ಹುಬ್ಬಳ್ಳಿ ಗಲಭೆ: ಶಂಕಿತ ಮಾಸ್ಟರ್‌ಮೈಂಡ್ 5 ದಿನ ಪೊಲೀಸರ ವಶಕ್ಕೆ, ಬೆಂಗಳೂರಿನಲ್ಲಿ ಇನ್ನೂ ಇಬ್ಬರ ಬಂಧನ
ಪ್ರಚೋದನಕಾರಿ ವಾಟ್ಸಾಪ್ ಸ್ಟೇಟಸ್ನಿಂದ ಗಲಭೆ ಪ್ರಕರಣದ ಮಾಸ್ಟರ್‌ಮೈಂಡ್ ಎಂದು ಶಂಕಿಸಲಾಗಿರುವ ಮೌಲ್ವಿ ವಸೀಂ ಪಠಾಣ್ನನ್ನು ನ್ಯಾಯಾಲಯವು ಐದು ದಿನ ಪೊಲೀಸರ ವಶಕ್ಕೆ ಒಪ್ಪಿಸಿದೆ.
ಹುಬ್ಬಳ್ಳಿ: ಪ್ರಚೋದನಕಾರಿ ವಾಟ್ಸಾಪ್ ಸ್ಟೇಟಸ್ನಿಂದ ಗಲಭೆ ಪ್ರಕರಣದ ಮಾಸ್ಟರ್‌ಮೈಂಡ್ ಎಂದು ಶಂಕಿಸಲಾಗಿರುವ ಮೌಲ್ವಿ ವಸೀಂ ಪಠಾಣ್ನನ್ನು ನ್ಯಾಯಾಲಯವು ಐದು ದಿನ ಪೊಲೀಸರ ವಶಕ್ಕೆ ಒಪ್ಪಿಸಿದೆ. ತುಫೇಲ್ ಮುಲ್ಲಾನನ್ನು ಸಹ ನ್ಯಾಯಾಲಯ ಪೊಲೀಸರ ವಶಕ್ಕೆ ನೀಡಿದೆ. ಆರೋಪಿಗಳನ್ನು 10 ದಿನ ವಶಕ್ಕೆ ನೀಡಬೇಕೆಂದು ಹುಬ್ಬಳ್ಳಿ ಪೊಲೀಸರು ಕೋರಿದ್ದರು. ಇಬ್ಬರನ್ನೂ ಪ್ರತ್ಯೇಕವಾಗಿ ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ. ಗಲಭೆ ಹಿಂದಿನ ಷಡ್ಯಂತ್ರ, ಸಂಘಟನೆಗಳ ಪಾತ್ರ, ಜನರನ್ನು ಸೇರಿಸಿದ್ದ ಬಗ್ಗೆಯೂ ಪೊಲೀಸರು ವಿಚಾರಣೆ ವೇಳೆ ಮಾಹಿತಿ ಸಂಗ್ರಹಿಸಲಿದ್ದಾರೆ.
ಪೊಲೀಸರ ಎದುರು ತಪ್ಪೊಪ್ಪಿಕೊಂಡ ವಾಸಿಂ
ವಾಸಿಂ ಪಠಾಣ್ನನ್ನು ಪೊಲೀಸರು ಸುದೀರ್ಘ ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ‘ಪ್ರಕರಣದಲ್ಲಿ ನನ್ನನ್ನೇ ಮಾಸ್ಟರ್ ಮೈಂಡ್ ಮಾಡಿದ್ದರಿಂದ ನನಗೆ ಬಂಧನದ ಭಯವಿತ್ತು. ಹಾಗಾಗಿ ಪರಾರಿಯಾಗಿದ್ದೆ’ ಎಂದು ವಾಸಿಂ ತಪ್ಪೊಪ್ಪಿಕೊಂಡಿದ್ದ. ವಾಸೀಂ ಭೇಪಾರಿ, ತುಫೆಲ್ ಮಲ್ಲಾ ಜೊತೆ ಸೇರಿ ವಾಟ್ಸ್ಯಾಪ್ ಗ್ರೂಪ್ ಮಾಡಿದ್ದು ನಿಜ. ಕೇವಲ ಜನ ಜಮಾವಣೆ ಆಗುವಂತೆ ಮಾತ್ರ ಹೇಳಿದ್ದೆ. ಅಷ್ಟೊಂದು ದೊಡ್ಡ ಪ್ರಮಾಣ ಕಲ್ಲು ಬಂದಿದ್ದು ಹೇಗೆ ಎಂದು ನನಗೆ ಗೊತ್ತಿಲ್ಲ. ನಾನು ಪ್ರಚೋದನೆ ನೀಡಿಲ್ಲ. ಪೊಲೀಸರು ಬಗ್ಗದೇ ಹೋದರೆ ಪ್ರತಿಭಟನೆ ಮಾಡೋಣ ಎಂದಿದ್ದೆ. ಬರುವಾಗ ಎಲ್ಲರೂ ಕಲ್ಲು ಹಿಡಿದುಕೊಂಡು ಬಂದಿದ್ದಾರೆ. ನಾ ಬಂದ ಬಳಿಕ ಒಮ್ಮೆಲ್ಲೆ ಕರೆಂಟ್ ಹೊಯ್ತು. ಕೆಲವರು ಮುಸುಕುಧಾರಿಗಳು ಬಂದಿದ್ದರು ಎಂದು ವಾಸಿಂ ಪೊಲೀಸರಿಗೆ ವಿವರಣೆ ನೀಡಿದರು.
ಹುಬ್ಬಳ್ಳಿಯಿಂದ ಮೊದಲು ನಾನು ಸವಣೂರಿನ ಹತ್ತಿರದ ಪತ್ನಿ ಮನೆಗೆ ಹೋಗಿದ್ದೆ. ಪೊಲೀಸರು ನನ್ನನ್ನು ಹುಡುಕುತ್ತಿದ್ದ ಕಾರಣ ತಪ್ಪಿಸಿಕೊಂಡು ಓಡಾಡುತ್ತಿದ್ದೆ. ಕೆಲವರು ನನ್ನ ಜೀವಕ್ಕೆ ಆಪತ್ತು ಇದೆ ಎಂದು ಹೇಳಿದ್ದರು. ಹೀಗಾಗಿ ಹೆದರಿದ್ದೆ ಎಂದು ವಾಸಿಂ ಹೇಳಿದ್ದರು. ವಾಸಿಂ ಮೊಬೈಲ್ನಲ್ಲಿರುವ ಮಾಹಿತಿಯನ್ನು ಪೊಲೀಸರು ಹುಡುಕಾಡುತ್ತಿದ್ದಾರೆ.
ಬೆಂಗಳೂರಿನಲ್ಲಿ ಗಲಭೆ ಆರೋಪಿಗಳ ಬಂಧನ
ಹುಬ್ಬಳ್ಳಿ ಪೊಲೀಸರು ಇಬ್ಬರು ಗಲಭೆ ಆರೋಪಿಗಳನ್ನು ಬೆಂಗಳೂರಿನ ಕಾಟನ್ಪೇಟೆ ಹೊಟೆಲ್ನಲ್ಲಿ ಸಿನಿಮೀಯ ಶೈಲಿಯಲ್ಲಿ ಬಂಧಿಸಿದರು. ಇವರ ಚಲನವಲನ ಕಂಡು ಹಿಂಬಾಲಿಸಿದ್ದ ಹುಬ್ಬಳ್ಳಿ ಪೊಲೀಸರು ಸ್ಥಳೀಯ ಪೊಲೀಸರೊಂದಿಗೆ ಸುತ್ತುವರೆದಿದ್ದರು. ಆರೋಪಿಗಳು ಹಿಂದಕ್ಕೆ ತಿರುಗಿದಾಗ ಹೆಗಲ ಮೇಲೆ ಕೈ ಹಾಕಿ ಬಿಗಿಯಾಗಿ ಹಿಡಿದುಕೊಂಡರು. ಹುಬ್ಬಳ್ಳಿಯಿಂದ ತಪ್ಪಿಸಿಕೊಂಡು ಹೊರಟಿದ್ದ ನಾಲ್ವರು ಹಾವೇರಿಯ ಬಂಕಾಪುರ ಬಸ್ಸ್ಟಾಪ್ನಲ್ಲಿ ಇಳಿದು, ಅಲ್ಲಿಂದ ಬೇರೆಡೆಗೆ ಪರಾರಿಯಾಗಿದ್ದರು. ಇನ್ನಿಬ್ಬರು ಬೆಂಗಳೂರಿನತ್ತ ಪ್ರಯಾಣ ಮಾಡಿದ್ದರು. ರೌಡಿಶೀಟರ್ ಅಬ್ದುಲ್ ಮಲ್ಲಿಕ್ ಬೇಫಾರಿ ಹಾಗೂ ತುಫೇಲ್ ಮುಲ್ಲಾ ಎರಡು ದಿನಗಳ ಹಿಂದೆ ಬೆಂಗಳೂರಿಗೆ ಬಂದಿದ್ದರು. ಬುಧವಾರ ಬೆಳಿಗ್ಗೆ ರಂಜಾನ್ಗೆಂದು ಬಟ್ಟೆ ಖರೀದಿ ಮಾಡಿದ್ದ ಆರೋಪಿಗಳು. ಸಂಜೆಯ ನಂತರ ತವಕಲ್ ಮಸೀದಿ ಬಳಿ ಇದ್ದ ಲಾರ್ಡ್ನಲ್ಲಿ ಕೊಠಡಿ ಬುಕ್ ಮಾಡಿದ್ದರು.
ಹೋಟೆಲ್ಗೆ ಊಟಕ್ಕೆ ಹೋಗಿದ್ದ ಸಂದರ್ಭದಲ್ಲಿ ಅಷ್ಟರಲ್ಲಾಗಲೆ ಹುಬ್ಬಳ್ಳಿಯಿಂದ ಬಂದಿದ್ದ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಕೂಡಲೇ ಸ್ಥಳೀಯ ಡಿಸಿಪಿ ಸಂಜೀವ್ ಪಾಟೀಲ್ಗೆ ವಿವರ ನೀಡಿದ ಅವರು, ಸ್ಥಳೀಯ ಪೊಲೀಸರ ಸಹಾಯದಿಂದ ಆರೋಪಿಗಳನ್ನು ಬಂಧಿಸಿದರು.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಕೋಮುಗಲಭೆ ಪ್ರಕರಣ; ಗಲಭೆಯ ಮಾಸ್ಟರ್‌ಮೈಂಡ್ ಮೌಲ್ವಿ ವಸೀಂ ಪಠಾಣ್ ಪೊಲೀಸರ ವಶಕ್ಕೆ
ಇದನ್ನೂ ಓದಿ: ಹುಬ್ಬಳ್ಳಿ ಗಲಭೆಯ ಮಾಸ್ಟರ್ ಮೈಂಡ್ ಅರೆಸ್ಟ್: ಆದರೆ ರಿಂಗ್ ಮಾಸ್ಟರ್ ಮಹಾನಾಯಕನೋ ಅಥವಾ ಮೀರ್‌ಸಾದಿಕ್? -ಬಿಜೆಪಿ ಟ್ವೀಟ್
Published On - 8:59 am, Sat, 23 April 22