ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸೇರಿ ಐವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಏಪ್ರಿಲ್ 15ರಂದು ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಲಕ್ಷ್ಮೀ ಹೆಬ್ಬಾಳ್ಕರ್ ತಾಯಿ, ಇಬ್ಬರು ಸಹೋದರಿಯರು, ಅಡುಗೆ ಭಟ್ಟನಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಬಳಿಕ ಏಪ್ರಿಲ್ 18ರಂದು ತೀವ್ರ ಉಸಿರಾಟದ ಸಮಸ್ಯೆಯಿಂದ ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಸದ್ಯ ಚಿಕಿತ್ಸೆ ಬಳಿಕ ಗುಣಮುಖರಾಗಿದ್ದು ಇಂದು ಆಸ್ಪತ್ರೆಯಿಂದ ಶಾಸಕಿ ಸೇರಿ ಐವರು ಡಿಸ್ಚಾರ್ಜ್ ಆಗಿದ್ದಾರೆ. ಒಂದು ವಾರ ಹೋಮ್ ಕ್ವಾರಂಟೈನ್‌ನಲ್ಲಿರಲು ಸೂಚಿಸಲಾಗಿದೆ.
ಕೊರೊನಾ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆದ ಬಳಿಕ ಶಾಸಕಿ ಹೆಬ್ಬಾಳ್ಕರ್ ಮಾತನಾಡಿದ್ದು ನಮ್ಮ ಮನೆಯಲ್ಲಿ ಹದಿನೆಂಟು ಜನ ಕುಟುಂಬಸ್ಥರಿಗೆ ಕೊರೊನಾ ಸೋಂಕು ದೃಢವಾಗಿತ್ತು. ಇವತ್ತು ದೇವರ ದಯೆಯಿಂದ ಎಲ್ಲರೂ ಗುಣಮುಖರಾಗಿದ್ದೇವೆ. ಕೊರೊನಾ ಬಗ್ಗೆ ನಾವು ನಿರ್ಲಕ್ಷ್ಯ ಮಾಡಿದ್ವಿ. ಇಂತಹ ರೋಗ ನಮ್ಮ ವೈರಿಗಳಿಗೂ ಬರಬಾರದು. ಕೊವಿಡ್ ವಾರಿಯರ್ಸ್ ದೇವರಾಗಿ ನಮ್ಮ ಕಣ್ಣಿಗೆ ಕಾಣಿಸುತ್ತಿದ್ದಾರೆ. ಎರಡನೇ ಅಲೆ ಬೇಗ ಸ್ಪ್ರೇಡ್ ಆಗ್ತಿರುವ ಕಾರಣ ನಮ್ಮ ಕಂಟ್ರೋಲ್ಗೆ ಸಿಗ್ತಿಲ್ಲ. ನಾವೆಲ್ಲರೂ ಮಾಸ್ಕ್ ಹಾಕಿಕೊಂಡು ಸಾಮಾಜಿಕ ಅಂತರ ಕಾಯ್ದುಕೊಳ್ಳೋಣ. ನಮ್ಮ ರಾಜ್ಯ, ದೇಶ ನಮ್ಮ, ಜಿಲೆಯನ್ನ ಕೊರೊನಾದಿಂದ ಕಾಪಾಡಬೇಕಿದೆ. ಈಗ ಅನಿವಾರ್ಯ ಪರಿಸ್ಥಿತಿ ಇದೆ ಕರ್ಪ್ಯೂ ಜಾರಿ ಮಾಡದಿದ್ರೇ ಕಷ್ಟ ಆಗುತ್ತೆ.
ಜನತಾ ಕರ್ಪ್ಯೂ ಮಾದರಿಯಲ್ಲಿ ಮಾಡಿದ್ರೇ ನಮ್ಮ ಜನರಿಗೆ ತಿಳುವಳಿಕೆ ಬರ್ತಿಲ್ಲ. ಒಂದು ವಾರ ಹತ್ತು ದಿನ ಲಾಕ್ ಡೌನ್ ಮಾಡಿದ್ರೇ ಒಳ್ಳೆಯದು ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ನಾನು ನಿರ್ಲಕ್ಷ್ಯ ಮಾಡಿದಾಗ ಕೊವಿಡ್ ಬಗ್ಗೆ ಇಷ್ಟೊಂದು ತೀವ್ರತೆ ಇದೆ ಅಂತಾ ಗೊತ್ತಿರಲಿಲ್ಲ. ಖಂಡಿತವಾಗಿ ಇದು ಬಹಳ ಕೆಟ್ಟ ರೋಗ ಅನುಭವಿಸಿದವರಿಗೆ ಗೊತ್ತು. ನನ್ನ ವೈರಿಗಳಿಗೂ ಭಗವಂತ ಕೊಡಬೇಡಾ ಅಂತಾ ಕೇಳಿಕೊಳ್ಳುತ್ತೇನೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಇದನ್ನೂ ಓದಿ: ಆಯತಪ್ಪಿ ಗುಂಡಿಗೆ ಬಿದ್ದ ಆಹಾರ ಅರಸಿ ಹೋದ ಕರು; ಮಾನವೀಯತೆ ಮೆರೆದ ತಾಯಿ ಹಸುವಿನ ರೋಧನೆ ಕಂಡ ಚಿತ್ರದುರ್ಗ ಜನ