ಮೈಸೂರು: ಮೈಲಾರಿ ಹೋಟೆಲ್ನಲ್ಲಿ ದೋಸೆ ಹಾಕಿದ ಪ್ರಿಯಾಂಕಾ ಗಾಂಧಿ, ತಾವೊಂದು ತಿಂದು, ಡಿಕೆ ಶಿವಕುಮಾರ್ ತಟ್ಟೆಗೆ ಒಂದು ಹಾಕಿದರು!
Priyanka Gandhi Dosa: ಮೊದಲು ನನ್ನ ಬಳಿ ದೋಸೆ ಹಾಕುವ ಬಗ್ಗೆ ಮಾಹಿತಿ ಪಡೆದುಕೊಂಡರು. ನಂತರ ನೋಡ ನೋಡುತ್ತಿದ್ದಂತೆ ಅವರೇ ದೋಸೆ ಹಾಕಿಬಿಟ್ಟರು ಎಂದು ಮಾಲೀಕರಾದ ಲೋಕೇಶ್ ಸಹ ಖುಷಿಪಟ್ಟರು.
ಮೈಸೂರು: ರಾಜ್ಯದಲ್ಲಿ ಈಗ ಎರಡು ವಿಷಯಗಳದ್ದೇ ಹಂಗಾಮ. ಒಂದು, ಐಪಿಎಲ್ ಹಂಗಾಮ (IPL 2023) ಮತ್ತೊಂದು ಅಸೆಂಬ್ಲಿ ಚುನಾವಣೆ (Karnataka Assembly Elections 2023) ಎಂಬ ಪ್ರಜಾಪ್ರಭುತ್ವದ ಮಹಾಹಬ್ಬ. ಐಪಿಎಲ್ ಹಂಗಾಮದಲ್ಲಿ ತಾರಾ ಜೋಡಿಯೊಂದು ಮಲ್ಲೇಶ್ವರದಲ್ಲಿ ಗರಿ ಗರಿ ದೋಸೆ (Dosa) ಮುರಿದಿದ್ದಾರೆ. ಇನ್ನು ಈ ಕಡೆ ನಮ್ಮ ಮೈಸೂರು ಕಡೆ ಬಂದರೆ ಚುನಾವಣೆ ಪ್ರಚಾರಾರ್ಥವಾಗಿ (Campaign) ರಾಜ್ಯಕ್ಕೆ ಆಗಮಿಸಿರುವ ಇಂದಿರಾ ಗಾಂಧಿ ಮೊಮ್ಮಗಳು ಥೇಟ್ ಅವರ ಅಜ್ಜಿಯಂತೆ ಮಿಂಚುಹರಿಸಿದ್ದಾರೆ. ಅರಮನೆ ನಗರಿಯ ಸುಪ್ರಸಿದ್ದ ಮೈಲಾರಿ ಹೋಟೆಲ್ (Mylari Hotel) ಗೆ ಭೇಟಿ ನೀಡಿ ದೋಸೆ ಹೊಯ್ದಿದ್ದಾರೆ. ಇದರಿಂದ ನಿಜಕ್ಕೂ ಖುಷಿಗೊಂಡ ಹೋಟಲ್ ಮಾಲೀಕರಾದ ಶೃತಿ ಅವರು ನಮ್ಮ ಹೋಟೆಲ್ಗೆ ಬರೋರೆಲ್ಲಾ ದೋಸೆ ತಿಂದು ಹೋಗುವವರೇ! ಆದರೆ ಮೊಟ್ಟ ಮೊದಲ ಬಾರಿಗೆ ಪ್ರಿಯಾಂಕಾ ಗಾಂಧಿ (Priyanka Gandhi) ಅಂತಹ ದೊಡ್ಡ ನಾಯಕಿ ಹೋಟೆಲಿಗೆ ಬಂದು ದೋಸೆ ಹಾಕಿದ್ದಾರೆ ಎಂದು ಸಂತಸಗೊಂಡಿದ್ದಾರೆ.
ವರ್ಚಸ್ವಿ ನಾಯಕಿ ಪ್ರಿಯಾಂಕಾ ಗಾಂಧಿ ಬಂದಿದ್ದು ನಮಗೆ ಖುಷಿ ತಂದಿದೆ. ಪ್ರಿಯಾಂಕಾ ಗಾಂಧಿ ಅವರು ನಮ್ಮನ್ನೇ ಅತಿಥಿಯಂತೆ ನೋಡಿಕೊಂಡರು! ಎಂದು ಮೈಸೂರಿನ ಅಗ್ರಹಾರದಲ್ಲಿರುವ 80 ವರ್ಷ ಹಳೆಯದಾದ ಮೈಲಾರಿ ಹೋಟೆಲ್ ಮಾಲೀಕರಾದ ಶೃತಿ ಟಿವಿ9ಗೆ ಹೇಳಿದ್ದಾರೆ. ಟಿವಿ9 ಜೊತೆ ಮಾತನಾಡುತ್ತಾ ಪ್ರಿಯಾಂಕಾ ಅವರು ಮೈಲಾರಿ ದೋಸೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡರು. ಒಂದು ದೋಸೆ ತಿಂದರು. ಮತ್ತೊಂದು ತಿನ್ನುವ ಆಸೆ ಇತ್ತು. ಆದರೆ ಡಯಟ್ ಕಾರಣ ತಿನ್ನಲಿಲ್ಲ. ಅದನ್ನು ಡಿ ಕೆ ಶಿವಕುಮಾರ್ ಅವರಿಗೆ ಹಾಕಿಸಿದರು. ಮುಂದಿನ ಬಾರಿ ಮಗಳನ್ನೂ ಕರೆದುಕೊಂಡು ಬರುತ್ತೇನೆ ಅಂತಾನೂ ಹೇಳಿದರು ಎಂದು ಹೋಟಲ್ ಮಾಲೀಕರಾದ ಶೃತಿ ಸಿಕ್ಕಾಪಟ್ಟೆ ಖುಷಿಪಟ್ಟಿದ್ದಾರೆ.
ನನ್ನ ಬಳಿ ದೋಸೆ ಹಾಕುವ ಬಗ್ಗೆ ಮಾಹಿತಿ ಪಡೆದುಕೊಂಡರು. ನಂತರ ನೋಡ ನೋಡುತ್ತಿದ್ದಂತೆ ಅವರೇ ದೋಸೆ ಹಾಕಿಬಿಟ್ಟರು ಎಂದು ಮಾಲೀಕರಾದ ಲೋಕೇಶ್ ಸಹ ಖುಷಿಪಟ್ಟರು. ಅವರೇ ಒಟ್ಟು ನಾಲ್ಕು ದೋಸೆ ಹಾಕಿದರು. ಖುಷಿ ಖುಷಿಯಿಂದ ದೋಸೆ ಹಾಕಿದರು. ದೋಸೆ ಹಾಕುವ ಒಲೆ ಸೌದೆ ಬಗ್ಗೆಯೂ ಮಾಹಿತಿ ಪಡೆದುಕೊಂಡರು. ಇದು ನಾವು ಎಂದಿಗೂ ಮರೆಯಲಾಗದ ಕ್ಷಣ ಎಂದು ಲೋಕೇಶ್ ತಿಳಿಸಿದರು.
ಈ ಮಧ್ಯೆ, ನನ್ನ ವಿದ್ಯಾಭ್ಯಾದ ಬಗ್ಗೆ ಪ್ರಿಯಾಂಕಾ ಗಾಂಧಿ ಮಾಹಿತಿ ಪಡೆದುಕೊಂಡರು ಎಂದು ಟಿವಿ9ಗೆ ಮೈಲಾರಿ ಹೋಟೆಲ್ ಮಾಲೀಕರ ಮಗಳು ಪಾರ್ವತಿ ಹೇಳಿದರು. ತುಂಬಾ ಆತ್ಮೀಯವಾಗಿ ಮಾತನಾಡಿಸಿದರು. ನನಗಂತೂ ತುಂಬಾ ಖುಷಿಯಾಯ್ತು ಎಂದರು. ಮೈಲಾರಿ ಹೋಟೆಲ್ ಮಾಲೀಕರಾದ ಶೃತಿ ಲೋಕೇಶ್ ಹಾಗೂ ಪಾರ್ವತಿ, ಪುತ್ರಿ ಅವರುಗಳ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:12 pm, Wed, 26 April 23