ ವಾರ್ನಿಂಗ್ ನೀಡಿದ್ರು.
ಏನೇ ಹೇಳಿ.. ಸಾರಿಗೆ ಸಿಬ್ಬಂದಿ ಮುಷ್ಕರ ನಾಲ್ಕು ದಿನ ಮುಗಿದು 5 ನೇ ದಿನಕ್ಕೆ ಕಾಲಿಟ್ಟಿದೆ. ಆದ್ರೆ, ಇನ್ನೂ ಕೂಡ ಬಸ್ ಸಿಗದೆ ಜನ ಪರದಾಡ್ತಿದ್ದಾರೆ. ಖಾಸಗಿ ಬಸ್‌ಗಳು ದುಬಾರಿಯಾಗಿದ್ದು, ಯಾವಾಗ ಸರ್ಕಾರಿ ಸಾರಿಗೆ ಶುರುವಾಗುತ್ತೋ ಅಂತ ಯೋಚನೆ ಮಾಡ್ತಿದ್ದಾರೆ. ಹೀಗಾಗಿ ಸರ್ಕಾರ ಇಂದಾದ್ರೂ ನೌಕರರನ್ನ ಕರೆದು ಮಾತುಕಥೆ ನಡೆಸಬೇಕಿದೆ.
ಇದನ್ನೂ ಓದಿ: ಸಾರಿಗೆ ಮುಷ್ಕರ.. ಕರ್ನಾಟಕ ಮೂಲದ ಭಕ್ತರು ನೆರೆಯ ಶ್ರೀಶೈಲಂನಲ್ಲಿ ಪರದಾಡುತ್ತಿದ್ದಾರೆ, ಸರ್ಕಾರ ಮೌನವಾಗಿದೆ!
(Bus Strike BMTC Asks Fitness Certificate to Above 55 Years Employees)
Published On - 8:31 am, Sun, 11 April 21