
ಮೈಸೂರು, ಅಕ್ಟೋಬರ್ 31: ಹುಲಿ ದಾಳಿಗೆ (Tiger Attack) ಮೈಸೂರು ಜಿಲ್ಲೆಯಲ್ಲಿ ಮತ್ತೊಬ್ಬ ವ್ಯಕ್ತಿ ಬಲಿಯಾಗಿದ್ದಾರೆ. ಸರಗೂರು ತಾಲೂಕಿನ ಕುರ್ಣೇಗಾಲ ಬಳಿ ಘಟನೆ ನಡೆದಿದ್ದು, ಮೃತ ವ್ಯಕ್ತಿಯನ್ನು ನಿಂಗಯ್ಯ(65) ಎಂದು ಗುರುತಿಸಲಾಗಿದೆ. ಕಾಡಂಚಿನ ಜಮೀನಿನಲ್ಲಿ ಹಸು ಮೇಯಿಸುತ್ತಿದ್ದ ವೇಳೆ ಹುಲಿ ದಾಳಿ ನಡೆಸಿದ್ದು, ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಸರಗೂರು ತಾಲೂಕಿನ ಬೆಣ್ಣೆಗೆರೆ ಗ್ರಾಮದಲ್ಲಿ ಹುಲಿ ದಾಳಿಯಿಂದ ರೈತ ರಾಜಶೇಖರ್ ಅವರು ಇತ್ತೀಚೆಗಷ್ಟೇ ಮೃತ ಪಟ್ಟಿದ್ದರು. ಘಟನೆ ಮಾಸುವ ಮುನ್ನವೇ ಮತ್ತೊಂದು ಅವಘಡ ನಡೆದಿದೆ.
ಸರಗೂರು ತಾಲೂಕಿನ ಬೆಣ್ಣೆಗೆರೆ ಗ್ರಾಮದಿಂದ 3 ಕಿಲೋಮೀಟರ್ ದೂರ ಇರುವ ತಮ್ಮ ಜಮೀನಿನಲ್ಲಿ ರಾಜಶೇಖರ್ ದನ ಮೇಯಿಸುತ್ತಿದ್ದಾಗ ಹುಲಿ ದಾಳಿ ನಡೆಸಿತ್ತು. ಕುತ್ತಿಗೆ ಭಾಗವನ್ನು ಕಚ್ಚಿದ್ದಲ್ಲದೆ ಸುಮಾರು 100 ಮೀಟರ್ ದೂರ ಅವರನ್ನು ಎಳೆದೊಯ್ದಿತ್ತು. ಹೀಗಾಗಿ ಗಂಭೀರ ಗಾಯಗೊಂಡಿದ್ದ ಅವರು ಸಾವನ್ನಪ್ಪಿದ್ದರು. ಅವರ ಜೊತೆಯಲ್ಲೇ ಇದ್ದ ಮತ್ತೊಬ್ಬ ಕೂಗಿಕೊಂಡು ಸ್ಥಳದಿಂದ ಓಡಿದ್ದ ಕಾರಣ ಪ್ರಾಣ ಉಳಿಸಿಕೊಂಡಿದ್ದಾನೆ ಎಂದು ಸ್ಥಳೀಯರು ಹೇಳಿದ್ದರು.
ಇದನ್ನೂ ಓದಿ: ಹುಲಿ ದಾಳಿಯಿಂದ ರೈತ ಸಾವು: ಅರಣ್ಯ ಸಚಿವ ಈಶ್ವರ್ ಖಂಡ್ರೆಗೆ ಮೈಸೂರಲ್ಲಿ ಘೇರಾವ್
ಜಾನುವಾರುಗಳು ಮತ್ತು ಮನುಷ್ಯರ ಮೇಲೆ ಹುಲಿ ದಾಳಿ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಸರಗೂರಲ್ಲಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಕಾರಣ ವ್ಯಾಘ್ರನ ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಮುಂದಾಗಿದ್ದರು. ಸಾಕಾನೆಗಳಾದ ಭೀಮ, ಮಹೇಂದ್ರನನ್ನು ಬಳಸಿಕೊಂಡು ಹುಡುಕಾಟ ನಡೆಸುವಾಗ ಯಡಿಯಾಲ ಅರಣ್ಯ ವಲಯದ ಅಂಜನಾಪುರದ ಬಳಿ ಅರವಳಿಕೆ ತಜ್ಞ ಶೂಟರ್‌ಗಳ ಸಹಾಯದಿಂದ ಸುಮಾರು 7 ವರ್ಷದ ಹೆಣ್ಣು ಹುಲಿಯನ್ನು ಸೆರೆ ಹಿಡಿಯಲಾಗಿತ್ತು. ಅಕ್ಟೋಬರ್ 28ರಿಂದ ಸಾಮಾಜಿಕ ಜಾಲತಾಣಗಳಲ್ಲಿ ಬೆಣ್ಣೆಗೆರೆ ಗ್ರಾಮದಲ್ಲಿ 3 ಹುಲಿ ಮರಿಗಳು ಸಿಕ್ಕಿರುವುದಾಗಿ ಹೇಳಿರುವ ಡ್ರೋನ್ ದೃಶ್ಯಾವಳಿಗಳು ಹರಿದಾಡಿದ್ದವು. ಈ ಕುರಿತು ಸ್ಪಷ್ಟನೆ ನೀಡಿದ್ದ ಅರಣ್ಯ ಇಲಾಖೆ, ಸದರಿ ಚಿತ್ರದಲ್ಲಿರುವ ಹುಲಿ ಮರಿಗಳು ಈ ವಲಯಕ್ಕೆ ಸಂಭಂದಿಸಿದ್ದಲ್ಲ ಎಂದಿತ್ತು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:29 pm, Fri, 31 October 25