ಧಾರವಾಡ: ದೇಶಾದ್ಯಂತ ಇದೀಗ ಗೋ ಹತ್ಯೆ ನಿಷೇಧ ಕಾಯ್ದೆ ಬಗ್ಗೆ ಚರ್ಚೆ ನಡೆಯುತ್ತಿದೆ. ಒಂದು ಕಡೆ.. ಗೋ ಹತ್ಯೆ ತಪ್ಪಲ್ಲಾ ಅಂತ ಒಂದು ವರ್ಗ ಹೇಳಿದ್ರೆ. ಮತ್ತೊಂದು ಕಡೆ ಗೋವು ಅಂದರೆ ತಾಯಿ ಇದ್ದಂತೆ. ಯಾವುದೇ ಕಾರಣಕ್ಕೂ ಗೋವನ್ನು ಹತ್ಯೆ ಮಾಡಬಾರದು ಅಂತಾ ಒಂದು ವರ್ಗ ಹೇಳುತ್ತಲೇ ಇದೆ. ಈ ಮಧ್ಯೆ ಧಾರವಾಡದಲ್ಲೊಂದು ಅಪರೂಪದ ಘಟನೆ ನಡೆದಿದೆ. ಮುಸ್ಲಿಂ ಯುವಕರೇ ನಿಂತು ಬೀದಿ ಆಕಳಿಗೆ ಹೆರಿಗೆ ಮಾಡಿಸಿ, ಅದರ ರಕ್ಷಣೆ ಮಾಡಿದ್ದಾರೆ.
ಹೆರಿಗೆ ನೋವಿನಿಂದ ಒದ್ದಾಡುತ್ತಿದ್ದ ಗೋವಿಗೆ ಯುವಕರಿಂದ ಸಹಾಯ
ಧಾರವಾಡದ ಗಾಂಧಿ ನಗರ ಬಡಾವಣೆಯಲ್ಲಿ ಶನಿವಾರ ಮಧ್ಯಾಹ್ನ ಆಕಳೊಂದು ನೋವಿನಿಂದ ಕೂಗುತ್ತಿತ್ತು. ರಸ್ತೆ ಬದಿಯಲ್ಲಿ ಮಲಗಿದ್ದ ಆಕಳು ಇಡೀ ಬಡಾವಣೆಯ ಜನರಿಗೆ ಕೇಳುವಂತೆ ಕೂಗುತ್ತಿತ್ತು. ಕೂಡಲೇ ಅಲ್ಲಿ ಓಡಾಡುತ್ತಿದ್ದ ಸಮೀರ್ ಪಾಗೆ, ತಮೀಮ್ ಹಸನ್, ಬಿಲಾಲ್ ಬೇಟನ್ ವಾಲೆ ಮತ್ತು ಇತರ ಯುವಕರಿಗೆ ಗೋವು ಯಾವುದೋ ಕಾರಣಕ್ಕೆ ನೋವಿನಿಂದ ಬಳಲುತ್ತಿದೆ ಅನ್ನೋದು ಗಮನಕ್ಕೆ ಬಂತು. ಬಳಿಕ ತಮ್ಮ ಗೆಳೆಯರನ್ನು ಸ್ಥಳಕ್ಕೆ ಕರೆಸಿಕೊಂಡರು. ಅದರಲ್ಲಿ ಕೆಲವರಿಗೆ ಗೋವಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಹೆರಿಗೆಯಾಗದೇ ಅದು ನೋವಿನಿಂದ ಕೂಗುತ್ತಿದೆ ಅನ್ನೋದು ತಿಳಿಯಿತು.
ಗಮನಿಸಬೇಕಾದ ಅಂಶವೆಂದರೆ ಇವರೆಲ್ಲಾ ಮುಸ್ಲಿಂ ಯುವಕರು. ಗಾಂಧಿ ನಗರದ ಮದೀನಾ ಹೌಸಿಂಗ್ ಸೊಸೈಟಿಯ ಸದಸ್ಯರು. ಕೂಡಲೇ ಬಡಾವಣೆಯ ಕೆಲ ಹಿರಿಯರನ್ನು ಕರೆಯಿಸಿ, ಗೋವಿಗೆ ಹೆರಿಗೆಯಾಗಬಹುದಾ? ಅಂತಾ ವಿಚಾರಿಸಿದರು. ಆದರೆ ಅದರ ಬಗ್ಗೆ ಅನುಭವವಿದ್ದ ಹಿರಿಯರು ಇದು ಅಷ್ಟು ಸುಲಭದ ಮಾತಲ್ಲ. ಏನೋ ತೊಂದರೆಯಾಗಿದೆ. ಹಾಗೆಯೇ ಬಿಟ್ಟರೆ ಗೋವು ಸಾಯಲೂಬಹುದು. ಹೀಗಾಗಿ ಪಶು ವೈದ್ಯರನ್ನು ಕರೆಯಿಸಿದರೆ ಒಳ್ಳೆಯದು ಅನ್ನುವ ಅಭಿಪ್ರಾಯ ವ್ಯಕ್ತಪಡಿಸಿದರು. ಬಳಿಕ ಆ ಯುವಕರು ಕೂಡಲೇ ಅನೇಕರಿಗೆ ಫೋನ್ ಮಾಡಿದ್ದಾರೆ. ಆದರೆ ಏನೂ ಪ್ರಯೋಜನವಾಗಿಲ್ಲ. ಯಾವ ವೈದ್ಯರೂ ಸಿಗಲಿಲ್ಲ. ಕ್ಷಣಕ್ಷಣಕ್ಕೂ ಗೋವು ನೋವಿನಿಂದ ಒದ್ದಾಡುವುದು ಹೆಚ್ಚುತ್ತಲೇ ಇತ್ತು.
ಕೊನೆಗೂ ಸಿಕ್ಕರು ವೈದ್ಯರು
ಗೋವಿನ ನೋವನ್ನು ನೋಡಲಾಗದೇ ಯುವಕರೆಲ್ಲಾ ಅನೇಕ ಕಡೆಗಳಲ್ಲಿ ಫೋನ್ ಮಾಡಿದರೂ ಯಾರೂ ಸಿಗಲಿಲ್ಲ. ಕೊನೆಗೂ ಇಬ್ಬರು ಪಶುವೈದ್ಯರನ್ನು ಪತ್ತೆ ಹಚ್ಚಿ ಕರೆ ತರುವಲ್ಲಿ ಯುವಕರು ಯಶಸ್ವಿಯಾದರು. ಸ್ಥಳಕ್ಕೆ ಬಂದ ವೈದ್ಯರಿಗೆ ಈ ಗೋವಿಗೆ ಹೆರಿಗೆ ಮಾಡಿಸುವುದು ತುಂಬಾನೇ ಕಷ್ಟಕರ ಅನ್ನೋದಾಗಿ ತಿಳಿಸಿದ್ರು. ಏಕೆಂದರೆ ಅದಾಗಲೇ ಗೋವು ಹೆರಿಗೆ ನೋವಿನಿಂದ ಬಳಲಿ, ಗೋವು ಸುಸ್ತಾಗಿತ್ತು. ಹೀಗಾಗಿ ಸಹಜ ಹೆರಿಗೆ ಅಷ್ಟು ಸುಲಭದ ಮಾತಲ್ಲ ಅನ್ನೋದು ವೈದ್ಯರಿಗೆ ಗೊತ್ತಾಗಿತ್ತು. ಡಾ. ಕಿರಣ ಹಾಗೂ ಡಾ. ಶಂಭು ಬೆನ್ನೂರು ಎಂಬುವವರು ಏನಾದರೂ ಸರಿ, ಆಕಳಿನ ಪ್ರಾಣವನ್ನು ರಕ್ಷಿಸಲೇಬೇಕು ಅಂತಾ ನಿರ್ಧರಿಸಿದರು. ಒಂದು ಕಡೆ ನೋವಿನಿಂದ ಬಳಲುತ್ತಿರುವ ಗೋವು, ಮತ್ತೊಂದು ಕಡೆ ಅದರ ಸುತ್ತಲೂ ಅದರ ರಕ್ಷಣೆಗೋಸ್ಕರ ನಿಂತ ಮುಸ್ಲಿಂ ಯುವಕರು. ಮುಸ್ಲಿಂ ಯುವಕರ ಈ ಗೋ ಪ್ರೀತಿಯನ್ನು ನೋಡಿದ ಸ್ಥಳೀಯರು ಕೂಡ ಗೋವಿನ ರಕ್ಷಣೆಗೆ ಬಂದರು.
ಸ್ಥಳೀಯರಾದ ಡಾ.ಕೆ.ವಿ. ಬಸವಕುಮಾರ್, ವಿಜಯ ಕುಮಾರ, ಜಾಧವ್, ಹೇಮನಗೌಡ, ಸಾಮಾಜಿಕ ಕಾರ್ಯಕರ್ತ ಸೋಮಶೇಖರ್ ಸೇರಿದಂತೆ ಅನೇಕರು ಮುಸ್ಲಿಂ ಯುವಕರಿಗೆ ಸಾಥ್ ನೀಡಲು ಮುಂದೆ ಬಂದರು. ಮಧ್ಯಾಹ್ನದಿಂದ ರಾತ್ರಿ ಎಂಟು ಗಂಟೆಯವರೆಗೂ ಎಷ್ಟೇ ಕಷ್ಟಪಟ್ಟರೂ ಹೆರಿಗೆಯಾಗಲೇ ಇಲ್ಲ. ಅದು ಅನುಭವಿಸುತ್ತಿರುವ ನೋವನ್ನು ನೋಡಿ ಎಲ್ಲರ ಕಣ್ಣುಗಳು ತೇವವಾದವು.
ಸಿಸೇರಿಯನ್ ಮೊರೆ ಹೋದ ವೈದ್ಯರು
ಯಾವಾಗ ಕ್ಷಣ ಕ್ಷಣಕ್ಕೂ ಗೋವು ನೋವಿನಿಂದ ಬಳಲುವುದು ಹೆಚ್ಚಾಯಿತೋ ಆಗ ವೈದ್ಯರು ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸಲು ನಿರ್ಧರಿಸಿದರು. ಏಕೆಂದರೆ ಮಧ್ಯಾಹ್ನದಿಂದಲೂ ನೋವನ್ನು ಅನುಭವಿಸಿ ಅದು ನಿತ್ರಾಣವಾಗಿದ್ದರಿಂದ ಸಹಜ ಹೆರಿಗೆ ಅಸಾಧ್ಯ ಅನ್ನುವುದು ವೈದ್ಯರಿಗೆ ಗೊತ್ತಾಗಿತ್ತು. ಕೂಡಲೇ ಸಿಸೇರಿಯನ್ಗೆ ಸಿದ್ಧತೆ ನಡೆಸಿದರು. ರಾತ್ರಿ ಸುಮಾರು ಒಂಭತ್ತು ಗಂಟೆ ಹೊತ್ತಿಗೆ ವೈದ್ಯರು ಸಿಸೇರಿಯನ್ ಮಾಡುವ ಮೂಲಕ ಕರುವನ್ನು ಹೊರಗೆ ತೆಗೆದರು. ಈ ಹೊತ್ತಿಗೆ ಗೋವಿನ ಮಾಲೀಕನಿಗೆ ಸುದ್ದಿ ತಿಳಿಯಿತು. ಸಂಜೆ ಹೊತ್ತಿಗೆ ಆಕಳು ಮನೆಗೆ ಬಾರದೇ ಇದ್ದಿದ್ದರಿಂದ ಹುಡುಕಾಟ ನಡೆಸಿದ್ದ ಮಾಲೀಕ ಕೊನೆಗೂ ಘಟನಾ ಸ್ಥಳಕ್ಕೆ ಬಂದ. ಆತನ ಸುಪರ್ದಿಗೆ ಆಕಳು, ಕರುವನ್ನು ಒಪ್ಪಿಸಿದ ಯುವಕರು ನೆಮ್ಮದಿಯ ನಿಟ್ಟುಸಿರು ಬಿಟ್ಟರು.
ಮುಸ್ಲಿಂ ಯುವಕರ ಮಾನವೀಯತೆಗೆ ಅಭಿನಂದನೆಗಳ ಮಹಾಪೂರ
ಮಧ್ಯಾಹ್ನದಿಂದ ರಾತ್ರಿಯವರೆಗೆ ಮದೀನಾ ಹೌಸಿಂಗ್ ಸೊಸೈಟಿಯ ಸದಸ್ಯರ ಈ ಕೆಲಸವನ್ನು ನೋಡಿದ ಸ್ಥಳೀಯರು ಅಭಿನಂದನೆಗಳ ಮಹಾಪೂರವನ್ನೇ ಹರಿಸಿದ್ದಾರೆ. ತಮ್ಮೆಲ್ಲ ಕೆಲಸಗಳನ್ನು ಬದಿಗೊತ್ತಿ ಆಕಳಿಗೆ ಹೆರಿಗೆಯಾಗಿ, ಅದನ್ನು ಮಾಲೀಕರಿಗೆ ಒಪ್ಪಿಸುವ ತನಕ ಸ್ಥಳದಲ್ಲಿಯೇ ಇದ್ದಿದ್ದು ಎಲ್ಲರಿಗೂ ಅಚ್ಚರಿ ಜೊತೆಗೆ ಹೆಮ್ಮೆಯನ್ನೂ ಮೂಡಿಸಿದೆ. ಹೆರಿಗೆ ಬಳಿಕ ಕರುವಿಗಾಗಿ ತಮ್ಮ ಮನೆಯಲ್ಲಿದ್ದ ಬೆಡ್ ಶೀಟ್ಗಳನ್ನು ತಂದು ಬೆಚ್ಚಗೆ ಮಲಗಿಸಿದ್ದಂತೂ ಮಾನವೀಯತೆಯನ್ನು ಎತ್ತಿ ತೋರಿಸುವಂತಿತ್ತು. ಒಟ್ಟಿನಲ್ಲಿ ಮುಸ್ಲಿಂ ಯುವಕರ ಈ ಕೆಲಸ ಎಲ್ಲರ ಮೆಚ್ಚುಗೆ ಪಡೆದಿದ್ದಂತೂ ಸತ್ಯ.
ಗೋ ಹತ್ಯೆ ನಿಷೇಧ ಕಾಯ್ದೆ ಕಠೋರ, ಅವೈಜ್ಞಾನಿಕ, ರೈತ ವಿರೋಧಿ ಎಂದು ಗುಡುಗಿದ ಸಿದ್ದರಾಮಯ್ಯ
Published On - 3:24 pm, Sun, 20 December 20