ಉಡುಪಿ: ಕೊರೊನಾ ಸೋಂಕಿನ ಅರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೊವಿಡ್ ವಿರುದ್ಧ ಹೋರಾಡಲು ಸರ್ಕಾರ 14 ದಿನಗಳ ಕಾಲ ಕೊರೊನಾ ಕರ್ಫ್ಯೂನ ಜಾರಿಗೊಳಿಸಿದೆ. ಕಟ್ಟು ನಿಟ್ಟಿನ ನಿಯಮದಿಂದ ಬಹುತೇಕ ಎಲ್ಲವೂ ಬಂದ್ ಆಗಿವೆ. ಈ ಸಾಲಿಗೆ ಮೊಬೈಲ್ ಅಂಗಡಿಗಳು ಸೇರಿವೆ. ಲಾಕ್ಡೌನ್ ಕಾರಣಕ್ಕಾಗಿ ಮೊಬೈಲ್ ಅಂಗಡಿಗಳು ಮುಚ್ಚಿದರು ಕೂಡ ಆನ್ಲೈನ್ ಸಂಸ್ಥೆಗಳು ವ್ಯವಹಾರ ಮುಂದುವರಿಸಿರುವುದು ಮೊಬೈಲ್ ವ್ಯಾಪಾರಸ್ಥರ ಸಿಟ್ಟಿಗೆ ಕಾರಣವಾಗಿದೆ.
ಈಗ ಏನಿದ್ದರೂ ಸ್ಮಾರ್ಟ್ ಫೋನ್ಗಳ ಜಮಾನ. ಒಂದು ಸ್ಮಾರ್ಟ್ ಫೋನ್ ಕಿಸೆಯಲ್ಲಿ ಇದ್ದರೆ ಸಾಕು ನಮ್ಮ ಬಹುತೇಕ ಕೆಲಸಗಳು ಆಗಿ ಬಿಡುತ್ತವೆ. ಈ ಸ್ಮಾರ್ಟ್ ಫೋನ್ಗಳ ವ್ಯವಹಾರ ನಡೆಸುವ ಮೂರುವರೆ ಸಾವಿರಕ್ಕೂ ಅಧಿಕ ಶೋ ರೂಮ್ಗಳು ರಾಜ್ಯದಲ್ಲಿವೆ. ಕೇವಲ ಉಡುಪಿ ಜಿಲ್ಲೆಯಲ್ಲಿ 400ಕ್ಕೂ ಅಧಿಕ ಮೊಬೈಲ್ ಮಳಿಗೆಗಳು ಇವೆ. ಮೊಬೈಲ್ ಮಾರಾಟ ಮೊಬೈಲ್ ಆಕ್ಸೆಸರಿಸ್ಗಳು ಮೊಬೈಲ್ ರಿಚಾರ್ಜ್ ಹೀಗೆ ಅನೇಕ ವಿಭಾಗಗಳಲ್ಲಿ ಜನರು ದುಡಿಯುತ್ತಿದ್ದಾರೆ. ಜಿಲ್ಲೆಯಲ್ಲಿ ಸುಮಾರು ಐದರಿಂದ ಆರು ಸಾವಿರ ಜನರು ಮೊಬೈಲ್ ಉದ್ಯಮವನ್ನೇ ನಂಬಿಕೊಂಡಿದ್ದು, ಇದೀಗ ಲಾಕ್ಡೌನ್ ಪರಿಣಾಮವಾಗಿ ಉದ್ಯಮ ಕುಸಿದು ಹೋಗಿದೆ. ಆದರೆ ಆನ್ಲೈನ್ ಮೂಲಕ ಮೊಬೈಲ್ ವ್ಯಾಪಾರ ಬಾರಿ ಭರಾಟೆಯಿಂದ ಮುಂದುವರೆದಿದೆ.
ರಾಜ್ಯಾದ್ಯಂತ ಮೊಬೈಲ್ ಅಂಗಡಿಗಳನ್ನು ಮುಚ್ಚಿದ್ದರೂ ಕೂಡ ಆನ್ಲೈನ್ ಮೂಲಕ ಜನ ಮೊಬೈಲ್ ಖರೀದಿ ಮಾಡುತ್ತಿದ್ದಾರೆ. ಜನರು ಆರ್ಡರ್ ಮಾಡಿದ ಮೊಬೈಲ್ಗಳನ್ನು ವಿತರಿಸಲು ಡೆಲಿವರಿ ಬಾಯ್ಗಳು ಮನೆ ಮನೆಗೆ ಸಂಚರಿಸುತ್ತಾರೆ. ಹೀಗೆ ಸಂಚರಿಸುವ ಯುವಕರಿಂದ ಸೋಂಕು ಹರಡುವುದಿಲ್ವಾ ಎಂದು ಮೊಬೈಲ್ ಅಂಗಡಿ ಮಾಲೀಕರು ಪ್ರಶ್ನಿಸುತ್ತಿದ್ದಾರೆ. ಕಳೆದ ಬಾರಿ ಲಾಕ್ಡೌನ್ ಆದ ಸಮಯದಲ್ಲಿ ಆನ್ಲೈನ್ ವ್ಯವಹಾರಗಳಿಗೂ ಕಡಿವಾಣ ಹಾಕಲಾಗಿತ್ತು. ಕೊರೊನಾ ಸೋಂಕು ಮಿತಿಮೀರಿ ಹರಡುತ್ತಿರುವ ಮಹಾರಾಷ್ಟ್ರ, ಗುಜರಾತ್, ದೆಹಲಿ ಮೊದಲಾದ ಕಡೆಗಳಲ್ಲಿ ಆನ್ಲೈನ್ ವ್ಯವಹಾರವನ್ನು ಸ್ಥಗಿತಗೊಳಿಸಲಾಗಿದೆ. ರಾಜ್ಯದಲ್ಲಿಯೂ ಆನ್ಲೈನ್ ಉದ್ಯಮವನ್ನು ಸ್ಥಗಿತಗೊಳಿಸಬೇಕೆಂದು ಮೊಬೈಲ್ ಅಂಗಡಿ ಮಾಲೀಕರ ಸಂಘ ಸರಕಾರಕ್ಕೆ ಆಗ್ರಹಿಸಿದೆ.
ಕೊರೊನಾ ಸೋಂಕನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಲಾಕ್ಡೌನ್ ವಿಧಿಸಿದೆ. ಆದರೆ ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ಹಾಕುವ ಕೆಲಸ ಮಾಡಿದೆ. ಸ್ಥಳೀಯ ಅಂಗಡಿಗಳನ್ನು ಮುಚ್ಚಿ ಆನ್ಲೈನ್ನಲ್ಲಿ ವ್ಯವಹಾರಕ್ಕೆ ಅವಕಾಶ ನೀಡಿದೆ. ಇದರಿಂದ ಸಣ್ಣ ವ್ಯಾಪಾರಿಗಳು ತೀರಾ ನಷ್ಟವನ್ನು ಅನುಭವಿಸುತ್ತಿವೆ. ಅಂಗಡಿಗಳನ್ನು ಮುಚ್ಚಿಸುವ ಜೊತೆಗೆ ಆನ್ಲೈನ್ ವ್ಯವಹಾರಕ್ಕೆ ಅವಕಾಶ ನೀಡುವ ಮೂಲಕ ವಿದೇಶಿ ಕಂಪನಿಗಳಿಗೆ ಪರೋಕ್ಷವಾಗಿ ಸಹಾಯಮಾಡುತ್ತಿದೆ. ಕಳೆದ ಬಾರಿ ಎಲ್ಲವೂ ಬಂದ್ ಆಗಿತ್ತು. ಆದರೆ ಈ ಬಾರಿ ಸಣ್ಣ ವ್ಯಾಪಾರಿಗಳಿಗೆ ನಷ್ಟವಾಗುವ ರೀತಿಯಲ್ಲಿ ಲಾಕ್ಡೌನ್ ಜಾರಿಯಾಗಿದೆ. ಇದರಿಂದ ಈ ಬಗ್ಗೆ ಸರ್ಕಾರ ಗಮನ ಹರಿಸಬೇಕೆಂದು ಅಂಗಡಿ ಮಾಲೀಕರು ಆಗ್ರಹಿಸುತ್ತಿದ್ದಾರೆ.
ಇದನ್ನೂ ಓದಿ
ಜೀವನದಲ್ಲಿ ಜಿಗುಪ್ಸೆ ಬಂದಿದೆ; ವೈಷ್ಣವಿ ಮುಂದೆ ಅಳಲು ತೋಡಿಕೊಂಡ ಮಂಜು
(Mobile Store Owners Association is urging the government to shut down online business at Lockdown)
Published On - 2:38 pm, Thu, 29 April 21