Church Attack Case: ಪಿರಿಯಾಪಟ್ಟಣದ ಚರ್ಚ್ ಮೇಲೆ ದಾಳಿ ಪ್ರಕರಣ: ಸಂಬಳ ನೀಡದಿದ್ದಕ್ಕೆ ಕಳ್ಳತನ, ಓರ್ವನ ಬಂಧನ
ಪಿರಿಯಾಪಟ್ಟಣದ ಸೆಂಟ್ ಮೇರಿಸ್ ಚರ್ಚ್ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಟ್ವಿಸ್ಟ್ ಒಂದು ಸಿಕ್ಕಿದ್ದು, ಓರ್ವ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮೈಸೂರು: ಜಿಲ್ಲೆಯ ಪಿರಿಯಾಪಟ್ಟಣದ (Priyapatnam) ಸೆಂಟ್ ಮೇರಿಸ್ ಚರ್ಚ್ (St. Mary’s Church) ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಟ್ವಿಸ್ಟ್ ಒಂದು ಸಿಕ್ಕಿದೆ. ಈ ಕುರಿತಾಗಿ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಹೇಳಿಕೆ ನೀಡಿದ್ದಾರೆ. ಚರ್ಚ್ನ ಪೌರಕಾರ್ಮಿಕನಿಗೆ ಸಂಬಳ ನೀಡದಿದ್ದಕ್ಕೆ ಕಳ್ಳತನ ಮಾಡಲಾಗಿದೆ ಎಂಬ ಸಂಗತಿ ಬಯಲಾಗಿದೆ. ಪ್ರಕರಣದ ಸಂಬಂಧ ಮೂರು ತಂಡ ರಚನೆ ಮಾಡಲಾಗಿತ್ತು. ಬ್ಲೂ ಕಲರ್ ಹ್ಯಾಂಡ್ ಗ್ಲೌಸ್ ಸ್ಥಳದಲ್ಲಿ ಸಿಕಿತ್ತು. ಇದರ ಆಧಾರದ ಮೇಲೆ ವಿಶ್ವ ಎಂಬ ಪೌರ ಕಾರ್ಮಿಕನನ್ನ ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿದೆ. ಚರ್ಚ್‌ನಲ್ಲಿ ಪೌರ ಕಾರ್ಮಿಕನಾಗಿ ವಿಶ್ವ ಕೆಲಸ ಮಾಡುತ್ತಿದ್ದು, ಪಿರಿಯಾಪಟ್ಟಣದ ಮಹದೇಶ್ವರ ಬಡವಾಣೆ ನಿವಾಸಿಯಾಗಿದ್ದಾನೆ. ಎರಡು ತಿಂಗಳಿನಿಂದ ಚರ್ಚ್‌ನಲ್ಲಿ ಸಂಬಳ ನೀಡರಲಿಲ್ಲ. ಕ್ರಿಸ್ ಮಸ್ ಸಂಧರ್ಭದಲ್ಲಿ ಫಾದರ್ ಜೊತೆ ಮಾತನಾಡಲು ಚರ್ಚ್ಗೆ ಬಂದಿದ್ದ. ಈ ವೇಳೆ ಫಾದರ್ ಭೇಟಿಯ ಅವಕಾಶ ಸಿಕ್ಕಿರಲಿಲ್ಲ. ಹೀಗಾಗಿ ಹುಂಡಿ ಕಳ್ಳತನ ಮಾಡಲು ನಿರ್ಧಾರ ಮಾಡಿದ್ದ.
ಬಳಿಕ ಮೂರು ಹುಂಡಿಗಳಿಂದ ಕಳ್ಳತನ ಮಾಡಿದ್ದು, ಅಂದಾಜು 2 ರಿಂದ 3 ಸಾವಿರ ಹಣ ಕಳ್ಳತನ ಮಾಡಿದ್ದಾನೆ. ಬಾಲ ಏಸುವಿನ ಮೂರ್ತಿಯನ್ನ ಟೇಬಲ್ ಮೇಲೆ ಇಡಲಾಗಿತ್ತು. ಅದರ ಕೆಳಗೆ ಹಣ ಇರಬಹುದು ಎಂದು ಬಟ್ಟೆ ಎಳೆದಿದ್ದಾನೆ. ಈ ವೇಳೆ ಬಾಲ ಏಸುವಿನ ಮೂರ್ತಿ ಒಡೆದಿದೆ ಎಂದು ಘಟನೆಯ ಸಂಪೂರ್ಣ ಮಾಹಿತಿಯನ್ನು ಎಸ್.ಪಿ ಸೀಮಾ ಲಾಟ್ಕರ್ ನೀಡಿದರು.
ಇದನ್ನೂ ಓದಿ: Church Attack: ಪಿರಿಯಾಪಟ್ಟಣದ ಚರ್ಚ್ಗೆ ನುಗ್ಗಿ ಏಸು ಮೂರ್ತಿ ಧ್ವಂಸಗೊಳಿಸಿದ ದುಷ್ಕರ್ಮಿಗಳು: ಸ್ಥಳಕ್ಕೆ ಪೊಲೀಸರು ದೌಡು
ಘಟನೆ ಹಿನ್ನೆಲೆ
ಜಿಲ್ಲೆಯ ಪಿರಿಯಾಪಟ್ಟಣದ ಸೆಂಟ್ ಮೇರಿಸ್ ಚರ್ಚ್ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿರುವಂತಹ ಘಟನೆ ಡಿ. 28ರಂದು ನಡೆದಿದೆ. ದುಷ್ಕರ್ಮಿಗಳು ಚರ್ಚ್ ಒಳಗೆ ನುಗ್ಗಿ ಬಾಲ ಏಸುವಿನ ಮೂರ್ತಿ ಹಾಗೂ ತೊಟ್ಟಿಲನ್ನು ಒಡೆದು ಹಾಕಿದ್ದರು. ಕ್ರಿಸ್‌ಮಸ್ ಹಬ್ಬಕೆಂದು ಚರ್ಚ್ ಒಳಗಿನ ಟೇಬಲ್ ಮೇಲೆ ಬುಟ್ಟಿಯಲ್ಲಿನ, ತೊಟ್ಟಿಲಲ್ಲಿ ಬಾಲ ಏಸು ಅನ್ನು ಮಲಗಿಸಲಾಗಿತ್ತು.
ಇದನ್ನೂ ಓದಿ: ಪ್ರಧಾನಿ ಮೋದಿ ಸಹೋದರನ ಕಾರು ಅಪಘಾತ, ಏರ್ ಬ್ಯಾಗ್ ಓಪನ್, ಪ್ರಾಣಾಪಾಯದಿಂದ ಪಾರು: ಇಲ್ಲಿವೆ ಫೋಟೋಸ್
ಚರ್ಚ್‌ನಲ್ಲಿ ಯಾರು ಇಲ್ಲದ ವೇಳೆ ದುಷ್ಕರ್ಮಿಗಳಿಂದ ದಾಳಿ ಮಾಡಿ, ಬಾಲ ಏಸುವಿನ ಮೂರ್ತಿಯನ್ನ ಪುಡಿ ಪುಡಿ ಮಾಡಿದ್ದರು. ಹಾಗೇ ಚರ್ಚ್ ಹೊರಗೆ ಇದ್ದ ಹುಂಡಿ ಕೂಡ ಕಳ್ಳತನವಾಗಿದೆ. ಚರ್ಚ್ನ ಫಾದರ್ ಜಾನ್ ಪೌಲ್ ಮೈಸೂರಿಗೆ ತೆರಳಿದ ವೇಳೆಯಲ್ಲಿ ಘಟನೆ ಸಂಭವಿಸಿದೆ. ಸ್ಥಳಕ್ಕೆ ಪಿರಿಯಾಪಟ್ಟಣ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:33 pm, Mon, 2 January 23