ಮೈಸೂರು: ನಗರದಲ್ಲಿ ಗ್ಯಾಂಗ್‌ರೇಪ್, ಡಕಾಯಿತಿ ಶೂಟ್‌ಔಟ್ ಪ್ರಕರಣಕ್ಕೆ ಸಂಬಂಧಿಸಿ ಗೃಹ ಸಚಿವ ಆರಗ ಜ್ಞಾನೇಂದ್ರ ನಾಳೆ (ಆಗಸ್ಟ್ 25) ರಾತ್ರಿ ಮೈಸೂರಿಗೆ ಭೇಟಿ ನೀಡಲಿದ್ದಾರೆ. ಶುಕ್ರವಾರ ಮೈಸೂರು ಪೊಲೀಸ್ ಅಧಿಕಾರಿಗಳ ಜೊತೆಗೆ ಸಭೆ ನಡೆಸಿ ಪ್ರಕರಣಗಳ ಬಗ್ಗೆ ಮಾಹಿತಿ ಸಂಗ್ರಹಿಸಲಿದ್ದಾರೆ. ಮೂರು ದಿನಗಳ ಹಿಂದೆ ದರೋಡೆ ಶೂಟ್‌ಔಟ್ ನಡೆದಿತ್ತು. ನಿನ್ನೆ ಗ್ಯಾಂಗ್ ರೇಪ್ ನಡೆದಿತ್ತು. ಈ ಸಂಬಂಧ, ಶುಕ್ರವಾರ ಮೈಸೂರು ಪೊಲೀಸ್ ಅಧಿಕಾರಿಗಳ ಸಭೆ ನಡೆಸಲಿದ್ದಾರೆ.
ಪ್ರಕರಣ ಸಂಬಂಧ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಗ್ಯಾಂಗ್‌ರೇಪ್ ಬಗ್ಗೆ ಎಫ್ಐಆರ್ ದಾಖಲಾಗಿದೆ. ಬೆಂಗಳೂರಿನಿಂದ ಉನ್ನತ ಅಧಿಕಾರಿಗಳನ್ನು ಕಳುಹಿಸಿದ್ದೇವೆ. ಉನ್ನತ ಅಧಿಕಾರಿಗಳ ತಂಡವನ್ನು ಮೈಸೂರಿಗೆ ಕಳಿಸಿದ್ದೇವೆ. ನಾಳೆ ನಾನೇ ಮೈಸೂರಿಗೆ ಭೇಟಿ ನೀಡುತ್ತೇನೆ. ಪ್ರಕರಣ ಸಂಬಂಧ ಇದುವರೆಗೂ ಯಾರನ್ನೂ ಬಂಧಿಸಿಲ್ಲ. ಈ ಪ್ರಕರಣವನ್ನ ಬಹಳ ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಬೆಂಗಳೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.
ಮೈಸೂರಿನಲ್ಲಿ ನಡೆದ ವಿದ್ಯಾರ್ಥಿನಿ ಮೇಲೆ ಗ್ಯಾಂಗ್‌ರೇಪ್ ಹಾಗೂ ವ್ಯಕ್ತಿಯ ಮೇಲೆ ಗುಂಡಿನ ದಾಳಿ ಪ್ರಕರಣಕ್ಕೆ ಮಂಡ್ಯದಲ್ಲಿ ಬಿಜೆಪಿ ನಾಯಕ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿಕೆ ನೀಡಿದ್ದಾರೆ. ಇಷ್ಟಕ್ಕೇ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂದು ಹೇಳಲಾಗಲ್ಲ. ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಇಂತಹ ಪ್ರಕರಣಗಳಿಂದ ಸಾಂಸ್ಕೃತಿಕ ನಗರಿಗೆ ಕಪ್ಪು ಚುಕ್ಕೆ. ತಪ್ಪಿತಸ್ಥರು ಯಾರೇ ಇದ್ದರೂ ಅವರ ವಿರುದ್ಧ ಕ್ರಮ ಆಗಬೇಕು ಎಂದು ಹೇಳಿದ್ದಾರೆ.
ಎಸ್.ಟಿ ಸೋಮಶೇಖರ್ ಹಾಗೂ ಪೊಲೀಸ್ ಆಯುಕ್ತ ಪ್ರತಿಕ್ರಿಯೆ
ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್‌ರೇಪ್ ಪ್ರಕರಣಕ್ಕೆ ಸಚಿವ ಎಸ್.ಟಿ.ಸೋಮಶೇಖರ್ ಪ್ರತಿಕ್ರಿಯೆ ನೀಡಿದ್ದಾರೆ. ಸಂತ್ರಸ್ತೆ ಜತೆಯಲ್ಲಿದ್ದ ಯುವಕ ಮಾಹಿತಿ ನೀಡಿದ್ದಾನೆ. ಯುವಕನ ಮಾಹಿತಿ ಮೇರೆಗೆ ಪೊಲೀಸರಿಂದ ತನಿಖೆ ನಡೆಸಲಾಗುತ್ತಿದೆ. ಬೆಂಗಳೂರಿನಿಂದ ಎಡಿಜಿಪಿ ಪ್ರತಾಪ್ ರೆಡ್ಡಿ ಆಗಮಿಸಿದ್ದಾರೆ. ಪೊಲೀಸ್ ಅಧಿಕಾರಿಗಳ ಜತೆ ಚರ್ಚೆ ನಡೆಸಿ ತನಿಖೆ ಮಾಡಲಾಗುತ್ತದೆ. ಸಂತ್ರಸ್ತ ಯುವತಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸೂಕ್ಷ್ಮ ವಿಷಯ ಆಗಿರುವುದರಿಂದ ಹೆಚ್ಚಿನ ಮಾಹಿತಿ ನೀಡಲ್ಲ. ಆದಷ್ಟು ಶೀಘ್ರವೇ ಆರೋಪಿಗಳ ಪತ್ತೆ ಹಚ್ಚಿ ಕ್ರಮಕೈಗೊಳ್ತೇವೆ. ಕಾನೂನು ಸುವ್ಯವಸ್ಥೆ ಬಗ್ಗೆ ಪೊಲೀಸ್ ಆಯುಕ್ತರ ಜತೆ ಸಭೆ ನಡೆಸಿದ್ದೇವೆ ಎಂದು ಹೇಳಿದ್ದಾರೆ.
ಸಂತ್ರಸ್ತೆ ಜತೆಯಲ್ಲಿದ್ದ ಯುವಕ ದೂರು ನೀಡಿದ್ದಾರೆ. ಯುವಕನ ದೂರು ಆಧರಿಸಿ ಎಫ್ಐಆರ್ ದಾಖಲಾಗಿದೆ. ಆಲನಹಳ್ಳಿ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಆರೋಪಿಗಳ ಪತ್ತೆಗೆ ತನಿಖಾ ತಂಡಗಳನ್ನು ರಚಿಸಲಾಗಿದೆ ಎಂದು ಮೈಸೂರಿನಲ್ಲಿ ಸಚಿವರ ಜೊತೆಗಿನ ಸಭೆ ಬಳಿಕ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಹೇಳಿಕೆ ನೀಡಿದ್ದಾರೆ.
ಪ್ರಕರಣದ ಬಗ್ಗೆ ಇನ್ನಷ್ಟು ಮಾಹಿತಿ ಬಯಲು
ವಿದ್ಯಾರ್ಥಿನಿ ಸ್ನೇಹಿತನ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿದ್ದರು. ದುಷ್ಕರ್ಮಿಗಳು ಬಿಟ್ಟುಹೋದ ನಂತರ ಸಂತ್ರಸ್ತ ವಿದ್ಯಾರ್ಥಿನಿ, ಯುವಕ ಖಾಸಗಿ ಆಸ್ಪತ್ರೆಗೆ ತೆರಳಿದ್ದರು. ಅಪರಿಚಿತರು ಹಲ್ಲೆ ಮಾಡಿದ್ದಾರೆಂದು ಮಾಹಿತಿ ನೀಡಿ ಚಿಕಿತ್ಸೆ ಪಡೆದಿದ್ದರು ಎಂದು ಹಲ್ಲೆ ಬಗ್ಗೆ ಆಸ್ಪತ್ರೆ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಸ್ಪತ್ರೆಗೆ ಆಗಮಿಸಿ ಪೊಲೀಸ್ ಸಿಬ್ಬಂದಿ ಹೇಳಿಕೆ ಪಡೆದಿದ್ದಾರೆ.
ಯುವಕನಿಂದ ಮಾಹಿತಿ ಕಲೆಹಾಕುತ್ತಿದ್ದಾಗ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರದ ಬಗ್ಗೆ ಮಾಹಿತಿ ಬೆಳಕಿಗೆ ಬಂದಿದೆ. ಆಲನಹಳ್ಳಿ ಪೊಲೀಸರಿಗೆ ಸಂತ್ರಸ್ತೆ ಸ್ನೇಹಿತ ವಿಚಾರ ತಿಳಿಸಿದ್ದ. ನಿರ್ಜನ ಪ್ರದೇಶಕ್ಕೆ ತೆರಳಿದ್ದ ವೇಳೆ ಹಲ್ಲೆ ನಡೆದ ಬಗ್ಗೆ ಮಾಹಿತಿ ನೀಡಿದ್ದಾನೆ. ಅಲ್ಲೇ ಮದ್ಯಪಾನ ಮಾಡುತ್ತಿದ್ದವರಿಂದ ಅತ್ಯಾಚಾರ ನಡೆದಿದೆ ಎಂದು ಪೊಲೀಸರ ವಿಚಾರಣೆ ವೇಳೆ ಸಂತ್ರಸ್ತ ವಿದ್ಯಾರ್ಥಿನಿ ಮಾಹಿತಿ ನೀಡಿದ್ದಾಳೆ. ಸಂತ್ರಸ್ತೆ ಹಾಗೂ ಯುವಕನ ಹೇಳಿಕೆ ಆಧರಿಸಿ ಪೊಲೀಸರಿಂದ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ: ಮೈಸೂರು: ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ; ಎಫ್ಐಆರ್ ದಾಖಲಿಸಿಕೊಂಡ ಪೊಲೀಸರು
Mysuru Mayor election; ಮೊದಲ ಬಾರಿಗೆ ಮೈಸೂರು ಮೇಯರ್ ಪಟ್ಟಕ್ಕೇರಿದ ಬಿಜೆಪಿ: ಮೇಯರ್ ಆಗಿ ಸುನಂದಾ ಪಾಲನೇತ್ರ ಆಯ್ಕೆ
Published On - 5:49 pm, Wed, 25 August 21