Karnataka Lockdown: ಕರ್ನಾಟಕದಲ್ಲಿ ವಾರದ ದಿನಗಳಿಗೂ ಲಾಕ್‌ಡೌನ್ ವಿಸ್ತರಿಸುವ ಬಗ್ಗೆ ಚಿಂತನೆ; ಇಂದಿನ ಸಭೆಯಲ್ಲಿ ಮಹತ್ವದ ನಿರ್ಧಾರ
Karnataka Lockdown Updates: ಪ್ರಸ್ತುತ ಚಾಲ್ತಿಯಲ್ಲಿರುವ ಮಾರ್ಗಸೂಚಿಗಳ ಪ್ರಕಾರ ಮೇ 4ರ ತನಕ ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಮತ್ತು ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ. ಆದರೆ, ಈಗ ಕರ್ಫ್ಯೂವನ್ನು ವಾರದ ದಿನಗಳಿಗೂ ವಿಸ್ತರಿಸುವ ಕುರಿತು ಇಂದಿನ ಸಭೆಯಲ್ಲಿ ಚರ್ಚೆಯಾಗಲಿದೆ.
ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ಅತ್ಯಂತ ಗಂಭೀರ ಸ್ವರೂಪಕ್ಕೆ ತಿರುಗಿದ್ದು, ಸೋಂಕು ನಿಯಂತ್ರಣಕ್ಕೆ ರಾಜ್ಯ ಸರ್ಕಾರ ನೈಟ್ ಕರ್ಫ್ಯೂ ಮತ್ತು ವೀಕೆಂಡ್ ಕರ್ಫ್ಯೂ ಮೊರೆ ಹೋಗಿದೆ. ಇದರ ಮುಂದುವರೆದ ಭಾಗವಾಗಿ ವಾರಪೂರ್ತಿ ಕರ್ಫ್ಯೂ ವಿಧಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದ್ದು ಈ ಬಗ್ಗೆ ಇಂದು ಮಹತ್ವದ ತೀರ್ಮಾನ ಹೊರಬೀಳಲಿದೆ. ಬೆಂಗಳೂರಿನಲ್ಲಿ ಪ್ರತಿನಿತ್ಯ 20 ಸಾವಿರಕ್ಕೂ ಅಧಿಕ ಸೋಂಕಿತರು ಪತ್ತೆಯಾಗುವ ಮಟ್ಟಕ್ಕೆ ಪರಿಸ್ಥಿತಿ ಉಲ್ಬಣಿಸಿರುವುದರಿಂದ ಕಠಿಣ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯ ಎಂಬ ಅಭಿಪ್ರಾಯ ತಜ್ಞರ ವಲಯದಲ್ಲಿ ಕೇಳಿಬರುತ್ತಿದೆ.
ಪ್ರಸ್ತುತ ಚಾಲ್ತಿಯಲ್ಲಿರುವ ಮಾರ್ಗಸೂಚಿಗಳ ಪ್ರಕಾರ ಮೇ 4ರ ತನಕ ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಮತ್ತು ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ. ಆದರೆ, ಈಗ ಕರ್ಫ್ಯೂವನ್ನು ವಾರದ ದಿನಗಳಿಗೂ ವಿಸ್ತರಿಸುವ ಕುರಿತು ಚರ್ಚೆಯಾಗಲಿದೆ. ಈ ಬಗ್ಗೆ ನಿನ್ನೆ (ಏಪ್ರಿಲ್ 25) ಅಭಿಪ್ರಾಯ ಹಂಚಿಕೊಂಡಿದ್ದ ಸಚಿವ ಜಗದೀಶ್ ಶೆಟ್ಟರ್, ನಾವು ಲಾಕ್‌ಡೌನ್ ಪರವಾಗಿ ಇಲ್ಲ. ಆದರೆ, ಪರಿಸ್ಥಿತಿ ಕಠಿಣ ನಿರ್ಧಾರವನ್ನು ಕೈಗೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಸಿದೆ. ಕೊರೊನಾ ಹಬ್ಬುವುದನ್ನು ತಡೆಗಟ್ಟಲು 10-12 ದಿನಗಳ ಮಟ್ಟಿಗಾದರೂ ಕ್ರಮ ಕೈಗೊಳ್ಳಲೇಬೇಕಿದೆ ಎಂದು ಹೇಳಿದ್ದರು.
ರಾಜ್ಯ ಸರ್ಕಾರದ ಬಹುಪಾಲು ಸಚಿವರು ಲಾಕ್‌ಡೌನ್ ಬೇಡವೆಂದೇ ಬಾಯಿಮಾತಿಗೆ ಹೇಳುತ್ತಿರುವರಾದರೂ ಪರಿಸ್ಥಿತಿಯನ್ನು ನೋಡಿದರೆ ಕಠಿಣ ಕ್ರಮ ಜಾರಿಯಾಗುವುದು ಖಚಿತ ಎಂದು ಸರ್ಕಾರದ ಮೂಲಗಳು ಹೇಳುತ್ತಿವೆ. ಜತೆಗೆ, ಇಂದಿನ ಸಭೆಯಲ್ಲಿ ಕೊರೊನಾ ಲಸಿಕೆ ಬಗ್ಗೆಯೂ ಚರ್ಚೆ ನಡೆಯಲಿದ್ದು, ಉಚಿತ ಲಸಿಕೆ ವಿತರಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಮಾತುಕತೆ ಆಗಲಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಸಂಪೂರ್ಣ ಲಾಕ್‌ಡೌನ್ ಮಾಡಲು ಆಗದು; ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್
ಕೇಂದ್ರದಿಂದ ಆಮ್ಲಜನಕ ಬರದಿದ್ದರೆ ಕೆಲವು ಆಸ್ಪತ್ರೆ ಮುಚ್ಚಬೇಕಾದ ಪರಿಸ್ಥಿತಿ ಬರಬಹುದು; ಸಿಎಂ ಬಿಎಸ್ ಯಡಿಯೂರಪ್ಪ
Published On - 10:51 am, Mon, 26 April 21