ಸರ್ಕಾರದ ತುರ್ತು ಗಮನಕ್ಕೆ! ಆ ಘೋರ ಹಂತಕನನ್ನು ಸ್ವಾತಂತ್ರ್ಯ ದಿನದ ಹೆಸರಿನಲ್ಲಿ ಬಿಡುಗಡೆ ಮಾಡಬೇಡಿ- ಸಂತ್ರಸ್ತ ಕುಟುಂಬ ಮತ್ತು ಪತ್ನಿಯಿಂದಲೂ ಮನವಿ!

Azadi Ka Amrit Mahotsav: ಸ್ವಾತಂತ್ಯ್ರೋತ್ಸವದ ಅಮೃತೋತ್ಸವದ ಸಂದರ್ಭದಲ್ಲಿ ಜೈಲಿನಿಂದ ಘೋರ ಪಾತಕಿ ಪ್ರವೀಣ್ ಬಿಡುಗಡೆ ಮಾಡಲು ಸರ್ಕಾರದ ವತಿಯಿಂದ ಆದೇಶ ಹೊರಬಿದ್ದಿದೆ. ಆದರೆ ಪ್ರವೀಣ ಜೈಲಿನಿಂದ ಹೊರಗೆ ಬಂದರೆ ಸಮಾಜಕ್ಕೆ ಅಪಾಯವಿದೆ ಎಂಬ ಭೀತಿಯನ್ನು ಸಂತ್ರಸ್ತ ಕುಟುಂಬಸ್ಥರು ಮತ್ತು ಖುದ್ದು ಪಾತಕಿಯ ಪತ್ನಿಯೂ ವ್ಯಕ್ತಪಡಿಸಿದ್ದಾರೆ. ಮುಂದಿನ ವಾರವೇ ದೇಶಕ್ಕೆ 75ನೇ ಸ್ವಾತಂತ್ರ್ಯೋತ್ಸವ...

ಸರ್ಕಾರದ ತುರ್ತು ಗಮನಕ್ಕೆ! ಆ ಘೋರ ಹಂತಕನನ್ನು ಸ್ವಾತಂತ್ರ್ಯ ದಿನದ ಹೆಸರಿನಲ್ಲಿ ಬಿಡುಗಡೆ ಮಾಡಬೇಡಿ- ಸಂತ್ರಸ್ತ ಕುಟುಂಬ ಮತ್ತು ಪತ್ನಿಯಿಂದಲೂ ಮನವಿ!
ಈ ಘೋರ ಹಂತಕನನ್ನು ಸ್ವಾತಂತ್ರ್ಯ ದಿನದ ಹೆಸರಿನಲ್ಲಿ ಬಿಡುಗಡೆಗೆ ಮಾಡಬೇಡಿ- ಸಂತ್ರಸ್ತ ಕುಟುಂಬ ಮತ್ತು ಪತ್ನಿಯಿಂದಲೂ ಮನವಿ!
TV9kannada Web Team

| Edited By: sadhu srinath

Aug 09, 2022 | 4:04 PM

ಮಂಗಳೂರು: ಈ ಬಾರಿಯ ಅಮೃತ ಮಹೋತ್ಸವ ಸ್ವಾತಂತ್ಯ್ರೋತ್ಸವಕ್ಕೆ (Azadi Ka Amrit Mahotsav) ಘೋರ ಹಂತಕನೊಬ್ಬನನ್ನು ಸನ್ನಡತೆಯ ಆಧಾರದ ಮೇಲೆ (on grounds of good conduct) ಬಿಡುಗಡೆ ಮಾಡಲು ಸರ್ಕಾರ ತೀರ್ಮಾನಿಸಿದೆ. ಆದರೆ ಇದರ ವಿರುದ್ದ ಹತ್ಯೆಗೀಡಾದವರ ಕುಟುಂಬ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಪ್ರಸ್ತುತ ಬಳ್ಳಾರಿ ಜೈಲಿನಲ್ಲಿರುವ ವಾಮಂಜೂರು ಪ್ರವೀಣ್ ಕುಮಾರನ (Murder vamanjoor Praveen Kumar) ಬಿಡುಗಡೆಗೆ ಈ ವಿರೋಧ ವ್ಯಕ್ತವಾಗಿದೆ. ನಾಲ್ವರನ್ನು ಕೊಂದಿದ್ದ ಹಂತಕ ಪ್ರವೀಣ ಕಳೆದ 28 ವರ್ಷಗಳಿಂದ ಬಳ್ಳಾರಿ ಜೈಲಿನಲ್ಲಿದ್ದಾನೆ. ಕುತೂಹಲದ ಸಂಗತಿಯೆಂದರೆ ಹಂತಕ ಪ್ರವೀಣನನ್ನು​ ಬಿಡುಗಡೆ ಮಾಡದಂತೆ ಆತನ ಪತ್ನಿ ಸಹ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

1994ರ ಫೆಬ್ರವರಿ 23ರಂದು ಪ್ರವೀಣ, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ವಾಮಂಜೂರು ಗ್ರಾಮದಲ್ಲಿ ನಾಲ್ವರನ್ನ ಕೊಂದಿದ್ದ. ಅಪ್ಪಿ ಶೇರಿಗಾರ್ತಿ(75), ಪುತ್ರಿ ಶಕುಂತಲಾ(36), ಪುತ್ರ ಗೋವಿಂದ(30) ಮೊಮ್ಮಗಳು ದೀಪಿಕಾ(9)… ಹೀಗೆ ಒಂದೇ ಕುಟುಂಬದ ನಾಲ್ವರನ್ನು ಕೊಂದು ಪ್ರವೀಣ ಚಿನ್ನಾಭರಣ ದೋಚಿದ್ದ. ನಾಲ್ವರನ್ನು ಕೊಂದ ಆರೋಪದ ಮೇಲೆ ಜೈಲುಪಾಲಾಗಿದ್ದ ಪ್ರವೀಣನ ಬಿಡುಗಡೆಗೆ ಇದೀಗ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಮಂಗಳೂರು ಪೊಲೀಸ್ ಕಮಿಷನರ್​ ಮೂಲಕ ಸರ್ಕಾರಕ್ಕೆ ಮನವಿ:

ಈ ಸಂದರ್ಭದಲ್ಲಿ ಮಂಗಳೂರು ಪೊಲೀಸ್ ಕಮಿಷನರ್​ಗೆ ಹತ್ಯೆಯಾದವರ ಕುಟುಂಬ ಮನವಿ ಮಾಡಿಕೊಂಡಿದೆ. ಹಂತಕ ಪ್ರವೀಣನನ್ನು ಬಿಡುಗಡೆ ಮಾಡದಂತೆ ಕಮಿಷನರ್​ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಹತ್ಯೆಯಾದ ಅಪ್ಪಿ ಶೇರಿಗಾರ್ತಿ ಅವರ ಪುತ್ರ ಸೀತಾರಾಮ ಗುರುಪುರ ಮತ್ತು ಕುಟುಂಬಸ್ಥರು ಮನವಿ ಮಾಡಿದ್ದಾರೆ. ಹಂತಕ ಪ್ರವೀಣನನ್ನು​ ಬಿಡುಗಡೆ ಮಾಡದಂತೆ ಪತ್ನಿಯಿಂದಲೂ ಸರ್ಕಾರಕ್ಕೆ ಮನವಿ ಸಲ್ಲಿಕೆಯಾಗಿದೆ. ನೊಂದವರಿಂದ ಮಾಹಿತಿ ಸಂಗ್ರಹಿಸುವಂತೆ ಎಸಿಪಿ ರವೀಶ್ ನಾಯ್ಕ್​ಗೆ ಸೂಚಿಸಲಾಗಿದ್ದು, ಮಾಹಿತಿ ಸಂಗ್ರಹಿಸಿ ಸರ್ಕಾರದ ಗಮನಕ್ಕೆ ತರುವುದಾಗಿ ಕಮಿಷನರ್​ ಮಾಹಿತಿ ಹಂಚಿಕೊಂಡಿದ್ದಾರೆ.

ಏನಿವನ ವೃತ್ತಾಂತ?

ಪಾತಕಿ ಪ್ರವೀಣನಿಗೆ ಮಂಗಳೂರಿನ ನ್ಯಾಯಾಲಯವು ಗಲ್ಲು ಶಿಕ್ಷೆ ವಿಧಿಸಿತ್ತು. ಕೆಳಗಿನ ಕೋರ್ಟು ನೀಡಿದ ಈ ಶಿಕ್ಷೆಯನ್ನು ಬಳಿಕ ಹೈಕೋರ್ಟು ಮತ್ತು 2003 ರಲ್ಲಿ ಸುಪ್ರೀಂ ಕೋರ್ಟು ಕೂಡಾ ಎತ್ತಿ ಹಿಡಿದಿತ್ತು. ಮರಣ ದಂಡನೆಯ ಶಿಕ್ಷೆಯ ಬಳಿಕ ಪಾತಕಿ ರಾಷ್ಟ್ರಪತಿಗೆ ಕ್ಷಮಾಪಣೆಯ ಅರ್ಜಿಯನ್ನು ಸಲ್ಲಿಸಿದ್ದ. ಈ ಅರ್ಜಿಯನ್ನು 2013 ಎಪ್ರಿಲ್‌ 4 ರಂದು ರಾಷ್ಟ್ರಪತಿಯವರು ತಿರಸ್ಕರಿಸಿದ್ದರು. ಆದರೆ 2014 ಜನವರಿ 22 ರಂದು ಸುಪ್ರೀಂ ಕೋರ್ಟು ಆತನ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಿತ್ತು.

ಇದೀಗ ಸ್ವಾತಂತ್ಯ್ರೋತ್ಸವದ ಅಮೃತೋತ್ಸವದ ಸಂದರ್ಭದಲ್ಲಿ ಜೈಲಿನಿಂದ ಪ್ರವೀಣ್ ಬಿಡುಗಡೆ ಮಾಡಲು ಸರ್ಕಾರದ ವತಿಯಿಂದ ಆದೇಶ ಹೊರಬಿದ್ದಿದೆ. ಈ ಹಿನ್ನೆಲೆಯಲ್ಲಿ ಪಾತಕಿ ಪ್ರವೀಣನು ಜೈಲಿನಿಂದ ಹೊರಗೆ ಬಂದರೆ ಸಮಾಜಕ್ಕೆ ಅಪಾಯವಿದೆ ಎಂಬ ಭೀತಿಯನ್ನು ಸಂತ್ರಸ್ತ ಕುಟುಂಬಸ್ಥರು ಮತ್ತು ಖುದ್ದು ಪಾತಕಿಯ ಪತ್ನಿಯೂ ವ್ಯಕ್ತಪಡಿಸಿದ್ದಾರೆ. ಮುಂದಿನ ವಾರವೇ ದೇಶಕ್ಕೆ 75ನೇ ಸ್ವಾತಂತ್ರ್ಯೋತ್ಸವ. ಈ ಸಂದರ್ಭದಲ್ಲಿ ಸರ್ಕಾರ ಏನು ತೀರ್ಮಾನ ಕೈಗೊಳ್ಳುತ್ತದೋ ಎಂಬ ಆತಂಕ, ದುಗುಡದಲ್ಲಿ ಸಂತ್ರಸ್ತ ಕುಟುಂಬಸ್ಥರು ಕಾಯುತ್ತಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada