ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ 2023ಕ್ಕೆ (Mysore Dasara 2023) ಒಂದೇ ತಿಂಗಳು ಬಾಕಿ ಇದೆ. ಈಗಾಗಲೆ ಅರಮನೆ ನಗರಿಯಲ್ಲಿ ಸಿದ್ದತೆ ಆರಂಭವಾಗಿದೆ. ದಸರಾದ (Dasara) ಕೇಂದ್ರಬಿಂದುವಾದ ಗಜಪಡೆ (Gajapade) ಮೈಸೂರಿಗೆ ಆಗಮಿಸಿದ್ದು, ಭರ್ಜರಿ ಸ್ವಾಗತ ದೊರೆತಿದೆ. ಇಂದಿನಿಂದ ತಾಲೀಮು ಆರಂಭವಾಗಿದೆ. ಈ ಬಾರಿಯೂ ಅಂಬಾರಿಯನ್ನು ಅಭಿಮನ್ಯು ಹೊರಲಿದ್ದಾನೆ. ಈ ಜಂಬೂ ಸವಾರಿಯಲ್ಲಿ ಕ್ಯಾಪ್ಟನ್ ಅಭಿಮನ್ಯು ಸೇರಿದಂತೆ 14 ಆನೆಗಳು ಭಾಗಿಯಾಗಲಿವೆ. ಒಟ್ಟು 10 ಗಂಡು ಆನೆ 04 ಹೆಣ್ಣು ಆನೆಗಳು ಜಂಬೂ ಸವಾರಿಯಲ್ಲಿ ಭಾಗವಹಿಸಲಿವೆ. ಈ ಆನೆಗಳಿಗೆ ಅರಣ್ಯ ಇಲಾಖೆ ವಿಮೆ ಮಾಡಿಸಿದೆ.
ಹೌದು ಗಂಡು ಆನೆಗಳಿಗೆ ತಲಾ 5 ಲಕ್ಷ ರೂ. ವಿಮೆ ಮತ್ತು ಹೆಣ್ಣು ಆನೆಗಳಿಗೆ ತಲಾ 4.5 ಲಕ್ಷ ರೂ. ವಿಮೆ ಮಾಡಿಸಲಾಗಿದೆ. ಇನ್ನು ಮಾವುತ ಕಾವಾಡಿ ಉಸ್ತುವಾರಿ ಸಿಬ್ಬಂದಿಗೆ ತಲಾ 2 ಲಕ್ಷ ರೂ., ಜೀವಹಾನಿಗೆ 50 ಲಕ್ಷ ವಿಮೆ ನೀಡಲಾಗುತ್ತದೆ. ಆನೆಗಳು ಮೈಸೂರು ಅರಮನೆಯಿಂದ ತಮ್ಮ ತಮ್ಮ ಶಿಬಿರಗಳಿಗೆ ತೆರಳುವವರೆಗೂ ಅಂದರೆ ಈ ವಿಮೆ ಸೆಪ್ಟೆಂಬರ್ 1 ರಿಂದ ಅಕ್ಟೋಬರ್ ಅಂತ್ಯದವರೆಗೂ ಚಾಲ್ತಿಯಲ್ಲಿರುತ್ತದೆ. ಒಟ್ಟು 10 ಗಂಡು ಆನೆ 04 ಹೆಣ್ಣು ಆನೆಗಳಿದ್ದು, ಮಾವುತ ಕಾವಾಡಿ ಸೇರಿ 42 ಸಿಬ್ಬಂದಿಗೆ ಒಟ್ಟು 2.02 ಕೋಟಿ ಮೊತ್ತದ ವಿಮೆ ಮಾಡಿಸಲಾಗಿದೆ.
ಇದನ್ನೂ ಓದಿ: ಮೈಸೂರು ದಸರಾ 2023: ಅರಮನೆಗೆ ಎಂಟ್ರಿ ಕೊಟ್ಟ ಗಜಪಡೆಗೆ ಅದ್ಧೂರಿ ಸ್ವಾಗತ, ಮೆರವಣಿಗೆ; ಫೋಟೋಗಳಲ್ಲಿ ನೋಡಿ
ಇಂದಿನಿಂದ ಗಜಪಡೆಗಳಿಗೆ ತಾಲೀಮು ಆರಂಭವಾಗಿದ್ದು, ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ದಸರಾ ಜಂಬೂಸವಾರಿ ಸಾಗುವ ಮಾರ್ಗದಲ್ಲಿ ಗಜಪಡೆ ಹೆಜ್ಜೆ ಹಾಕುತ್ತಿವೆ. ಮೈಸೂರು ಬಲರಾಮ ದ್ವಾರದಿಂದ ತಾಲೀಮು ಆರಂಭವಾಗಿದ್ದಯ, ಕೋಟೆ ಆಂಜನೇಯ ದೇಗುಲ ಅರಮನೆ ವೃತ್ತ, ನಗರ ಬಸ್ ನಿಲ್ದಾಣ ಕೆ ಆರ್ ವೃತ್ತದ ಮೂಲಕ ಆನೆಗಳು ಸಾಗಿವೆ. ಅಭಿಮನ್ಯು ನೇತೃತ್ವದಲ್ಲಿ ಗಜಪಡೆಗಳಾದ ಕಂಜನ್, ಮಹೇಂದ್ರ, ವಿಜಯ, ವರಲಕ್ಷ್ಮಿ, ಧನಂಜಯ, ಗೋಪಿ, ಭೀಮ ತಾಲೀಮಿನಲ್ಲಿ ಭಾಗಿಯಾಗಿವೆ.
ಅರ್ಜುನ ಆನೆ ಈ ಬಾರಿಯ ದಸರಾ ಮಹೋತ್ಸವದ ಹಿರಿಯ ವಯಸ್ಸಿನ ಆನೆಯಾಗಿದೆ. ರೋಹಿತ್ ಅತ್ಯಂತ್ಯ ಕಿರಿಯ ವಯಸ್ಸಿನ ಆನೆ ಹಾಗೂ ಮೊದಲ ಬಾರಿಗೆ ದಸರಾದಲ್ಲಿ ಭಾಗಿಯಾಗುತ್ತಿದ್ದಾನೆ. ಕಂಜನ್, ಲಕ್ಷ್ಮಿ, ಹಿರಣ್ಯ ಆನೆಗಳಿಗೂ ಇದು ಮೊದಲ ದಸರಾ ಮಹೋತ್ಸವವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:35 am, Fri, 8 September 23