ಬೆಂಗಳೂರು, ಆ.25: ರಾಜ್ಯದಲ್ಲಿ ಈ ಬಾರಿ ಹೇಳಿಕೆಯಷ್ಟು ಮುಂಗಾರು ಮಳೆ ಆಗಿಲ್ಲ. ಇದರಿಂದ ಅನೇಕ ಡ್ಯಾಂಗಳು (Dam) ಭರ್ತಿಯಾಗದೇ ಬತ್ತಿ ಹೋಗುವ ಸ್ಥಿತಿ ತಲುಪಿದ್ದು, ಅನೇಕ ಜಲಾಶಯಗಳು ನೀರಿಲ್ಲದೇ ಖಾಲಿಯಾಗಿದೆ. ಈ ಹಿನ್ನಲೆ ಜಲಾಶಯದ ನೀರನ್ನೇ ನಂಬಿಕೊಂಡು ಬೆಳೆ ಬೆಳೆಯುತ್ತಿದ್ದ ರೈತರಿಗೆ ನೀರಿನ ಅಭಾವ ಎದುರಾಗಿದ್ದು, ಇತ್ತೀಚೆಗಷ್ಟೇ ಕಾವೇರಿ ಕಣಿವೆ ಭಾಗದ ರೈತರಿಗೆ ಬಿತ್ತನೆ ಮಾಡದಂತೆ ಕೃಷಿ ಸಚಿವ ಚಲುವರಾಯಸ್ವಾಮಿ(N. Chaluvaraya Swamy) ಯವರು ಮನವಿ ಮಾಡಿದ್ದರು. ಇದೀಗ ರಾಜ್ಯದ 100ಕ್ಕೂ ಹೆಚ್ಚು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸುತ್ತೇವೆ ಎಂದಿದ್ದಾರೆ.
ವಿಧಾನಸೌಧದಲ್ಲಿ ಇಂದು(ಆ.25) ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಮಾತನಾಡಿ ‘ ಮೋಡ ಬಿತ್ತನೆ ಬಗ್ಗೆ ಚಿಂತನೆಯಿಲ್ಲ, ಈ ಹಿಂದೆ ಮೋಡ ಬಿತ್ತನೆ ಮಾಡಿದಾಗ ಪ್ರಯೋಜನವಾಗಿರಲಿಲ್ಲ. ಬರಗಾಲ ಎಂದು ಘೋಷಿಸಲು ಮಾರ್ಗಸೂಚಿ ಪಾಲಿಸಬೇಕು. ಆದರೆ, ಕೆಲವು ಮಾರ್ಗಸೂಚಿ ಅಡ್ಡ ಬರುತ್ತಿರುವುದರಿಂದ ಘೋಷಿಸಲಾಗುತ್ತಿಲ್ಲ. ರಾಜ್ಯದಲ್ಲಿ ಬರದ ಬಗ್ಗೆ ನಮಗೆ ಸಂಪೂರ್ಣ ಮಾಹಿತಿಯಿದೆ. ಈಗಾಗಲೇ ಬಿಪಿಎಲ್ ಕಾರ್ಡ್ದಾರರಿಗೆ ತಲಾ 5 ಕೆಜಿ ಅಕ್ಕಿ, 5 ಕೆ.ಜಿ ಅಕ್ಕಿಯ ಹಣ ಕೊಡುತ್ತಿದ್ದೇವೆ. ಗೃಹಲಕ್ಷ್ಮೀ ಯೋಜನೆಯಡಿ 2 ಸಾವಿರ ಹಣ ನೀಡುತ್ತಿದ್ದೇವೆ. ಇದೆಲ್ಲವೂ ರೈತರಿಗೆ ಅನುಕೂಲವಾಗುತ್ತಿದೆ ಎಂದರು.
ಇದನ್ನೂ ಓದಿ:ಬೆಂಗಳೂರು: ಬಿತ್ತನೆ ಕಾರ್ಯ ಮಾಡದಂತೆ ಕಾವೇರಿ ಕಣಿವೆ ಭಾಗದ ರೈತರಿಗೆ ಮನವಿ ಮಾಡಿದ ಕೃಷಿ ಸಚಿವ ಚಲುವರಾಯಸ್ವಾಮಿ
ಕಾವೇರಿ ನದಿ ನೀರು ಹಂಚಿಕೆ ಕುರಿತು ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ವಿಚಾರ ‘ಎಲ್ಲರೂ ಈ ಕುರಿತು ಗಮನ ನಿಡುತ್ತಿದ್ದಾರೆ. ಎಲ್ಲ ವಿಚಾರವನ್ನು ಮಾಧ್ಯಮಗಳ ಮುಂದೆ ಹೇಳೋಕೆ ಆಗಲ್ಲ, ಅದಕ್ಕೆ ಸುಮ್ಮನೆ ಇದ್ದೀವಿ. ಕರ್ನಾಟಕ ಈಗಾಗಲೇ ಕಾವೇರಿ ವಿಚಾರದಲ್ಲಿ ಹೆಜ್ಜೆ ಇಟ್ಟಿದ್ದೀವಿ. ರೈತರ ರಕ್ಷಣೆ ಮಾಡುವ ಕೆಲಸ ಆಯ್ತು, ಸುಪ್ರೀಂಕೋರ್ಟ್ ಅಷ್ಟು ಸುಲಭವಾಗಿ ತೀರ್ಮಾನ ಮಾಡೋಕೆ ಬರಲ್ಲ. ವಾಟರ್ ಬೋರ್ಡ್ ಕಮಿಟಿ 15 ಸಾವಿರ ನೀರು ಬಿಡೋಕೆ ವಾದ ಮಾಡಿದ್ರು, ಆಗ ನಮ್ಮಲ್ಲಿ ಸಮರ್ಥವಾಗಿ ವಾದ ಮಾಡಿದಕ್ಕೆ 10 ಸಾವಿರ ಕ್ಯೂಸೆಕ್ ನೀರು ಬಿಡಲು ಅನುಮತಿ ನೀಡಿತ್ತು. ಆಗ ತಮಿಳುನಾಡಿನವರು ಹೊರಹೋಗಿ ಸುಪ್ರೀಂ ಅರ್ಜಿ ಹಾಕಿದ್ದಾರೆ ಎಂದರು.
ಕರ್ನಾಟಕ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ಹಿನ್ನೆಲೆಯಲ್ಲಿ ಹೋರಾಟಗಳು ಶುರುವಾಗಿದೆ. ನಮ್ಮಲ್ಲಿಯೇ ಸರಿಯಾಗಿ ಮಳೆಯಾಗದ ಪರಿಣಾಮ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೆಆರ್ಎಸ್ ಜಲಾಶಯದ ನೀರಿನ ಮಟ್ಟ 105 ಅಡಿಗೆ ಕುಸಿದಿದೆ. ಜಲಾಶಯದ ಗರಿಷ್ಟಮಟ್ಟ 124.80 ಅಡಿ ಇದ್ದು, ಸದ್ಯ ಜಲಾಶಯದ ನೀರಿನ ಮಟ್ಟ 105.70 ಅಡಿ ಇದೆ. ಒಳ ಹರಿವು 4983 ಕ್ಯೂಸೆಕ್ ಇದ್ದು, ಹೊರ ಹರಿವು 15,247 ಕ್ಯೂಸೆಕ್ ಇದೆ. ಈ ಮಧ್ಯೆ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುತ್ತಿರುವುದು ಎಷ್ಟು ಸರಿಯೆಂದು ಕರ್ನಾಟಕದ ಜನ ಪ್ರಶ್ನಿಸಿ ಹೋರಾಟಕ್ಕೆ ಮುಂದಾಗಿದ್ದಾರೆ.
ಇದನ್ನೂ ಓದಿ:ಚಲುವರಾಯಸ್ವಾಮಿ ವಿರುದ್ಧ ನಕಲಿ ಲಂಚ ಪತ್ರ ಸೃಷ್ಟಿ: ಇಬ್ಬರನ್ನು ಪೊಲೀಸ್ ವಶಕ್ಕೆ ನೀಡಿದ ಕೋರ್ಟ್
ಕಳಪೆ ಬಿತ್ತನೆ ತಡೆಯಲು ಕ್ರಮ ವಿಚಾರ ‘ಕಳಪೆ ಬಿತ್ತನೆ ಬೀಜದ ಬಗ್ಗೆ ಎರಡು ಮೂರು ಕಡೆ ಮಾತ್ರ ದೂರು ಬಂದಿದೆ. ಈ ಕುರಿತು ಪ್ರಕರಣ ದಾಖಲು ಮಾಡಿದ್ದೇವೆ, ಜೊತೆಗೆ ತನಿಖೆ ಕೂಡ ನಡೆಯುತ್ತಿದೆ. ಇದೇ ವೇಳೆ ಸಿಎಂ ಡಿಸಿಎಂ ಪೈಪೋಟಿ ವಿಚಾರ ಕುರಿತು ಮಾತನಾಡಿದ ಅವರು ‘ ಹೌದು, ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಹೊಂದಾಣಿಕೆ ಇಲ್ಲ ಅಂತ ಹೇಳಿಕೊಂಡು, ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ಬರುತ್ತೆಂದು ಅಂದುಕೊಂಡಿದ್ದರು. ನಾವೆಲ್ಲರೂ ಒಟ್ಟಿಗೆ ಹೋಗಿ 136 ಸ್ಥಾನ ಗೆದ್ದಿದ್ದೀವಿ. ಈಗಲೂ ಹಾಗೆ ಅಂದುಕೊಂಡಿರಲಿ, ನಾವು ಒಟ್ಟೊಟ್ಟಿಗೆ ಇರ್ತೀವಿ ಎಂದು ಚಲುವರಾಯಸ್ವಾಮಿ ಅವರು ಹೇಳಿದರು.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:50 pm, Fri, 25 August 23