ಒಂದೇ ವಾರದಲ್ಲಿ 50ಕ್ಕೂ ಹೆಚ್ಚು ಶ್ರೀಗಂಧ ಮರಗಳು ಕಳ್ಳತನ; ಕಳ್ಳರ ಹೆಡಮುರಿ ಕಟ್ಟಲು ಸಜ್ಜಾದ ಚಿಕ್ಕಮಗಳೂರು ಅರಣ್ಯ ಇಲಾಖೆ
ಚಿಕ್ಕಮಗಳೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ಚುರುಚೆ ಗುಡ್ಡದಲ್ಲಿ ಎಗ್ಗಿಲ್ಲದೇ ಶ್ರೀಗಂಧ ಮರಗಳ ಕಳ್ಳತನ ನಡೆಯುತ್ತಿದೆ. ಚಿಕ್ಕಮಗಳೂರು-ಕಡೂರು ರಸ್ತೆಯ ಪಕ್ಕದಲ್ಲಿರುವ ಕಾಡಿನಲ್ಲಿ ಕಳೆದೊಂದು ವಾರದಲ್ಲೇ 50ಕ್ಕೂ ಹೆಚ್ಚು ಶ್ರೀಗಂಧ ಮರಗಳು ಕಳ್ಳರ ಪಾಲಾಗಿವೆ.
ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ಕೇವಲ ಕಾಫಿ ಬೆಳೆಯುವ ನಾಡಲ್ಲ. ಈ ಪ್ರದೇಶದಲ್ಲಿ ಸಿಗುವ ಶ್ರೀಗಂಧಕ್ಕೆ ಇನ್ನಿಲ್ಲದ ಬೇಡಿಕೆಯಿದೆ. ಇದನ್ನೇ ಬಂಡವಾಳವನ್ನಾಗಿಸಿಕೊಂಡಿರುವ ಕಳ್ಳರು ಎಗ್ಗಿಲ್ಲದೇ ಶ್ರೀಗಂಧದ ಲೂಟಿಗೆ ಇಳಿದಿದ್ದಾರೆ. ಅದು ಕೂಡ ಅರಣ್ಯ ಇಲಾಖೆ ಸಿಬ್ಬಂದಿಯ ದಿಕ್ಕು ತಪ್ಪಿಸಿ ತಮ್ಮ ಕಾರ್ಯವನ್ನು ಸಲೀಸಾಗಿ ಮಾಡಿಕೊಂಡು ಯಾವುದೇ ಸುಳಿಯನ್ನೂ ಕೂಡ ಬಿಡದೇ ಕಾರ್ಯದಲ್ಲಿ ತೊಡಗಿದ್ದಾರೆ.
ಯೋಜನೆ ರೂಪಿಸಿರುವ ಕಳ್ಳರು ಚಿಕ್ಕಮಗಳೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ಚುರುಚೆ ಗುಡ್ಡದಲ್ಲಿ ಎಗ್ಗಿಲ್ಲದೇ ಶ್ರೀಗಂಧ ಮರಗಳ ಕಳ್ಳತನ ನಡೆಯುತ್ತಿದೆ. ಚಿಕ್ಕಮಗಳೂರು-ಕಡೂರು ರಸ್ತೆಯ ಪಕ್ಕದಲ್ಲಿರುವ ಕಾಡಿನಲ್ಲಿ ಕಳೆದೊಂದು ವಾರದಲ್ಲೇ 50ಕ್ಕೂ ಹೆಚ್ಚು ಶ್ರೀಗಂಧ ಮರಗಳು ಕಳ್ಳರ ಪಾಲಾಗಿವೆ. ಕಾಡಿನಲ್ಲಿ ಸ್ವಾಭಾವಿಕವಾಗಿ ಬೆಳೆದ ಶ್ರೀಗಂಧ ಮರಗಳ ಮೇಲೆ ಕಣ್ಣು ಹಾಕಿರುವ ಕಳ್ಳರು ಮರಗಳನ್ನು ಕಡಿದು ಮರಗಳ ಸಮೇತ ಪರಾರಿಯಾಗಿದ್ದಾರೆ. ಶ್ರೀಗಂಧ ಕಳ್ಳತನಕ್ಕೆ ಇಳಿಯುವವರು ಅರಣ್ಯ ಇಲಾಖೆಯ ದಾರಿ ತಪ್ಪಿಸಲು ಬೇಕಾದ ಯೊಜನೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಚುರುಚೆ ಗುಡ್ಡ ಸುಮಾರು 10 ಸಾವಿರ ಎಕರೆ ಪ್ರದೇಶದಲ್ಲಿ ವ್ಯಾಪಿಸಿದ್ದು, ಶ್ರೀಗಂಧ ಕಳ್ಳತನ ಮಾಡಲು ಸಹಾಯವಾಗಿದೆ. ಒಂದು ದೊಡ್ಡ ಗುಂಪು ಪ್ರತಿ ಬಾರಿ ಶ್ರೀಗಂಧ ಕಳ್ಳತನಕ್ಕೆ ಇಳಿಯುತ್ತಿದ್ದು, ಕಾಡಿನ ಒಂದು ಭಾಗಕ್ಕೆ ಬೆಂಕಿ ಕೊಡುತ್ತಾರೆ. ಆ ಭಾಗಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ದೌಡಾಯಿಸಿದಾಗ ಇತ್ತ ಮೆಲ್ಲಗೆ ತಮ್ಮ ಕೆಲಸ ಮುಗಿಸಿಕೊಂಡು ಪರಾರಿಯಾಗುತ್ತಿದ್ದಾರೆ.
ಅನ್ಯ ರಾಜ್ಯ ತಲುಪುವ ಗುಮಾನಿ ರಾಜ್ಯದಲ್ಲೇ ಚಿಕ್ಕಮಗಳೂರು ಪ್ರದೇಶದಲ್ಲಿ ಬೆಳೆಯುವ ಶ್ರೀಗಂಧ ಮರಗಳಿಗೆ ಇನ್ನಿಲ್ಲದ ಬೇಡಿಕೆಯಿದೆ. ಈ ಪ್ರದೇಶದಲ್ಲಿ ಬೆಳೆಯುವ ಶ್ರೀಗಂಧ ತುಂಬಾ ಉತ್ಕೃಷ್ಟ ಮಟ್ಟದ್ದು ಎನ್ನುವುದು ಗೊತ್ತಾದ ಮೇಲೆ ಇಲ್ಲಿ ಅವ್ಯಾಹತವಾಗಿ ಶ್ರೀಗಂಧ ಕಳ್ಳತನ ನಡಿಯುತ್ತಿದೆ. ಒಂದೊಂದು ಪ್ರದೇಶವನ್ನು ಗುರಿ ಮಾಡಿ ಶ್ರೀಗಂಧ ಮರಗಳನ್ನು ಕಡಿಯುವ ಕಳ್ಳರು ಮಾಲುಗಳು ಕೇರಳ, ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರದವರೆಗೆ ಮುಟ್ಟುತ್ತಿದೆ ಎನ್ನುವ ಗುಮಾನಿ ಇದೆ. ನೇರವಾಗಿ ದೊಡ್ಡ ದೊಡ್ಡ ಕುಳಗಳ ಸಂಪರ್ಕ ಸ್ಥಳೀಯ ಕಳ್ಳರಿಗೆ ಇಲ್ಲದಿದ್ದರೂ, ಕೆಲ ಸ್ಥಳೀಯರ ಸಹಕಾರದಿಂದಲೇ ತಮಿಳುನಾಡು ಸೇರಿದಂತೆ ಹೊರ ರಾಜ್ಯಗಳಿಂದ ಬಂದು ಕೃತ್ಯ ಎಸಗುತ್ತಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಶ್ರೀಗಂಧ ಕಳ್ಳತನದಿಂದ ಕಂಗೆಟ್ಟಿರುವ ಅರಣ್ಯ ಇಲಾಖೆ ಕಳ್ಳರ ಹೆಡಮುರಿ ಕಟ್ಟಲು ಸಜ್ಜಾಗಿದೆ.
ಪದೇ ಪದೇ ಮರಕಳಿಸುತ್ತಿರುವ ಶ್ರೀಗಂಧ ಕಳ್ಳತನ ಪ್ರಕರಣದಿಂದ ರೋಸಿ ಹೋಗಿರುವ ಅರಣ್ಯ ಇಲಾಖೆ ಈ ಬಾರಿ ಈ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿದೆ. ಹೇಗಾದರು ಮಾಡಿ ಕಳ್ಳರನ್ನು ಮಟ್ಟ ಹಾಕಲೇ ಬೇಕು ಎಂದು ತೀರ್ಮಾನಿಸಿ ಕಾಡಿನಲ್ಲಿ ಕೂಬಿಂಗ್ ನಡೆಸಲು ತೀರ್ಮಾನಿಸಿದೆ.
ಇದನ್ನೂ ಓದಿ
ಮಂತ್ರಾಲಯಕ್ಕೆ ಹೋಗಿಬಂದಿದ್ದ ನಾಗರಬಾವಿಯ ಅಪಾರ್ಟ್‌ಮೆಂಟ್‌ನಲ್ಲಿದ್ದ ವೃದ್ಧನಿಗೆ ಕೊರೊನಾ ಪಾಸಿಟಿವ್
ನಿಧಿ ಆಸೆಗಾಗಿ ದಾವಣಗೆರೆ ಹನುಮ ದೇವಾಲಯಕ್ಕೆ ವಾಮಾಚಾರ; ಗ್ರಾಮಸ್ಥರ ಆರೋಪ