ಸಚಿವ ಚಲುವರಾಯಸ್ವಾಮಿ ವಿರುದ್ಧ ಲಂಚ ಪತ್ರ ಬರೆದವರನ್ನು ಪತ್ತೆ ಮಾಡಿದ ಸಿಐಡಿ, ಇಬ್ಬರು ವಶಕ್ಕೆ
ರಾಜ್ಯಪಾಲರಿಗೆ ಬರೆಯಲಾಗಿದ್ದ ಸಚಿವ ಚಲುವರಾಯಸ್ವಾಮಿ ವಿರುದ್ಧದ ಲಂಚ ಪತ್ರ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದ್ದು, ಪತ್ರ ಯಾರು ಬರೆದಿದ್ದು ಎನ್ನುವುದನ್ನು ಸಿಐಡಿ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಈ ಸಂಬಂಧ ಇಬ್ಬರು ಕೃಷಿ ಅಧಿಕಾರಿಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.
ಮಂಡ್ಯ, (ಆಗಸ್ಟ್ 20): ಕೃಷಿ ಸಚಿವ ಚಲುವರಾಯಸ್ವಾಮಿ(Chaluvaraya Swamy) ವಿರುದ್ಧ ರಾಜ್ಯಪಾಲರಿಗೆ ಬರೆಯಲಾಗಿದ್ದ ಲಂಚ ಆರೋಪ ಪತ್ರದ(bribe letter)ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದು, ಇದೀಗ ಇಬ್ಬರು ಅಧಿಕಾರಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕೆ.ಆರ್.ಪೇಟೆಯ ಕೃಷಿ ಅಧಿಕಾರಿಗಳಾದ ಶಿವಪ್ರಸಾದ್, ಗುರುದತ್ ಎನ್ನುವರನ್ನು ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡು ತನಿಖೆ ನಡೆಸಿದ್ದು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಸಚಿವ ಚಲುವರಾಯಸ್ವಾಮಿ ವಿರುದ್ಧ ಲಂಚ ಅರೋಪ ಪತ್ರವನ್ನು ಬರೆದಿರುವುದು ಇವರೇ ಎನ್ನುವುದು ತಿಳಿದುಬಂದಿದೆ. ಇನ್ನು ಪತ್ರ ಬರೆಯಲು ಹೇಳಿದ್ಯಾರು? ಲಂಚ ಕೇಳಿದ್ದಕ್ಕೆ ರಾಜ್ಯಪಾಲರಿಗೆ ಪತ್ರ ಬರೆಯಲಾಯಿತೇ? ಈ ಪತ್ರ ಬರೆದಿರುವ ಹಿಂದಿನ ಉದ್ದೇಶವೇನು? ಹೀಗೆ ಹಲವು ಆಯಾಮಗಳಲ್ಲಿ ಸಿಐಡಿ ಅಧಿಕಾರಿಗಳು ತನಿಖೆ ನಡೆಸಿದ್ದು, ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿದುಬರಬೇಕಿದೆ.
ಇನ್ನು ಈ ಬಗ್ಗೆ ಮಂಡ್ಯದಲ್ಲಿ ಕೃಷಿ ಇಲಾಖೆ ಸಚಿವ ಎನ್.ಚಲುವರಾಯಸ್ವಾಮಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಈವರೆಗೂ ಸಿಐಡಿ ಅಧಿಕಾರಿಗಳ ಯಾವುದೇ ವರದಿ ನನಗೆ ತಲುಪಿಲ್ಲ. ಸಿಐಡಿ ತಂಡ ವರದಿ ನೀಡಿದ ಬಳಿಕ ಗೊತ್ತಾಗಲಿದೆ. ಮೇಲ್ನೋಟಕ್ಕೆ ಮಂಡ್ಯದ ಅಧಿಕಾರಿಗಳಲ್ಲ ಎಂದು ಖಚಿತವಾಗಿ ಗೊತ್ತಾಗಿದೆ. ಆ ಇಬ್ಬರೇ ಎಲ್ಲರ ಸಹಿ ಮಾಡಿದ್ದಾರೆ ಎಂಬುದು ಗೊತ್ತಾಗಿದೆ. ಮಾಹಿತಿ ಪಡೆಯುತ್ತೇನೆ, ಸುಮ್ಮನೆ ಊಹಾಪೋಹದಿಂದ ಮಾತನಾಡಲ್ಲ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಲಂಚಕ್ಕೆ ಬೇಡಿಕೆ, ಚಲುವರಾಯಸ್ವಾಮಿ ವಿರುದ್ಧ ಗಂಭೀರ ಆರೋಪ: ರಾಜ್ಯಪಾಲರಿಗೆ ದೂರು
ನಮಗೆ ಜನಪರ ಕೆಲಸ ಮಾಡುವುದು ಮುಖ್ಯ. ಪ್ರಕರಣದ ಹಿಂದೆ ಯಾರಿದ್ದಾರೆ ಎಂದು ಹೇಳಲು ಹೋಗುವುದಿಲ್ಲ. ಸಿಐಡಿಗೆ ಜವಾಬ್ದಾರಿ ಕೊಟ್ಟಿದ್ದಾರೆ, ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಸರ್ಕಾರಕ್ಕೆ ವರದಿ ಬರುವ ಮೊದಲೇ ಮಾತನಾಡುವುದು ಸೂಕ್ತವಲ್ಲ. ನಾನೇ ಮೊದಲೇ ನಿರಾಳವಾಗಿದ್ದೆ ಎಂದರು.
ಇನ್ನಷ್ಟು ಮಂಡ್ಯ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 1:14 pm, Sun, 20 August 23