ಮೈಸೂರು: ಮನೆಗೆ ನುಗ್ಗಿ ರಿಯಲ್ ಎಸ್ಟೇಟ್ ಹಾಗೂ ಅಗರಬತ್ತಿ ವ್ಯಾಪಾರಿಯ ಹತ್ಯೆ ನಡೆಸಿದ ಪ್ರಕರಣ ಇದೀಗ ತಿರುವು ಪಡೆದುಕೊಂಡಿದ್ದು, ಹೆಚ್ಚಿನ ವಿಚಾರಣೆ ವೇಳೆ ಮಗನೇ ತಂದೆಯನ್ನು ಕೊಲೆ ಮಾಡಿರುವುದು ತಿಳಿದುಬಂದಿದೆ. ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಕೊಲೆಯಾದ ಸಂಪತ್ ಕುಮಾರ್, ಪತ್ನಿ ಗಾಯತ್ರಿ ಮತ್ತು 16 ವರ್ಷದ ಮಗನಿಗೆ ನಿತ್ಯವೂ ಕಿರುಕುಳ ನೀಡುತ್ತಿದ್ದನು. ಮನೆ ಗಬ್ಬೆದ್ದು ನಾರುತ್ತಿದ್ದರೂ ಮನೆಯನ್ನು ಸ್ವಚ್ಛಗೊಳಿಸಲೂ ಬಿಡದೆ ಟಾರ್ಚರ್ ನೀಡುತ್ತಿದ್ದ ತಂದೆಯನ್ನು ರಾಡ್ನಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವುದಾಗಿ ತನಿಖೆ ವೇಳೆ ಒಪ್ಪಿಕೊಂಡಿದ್ದಾನೆ.
ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಸಂಪತ್ ಕುಮಾರ್ ಸದಾ ಮನೆಯಲ್ಲೇ ಇರುತ್ತಿದ್ದನು. ಇಷ್ಟಕ್ಕೂ ಸುಮ್ಮನಾಗದ ಸಂಪತ್ ನಿತ್ಯವೂ ಪತ್ನಿ, ಮಗನನ್ನು ಹೊಡೆಯುವುದು, ಬಡಿಯುವುದು, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದನು. ಮನೆ ಗಬ್ಬೆದ್ದು ನಾರುತ್ತಿದ್ದರು ಸ್ವಚ್ಛಗೊಳಿಸಲು ಬಿಡುತ್ತಿರಲಿಲ್ಲ, ಶಿಕ್ಷಕಿಯಾಗಿರುವ ಪತ್ನಿಯನ್ನು ಸರಿಯಾಗಿ ಕೆಲಸಕ್ಕೆ ಹೋಗಲೂ ಬಿಡುತ್ತಿರಲಿಲ್ಲ, ಮಗನಿಗೆ ಓದಲೂ ಬಿಡುತ್ತಿರಲಿಲ್ಲ. ಇದೇ ಕಾರಣಕ್ಕೆ ರೊಚ್ಚಿಗೆದ್ದ ಮಗ, ತಾಯಿ ಕೆಲಸಕ್ಕೆ ಹೋಗಿದ್ದ ವೇಳೆ ತಂದೆಯನ್ನು ರಾಡ್ನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ. ಬಳಿಕ ದುಷ್ಕರ್ಮಿಯೊಬ್ಬ ಮನೆಗೆ ನುಗ್ಗಿ ಕೊಂದಿರುವುದಾಗಿ ಕಥೆ ಕಟ್ಟಿದ್ದನು. ಮಗನನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಈ ಎಲ್ಲಾ ಸತ್ಯ ಸಂಗತಿಗಳು ಹೊರಬಿದ್ದಿದೆ.
ವಿವಿಧ ಪ್ರಕರಣಗಳನ್ನು ಭೇದಿಸಿದ ಪೊಲೀಸರು
ಬೆಂಗಳೂರು: ನಗರದಲ್ಲಿ ವಿವಿಧ ಪ್ರಕರಣಗಳಲ್ಲಿ ತೊಡಗಿದ್ದ 20ಕ್ಕೂ ಹೆಚ್ಚು ಆರೋಪಿಗಳನ್ನು ಕೇಂದ್ರ ವಿಭಾಗದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೇಂದ್ರ ವಿಭಾಗದಲ್ಲಿ ದಾಖಲಾಗಿದ್ದ ದ್ವಿಚಕ್ರ ವಾಹನ ಕಳ್ಳತನ, ಕಾರು ಕಳ್ಳತನ, ಮನೆಗಳ್ಳತನ, ರಾಬರಿ, ಮೊಬೈಲ್ ಕಳ್ಳತನ ಸೇರಿದಂತೆ ಒಟ್ಟು 30 ಪ್ರಕರಣಗಳನ್ನು ಭೇದಿಸಿದ ಪೊಲೀಸರು, 24 ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ 1.32 ಕೋಟಿ ಮೌಲ್ಯದ ಕಾರುಗಳು ಮತ್ತು ಬೈಕ್ಗಳು ಮತ್ತು ಆಭರಣಗಳನ್ನು ವಶಕ್ಕೆ ಪಡೆದಿದ್ದಾರೆ.
ಕಾರು ಬಾಡಿಗೆಗೆ ಪಡೆದು ವಂಚನೆ
ಬೆಂಗಳೂರು: ಬಾಡಿಗೆಗೆ ಕಾರುಗಳನ್ನ ಪಡೆದು ವಂಚಿಸುತ್ತಿದ್ದ ಖತಾರ್ನಾಕ್ ಕಳ್ಳನನ್ನು ನಗರದ ಶೇಷಾದ್ರಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಹುಬ್ಬಳಿ ಮೂಲದ ಸುನೀಲ್ ಎಂಬಾತ ಟ್ರಾವೆಲ್ ಏಜೆನ್ಸಿಯಿಂದ ಕಾರನ್ನು ಬಾಡಿಗೆಗೆಂದು ಪಡೆಯುತ್ತಿದ್ದನು. ಈ ವೇಳೆ ತಾನೇ ಐಎಂಐ ಪಾವತಿಸಿಕೊಂಡು ಬಾಡಿಗೆ ನೀಡುವುದಾಗಿ ನಂಬಿಸುತ್ತಿದ್ದನು. ಕಾರು ಕೈಸೇರಿದ ನಂತರ ಕಾರಿನ ಇಎಂಐ ಪಾವತಿಸದೆ ಕಾರನ್ನು ಮಾರಾಟ ಮಾಡುತ್ತಿದ್ದನು. ಈ ಬಗ್ಗೆ ಕಾರಿನ ಮಾಲೀಕರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿಯ ಸಹಿತ 7 ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:02 pm, Tue, 9 August 22