ಅಕ್ರಮ ಹಣ ವರ್ಗಾವಣೆ: ರಾಷ್ಟ್ರೀಕೃತ ಬ್ಯಾಂಕ್​​ಗಳ ಸರ್ಕಾರಿ ಖಾತೆ ಕ್ಲೋಸ್​ಗೆ ಸೂಚನೆ

| Updated By: Ganapathi Sharma

Updated on: Aug 14, 2024 | 2:04 PM

ರಾಜ್ಯ ಸರ್ಕಾರದ ವಿವಿಧ ಅಧೀನ ಸಂಸ್ಥೆಗಳು ರಾಷ್ಟ್ರೀಕೃತ ಬ್ಯಾಂಕ್​ಗಳಲ್ಲಿ ಠೇವಣಿ ಇಟ್ಟಿರುವ ಅಥವಾ ಹೂಡಿಕೆ ಮಾಡಿರುವ ಹಣ ಅಕ್ರಮ ವರ್ಗಾವಣೆಯಾಗುತ್ತಿರುವ ಬೆನ್ನಲ್ಲೇ ಕರ್ನಾಟಕ ಸರ್ಕಾರದ ಆರ್ಥಿಕ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ. ಆರ್ಥಿಕ ಇಲಾಖೆ ಹೊರಡಿಸಿರುವ ಆದೇಶವೇನು ಎಂಬ ವಿವರ ಇಲ್ಲಿದೆ.

ಅಕ್ರಮ ಹಣ ವರ್ಗಾವಣೆ: ರಾಷ್ಟ್ರೀಕೃತ ಬ್ಯಾಂಕ್​​ಗಳ ಸರ್ಕಾರಿ ಖಾತೆ ಕ್ಲೋಸ್​ಗೆ ಸೂಚನೆ
ಅಕ್ರಮ ಹಣ ವರ್ಗಾವಣೆ: ರಾಷ್ಟ್ರೀಕೃತ ಬ್ಯಾಂಕ್​​ಗಳ ಸರ್ಕಾರಿ ಖಾತೆ ಕ್ಲೋಸ್​ಗೆ ಸೂಚನೆ
Follow us on

ಬೆಂಗಳೂರು, ಆಗಸ್ಟ್ 14: ಬ್ಯಾಂಕ್​​ಗಳಲ್ಲಿ ಪದೇಪದೆ ಅಕ್ರಮವಾಗಿ ಹಣ ವರ್ಗಾವಣೆ ಪ್ರಕರಣಗಳು ಬೆಳಕಿಗೆ ಬರುತ್ತಿರುವ ಕಾರಣ 2 ರಾಷ್ಟ್ರೀಕೃತ ಬ್ಯಾಂಕ್​​ಗಳ ಎಲ್ಲಾ ಶಾಖೆಗಳಲ್ಲಿರುವ ಸರ್ಕಾರಿ ಖಾತೆಗಳನ್ನು ಮುಚ್ಚುವಂತೆ ರಾಜ್ಯ ಸರ್ಕಾರ ಬುಧವಾರ ಮಹತ್ವದ ಆದೇಶ ಮಾಡಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್​ಗಳ ಎಲ್ಲ ಶಾಖೆಗಳಲ್ಲಿರುವ ಸರ್ಕಾರಿ ಖಾತೆಗಳನ್ನು ಬಂದ್ ಮಾಡಲು ಸೂಚನೆ ನೀಡಲಾಗಿದೆ.

ಸರ್ಕಾರಕ್ಕೆ ಸಂಬಂಧಿಸಿ ಈ ಬ್ಯಾಂಕ್​ಗಳ ಎಲ್ಲಾ ಶಾಖೆ​​ಗಳಿಂದ ಠೇವಣಿ ಹಿಂಪಡೆಯಬೇಕು. ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳು, ಸಾರ್ವಜನಿಕ ಉದ್ದಿಮೆಗಳು, ನಿಗಮ ಮಂಡಳಿ, ಸ್ಥಳೀಯ ಸಂಸ್ಥೆ, ವಿವಿ ಮತ್ತಿತರ ಸಂಸ್ಥೆಗಳಿಗೆ ಈ ಆದೇಶ ಅನ್ವಯವಾಗಲಿದೆ. ಎಲ್ಲಾ ರೀತಿಯ ಠೇವಣಿ, ಹೂಡಿಕೆ ತಕ್ಷಣ ಹಿಂಪಡೆಯಬೇಕು. ಇಷ್ಟೇ ಅಲ್ಲದೆ, ಇನ್ನು ಮುಂದೆ ಈ ಬ್ಯಾಂಕ್​ಗಳಲ್ಲಿ ಹೂಡಿಕೆ ಮಾಡಬಾರದು ಎಂದು ಆರ್ಥಿಕ ಇಲಾಖೆ ಕಾರ್ಯದರ್ಶಿ ಡಾ. ಪಿಸಿ ಜಾಫರ್ ಮಹತ್ವದ ಆದೇಶ ಹೊರಡಿಸಿದ್ದಾರೆ.

ಇಲಾಖೆಗಳ ಖಾತೆ ಸ್ಥಗಿತಗೊಳಿಸಿ​ ಆ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲು ಸೂಚನೆ ನೀಡಲಾಗಿದೆ. ಸೆಪ್ಟೆಂಬರ್​​ 20ರೊಳಗೆ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಜಾಫರ್ ಅವರು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದಲ್ಲಿ ರಾಷ್ಟ್ರೀಕರತ ಬ್ಯಾಂಕ್​ನಿಂದಲೇ ಹಣ ಅಕ್ರಮ ವರ್ಗಾವಣೆಯಾಗಿರುವುದು ಬೆಳಕಿಗೆ ಬಂದಿತ್ತು. ಈ ಹಗರಣ ಇದೀಗ ಕರ್ನಾಟಕ ಕಾಂಗ್ರೆಸ್ ಸರ್ಕಾರವನ್ನು ಬಹಳಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ. ಒಂದೆಡೆ ಎಸ್​ಐಟಿ ತನಿಖೆ ಪ್ರಗತಿಯಲ್ಲಿದ್ದು, 50 ಕೋಟಿ ರೂಪಾಯಿಗಿಂತ ಹೆಚ್ಚಿನ ಮೊತ್ತದ ಹಗರಣವಾದ ಕಾರಣ ಸಿಬಿಐ ತನಿಖೆಗೆ ವಹಿಸಬೇಕೆಂಬ ಒತ್ತಡವೂ ಸರ್ಕಾರದ ಮೇಲೆ ಹೆಚ್ಚಾಗಿದೆ.

ಇದನ್ನೂ ಓದಿ: ಬಾಗಲಕೋಟೆ: ವಾಲ್ಮೀಕಿ ಅಭಿವೃದ್ಧಿ ನಿಗಮದ ರೀತಿಯಲ್ಲೇ ಮತ್ತೊಂದು ಹಗರಣ, ಪ್ರವಾಸೋದ್ಯಮ ಇಲಾಖೆಯ ಹಣ ಅಕ್ರಮ ವರ್ಗಾವಣೆ

ಮತ್ತೊಂದೆಡೆ, ಬಾಗಲಕೋಟೆಯಲ್ಲಿ ಪ್ರವಾಸೋದ್ಯಮ ಇಲಾಖೆಗೆ ಸಂಬಂಧಿಸಿ ಹಣ ಅಕ್ರಮ ವರ್ಗಾವಣೆಯಾಗಿರುವುದು ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಪ್ರವಾಸೋದ್ಯಮ ಇಲಾಖೆಯ 2,47,73,999 ರೂ. ಹಣ ಅಕ್ರಮ ವರ್ಗಾವಣೆ ಆಗಿದೆ. ಪ್ರವಾಸೋದ್ಯಮ ಇಲಾಖೆಯ ಹಣ ಐಡಿಬಿಐ ಬ್ಯಾಂಕ್‌ ಖಾತೆ ಮೂಲಕ ವಿವಿಧ ಖಾತೆಗಳಿಗೆ ಹಣ ವರ್ಗಾವಣೆಯಾಗಿರುವುದು ಬೆಳಕಿಗೆ ಬಂದಿತ್ತು.

ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಸರ್ಕಾರದ ಆರ್ಥಿಕ ಇಲಾಖೆ ಮಹತ್ವದ ಆದೇಶ ಪ್ರಕಟಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ