ಗಲಭೆ ಹತ್ತಿಕ್ಕಲು ಬುಲ್ಡೋಜರ್​ ಪ್ರಯೋಗ ಅನಿವಾರ್ಯವಾಗಬಹುದು, ಈ ಬಗ್ಗೆ ಚರ್ಚೆ ನಡೆಸುತ್ತೇವೆ: ಸಚಿವ ಆರ್​.ಅಶೋಕ್​

| Updated By: Lakshmi Hegde

Updated on: Apr 23, 2022 | 4:43 PM

ದಂಗೆಕೋರರಿಗೆ ಮನೆಯೂ ಸಿಗಬಾರದು, ಹಾಗೇ ಶಿಕ್ಷೆ ಕೊಡಬೇಕು. ಉತ್ತರ ಪ್ರದೇಶ, ಮಧ್ಯಪ್ರದೇಶಗಳಲ್ಲಿ ದಂಗೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ. ಅದೇ ಬುಲ್ಡೋಜರ್​ ಪ್ರಯೋಗ ಜಾರಿಯ ಬಗ್ಗೆ ನಾವೂ ಯೋಚನೆ ಮಾಡುತ್ತಿದ್ದೇವೆ ಎಂದು ಆರ್​.ಅಶೋಕ್

ಗಲಭೆ ಹತ್ತಿಕ್ಕಲು ಬುಲ್ಡೋಜರ್​ ಪ್ರಯೋಗ ಅನಿವಾರ್ಯವಾಗಬಹುದು, ಈ ಬಗ್ಗೆ ಚರ್ಚೆ ನಡೆಸುತ್ತೇವೆ: ಸಚಿವ ಆರ್​.ಅಶೋಕ್​
ಆರ್​.ಅಶೋಕ್​
Follow us on

ಬೆಂಗಳೂರು: ಹುಬ್ಬಳ್ಳಿ ಗಲಭೆಕೋರರಿಗೆ ವಿದೇಶಿಯರ ಜತೆ ನಂಟಿರಬಹುದು ಎಂದು ಕಂದಾಯ ಸಚಿವ ಆರ್​. ಅಶೋಕ್​ ಹೇಳಿದ್ದಾರೆ. ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆ.ಜೆ.ಹಳ್ಳಿ, ಡಿಜೆ ಹಳ್ಳಿ ಗಲಭೆಯ ಸೃಷ್ಟಿಕರ್ತರು ಕಾಂಗ್ರೆಸ್​​ನವರು. ಅದರಲ್ಲಿ ಹೊಡೆದವರು, ಏಟುತಿಂದವರೆಲ್ಲ ಕಾಂಗ್ರೆಸ್ಸಿಗರೇ ಆಗಿದ್ದಾರೆ.  ಈಗ ಹುಬ್ಬಳ್ಳಿಯಲ್ಲಿ ಗಲಭೆ ಆಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೊದಮೊದಲು ಕಾಂಗ್ರೆಸ್​ ಕಿಡಿಕಾರಿದ್ದೇ ಬಂತು. ಅಮಾಯಕ ಬಂಧನವಾಗುತ್ತಿದೆ ಎಂದು ರೋಷಾವೇಷ ತೋರಿಸಿದರು. ಆದರೆ ನಂತರ ಕಾಂಗ್ರೆಸ್​​ನವರೇ ಅರೆಸ್ಟ್ ಆಗಲು ತೊಡಗಿದ್ದಾರೆ. ಪಿಎಸ್​ಐ ಅಕ್ರಮ ನೇಮಕಾತಿಯೂ ಕೂಡ ಕಾಂಗ್ರೆಸ್​​ನ್ನೇ ಸುತ್ತಿಕೊಳ್ಳುತ್ತಿದೆ. ಹೀಗಾಗಿ ಈಗ ಆ ರೋಷವೆಲ್ಲ ಇಳಿದಿದೆ ಎಂದು ಟೀಕಿಸಿದರು. 

ಹಿಜಾಬ್​ ವಿಚಾರಕ್ಕೆ ವಿದೇಶಿಗರ ಪ್ರತಿಕ್ರಿಯೆ ಬಂತು. ವಿದೇಶಿ ಚಾನಲ್​ಗಳಲ್ಲೂ ಪ್ರಸಾರವಾಯ್ತು. ಹಾಗೇ, ಹುಬ್ಬಳ್ಳಿ ಗಲಭೆಗೂ ವಿದೇಶಿಗರ ನಂಟಿರಬಹುದು. ಪಾಕಿಸ್ತಾನಕ್ಕೆ ಜೈ ಎನ್ನುವವರು ಇದ್ದಾರೆ, ಐಎಸ್​ಐ ಜತೆ ಸಂಪರ್ಕ ಹೊಂದಿರುವವರೂ ಇದ್ದಾರೆ. ಹಾಗಾಗಿ ಎಲ್ಲ ರೀತಿಯಿಂದಲೂ ತನಿಖೆ ಅಗತ್ಯವಿದೆ. ದಂಗೆಕೋರರಿಗೆ ಮನೆಯೂ ಸಿಗಬಾರದು, ಹಾಗೇ ಶಿಕ್ಷೆ ಕೊಡಬೇಕು. ಉತ್ತರ ಪ್ರದೇಶ, ಮಧ್ಯಪ್ರದೇಶಗಳಲ್ಲಿ ದಂಗೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ. ಅದೇ ಬುಲ್ಡೋಜರ್​ ಪ್ರಯೋಗ ಜಾರಿಯ ಬಗ್ಗೆ ನಾವೂ ಯೋಚನೆ ಮಾಡುತ್ತಿದ್ದೇವೆ. ಈ ಸಿಎಂ ಜತೆ ಚರ್ಚಿಸಲಾಗುವುದು ಎಂದೂ ಹೇಳಿದರು.   ಇಂದು ಬೆಳಗ್ಗೆ ಸಿಟಿ ರವಿ ಕೂಡ ಹುಬ್ಬಳ್ಳಿ ಗಲಭೆ ಬಗ್ಗೆ ಪ್ರತಿಕ್ರಿಯೆ ನೀಡಿ, ಅದನ್ನು ಡಿಜೆ ಹಳ್ಳಿ-ಕೆಜಿ ಹಳ್ಳಿ ಗಲಾಟೆಗೆ ಹೋಲಿಸಿದ್ದರು. ಜಿನ್ನಾ ಮನಸ್ಥಿತಿಯವರು ನಡೆಸುವ ಗಲಭೆಗಳಿಗೆ ಸಾವರ್ಕರ್​ ಮನಸ್ಥಿತಿಯಿಂದ ಉತ್ತರ ನೀಡಬೇಕು. ಗಾಂಧಿ ಮನಸ್ಥಿತಿಯಿಂದ ಹೋರಾಡಿದರೆ ಏನೂ ಪ್ರಯೋಜನ ಆಗುವುದಿಲ್ಲ ಎಂದು ಹೇಳಿದ್ದರು.

ಹಾಗೇ, ಏಪ್ರಿಲ್​ 8ರಂದು ನಗರದ ಆರು ಶಾಲೆಗಳಿಗೆ ಬಂದಿದ್ದ ಬಾಂಬ್​ ಬೆದರಿಕೆ ಕರೆ ಮಾಡಿದವರಿಗೆ ಪಾಕಿಸ್ತಾನ, ಸಿರಿಯಾ ನಂಟಿದೆ ಎಂಬ ಸ್ಫೋಟಕ ಮಾಹಿತಿ ಇಂದು ಹೊರಬಿದ್ದಿದೆ. ಬೆದರಿಕೆಗೆ ಸಂಬಂಧಪಟ್ಟ ಇ-ಮೇಲ್​ ಪಾಕಿಸ್ತಾನ, ಸಿರಿಯಾದಿಂದ ಬಂದಿದ್ದು ಎಂಬ ಮಾಹಿತಿ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಗೃಹ ಇಲಾಖೆಯ ಉನ್ನತ ಮೂಲಗಳಿಂದ ಮಾಹಿತಿ ಸಿಕ್ಕ ಬಗ್ಗೆ ವರದಿಯಾಗಿದೆ.

ಇದನ್ನೂ ಓದಿ: ವಿಧಾನಸೌಧ, ವಿಕಾಸಸೌಧದಲ್ಲಿ ಇಫ್ತಾರ್ ಕೂಟ ನಡೆಸದಂತೆ ರಾಷ್ಟ್ರ ರಕ್ಷಣಾ ಪಡೆ ಕಾರ್ಯಕರ್ತರಿಂದ ಪ್ರತಿಭಟನೆ

Published On - 4:42 pm, Sat, 23 April 22