ಇಂದೋರ್ ದೇಶದ ನಂಬರ್ 1 ಸ್ವಚ್ಛ ನಗರ, ಮೈಸೂರಿಗೆ ಎಷ್ಟನೇ ಸ್ಥಾನ ಗೊತ್ತಾ?

ಕೇಂದ್ರ ಸರ್ಕಾರ ನಡೆಸಿದ ಸ್ವಚ್ಛಾ ಸರ್ವೇಕ್ಷಣಾ 2024-25ನೇ ಸಾಲಿನ ಸಮೀಕ್ಷೆಯಲ್ಲಿ ಇಂದೋರ್ ದೇಶದ ನಂಬರ್ ಒನ್ ಕ್ಲೀನ್ ಸಿಟಿ ಅವಾರ್ಡ್ (Super Swachh League Cities) ಪಡೆದಿದೆ. ಸತತ ಎಂಟನೇ ವರ್ಷವೂ ಇಂದೋರ್ ದೇಶದ ನಂಬರ್ ಒನ್ ಕ್ಲೀನ್ ಸಿಟಿಯಾಗಿ ಪ್ರಶಸ್ತಿ ಪಡೆದಿರುವುದು ವಿಶೇಷ. ಇತ್ತ ಬೆಂಗಳೂರು ಸೇರಿದಂತೆ ರಾಜ್ಯದ ಬೇರೆ ಸ್ಮಾರ್ಟ್ ಸಿಟಿಗಳೂ ಕೂಡ ಸ್ವಚ್ಛತೆಯಲ್ಲಿ ಹಿಂದೆ ಬಿದ್ದಿವೆ.

ಇಂದೋರ್ ದೇಶದ ನಂಬರ್ 1 ಸ್ವಚ್ಛ ನಗರ, ಮೈಸೂರಿಗೆ ಎಷ್ಟನೇ ಸ್ಥಾನ ಗೊತ್ತಾ?
Mysuru

Updated on: Jul 17, 2025 | 9:01 PM

ಬೆಂಗಳೂರು, (ಜುಲೈ 17): ದೇಶದಲ್ಲಿ ಮತ್ತೊಮ್ಮೆ ಸ್ವಚ್ಛ ನಗರವಾಗಿ (clean cities) ಇಂದೋರ್ ಸಿಟಿ (Indore city) ಹೊರಹೊಮ್ಮಿದೆ. ಈ ಹಿಂದೆ ಒಂದು ವರ್ಷ ಮಾತ್ರ ಕರ್ನಾಟಕದ ಮೈಸೂರು ನಗರವು ಸ್ವಚ್ಛತೆಯಲ್ಲಿ ದೇಶದಲ್ಲೇ ನಂಬರ್ ಒನ್ ಸ್ಥಾನ ಪಡೆದಿತ್ತು. ಇದೀಗ 2024-25ನೇ ಸಾಲಿನ ಮೈಸೂರು (Mysuru) ನಗರಕ್ಕೆ ನಂಬರ್ ಒನ್ ಕ್ಲೀನ್ ಸಿಟಿ ಪಟ್ಟ ಪಡೆಯಲು ಸಾಧ್ಯವಾಗಿಲ್ಲ. ಬದಲಾಗಿ  ಮೈಸೂರು ಮೂರನೇ ಸ್ಥಾನ ಪಡೆದಿದೆ. ಇಂದು (ಜುಲೈ 17) ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ  ಕಾರ್ಯಕ್ರಮದಲ್ಲಿ  ಮೈಸೂರು ಪರವಾಗಿ ಕರ್ನಾಟಕ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ದೀಪಾ ಚೋಳನ್ ಮತ್ತು ಮೈಸೂರು ಮಹಾನಗರ ಪಾಲಿಕೆ (ಎಂಸಿಸಿ) ಆಯುಕ್ತ ಶೇಖ್ ತನ್ವೀರ್ ಆಸಿಫ್ ಅವರು ರಾಷ್ಟ್ರಪತಿಗಳಿಂದ ಪ್ರಶಸ್ತಿ ಮತ್ತು ಸನ್ಮಾನವನ್ನು ಸ್ವೀಕರಿಸಿದರು.

ಇಂದೋರ್ ಬಳಿಕ ಸೂರತ್ ಮತ್ತು ನವೀ ಮುಂಬೈ ಎರಡು ಮತ್ತು ಮೂರನೇ ಸ್ಥಾನ ಪಡೆದಿವೆ. ಇನ್ನೂ 3- 10 ಲಕ್ಷ ಜನಸಂಖ್ಯೆಯ ನಗರಗಳ ಕೆಟಗರಿಯಲ್ಲಿ ನೋಯ್ಡಾ ದೇಶದ ನಂಬರ್ ಒನ್ ಕ್ಲೀನ್ ಸಿಟಿಯಾಗಿ ಆಯ್ಕೆಯಾಗಿದೆ. ಈ ಕೆಟಗರಿಯಲ್ಲಿ ಚಂಢೀಗಡ ಎರಡನೇ ಸ್ಥಾನ ಪಡೆದರೆ, ಮೈಸೂರು ಮೂರನೇ ಸ್ಥಾನ ಪಡೆದಿದೆ.

ಇದನ್ನೂ ಓದಿ: Viral : ಬೆಂಗಳೂರು ಚೆನ್ನಾಗಿಲ್ಲ, ಇದು ಸಂಪೂರ್ಣ ಕೊಳಕು ನಗರ ಎಂದು ಟೀಕಿಸಿದ ವ್ಯಕ್ತಿ

ಕೇಂದ್ರದ ವಸತಿ ಮತ್ತು ನಗರಾಭಿವೃದ್ದಿ ಇಲಾಖೆಯು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿಟಿ ಮತ್ತು ನಗರ ಸ್ಢಳೀಯ ಸಂಸ್ಥೆಗಳಿಗೆ ನಗರಗಳ ಸ್ವಚ್ಛತೆ ಕಾಪಾಡಿದ್ದಕ್ಕಾಗಿ ಸ್ವಚ್ಛಾ ಭಾರತ್ ಮಿಷನ್ ಆರ್ಬನ್ ಯೋಜನೆಯಡಿ ಪ್ರಶಸ್ತಿ ನೀಡಲಾಗುತ್ತಿದೆ. ನಗರಗಳು ಉತ್ತಮ ಸ್ವಚ್ಛತೆ ಕಾಪಾಡಿಕೊಳ್ಳಬೇಕೆಂಬ ಉದ್ದೇಶದಿಂದ ಸ್ವಚ್ಛತೆಯ ರ್ಯಾಂಕ್ ಅನ್ನು ಕೇಂದ್ರ ನಗರಾಭಿವೃದ್ದಿ ಇಲಾಖೆಯು ಪ್ರತಿ ವರ್ಷ ನೀಡುತ್ತಿದೆ.

ಮೈಸೂರಿನಲ್ಲಿ ಸಂಭ್ರಮಾಚರಣೆ

ಮೈಸೂರಿಗೆ ದೇಶದ ಸ್ವಚ್ಛ ನಗರಗಳ ಪಟ್ಟಿಯಲ್ಲಿ 3ನೇ ಸ್ಥಾನ ಪಡೆದ ಹಿನ್ನೆಲೆಯಲ್ಲಿ ನಗರದ ಪೌರ ಕಾರ್ಮಿಕರು ಸಿಹಿ ಹಂಚಿ ಸಂಭ್ರಮಿಸಿದರು. ಪ್ರಶಸ್ತಿ ಘೋಷಣೆ ಬೆನ್ನಲ್ಲೇ ಪಾಲಿಕೆ ಆವರಣದಲ್ಲಿ ಜಮಾಯಿಸಿದ ಪೌರ ಕಾರ್ಮಿಕರು ಒಬ್ಬರಿಗೊಬ್ಬರು ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.

ಇನ್ನು ಈ ಬಗ್ಗೆ ಮಾತನಾಡಿದ ಪೌರ ಕಾರ್ಮಿಕರು, ನಿದ್ರೆ, ಊಟ ಇಲ್ಲದೆ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದೆವು. ನಮ್ಮ ಪ್ರಯತ್ನಕ್ಕೆ 3ನೇ ಸ್ಥಾನ ದೊರೆತಿರುವುದು ಸಂತಸ ತಂದಿದೆ.ಮೊದಲನೇ ಸ್ಥಾನ ಪಡೆಯಬೇಕು ಎನ್ನುವ ಆಸೆ ಇತ್ತು. ಆದರೆ ಮೂರನೇ ಸ್ಥಾನ ದೊರೆತಿದೆ. ನಮ್ಮ ಗುರಿ ಮೈಸೂರನ್ನು ಮೊದಲ ಸ್ಥಾನದಲ್ಲಿ ನೋಡುವ ಕನಸಿದೆ. ಮುಂದೆ ಅಧಿಕಾರಿಗಳ ಸಹಕಾರದಿಂದ ಮೊದಲ ಸ್ಥಾನಕ್ಕೆ ಶ್ರಮಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸರ್ಕಾರ ಮತ್ತಷ್ಟು ಪೌರ ಕಾರ್ಮಿಕರನ್ನು ನೇಮಕ ಮಾಡಬೇಕಿದೆ. ಸೌಲಭ್ಯಗಳನ್ನು ಒದಗಿಸಿದರೆ ಮುಂದೆ ಹುಮ್ಮಸ್ಸಿನಿಂದ ಕೆಲಸ ನಿರ್ವಹಿಸುತ್ತೇವೆ. ನಮ್ಮ ಬೇಡಿಕೆಗಳನ್ನು ಕಡೆಯುವಂತೆ ಅಧಿಕಾರಿಗಳು ಗಮನವಹಿಸಿದರೆ ಮತ್ತಷ್ಟು ಬಲ ಬರುತ್ತದೆ ಎಂದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ