JDS ಪಕ್ಷಕ್ಕೆ ಬರುವ ಬಗ್ಗೆ ಯಡಿಯೂರಪ್ಪ ಮಾತನಾಡಿದ್ದರು: ರಾಜೀನಾಮೆ ನೀಡಬೇಡಿ ಎಂದು ಸಲಹೆ ನೀಡಿದ್ದೆ- ಕುಮಾರಸ್ವಾಮಿ

| Updated By: ವಿವೇಕ ಬಿರಾದಾರ

Updated on: Jan 02, 2023 | 4:36 PM

ಬಿಜೆಪಿಯಲ್ಲಿ ಬಿ.ಎಸ್​.ಯಡಿಯೂರಪ್ಪರನ್ನು ನಡೆಸಿಕೊಂಡ ರೀತಿ ಎಲ್ಲರಿಗೂ ಗೊತ್ತಿದೆ. ರಾಜ್ಯದಲ್ಲಿ ಬಿಜೆಪಿ ಬೆಳೆಯಲು ವೀರಶೈವ ಸಮಾಜದ ಕೊಡುಗೆಯಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಹೇಳಿದ್ದಾರೆ.

JDS ಪಕ್ಷಕ್ಕೆ ಬರುವ ಬಗ್ಗೆ ಯಡಿಯೂರಪ್ಪ ಮಾತನಾಡಿದ್ದರು: ರಾಜೀನಾಮೆ ನೀಡಬೇಡಿ ಎಂದು ಸಲಹೆ ನೀಡಿದ್ದೆ- ಕುಮಾರಸ್ವಾಮಿ
ಮಾಜಿ ಸಿಎಂ ಯಡಿಯೂರಪ್ಪ ಮತ್ತು ಕುಮಾರಸ್ವಾಮಿ
Follow us on

ಮೈಸೂರು: ಕೇಂದ್ರ ಸಚಿವ ಅಮಿತ್ (Amith Shah)​ ರಾಜ್ಯ ಪ್ರವಾಸ ಮುಗಿಸಿ ಹಿಂದಿರುಗಿದ್ದಾರೆ. ಇವರು ಬೆಂಗಳೂರಿನ ಅರಮನೆ ಮೈದಾನದಲ್ಲಿ ಮೊನ್ನೆ (ಡಿ.31/2022) ನಡೆದ ಬಿಜೆಪಿ (BJP) ಬೂತ್ ವಿಜಯ ಸಂಕಲ್ಪ ಸಮಾವೇಶದಲ್ಲಿ ಯಾವುದೇ ಪಕ್ಷದೊಂದಿಗೆ ಮೈತ್ರಿ ಇಲ್ಲ, ಸ್ವಂತ ಬಲದೊಂದಿಗೆ ಅಧಿಕಾರಕ್ಕೆ ಬರುತ್ತೇವೆ ಎಂದಿದ್ದರು. ಈ ಸಂಬಂಧ ಇಂದು (ಜ.2) ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ (HD Kumaraswamy) ಮಾತನಾಡಿ ಬಿಜೆಪಿಯಲ್ಲಿ ಆದ ನೋವಿನ ಬಗ್ಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yadiyurappa) ನನ್ನ ಜೊತೆ ಚರ್ಚೆ ನಡೆಸಿದ್ದರು. ಜೆಡಿಎಸ್ ಪಕ್ಷಕ್ಕೆ ಬರುವ ಬಗ್ಗೆ ಯಡಿಯೂರಪ್ಪ ಮಾತನಾಡಿದ್ದರು. ನೀವು ರಾಜೀನಾಮೆ ಕೊಟ್ಟು ಹೊರಗಡೆ ಬಂದರೆ ಕಷ್ಟ ಆಗುತ್ತೆ. ದುಡುಕಿ ರಾಜೀನಾಮೆ ನೀಡಬೇಡಿ ಎಂದು ನಾನು ಸಲಹೆ ನೀಡಿದ್ದೆ ಎಂದು ತಿಳಿಸಿದರು.

ಕೇಂದ್ರ ನಾಯಕರಿಂದ ಜೆಡಿಎಸ್​-ಬಿಜೆಪಿ ‌ಮೈತ್ರಿ ಆಗಿದ್ದಲ್ಲ

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು 2006ರಲ್ಲಿ ದೆಹಲಿ ನಾಯಕರಿಂದ ಜೆಡಿಎಸ್​-ಬಿಜೆಪಿ ‌ಮೈತ್ರಿ ಆಗಿದ್ದಲ್ಲ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶಿಷ್ಯ ಕಾಪು ಸಿದ್ದಲಿಂಗಸ್ವಾಮಿ ಮೂಲಕ ಸ್ಲಿಪ್​ ಕಳಿಸಿದ್ದರು. ಬಿಜೆಪಿಯಲ್ಲಿದ್ದ ಜನತಾ ಪರಿವಾರದ ಶಾಸಕರು ಒತ್ತಡ ಹೇರಿದ್ದರು. ಯಡಿಯುರಪ್ಪ ಮುಖ್ಯಮಂತ್ರಿಯಾಗಿದ್ದಾಗ ನನಗೆ (ಕುಮಾರಸ್ವಾಮಿ) ಪ್ರಧಾನಿ ಭೇಟಿಗೆ ಅವಕಾಶ ಕೊಡಲಿಲ್ಲ. ಬಿಜೆಪಿಯಲ್ಲಿ ಬಿ.ಎಸ್​.ಯಡಿಯೂರಪ್ಪರನ್ನು ನಡೆಸಿಕೊಂಡ ರೀತಿ ಎಲ್ಲರಿಗೂ ಗೊತ್ತಿದೆ. ರಾಜ್ಯದಲ್ಲಿ ಬಿಜೆಪಿ ಬೆಳೆಯಲು ವೀರಶೈವ ಸಮಾಜದ ಕೊಡುಗೆಯಿದೆ. ಯಡಿಯೂರಪ್ಪ ಸಿಎಂ ಇದ್ದಾಗ ತೀರ್ಮಾನಗಳು ಇಲ್ಲೇ ಆಗುತ್ತಿತ್ತು. ಈಗ ಎಲ್ಲವೂ ದೆಹಲಿಯಲ್ಲಿ ನಿರ್ಧಾರವಾಗುತ್ತೆ. ಕೇಂದ್ರದ ಬಿಜೆಪಿ ಸರ್ಕಾರ ರಾಜ್ಯವನ್ನು ಸಂಪೂರ್ಣ ಕಡೆಗಣಿಸುತ್ತಿದೆ ಎಂದರು.

ಇದನ್ನೂ ಓದಿ: ದೇವೇಗೌಡರೇ ನೀವು ಪಿಎಂ, ಸಿಎಂ ಆಗಿ ಏನು ಮಾಡಿಲ್ಲ; ನಮ್ಮ ಸರ್ಕಾರ ಏನು ಮಾಡಿದೆ ಎಂದು ಯುವ ಕಾರ್ಯಕರ್ತರು ನಿಮಗೆ ಹೇಳುತ್ತಾರೆ: ಅಮಿತ್ ಶಾ

ಬಿಜೆಪಿಯ ಅಂತ್ಯ ಮಂಡ್ಯದಿಂದ ಆರಂಭವಾಗಲಿದೆ

ಜೆಡಿಎಸ್​​ ವಿರುದ್ಧ ಕೇಂದ್ರ ಸಚಿವ ಅಮಿತ್ ಶಾ ಜೆಡಿಎಸ್​ ವಿರುದ್ಧ ಜೆಡಿಎಸ್‌ ಬಂದರೆ ತಮ್ಮ ಪರಿವಾರಕ್ಕೆ ಮಾತ್ರ ಎಟಿಎಂ ಆಗುತ್ತದೆ ವಾಗ್ದಾಳಿ ಮಾಡಿದ್ದರು. ಈ ಕುರಿತು ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ ಬಿಜೆಪಿಯ ಅಂತ್ಯ ಮಂಡ್ಯದಿಂದ ಆರಂಭವಾಗಲಿದೆ. ದೇವೇಗೌಡರ ಕುಟುಂಬವನ್ನು ಭ್ರಷ್ಟರು ಎಂದು ಶಾ ಹೇಳಿದ್ದಾರೆ. ಆ ಮೂಲಕ ತಮ್ಮ ಗುಂಡಿಯನ್ನು ತಾವೇ ತೋಡಿಕೊಂಡಿದ್ದಾರೆ. ನಮ್ಮ ಕುಟುಂಬ ಭ್ರಷ್ಟರು ಎನ್ನಲು ಒಂದು ಉದಾಹರಣೆ ಹೇಳಿ ಎಂದು ವಾಗ್ದಾಳಿ ಮಾಡಿದ್ದಾರೆ.

ದೇವೇಗೌಡರ ಉಗುರಿಗೂ ಕೇಂದ್ರ ಸಚಿವ ಅಮಿತ್ ಶಾ ಸಮವಲ್ಲ

ದೇವೇಗೌಡರೇ, ನೀವು ಪ್ರಧಾನಿ, ಮುಖ್ಯಮಂತ್ರಿಯಾಗಿ ಏನು ಮಾಡಿಲ್ಲ ಎಂಬ ಶಾ ಹೇಳಿಕೆ ಪ್ರತಿಕ್ರತಿಯಿಸಿದ ಕುಮಾರಸ್ವಾಮಿ ದೇವೇಗೌಡರ ಉಗುರಿಗೂ ಕೇಂದ್ರ ಸಚಿವ ಅಮಿತ್ ಶಾ ಸಮವಲ್ಲ. ಅಮಿತ್ ಶಾ ಮಂಡ್ಯದಲ್ಲಿ ಜೆಡಿಎಸ್ ಪಕ್ಷದ​ ಬಗ್ಗೆ ಮಾತನಾಡಿದ್ದಾರೆ. ದೇವೇಗೌಡರಾಗಲಿ, ನಾನಾಗಲಿ ಸರ್ಕಾರದ ಹಣ ಲೂಟಿ ಮಾಡಿದ್ದರೇ ತೋರಿಸಿ. ರಾಜ್ಯ ಬಿಜೆಪಿ ಸರ್ಕಾರವೇ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಆರೋಪಿಸಿದರು.

ನಾವೇನಾದರೂ ನಿಮ್ಮ ಬಳಿ ಅರ್ಜಿ ಹಾಕಿಕೊಂಡು ಬಂದಿದ್ದೀವಾ?

ಜೆಡಿಎಸ್​ ಜತೆ ಹೊಂದಾಣಿಕೆ ಇಲ್ಲ ಎಂಬ ಅಮಿತ್ ಶಾ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು ನಿಮ್ಮ ಮನೆ ಬಾಗಿಲಿಗೆ ಬಂದಿದ್ದೀನಾ? ನಾವೇನಾದರೂ ನಿಮ್ಮ ಬಳಿ ಅರ್ಜಿ ಹಾಕಿಕೊಂಡು ಬಂದಿದ್ದೀವಾ? ಇಂದು ಬಿಜೆಪಿ ಲೂಟಿ ಮಾಡುತ್ತಿರುವುದು ಎಲ್ಲರಿಗೂ ಗೊತ್ತಿದೆ. ಅಮಿತ್ ಶಾ ಪುತ್ರನಿಗೆ ಯಾವ ಆಧಾರದಲ್ಲಿ BCCI ಹುದ್ದೆ ಕೊಟ್ಟರು? ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಹೊಸ ವರ್ಷದ ಮೊದಲ​ ದಿನವೇ ನಮ್ಮ ಮೆಟ್ರೋಗೆ ರೂ. 1 ಕೋಟಿಗೂ ಆದಾಯ

ಸಂಕ್ರಾಂತಿ ಬಳಿಕ ಜೆಡಿಎಸ್​​ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ

ಈಗಾಗಲೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿಯನ್ನು ಜೆಡಿಎಸ್​ ಬಿಡುಗಡೆ ಮಾಡಿದ್ದು, ಸಂಕ್ರಾಂತಿ ಬಳಿಕ ಜೆಡಿಎಸ್​​ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ. 4-5 ಕ್ಷೇತ್ರಗಳ ಅಭ್ಯರ್ಥಿಗಳ ಕುರಿತು ಪ್ರಮುಖ ಸಭೆ ನಡೆಸುವೆ. ಮಾರ್ಚ್​ 20ರವರೆಗೆ ಪಂಚರತ್ನ ರಥಯಾತ್ರೆ ಮಾಡುತ್ತೇನೆ. ಚುನಾವಣೆಗೂ ಮುನ್ನವೇ ಬಿಜೆಪಿ ಆಪರೇಷನ್ ಕಮಲ ಮಾಡಿದೆ. ಗೆಲ್ಲುವ ಸಾಮರ್ಥ್ಯ ಇಲ್ಲದ ಕಡೆ ಖರೀದಿ ಮಾಡಲು ಬಿಜೆಪಿ ಹುನ್ನಾರ ನಡೆಸಿದೆ. ರಾಜ್ಯದಲ್ಲಿ ಬಿಜೆಪಿಯನ್ನು ಸೋಲಿಸಲು ಜೆಡಿಎಸ್​​ ಪಣತೊಟ್ಟಿದೆ. 35 ಅಲ್ಲ 135 ಸ್ಥಾನ ಗೆಲ್ಲುವ ಪಣ ತೊಟ್ಟಿದ್ದೇವೆ. ಈ ಬಾರಿ ಯಾವುದೇ ಕಾರಣಕ್ಕೂ ಸಮ್ಮಿಶ್ರ ಸರ್ಕಾರ ಬರುವುದಿಲ್ಲ. ಈ ಬಾರಿ ಕನ್ನಡಿಗರ ಪಕ್ಷ ಅಧಿಕಾರಕ್ಕೆ ಬರುತ್ತೆ. ರೈತರ ಮಕ್ಕಳು, ಕನ್ನಡಿಗರು ಈ ರಾಜ್ಯ ಆಳ್ವಿಕೆ‌ ಮಾಡುತ್ತಾರೆ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:27 pm, Mon, 2 January 23