Ramalinga Reddy: ಇನ್ಮುಂದೆ ಸಾರಿಗೆ ಸಿಬ್ಬಂದಿಗೂ ಪಿಂಚಣಿ; ಸಚಿವ ರಾಮಲಿಂಗಾರೆಡ್ಡಿ ಮಹತ್ವದ ಘೋಷಣೆ

|

Updated on: Sep 15, 2023 | 5:33 PM

Ramalinga Reddy ಕನಸಿನ ಕರುನಾಡು ಟಿವಿ9 ಸಮ್ಮಿಟ್​ 2023: ಸಾರಿಗೆ ಸಂಸ್ಥೆಗಳಲ್ಲಿ ಬಾಕಿ ಇರುವ 13,000 ನೇಮಕಾತಿಯ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಅದು ಸ್ಯಾಂಕ್ಷನ್ ಆಗಿದೆ. ಕೋವಿಡ್ ಕಾರಣ ಬಾಕಿ ಉಳಿದಿತ್ತು. ಮುಂದಿನ 3-4 ತಿಂಗಳುಗಳಲ್ಲಿ ಎಲ್ಲ ನೇಮಕಾತಿ ಆಗಲಿದೆ ಎಂದು ರಾಮಲಿಂಗಾರೆಡ್ಡಿ ಹೇಳಿದರು.

Ramalinga Reddy: ಇನ್ಮುಂದೆ ಸಾರಿಗೆ ಸಿಬ್ಬಂದಿಗೂ ಪಿಂಚಣಿ; ಸಚಿವ ರಾಮಲಿಂಗಾರೆಡ್ಡಿ ಮಹತ್ವದ ಘೋಷಣೆ
ಕನಸಿನ ಕರುನಾಡು ವಿಶೇಷ ಕಾರ್ಯಕ್ರಮದಲ್ಲಿ ರಾಮಲಿಂಗಾರೆಡ್ಡಿ
Follow us on

ಬೆಂಗಳೂರು, ಸೆಪ್ಟೆಂಬರ್ 15: ಇನ್ಮುಂದೆ ಸಾರಿಗೆ ಸಿಬ್ಬಂದಿಗೆ ಪಿಂಚಣಿ ನೀಡಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಶುಕ್ರವಾರ ಘೋಷಣೆ ಮಾಡಿದರು. ಸಾರಿಗೆ ಇಲಾಖೆ ನೌಕರರ ವೇತನ ಭದ್ರತೆ, ಬಾಕಿ ವೇತ ಬಿಡುಗಡೆ ಇತ್ಯಾದಿ ವಿಚಾರಗಳ ಬಗ್ಗೆ ಕೇಳಲಾದ ಪ್ರಶ್ನೆಗೆ ಅವರು ಈ ಉತ್ತರ ನೀಡಿದರು. ಈ ಹಿಂದೆ ಪ್ರತಿಭಟನೆ ನಡೆದಾಗ ಕೆಲವರನ್ನು ವಜಾ ಮಾಡಲಾಗಿತ್ತು. 2020ರಲ್ಲಿ ರಾಜ್ಯದಲ್ಲಿ ನಮ್ಮ ಸರ್ಕಾರ ಇರಲಿಲ್ಲ. ನಮ್ಮ ಸರ್ಕಾರದ ಅವಧಿಯಲ್ಲಿ ಯಾರನ್ನೂ ಕೆಲಸದಿಂದ ವಜಾಗೊಳಿಸಿಲ್ಲ. ಬಿಎಂಟಿಸಿ ನೌಕರರ ವಿರುದ್ಧದ ಕೇಸ್​ ಕೋರ್ಟ್​ನಲ್ಲಿರುವುದರಿಂದ ವಿಳಂಬವಾಗುತ್ತಿದೆ. ವಜಾಗೊಂಡಿದ್ದ ಬೇರೆ ನಿಗಮದ ನೌಕರರು ಕೆಲಸಕ್ಕೆ ಹಾಜರಾಗಿದ್ದಾರೆ ಎಂದು ಅವರು ತಿಳಿಸಿದರು. ಕಾಂಗ್ರೆಸ್​ ಸರ್ಕಾರ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದು 100 ದಿನಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಟಿವಿ9 ಕನ್ನಡ ಬೆಂಗಳೂರಿನ ಲಲಿತ್​ ಅಶೋಕ್​​​ ಹೋಟೆಲ್​ನಲ್ಲಿ ಆಯೋಜಿಸಿರುವ ಕನಸಿನ ಕರುನಾಡು (TV9 Karnataka Summit 2023)  ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸಾರಿಗೆ ಇಲಾಖೆಯಲ್ಲಿ ಅನೇಕ ಹುದ್ದೆಗಳು ಖಾಲಿ ಇವೆ. ಕೊನೇ ಕ್ಷಣದಲ್ಲಿ ಹಿಂದಿನ ಸರ್ಕಾರ ಕ್ರಮ ಕೈಗೊಂಡಿತ್ತು. ಆದರೆ, ನಾನಾ ಕಾರಣಗಳಿಂದ ಅದು ಅನುಷ್ಠಾನಗೊಂಡಿಲ್ಲ. ಇದೀಗ ಆ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ. ಶಕ್ತಿ ಯೋಜನೆ ಜಾರಿಗೆ ಆರಂಭದಲ್ಲಿ ನೇಮಕಾತಿ ವಿಳಂಬದಿಂದ ಸಮಸ್ಯೆ ಆಗಿದ್ದು ನಿಜ. ಆದರೆ, ನಾವು ಅದನ್ನು ಸೂಕ್ತ ಯೋಜನೆಯೊಂದಿಗೆ ಜಾರಿಗೊಳಿಸಿದೆವು ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.

ಸಾರಿಗೆ ಬಸ್​​ಗಳಲ್ಲಿ 83 ಲಕ್ಷ ಜನ ಪ್ರತಿ ದಿನ ಓಡಾಡುತ್ತಾ ಇದ್ದರು. ಇದೀಗ ಶಕ್ತಿ ಯೋಜನೆ ಜಾರಿಗೆ ಬಂದ ಬಳಿಕ 1.10 ಕೋಟಿ ಜನ (ಪುರುಷರು, ಮಹಿಳೆಯರು ಸೇರಿ) ಪ್ರತಿ ದಿನ ಸಾರಿಗೆ ಇಲಾಖೆ ಬಸ್​​ಗಳಲ್ಲಿ ಓಡಾಡುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಶಕ್ತಿ ಯೋಜನೆಯಿಂದ ಹೆಣ್ಣು ಮಕ್ಕಳಿಗೆ ಶಕ್ತಿ ಬಂತು. ಸರ್ಕಾರಕ್ಕೂ ಶಕ್ತಿ ಬಂತು. ಆದರೆ ಸಾರಿಗೆ ಸಂಸ್ಥೆಗಳಿಗೆ ನಷ್ಟವಾಗುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸಾರಿಗೆ ಸಂಸ್ಥೆಗಳಿಗೆ ಯಾವುದೇ ನಷ್ಟ ಇಲ್ಲ. ಸರ್ಕಾರ ಆ ಹಣವನ್ನು ಸಂಸ್ಥೆಗಳಿಗೆ ನೀಡುತ್ತದೆ ಎಂದು ಹೇಳಿದರು. 10 ವರ್ಷಗಳ ಕಾಲ ಶಕ್ತಿ ಯೋಜನೆ ಮುಂದುವರಿಸುತ್ತೇವೆ. ಜನಪರ ಯೋಜನೆಗಳಿಂದಾಗಿ ಮುಂದಿನ ಬಾರಿಯೂ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂಬ ವಿಶ್ವಾಸವಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.

ಇದನ್ನೂ ಓದಿ: Priyank Kharge: ಕರ್ನಾಟಕ ನವೋದ್ಯಮದ, ಆವಿಷ್ಕಾರದ ಕಾಶಿ; ಸ್ಟಾರ್ಟಪ್​​​ನಲ್ಲಿಯೂ ಬೆಂಗಳೂರು ಮುಂದೆ ಎಂದ ಪ್ರಿಯಾಂಖ್ ಖರ್ಗೆ

ಮೂರ್ನಾಲ್ಕು ತಿಂಗಳುಗಳಲ್ಲಿ 13,000 ನೇಮಕಾತಿ; ರಾಮಲಿಂಗಾರೆಡ್ಡಿ

ಸಾರಿಗೆ ಸಂಸ್ಥೆಗಳಲ್ಲಿ ಬಾಕಿ ಇರುವ 13,000 ನೇಮಕಾತಿಯ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಅದು ಸ್ಯಾಂಕ್ಷನ್ ಆಗಿದೆ. ಕೋವಿಡ್ ಕಾರಣ ಬಾಕಿ ಉಳಿದಿತ್ತು. ಮುಂದಿನ 3-4 ತಿಂಗಳುಗಳಲ್ಲಿ ಎಲ್ಲ ನೇಮಕಾತಿ ಆಗಲಿದೆ ಎಂದು ಅವರು ಹೇಳಿದರು.

ಖಾಸಗೀ ಸಾರಿಗೆಗೆ ಸಣ್ಣ ಪ್ರಮಾಣದ ನಷ್ಟ ಒಪ್ಪಿದ ಸಚಿವ

ಶಕ್ತಿ ಯೋಜನೆಯಿಂದಾಗಿ ಖಾಸಗಿ ಸಾರಿಗೆಯವರಿಗೆ ಸ್ವಲ್ಪ ಪ್ರಮಾಣದಲ್ಲಿ ನಷ್ಟವಾಗಿದೆ ಅಷ್ಟೆ. ಹೆಚ್ಚೇನೂ ಸಮಸ್ಯೆ ಆಗಿಲ್ಲ. ಖಾಸಗಿಯವರು ಪರಿಹಾರ ಕೇಳುತ್ತಿದ್ದಾರೆ. ಅವರಿಗೆ ಆಗುತ್ತಿರುವ ನಷ್ಟದ ಪ್ರಮಾಣ ಎಷ್ಟೆಂದು ಇನ್ನೂ ಅಂದಾಜಿಸಿಲ್ಲ. ಅದನ್ನು ಅಂದಾಜು ಮಾಡಲಾಗುವುದು ಎಂದು ಸಚಿವರು ಹೇಳಿದರು. ಪ್ರಾಯೋಗಿಕವಾಗಿ ಏನೆಲ್ಲ ನೆರವು ನೀಡಬಹುದೋ ಅದನ್ನೆಲ್ಲ ಮಾಡಿಕೊಡುತ್ತೇನೆ ಎಂದು ಖಾಸಗಿಯವರಿಗೆ ಭರವಸೆ ನೀಡಿದ್ದೇನೆ ಎಂದು ರೆಡ್ಡಿ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:32 pm, Fri, 15 September 23