ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ಮನೆ ಮಾಡಿರುವ ಎರಡನೇ ದಿನದ ಸುತ್ತೂರು ಜಾತ್ರಾ ಸಂಭ್ರಮ. ಕಿಕ್ಕಿರಿದು ಸೇರಿರುವ ಜನ ಸಾಗರ. ಸಾವಿರಾರು ಜನರ ನಡುವೆ ಹೊಸ ಜೀವನಕ್ಕೆ ಕಾಲಿಟ್ಟ ನವ ಜೋಡಿಗಳು. ನವ ವಧು ವರರಿಗೆ ಆಶೀರ್ವದಿಸುತ್ತಿರೋ ಸ್ವಾಮೀಜಿಗಳು. ಹರಿದು ಬಂದಿರೋ ಜನಸ್ತೋಮ.
2ನೇ ದಿನಕ್ಕೆ ಕಾಲಿಟ್ಟ ಸುತ್ತೂರು ಜಾತ್ರಾ ಮಹೋತ್ಸವದಲ್ಲಿ 178 ಜೋಡಿಗಳು ಹೊಸಬಾಳಿಗೆ ಕಾಲಿಟ್ಟರು. ವೇದಮಂತ್ರಗಳ ನಡುವೆ ನವಜೋಡಿಗಳು ಹಾರ ಬದಲಾಯಿಸಿಕೊಂಡ್ರು. ಮಂಗಳ ಸೂತ್ರವನ್ನ ವರ ವಧುವಿಗೆ ಕಟ್ಟುತ್ತಿದ್ದಂತೆಯೇ ಅಕ್ಷತೆ ಕಾಳಿನ ಮೂಲಕ ಎಲ್ಲರೂ ಆಶೀರ್ವದಿಸಿದರು. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಈ ಸಾಮೂಹಿಕ ಮದುವೆಗೆ ಸಾಕ್ಷಿಯಾದ್ರು.
ಇನ್ನು ಪ್ರತಿದಿನ ಲಕ್ಷಾಂತರ ಮಂದಿ ಆಗಮಿಸುತ್ತಿದ್ದು, ಬರುವಂತ ಭಕ್ತಾದಿಗಳಿಗಾಗಿ ಮಹಾಪ್ರಸಾದ ವಿತರಣೆಯಾಗ್ತಿದೆ. ಬೆಳಗ್ಗೆ ಸಿಹಿ ಪೊಂಗಲ್, ಉಪ್ಪಿಟ್ಟು. ಮಧ್ಯಾಹ್ನ ತರಕಾರಿಹುಳಿ, ಪಾಯಸ, ಬೂಂದಿ, ಅನ್ನ ಸಂಬಾರ್, ಮಜ್ಜಿಗೆ, ಉಪ್ಪಿನಕಾಯಿಯನ್ನ ಪ್ರಸಾದದ ರೂಪದಲ್ಲಿ ನೀಡಲಾಗ್ತಿದೆ. ಪ್ರತಿದಿನ ಪ್ರಸಾದಕ್ಕಾಗಿ 6 ರಿಂದ 7 ಸಾವಿರ ಲೀಟರ್ ಹಾಲು, 25 ಸಾವಿರ ಲೀಟರ್ ಮೊಸರು, 1500 ಕ್ವಿಂಟಾಲ್ ಅಕ್ಕಿ ಜತೆಗೆ ಗಂಗಾವತಿಯಿಂದ 1000 ಕ್ವಿಂಟಾಲ್ ಸೋನಾ ಮಸೂರಿ ಅಕ್ಕಿ. ಸಾಂಬಾರಿಗಾಗಿ ಪಾಂಡವಪುರ, ಗುಂಡ್ಲುಪೇಟೆ ಭಾಗಗಳಿಂದ ಭಕ್ತರು ತಂದು ಕೊಡುವ ತರಕಾರಿಯ ಜತೆಗೆ ಮೈಸೂರಿನ ಎಪಿಎಂಸಿಯಿಂದ ನಿತ್ಯ 2ಲೋಡ್ ತರಕಾರಿ ತರಿಸಲಾಗುತ್ತಿದೆ.
ಒಟ್ಟಾರೆ ಮೈಸೂರಿನ ಪ್ರತಿಷ್ಠಿತ ಸುತ್ತೂರು ಜಾತ್ರೆ ಸಂಭ್ರಮ ಕಳೆಗಟ್ಟಿದ್ದು ಜಾತ್ರೆಯಲ್ಲಿ ಧಾರ್ಮಿಕ ಕಾರ್ಯಕ್ರಮದ ಜೊತೆ ಸಾಮಾಜಿಕ ಕಾರ್ಯಕ್ರಮಗಳು ನೆರವೇರುತ್ತಿವೆ. ಗಣ್ಯಾತಿ ಗಣ್ಯರು ಜಾತ್ರೆಗೆ ಆಗಮಿಸುತ್ತಿದ್ದು, ನಿನ್ನೆ 178 ಜೋಡಿಗಳು ಹೊಸ ಬದುಕಿಗೆ ಕಾಲಿಟ್ಟಿದ್ದು ಎಲ್ಲದಕ್ಕಿಂತ ವಿಶೇಷವಾಗಿತ್ತು. ಇನ್ನೂ ನಾಲ್ಕು ದಿನ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
Published On - 1:39 pm, Thu, 23 January 20