Mysore Sandal Soap: ಮೈಸೂರು ಸ್ಯಾಂಡಲ್​ಸೋಪ್ ತಯಾರಕ ಕೆಎಸ್‌ಡಿಎಲ್​ನಿಂದ 1500 ಕೋಟಿ ರೂ. ವಹಿವಾಟು: 40 ವರ್ಷಗಳ ಗರಿಷ್ಠ

|

Updated on: Jun 10, 2024 | 11:35 AM

Karnataka Soaps and Detergents Ltd: ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ಮಾರಾಟ ಕಳೆದ ಹಣಕಾಸು ವರ್ಷದಲ್ಲಿ ದಾಖಲೆ ಬರೆದಿದೆ. ಮೈಸೂರು ಸ್ಯಾಂಡಲ್ ಸೋಪ್‌ ತಯಾರಿಸುವ ಈ ಕಂಪನಿಯ ವಾರ್ಷಿಕ ವಹಿವಾಟು 40 ವರ್ಷಗಳ ಗರಿಷ್ಠ ಮಟ್ಟ ತಲುಪಿದ್ದು, 1,500 ಕೋಟಿ ರೂ. ದಾಟಿದೆ.

Mysore Sandal Soap: ಮೈಸೂರು ಸ್ಯಾಂಡಲ್​ಸೋಪ್ ತಯಾರಕ ಕೆಎಸ್‌ಡಿಎಲ್​ನಿಂದ 1500 ಕೋಟಿ ರೂ. ವಹಿವಾಟು: 40 ವರ್ಷಗಳ ಗರಿಷ್ಠ
ಮೈಸೂರು ಸ್ಯಾಂಡಲ್​ಸೋಪ್ ತಯಾರಕ ಕೆಎಸ್‌ಡಿಎಲ್​ನಿಂದ 1500 ಕೋಟಿ ರೂ. ವಹಿವಾಟು: 40 ವರ್ಷಗಳ ಗರಿಷ್ಠ
Follow us on

ಬೆಂಗಳೂರು, ಜೂನ್ 10: ರಾಜ್ಯದ ಪ್ರಸಿದ್ಧ ಮೈಸೂರು ಸ್ಯಾಂಡಲ್ ಸೋಪ್‌ನ (Mysore Sandal Soap) ತಯಾರಕ ಕಂಪನಿ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (KSDL) ಕಳೆದ 40 ವರ್ಷಗಳಲ್ಲೇ ಗರಿಷ್ಠ ಮಾರಾಟ ವಹಿವಾಟು ದಾಖಲಿಸಿದೆ. ಕಂಪನಿಯ ಮಾರಾಟ ವಹಿವಾಟು 2024 ರ ಮಾರ್ಚ್ ವೇಳೆಗೆ ವಾರ್ಷಿಕ 1,500 ಕೋಟಿ ರೂ. ದಾಟಿದೆ. ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಮಾರಾಟದಲ್ಲಿ 195 ಕೋಟಿ ರೂ.ನಷ್ಟು ಹೆಚ್ಚಳವಾಗಿದೆ. ಅಂದರೆ, ಶೇಕಡಾ 14.25 ರಷ್ಟು ಮಾರಾಟ ಬೆಳವಣಿಗೆ ದಾಖಲಿಸಿದೆ.

ಶವರ್ ಜೆಲ್‌ಗಳು, ಮೈಸೂರು ಸ್ಯಾಂಡಲ್ ವೇವ್ ಡಿಯೋ ಸೋಪ್, ಗ್ಲಿಸರಿನ್ ಆಧಾರಿತ ಪಾರದರ್ಶಕ ಸ್ನಾನದ ಬಾರ್ ಮತ್ತು ಸೂಪರ್ ಪ್ರೀಮಿಯಂ ಬಾತ್ ಸೋಪ್ ಸೇರಿದಂತೆ 21 ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಿದ್ದು, ಮಾರಾಟ ಹೆಚ್ಚಳದ ದೃಷ್ಟಿಯಿಂದ ಕಂಪನಿಗೆ ನೆರವಾಗಿದೆ. ಪರಿಣಾಮವಾಗಿ ಕಂಪನಿಯು ಉತ್ತರ ಭಾರತದಲ್ಲಿಯೂ ಮಾರುಕಟ್ಟೆಯ ವಿಸ್ತರಣೆ, ಬೆಳವಣಿಗೆ ಮಾಡಿಕೊಂಡಿದೆ.

ಇದನ್ನೂ ಓದಿ: ಮೈಸೂರು ಸ್ಯಾಂಡಲ್​ ಸೋಪ್​ ತಯಾರಿಗೂ ಸಿಗುತ್ತಿಲ್ಲ ಶ್ರೀಗಂಧದ ಎಣ್ಣೆ!: ಆಸ್ಟ್ರೇಲಿಯಾ ಮೊರೆ ಹೋದ ತಯಾರಕರು!

ಗ್ಲಿಸರಿನ್ ಆಧಾರಿತ ಉತ್ಪನ್ನಗಳಿಗೆ ಪ್ರತ್ಯೇಕ ಸೋಪ್ ಬೇಸ್ ಅನ್ನು ಸಿದ್ಧಪಡಿಸಲಾಗುತ್ತಿದೆ ಮತ್ತು ಕಂಪನಿಯು ಅದರ ನಿರ್ದಿಷ್ಟ ಮಾನದಂಡಗಳನ್ನು ಪೂರೈಸಲು ಯಂತ್ರೋಪಕರಣಗಳನ್ನು ಖರೀದಿಸಿದೆ. ಈ ಸಾಬೂನುಗಳ ಉತ್ಪಾದನೆಗೆ ಹೊಸ ತಂತ್ರಜ್ಞಾನದ ಅಗತ್ಯವಿದೆ ಎಂದು ಕೆಎಸ್‌ಡಿಎಲ್ ಅಧಿಕಾರಿಗಳು ತಿಳಿಸಿರುವುದಾಗಿ ‘ದಿ ನ್ಯೂ ಇಂಡಿಯನ್​​ ಎಕ್ಸ್​​ಪ್ರೆಸ್’ ವರದಿ ಮಾಡಿದೆ. ಬೆಂಗಳೂರು ಹೊರತುಪಡಿಸಿ ಮೈಸೂರು ಮತ್ತು ಶಿವಮೊಗ್ಗದಲ್ಲಿ ಉತ್ತಮ ಯಂತ್ರೋಪಕರಣಗಳು ಮತ್ತು ಬಳಕೆಯ ಸ್ಥಳದೊಂದಿಗೆ ಹೊಸ ಘಟಕಗಳನ್ನು ಸ್ಥಾಪಿಸಲು ಯೋಜಿಸಲಾಗಿದೆ. ಕೆಎಸ್‌ಡಿಎಲ್‌ನ ಮಾರುಕಟ್ಟೆ ಪಾಲು ಕೇವಲ ಶೇ 2.5 ರಷ್ಟಿರುವ ಉತ್ತರ ಭಾರತದ ರಾಜ್ಯಗಳ ಮೇಲೆ ಗಮನ ಕೇಂದ್ರೀಕರಿಸಲು ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂಬಿ ಪಾಟೀಲ್ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಿದ್ದಾರೆ. ಕೆಎಸ್‌ಡಿಎಲ್‌ನ ಹೆಚ್ಚಿನ ಮಾರಾಟವು ಪ್ರಸ್ತುತ ದಕ್ಷಿಣದ ರಾಜ್ಯಗಳಿಂದ ಬಂದಿದೆ, ಇಲ್ಲಿ ಅದು ಶೇ 81 ರಷ್ಟಿದೆ ಎಂದು ಕೆಎಸ್‌ಡಿಎಲ್ ಎಂಡಿ ಡಾ. ಪ್ರಶಾಂತ್ ಪಿಕೆಎಂ ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ