ಮೈಸೂರು: ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಮಾರ್ಚ್ 2 ಅಥವಾ 3ನೇ ವಾರದಲ್ಲಿ ಹೈವೇ ಲೋಕಾರ್ಪಣೆ ಆಗುತ್ತೆ. ಹೈವೇ ಲೋಕಾರ್ಪಣೆ ವೇಳೆ ಕುಶಾಲನಗರ-ಮೈಸೂರು ಹೆದ್ದಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗುತ್ತದೆ ಎಂದು ಬಿಜೆಪಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ಸುಮಾರು 3,500 ಕೋಟಿ ವೆಚ್ಚದಲ್ಲಿ 115 ಕಿ.ಮೀ. ಹೈವೇ ನಿರ್ಮಾಣ ಮಾಡಲಾಗಿದೆ. ಶಂಕುಸ್ಥಾಪನೆಯಾದ 24 ತಿಂಗಳಲ್ಲೇ ರಸ್ತೆ ಕಾಮಗಾರಿ ಪೂರ್ಣಗೊಳ್ಳುತ್ತಿದೆ ಎಂದು ತಿಳಿಸಿದರು.
ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಬೆಂಗಳೂರು – ಮೈಸೂರು ಹೈವೆ ಲೋಕಾರ್ಪಣೆ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ಕುಶಾಲನಗರ – ಮೈಸೂರು ನಡುವಿನ ಹೆದ್ದಾರಿಗೆ ಶಂಕು ಸ್ಥಾಪನೆ ಮಾಡಲಿದ್ದಾರೆ ಎಂದರು.
ಮೈಸೂರು-ಬೆಂಗಳೂರು ಹೈವೇ ಟೋಲ್ ದರ ನಿಗದಿ ವಿಚಾರವಾಗಿ ಮಾತನಾಡಿದ ಅವರು ಮೈಸೂರು-ಬೆಂಗಳೂರು ಹೈವೇ ಎರಡೂ ಕಡೆ ಸೇರಿ ಟೋಲ್ ದರ 250 ರೂಪಾಯಿ ಆಗಬಹುದು. ಫ್ಲೈಓವರ್ಗಳು ಬಂದಾಗ ಟೋಲ್ ದರ ಕೊಂಚ ಹೆಚ್ಚಾಗುತ್ತದೆ. ಫ್ಲೈ ಓವರ್ಗಳು ಇರುವ ಕಾರಣ 250 ರೂ. ಟೋಲ್ ನಿಗದಿ ಆಗಬಹುದು ಎಂದು ಹೇಳಿದರು.
ಬೆಂಗಳೂರು – ಮೈಸೂರು ಹೈವೆಗೆ ಹೆಸರು ಇಡುವ ವಿಚಾರವಾಗಿ ಮಾತನಾಡಿದ ಅವರು ರಾಷ್ಟ್ರೀಯ ಹೆದ್ದಾರಿಗೆ ವ್ಯಕ್ತಿಗಳ ಹೆಸರಿಡುವ ಪದ್ಧತಿ ಇಲ್ಲ. ಕರ್ನಾಟಕದಲ್ಲಿ ಜಿಲ್ಲೆಗಳಿಗೂ ಹೆಸರು ಇಡುವ ಪದ್ಧತಿ ಇಲ್ಲ. ವ್ಯಕ್ತಿಗಳ ಹೆಸರು ಇಡಿ ಎಂದು ಸಲಹೆ ಕೊಡುವವರು ಇದನ್ನು ತಿಳಿದು ಮಾತನಾಡಲಿ. ಎಲ್ಲ ಜಿಲ್ಲೆಗಳ ಜನರು ಭಕ್ತಿಯಿಂದ ನೋಡುವುದು ಕಾವೇರಿ ತಾಯಿಯನ್ನು. ಕಾವೇರಿ ನದಿಯ ಈ ಭಾಗದ ಜನರಲ್ಲಿ ಪೂಜ್ಯ ಭಾವನೆ ಇದೆ. ಮಗ ದೊಡ್ಡೋನಾ ತಾಯಿ ದೊಡ್ಡೋರಾ ಅನ್ನೋ ರೀತಿ ಚರ್ಚೆ ಬೇಡ ತಾಯಿಯೆ ದೊಡ್ಡವಳು ಎಂದು ಮಾತನಾಡಿದರು.
ಮೈಸೂರು ವಿಮಾನ ನಿಲ್ದಾಣಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿಟ್ಟಿದ್ದೇವೆ. ರೈಲುಗಳಿಗೆ ಒಡೆಯರ್ ಹೆಸರು ಇಟ್ಟಿದ್ದೇವೆ. ರಾಜ ಕುಟುಂಬಕ್ಕೆ ಏನೂ ಗೌರವ ಕೊಡಬೇಕೋ ಎಲ್ಲವನ್ನೂ ನಾವು ನೀಡಿದ್ದೇವೆ. ಈಗ ರಸ್ತೆಯ ನಾಮಕರಣ ವಿಚಾರದಲ್ಲಿ ಅನಗತ್ಯ ವಿವಾದ ಬೇಡ. ಕಾವೇರಿ ಈ ನಾಡಿನ ಜೀವ ನದಿ ಈ ಹೆಸರಿನ ವಿಚಾರದಲ್ಲಿ ವಿವಾದ ಮಾಡಬೇಡಿ ಎಂದು ಮನವಿ ಮಾಡಿಕೊಂಡರು.
ಬೆಂಗಳೂರು – ಮೈಸೂರು ನಡುವಿನ ಹೈವೆಯಲ್ಲಿ ಚನ್ನಪಟ್ಟಣದ ಬಳಿ 30 ಎಕರೆಯಲ್ಲಿ ಐಲ್ಯಾಂಡ್ ರೂಪದಲ್ಲಿ ರೆಸ್ಟ್ ಏರಿಯಾ ನಿರ್ಮಾಣ ಮಾಡುತ್ತೇವೆ. ಎಲ್ಲ ಬಗೆಯ ಹೋಟೆಲ್ ಅಲ್ಲಿ ಇರುತ್ತದೆ. ನಾಡಿನ ಬ್ರ್ಯಾಂಡ್ ಪದಾರ್ಥಗಳ ಮಾರಾಟವು ಇರುತ್ತದೆ. 6 ತಿಂಗಳಲ್ಲಿ ಈ ರೆಸ್ಟ್ ಏರಿಯಾ ನಿರ್ಮಾಣವಾಗುತ್ತದೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನ ನೈಸ್ ಪ್ರವೇಶದ್ವಾರದಿಂದ ಮೈಸೂರಿನ ರಿಂಗ್ ರೋಡ್ ಜಂಕ್ಷನ್‌ವರೆಗೆ 117 ಕಿಮೀ ಉದ್ದದ 10 ಪಥಗಳ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಭಿವೃದ್ಧಿಪಡಿಸಿದೆ. ಈ ಹೆದ್ದಾರಿಯಿಂದಾಗಿ ಎರಡು ನಗರಗಳ ನಡುವಿನ ಪ್ರಯಾಣದ ಸಮಯ ಸರಾಸರಿ ಮೂರು ಗಂಟೆಗಳಿಂದ ಕೇವಲ 90 ನಿಮಿಷಗಳಿಗೆ ಕಡಿತಗೊಳ್ಳಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:58 pm, Mon, 13 February 23