ಜೀವಿಸುವ ಹಕ್ಕಿನಲ್ಲಿ ಆರೋಗ್ಯವೂ ಸೇರಿದೆ, ಸೋಂಕಿತರಿಗೆ ಚಿಕಿತ್ಸೆ ನೀಡುವುದು ಎಲ್ಲರ ಕರ್ತವ್ಯ, ಕೂಡಲೇ ಬೆಡ್ ಪ್ರಮಾಣ​ ಹೆಚ್ಚಿಸಿ: ಹೈಕೋರ್ಟ್

ಖಾಸಗಿ ಆಸ್ಪತ್ರೆಗಳು ಖಾಲಿ ಬೆಡ್​ಗಳ ಬಗ್ಗೆ ಮಾಹಿತಿ ನೀಡಬೇಕು. 24 ಗಂಟೆಗಳಲ್ಲಿ ವೆಬ್​ಸೈಟ್ ರಚಿಸಬೇಕು ಎಂದು ಸಿಜೆ ಎ.ಎಸ್.ಒಕಾ, ನ್ಯಾ.ಅರವಿಂದ್ ಕುಮಾರ್ ಅವರನ್ನೊಳಗೊಂಡ ಪೀಠ ಫನಾಗೆ ಸೂಚನೆ ನೀಡಿದೆ.

  • Publish Date - 3:02 pm, Thu, 29 April 21 Edited By: Lakshmi Hegde
ಜೀವಿಸುವ ಹಕ್ಕಿನಲ್ಲಿ ಆರೋಗ್ಯವೂ ಸೇರಿದೆ, ಸೋಂಕಿತರಿಗೆ ಚಿಕಿತ್ಸೆ ನೀಡುವುದು ಎಲ್ಲರ ಕರ್ತವ್ಯ, ಕೂಡಲೇ ಬೆಡ್ ಪ್ರಮಾಣ​ ಹೆಚ್ಚಿಸಿ: ಹೈಕೋರ್ಟ್
ಕರ್ನಾಟಕ ಹೈಕೋರ್ಟ್​

ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗಿ ವೈದ್ಯಕೀಯ ಸೌಲಭ್ಯದ ಅಭಾವ ಸೃಷ್ಟಿಯಾಗಿದೆ ಎಂಬ ಕೂಗು ಕೇಳಿಬಂದ ಹಿನ್ನೆಲೆಯಲ್ಲೇ ಸಮಸ್ಯೆಗಳನ್ನು ಸರಿಪಡಿಸುತ್ತಿರುವುದಾಗಿ ರಾಜ್ಯ ಸರ್ಕಾರ ಹೈಕೋರ್ಟ್​ಗೆ ಮಾಹಿತಿ ನೀಡಿತ್ತು. ಇದೀಗ ಕೊವಿಡ್ ಬೆಡ್​ ಹೆಚ್ಚಳ ಮಾಡುವಂತೆ ಉಚ್ಛ ನ್ಯಾಯಾಲಯ ಆದೇಶ ನೀಡಿದ್ದು, ಜೀವಿಸುವ ಹಕ್ಕಿನಲ್ಲಿ ಆರೋಗ್ಯದ ಹಕ್ಕೂ ಸೇರಿದೆ, ಹೀಗಾಗಿ ಸೋಂಕಿತರಿಗೆ ಚಿಕಿತ್ಸೆ ಒದಗಿಸುವುದು ಎಲ್ಲರ ಕರ್ತವ್ಯ ಎಂದು ಅಭಿಪ್ರಾಯಪಟ್ಟಿದೆ.

ಕೊರೊನಾದಿಂದ ಅಸಾಮಾನ್ಯ ಸ್ಥಿತಿ ಎದುರಾಗಿದೆ. ನಿನ್ನೆ ಬೆಂಗಳೂರಿನಲ್ಲಿ 22 ಸಾವಿರ ಪ್ರಕರಣಗಳು ಪತ್ತೆಯಾಗಿವೆ. ನೈಋತ್ಯ ರೈಲ್ವೆ 300 ಆಕ್ಸಿಜನ್ ಕೋಚ್ ಬೆಡ್ ಒದಗಿಸಲು ಸಿದ್ಧವಿದೆ. ಬೆಂಗಳೂರು, ಮೈಸೂರು, ಹುಬ್ಬಳ್ಳಿಯಲ್ಲಿ ಕೋಚ್ ಲಭ್ಯವಿದ್ದು, ಬಿಬಿಎಂಪಿ ಹಾಗೂ ಸರ್ಕಾರ ತಕ್ಷಣ ಈ ಬೆಡ್ ಪಡೆದುಕೊಳ್ಳಬೇಕು ಎಂದು ಆದೇಶಿಸಿದೆ. ಅಲ್ಲದೇ, ಸೈನಿಕ ಆಸ್ಪತ್ರೆಗಳಲ್ಲಿ ಬೆಡ್​ಗಳು ಖಾಲಿ ಇಲ್ಲ ಎಂದು ಅವರು ತಿಳಿಸಿದ್ದಾರೆ. ಆದರೆ, ಅನಾಹುತಗಳಾದಾಗ ಸೇನೆ ಜನಸಾಮಾನ್ಯರಿಗೆ ಸಾಕಷ್ಟು ಬಾರಿ ನೆರವಾಗಿದೆ. ಈಗ ಬೆಂಗಳೂರಿನ ಸೋಂಕಿತರ ಸ್ಥಿತಿ ಚಿಂತಾಜನಕವಾಗಿರುವುದರಿಂದ ಬೆಂಗಳೂರಿನಲ್ಲಿ ಬೆಡ್ ಸೃಷ್ಟಿಸಲು ಸೇನೆಗೆ ಹೈಕೋರ್ಟ್ ಮನವಿ ಮಾಡಿದೆ.

ಖಾಸಗಿ ಆಸ್ಪತ್ರೆಗಳು ಖಾಲಿ ಬೆಡ್​ಗಳ ಬಗ್ಗೆ ಮಾಹಿತಿ ನೀಡಬೇಕು. 24 ಗಂಟೆಗಳಲ್ಲಿ ವೆಬ್​ಸೈಟ್ ರಚಿಸಬೇಕು ಎಂದು ಸಿಜೆ ಎ.ಎಸ್.ಒಕಾ, ನ್ಯಾ.ಅರವಿಂದ್ ಕುಮಾರ್ ಅವರನ್ನೊಳಗೊಂಡ ಪೀಠ ಫನಾಗೆ ಸೂಚನೆ ನೀಡಿದೆ.

ಅಗತ್ಯಕ್ಕೆ ತಕ್ಕಂತೆ ವೈದ್ಯಕೀಯ ಸೌಲಭ್ಯ ಹೆಚ್ಚಳ, ಖಾಸಗಿ ಆಸ್ಪತ್ರೆಗಳಿಂದ ರೆಮ್​ಡೆಸಿವರ್​ಗೆ ಅನಗತ್ಯ ಬೇಡಿಕೆ: ಹೈಕೋರ್ಟ್​ಗೆ ರಾಜ್ಯ ಸರ್ಕಾರ ಮಾಹಿತಿ
ವೈದ್ಯಕೀಯ ಸೌಲಭ್ಯ ಕೊರತೆ್ಗೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಉತ್ತರ ಒದಗಿಸಿರುವ ರಾಜ್ಯ ಸರ್ಕಾರ ರಾಜ್ಯದ ಆಸ್ಪತ್ರೆಗಳಲ್ಲಿ ಅಗತ್ಯ ಸೌಲಭ್ಯಗಳ ಪ್ರಮಾಣವನ್ನು ಹೆಚ್ಚಿಸಿರುವುದಾಗಿ ತಿಳಿಸಿದೆ. ಮಾರ್ಚ್​ 11ರ ನಂತರ ರಾಜ್ಯದ ಆಸ್ಪತ್ರೆಗಳಲ್ಲಿ 22,001ಆಕ್ಸಿಜನ್ ಬೆಡ್, 1248 ಹೆಚ್ಎಫ್ಎನ್​ಸಿ ಬೆಡ್, 701 ಐಸಿಯು, 1548 ವೆಂಟಿಲೇಟರ್ ಬೆಡ್​ಗಳನ್ನು ಹೆಚ್ಚಿಸಲಾಗಿದೆ. ವೈದ್ಯಕೀಯ ಶಿಕ್ಷಣ ಇಲಾಖೆ ಆಸ್ಪತ್ರೆಗಳಲ್ಲೂ ಬೆಡ್ ಹೆಚ್ಚಳ ಮಾಡಲಾಗಿದೆ ಎಂದು ಮಾಹಿತಿ ನೀಡಿದೆ.

ಜತೆಗೆ, ವೈದ್ಯಕೀಯ ಶಿಕ್ಷಣ ಇಲಾಖೆ ಆಸ್ಪತ್ರೆಗಳಲ್ಲೂ ಬೆಡ್ ಹೆಚ್ಚಳ ಮಾಡಲಾಗಿದೆ. 9405 ಆಕ್ಸಿಜನ್ ಬೆಡ್, 646 ವೆಂಟಿಲೇಟರ್, 570ರಷ್ಟು ಹೆಚ್​ಎಫ್​ಎನ್ ಬೆಡ್ ಹೆಚ್ಚಿಸಲಾಗಿದೆ. ಕಮಾಂಡ್ ಆಸ್ಪತ್ರೆಗಳಲ್ಲಿ ಶೇ.50ರಷ್ಟು ಬೆಡ್​ಗಾಗಿ‌ ಮನವಿ ಮಾಡಲಾಗಿದ್ದು ಹಜ್ ಭವನ್, ಪಶುವೈದ್ಯ ಕಾಲೇಜಿನಲ್ಲಿ ತಲಾ 100 ಬೆಡ್ ವ್ಯವಸ್ಥೆ ಮಾಡಲಾಗಿದೆ. ಇನ್ನೂ 1500 ಬೆಡ್ ಸೃಷ್ಟಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಹೈಕೋರ್ಟ್​ಗೆ ರಾಜ್ಯ ಸರ್ಕಾರ ತಿಳಿಸಿದೆ. ಗಂಭೀರ ಸೋಂಕಿತರಿಗಷ್ಟೇ ಆಕ್ಸಿಜನ್ ಬೆಡ್, ರೆಮ್​ಡಿಸಿವರ್ ಪೂರೈಕೆ ಮಾಡುತ್ತಿರುವುದಾಗಿಯೂ ಈ ಸಂದರ್ಭದಲ್ಲಿ ಹೇಳಿಕೆ ನೀಡಿದೆ.

ಅಲ್ಲದೇ, ರಾಜ್ಯದಲ್ಲಿ ರೆಮ್‌ಡಿಸಿವಿರ್ ಪೂರೈಕೆ ಹೆಚ್ಚಳಕ್ಕೆ ಕ್ರಮ ಕೈಗೊಂಡಿದ್ದು, ಕೇಂದ್ರದಿಂದ ರಾಜ್ಯಕ್ಕೆ 1,22,000 ರೆಮ್​ಡಿಸಿವಿರ್ ಹಂಚಿಕೆ‌ ಆಗಿದೆ. ಇಲ್ಲಿಯವರೆಗೆ ಇಷ್ಟು ರೆಮ್​ಡಿಸಿವಿರ್ ರಾಜ್ಯಕ್ಕೆ ಹಂಚಲಾಗಿದೆ. ನಿತ್ಯ 20 ಸಾವಿರಕ್ಕೂ ಹೆಚ್ಚು ರೆಮ್​ಡಿಸಿವಿರ್​ಗೆ ಬೇಡಿಕೆಯಿದ್ದು, ವೆಬ್​ಸೈಟ್​ನಲ್ಲಿ ರೆಮ್​ಡಿಸಿವಿರ್ ಮಾಹಿತಿ‌ಯನ್ನು ಹಂಚಿಕೊಳ್ಳಲಾಗಿದೆ. ವಾರ್ ರೂಮ್​ನಲ್ಲಿ ರೆಮ್​ಡಿಸಿವಿರ್​ಗಾಗಿ ಅಧಿಕಾರಿ ನೇಮಕ ಮಾಡಲಾಗಿದ್ದು, 38,420 ರೆಮ್​ಡಿಸಿವಿರ್ ಈಗಾಗಲೇ ಸ್ಟಾಕ್ ಇದೆ ಎಂದು ಸರ್ಕಾರಿ ವಕೀಲ ವಿಕ್ರಮ್ ಹುಯಿಲಗೋಳ್ ಹೈಕೋರ್ಟ್​ಗೆ ಮಾಹಿತಿ ಒದಗಿಸಿದ್ದಾರೆ.

ಇದೇ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳಿಂದ ಅನಗತ್ಯವಾಗಿ ರೆಮ್​ಡಿಸಿವಿರ್​ಗೆ ಬೇಡಿಕೆ ಬರುತ್ತಿದೆ ಎಂಬ ಆರೋಪವೂ ಕೇಳಿಬಂದಿದ್ದು, ಅಗತ್ಯವಿಲ್ಲದಿದ್ದರೂ ಸೋಂಕಿತರಿಗೆ ರೆಮ್​ಡಿಸಿವಿರ್ ನೀಡಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳಿಂದ ಅನಗತ್ಯವಾಗಿ ವಾಟ್ಸಾಪ್,‌ ಎಸ್ಎಂಎಸ್, ಇ-ಮೇಲ್ ಮೂಲಕ ಬೇಡಿಕೆ ಬರುತ್ತಿದೆ. ಖಾಸಗಿ ‌ಆಸ್ಪತ್ರೆಗಳೇ ಸೋಂಕಿತರಿಗೆ ರೆಮ್​ಡಿಸಿವಿರ್ ಪೂರೈಸಲಿ ಎಂದು ಸರ್ಕಾರಿ ವಕೀಲ ವಿಕ್ರಮ್ ಹುಯಿಲಗೋಳ್ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ:
ಕೊರೊನಾ ಸಕ್ರಿಯ ಪ್ರಕರಣಗಳನ್ನು ಹೊಂದಿದ ರಾಜ್ಯಗಳ ಪೈಕಿ ಕರ್ನಾಟಕಕ್ಕೆ 2ನೇ ಸ್ಥಾನ; ಮರಣ ಪ್ರಮಾಣದಲ್ಲಿ 3ನೇ ಸ್ಥಾನ 

Coronavirus: ಪ್ಲಾಸ್ಮಾ ಚಿಕಿತ್ಸೆಯು ಕೊರೊನಾ ವಿರುದ್ಧ ಹೋರಾಡಲು ಹೇಗೆ ಸಹಾಯ ಮಾಡುತ್ತದೆ? ಇಲ್ಲಿದೆ ವಿವರ