Pogaru | ಹಿಂದೂಗಳನ್ನ ಅವಮಾನಿಸೋದು ಫ್ಯಾಷನ್​ ಆಗಿಬಿಟ್ಟಿದೆ -ಪೊಗರು ವಿರುದ್ಧ ಶೋಭಾ ಕರಂದ್ಲಾಜೆ ಆಕ್ರೋಶ

|

Updated on: Feb 23, 2021 | 4:35 PM

ಹಿಂದೂಗಳನ್ನ ಅವಮಾನಿಸುವುದು ಫ್ಯಾಷನ್​ ಆಗಿಬಿಟ್ಟಿದೆ. ನಮ್ಮ ಭಾವನೆಗಳ ಮೇಲೆ ಸವಾರಿ ಮಾಡಲಾಗುತ್ತಿದೆ. ಈ ರೀತಿ ಬೇರೆ ಧರ್ಮಗಳನ್ನ ಚಿತ್ರಿಸಲು ಧೈರ್ಯವಿದೆಯಾ? ಎಂದು ಪ್ರಶ್ನಿಸಿದ್ದಾರೆ.

Pogaru | ಹಿಂದೂಗಳನ್ನ ಅವಮಾನಿಸೋದು ಫ್ಯಾಷನ್​ ಆಗಿಬಿಟ್ಟಿದೆ -ಪೊಗರು ವಿರುದ್ಧ ಶೋಭಾ ಕರಂದ್ಲಾಜೆ ಆಕ್ರೋಶ
ಶೋಭಾ ಕರಂದ್ಲಾಜೆ
Follow us on

ಬೆಂಗಳೂರು: ಪೊಗರು ಚಿತ್ರದಲ್ಲಿ ಬ್ರಾಹ್ಮಣರ ಬಗ್ಗೆ ವಿವಾದಾತ್ಮಕ ದೃಶ್ಯದ ಕುರಿತು ಟ್ವೀಟ್​ ಮಾಡಿ ಸಂಸದೆ ಶೋಭಾ ಕರಂದ್ಲಾಜೆ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಹಿಂದೂಗಳನ್ನ ಅವಮಾನಿಸುವುದು ಫ್ಯಾಷನ್​ ಆಗಿಬಿಟ್ಟಿದೆ. ನಮ್ಮ ಭಾವನೆಗಳ ಮೇಲೆ ಸವಾರಿ ಮಾಡಲಾಗುತ್ತಿದೆ. ಈ ರೀತಿ ಬೇರೆ ಧರ್ಮಗಳನ್ನ ಚಿತ್ರಿಸಲು ಧೈರ್ಯವಿದೆಯಾ? ಎಂದು ಪ್ರಶ್ನಿಸಿದ್ದಾರೆ. ಜೊತೆಗೆ, ವಿವಾದಾತ್ಮಕ ದೃಶ್ಯ ಸೆನ್ಸಾರ್​ ಮಾಡುವವರೆಗೂ ನಿಲ್ಲಿಸಬೇಕು. ಪೊಗರು ಚಿತ್ರದ ಸ್ಕ್ರೀನಿಂಗ್ ನಿಲ್ಲಿಸಬೇಕಾಗಿದೆ ಎಂದು ಟ್ವೀಟ್​ ಮಾಡಿ ಸಂಸದೆ ಶೋಭಾ ಕರಂದ್ಲಾಜೆ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ನಡುವೆ, ಬ್ರಾಹ್ಮಣ ಸಮುದಾಯಕ್ಕೆ ನೋವುಂಟು ಮಾಡಿದ ದೃಶ್ಯವನ್ನು ತೆಗೆದುಹಾಕಲು ಈಗಾಗಲೇ ಎಡಿಟಿಂಗ್​ ಶುರುವಾಗಿದ್ದು, ನಾಳೆಯೊಳಗೆ ಅದನ್ನು ಸಿನಿಮಾದಿಂದ ತೆಗೆಯುತ್ತೇವೆ ಎಂದು ಪೊಗರು ನಿರ್ದೇಶಕ ನಂದಕಿಶೋರ್​ ಇಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಹಾಗೇ, ಮತ್ತೊಮ್ಮೆ ಬ್ರಾಹ್ಮಣ ಸಮುದಾಯದ ಕ್ಷಮೆಯಾಚಿಸಿದ್ದಾರೆ. ಆದಷ್ಟು ಶೀಘ್ರದಲ್ಲೇ ಸಮಸ್ಯೆಯನ್ನು ಇತ್ಯರ್ಥ ಪಡಿಸುತ್ತೇವೆ. ತಾಂತ್ರಿಕತೆ ದೃಷ್ಟಿಯಿಂದ ಸ್ವಲ್ಪ ಸಮಯ ಬೇಕು ಎಂದು ಕೇಳಿದ್ದಾರೆ.

ಫೆ.19ರಂದು ಅದ್ದೂರಿಯಾಗಿ ತೆರೆ ಕಂಡ ಧ್ರುವ ಸರ್ಜಾ ನಟನೆಯ ಪೊಗರು ಸಿನಿಮಾದಲ್ಲಿ  ಬ್ರಾಹ್ಮಣ ಸಮುದಾಯವನ್ನು ಅವಹೇಳನ ಮಾಡೋ ದೃಶ್ಯ ಇದೆ ಎಂದು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದ‌ಮೂರ್ತಿ ಆರೋಪ ಮಾಡಿ, ಕೂಡಲೇ ಚಿತ್ರತಂಡ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದರು.

ಇಂದು ಕೂಡ ಸುದ್ದಿಗೋಷ್ಠಿ ನಡೆಸಿದ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದಮೂರ್ತಿ, ಸಿನಿಮಾದಲ್ಲಿರುವ ಹಲವು ಭಾಗ ನಮ್ಮ ಸಮುದಾಯಕ್ಕೆ ನೋವುಂಟು ಮಾಡುವಂಥವಾಗಿವೆ. ಬ್ರಾಹ್ಮಣರು, ಅರ್ಚಕರಿಗೆ ಅವಮಾನವಾಗುವ 12-14ದೃಶ್ಯಗಳನ್ನು ತೆಗೆಯುವಂತೆ ನಿರ್ದೇಶಕರಿಗೆ ತಿಳಿಸಿದ್ದೇವೆ. ಚಿತ್ರದಲ್ಲಿ ಮತ್ತೆ ಇಂಥ ದೃಶ್ಯಗಳನ್ನು ಪ್ರಸಾರ ಮಾಡಬಾರದು ಎಂದೂ ಹೇಳಿದ್ದೇವೆ. ನಾಳೆ ಸಂಜೆಯೊಳಗೆ ವಿವಾದಿತ ದೃಶ್ಯಗಳನ್ನು ತೆಗೆಯಬೇಕು. ಮುಂದೆ ಇದೇ ರೀತಿಯಾದರೆ ಬೀದಿಗಿಳಿದು ಹೋರಾಟ ಮಾಡುತ್ತೇವೆ. ಕಾನೂನು ಹೋರಾಟವನ್ನೂ ಕೈಗೆತ್ತಿಕೊಳ್ಳುತ್ತೇವೆ. ಯಾವುದೇ ಸಮಾಜಕ್ಕೂ ನೋವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ಇನ್ನು ತಮ್ಮ ಚಿತ್ರದಲ್ಲಿ ಬ್ರಾಹ್ಮಣ ಸಮುದಾಯವನ್ನು ಅವಮಾನಿಸಿದ್ದಕ್ಕೆ ಹಿಂದೆಯೇ ಕ್ಷಮೆ ಕೇಳಿದ್ದ ನಿರ್ದೇಶಕ ನಂದಕಿಶೋರ್​, ನಮಗೆ ಯಾರನ್ನೂ ನೋಯಿಸುವ ಉದ್ದೇಶವಿಲ್ಲ. ಬ್ರಾಹ್ಮಣರ ಬಗ್ಗೆ ತುಂಬ ಗೌರವ ಇದೆ ಎಂದೂ ಹೇಳಿದ್ದರು. ಇಂದು ಸುದ್ದಿಗೋಷ್ಠಿ ನಡೆಸಿದ ಅವರು, ವಿವಾದಿತ ದೃಶ್ಯಗಳನ್ನು ಕತ್ತರಿಸುವುದಾಗಿ ತಿಳಿಸಿದ್ದಾರೆ.

ಚಿತ್ರದಲ್ಲೇನಿತ್ತು?
ಸಿನೆಮಾದ ದೃಶ್ಯವೊಂದರಲ್ಲಿ ಹೋಮ ಮಾಡುತ್ತಿರುವ ಅರ್ಚಕರ ಹೆಗಲ ಮೇಲೆ ಖಳನಟ ಕಾಲಿಟ್ಟು ಹೊಡೆಯುವ ದೃಶ್ಯ ಬ್ರಾಹ್ಮಣ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿತ್ತು. ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡುವುದಾಗಿಯೂ ಸಚ್ಚಿದಾನಂದ‌ಮೂರ್ತಿ ತಿಳಿಸಿದ್ದರು.

ಇದನ್ನೂ ಓದಿ:Disha Ravi | ಯುವ ಪರಿಸರ ಹೋರಾಟಗಾರ್ತಿ ದಿಶಾ ರವಿಗೆ ಜಾಮೀನು ಮಂಜೂರು

Published On - 4:33 pm, Tue, 23 February 21