ಬೆಂಗಳೂರು: ನಮ್ಮ ರಾಜ್ಯದಲ್ಲಿ ಅಂದಾಜು 2,500 ಗಣಿಗಳು ಇವೆ. ಕ್ರಷರ್ ಬಳಕೆ ಮಾಡಲು ಸ್ಫೋಟಕಗಳು ಅಗತ್ಯ. ಇದನ್ನು ಸುರಕ್ಷಿತಾಗಿ ಬಳಕೆ ಮಾಡಲು ಗಣಿ ಸುರಕ್ಷತಾ ಮಹಾ ನಿರ್ದೇಶಕರಿಂದ (ಡಿಜಿಎಂಎಸ್) ಪರವಾನಗಿ ಪಡೆಯಬೇಕು ಎಂದು ಬೆಂಗಳೂರಿನಲ್ಲಿ ಗಣಿ ಸಚಿವ ಮುರುಗೇಶ್ ನಿರಾಣಿ ಹೇಳಿದ್ರು. ಇಂದು ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಅಂದಾಜು 2,500 ಗಣಿಗಳು ಇವೆ. ಆದ್ರೆ ಈವರೆಗೆ 250 ಗಣಿ ಮಾಲೀಕರು ಪರವಾನಗಿ ಪಡೆದಿದ್ದಾರೆ. ಉಳಿದ ಶೇ.90ರಷ್ಟು ಗಣಿ ಮಾಲೀಕರ ಬಳಿ ಪರವಾನಗಿ ಇಲ್ಲ.
DGMS ಪರವಾನಗಿ ಪಡೆಯಲು 90 ದಿನ ಕಾಲಾವಕಾಶ ನೀಡಲಾಗಿದೆ. ಅಲ್ಲಿಯವರೆಗೆ ಡಿಜಿಎಂಎಸ್ ಪರವಾನಗಿ ಇರುವ ಗಣಿ ಮಾಲೀಕರ ಜೊತೆ ಒಪ್ಪಂದ ಮಾಡಿಕೊಂಡು ಗಣಿಗಾರಿಕೆ ನಡೆಸಬಹುದು. ಈ ತಾತ್ಕಾಲಿಕ ವ್ಯವಸ್ಥೆ ಬಗ್ಗೆ ಡಿಸಿಗಳಿಗೂ ಸೂಚನೆ ನೀಡಲಾಗಿದೆ. ಏಕಾಏಕಿ ಡಿಜಿಎಂಎಸ್ ಪರವಾನಗಿ ಇಲ್ಲ ಎಂದು ಗಣಿಗಾರಿಕೆ ನಿಲ್ಲಿಸಿದರೆ ಸಾವಿರಾರು ಗಣಿ ಮಾಲೀಕರು ಸೇರಿತೆ ಕಾರ್ಮಿಕರು ಬೀದಿಗೆ ಬೀಳುತ್ತಾರೆ. ಜೊತೆಗೆ ರಾಜ್ಯದ ಅಭಿವೃದ್ದಿ ಕಾಮಗಾರಿಗಳಿಗೂ ಇದರಿಂದ ಹಿನ್ನಡೆ ಉಂಟಾಗುತ್ತೆ. ಹೀಗಾಗಿ ಸಿಎಂ ಜತೆ ಮಾತನಾಡಿಯೇ ಮೂರು ತಿಂಗಳ ಕಾಲಾವಕಾಶ ನೀಡಲಾಗಿದೆ.
ರಾಜ್ಯದ ಎಲ್ಲ ಕಂದಾಯ ವಿಭಾಗಗಳಲ್ಲಿ ಗಣಿ ಅದಾಲತ್
ರಾಜ್ಯದ ಎಲ್ಲ ಕಂದಾಯ ವಿಭಾಗಗಳಲ್ಲಿ ಗಣಿ ಅದಾಲತ್ ನಡೆಸಲು ನಿರ್ಣಯ ಮಾಡಲಾಗಿದೆ. ಬೆಂಗಳೂರಿನಲ್ಲಿ ಏಪ್ರಿಲ್ 17, ಬೆಳಗಾವಿಯಲ್ಲಿ ಏಪ್ರಿಲ್ 30, ಮೈಸೂರಿನಲ್ಲಿ ಮೇ15, ಕಲಬುರಗಿಯಲ್ಲಿ ಮೇ 29 ಹಾಗೂ ಮಂಗಳೂರಿನಲ್ಲಿ ಜೂನ್ 11ರಂದು ನಡೆಸಲು ತೀರ್ಮಾನ ಮಾಡಲಾಗಿದೆ. ಪೊಲೀಸ್ ಸಿಬ್ಬಂದಿ ಅವರಂತೆ ಗಣಿ ಇಲಾಖೆಯ ಅಧಿಕಾರಿಗಳಿಗೂ ಖಾಕಿ ಸಮವಸ್ತ್ರ ಹಾಗೂ ಸ್ಟಾರ್ ನೀಡಲು ಚಿಂತನೆ ನಡೆಸಿದ್ದೇವೆ ಎಂದು ಬೆಂಗಳೂರಿನಲ್ಲಿ ಗಣಿ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.
ಇದನ್ನೂ ಓದಿ: ಹಟ್ಟಿ ಚಿನ್ನದ ಗಣಿಯಲ್ಲಿ ಅದಿರು ತೆಗೆಯೋದನ್ನು ಖಾಸಗಿಗೆ ವಹಿಸಲು ರಾಜ್ಯ ಸರ್ಕಾರ ಚಿಂತನೆ, ಕಾರಣವೇನು?