ಮೈಸೂರಿನಲ್ಲಿ ಸೆರೆ ಸಿಕ್ಕ ಹುಲಿ; ರೈತನ ಹತ್ಯೆಗೈದ ಹುಲಿ ಇದೇನಾ?
ಕೆಲ ದಿನಗಳ ಹಿಂದೆ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತ ರಾಜಶೇಖರ್ ಮೇಲೆ ಹುಲಿ ಒಮ್ಮೆಲೆ ದಾಳಿ ಮಾಡಿತ್ತು. ಹುಲಿಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ನಿರಂತರ ಕಾರ್ಯಾಚರಣೆಯಲ್ಲಿ ತೊಡಗಿತ್ತು. ಸಾಕಾನೆಗಳ ಸಹಾಯದೊಂದಿಗೆ ಹುಲಿಯೊಂದನ್ನು ಹಿಡಿಯುವಲ್ಲಿ ಇಲಾಖೆ ಯಶಸ್ವಿಯಾಗಿದ್ದು, ಸಿಕ್ಕಿದ್ದು 7 ವರ್ಷದ ಹೆಣ್ಣು ಹುಲಿ ಎಂದು ತಿಳಿಸಲಾಗಿದೆ.

ಮೈಸೂರು, ಅಕ್ಟೋಬರ್ 29: ಭಾನುವಾರ ಹುಲಿ ದಾಳಿಗೆ ರೈತ (Farmer) ರಾಜಶೇಖರ ಸಾವನ್ನಪ್ಪಿರುವಂತಹ ಘಟನೆ ಮೈಸೂರಿನ ( Mysuru) ಸರಗೂರು ತಾಲೂಕಿನ ಬೆಣ್ಣೆಗೆರೆ ಗ್ರಾಮದಲ್ಲಿ ನಡೆದಿತ್ತು. ರೈತನನ್ನು ಬಲಿ ಪಡೆದಿದ್ದ ಹುಲಿಯನ್ನು ಹುಡುಕುತ್ತಿದ್ದ ಅರಣ್ಯ ಇಲಾಖೆಯ ಬಲೆಗೆ ಹುಲಿಯೊಂದು ಬಿದ್ದಿದೆ. ಸಾಕಾನೆಗಳ ಸಹಾಯದಿಂದ ಯಡಿಯಾಲ ಅರಣ್ಯ ವಲಯದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಸೆರೆ ಹಿಡಿದಿರುವ ಹುಲಿಯನ್ನು ಅರಣ್ಯ ಪ್ರದೇಶಕ್ಕೆ ರವಾನಿಸಲಾಗಿದೆ.
ಹುಲಿ ಸೆರೆ ಹಿಡಿಯಲು ಸೋಮವಾರದಿಂದ ನಿರಂತರ ಕಾರ್ಯಾಚರಣೆ
ಕೆಲ ದಿನಗಳ ಹಿಂದೆ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತ ರಾಜಶೇಖರ್ (58) ಮೇಲೆ ಹುಲಿ ಒಮ್ಮೆಲೆ ದಾಳಿ ಮಾಡಿತ್ತು. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಕಾರ್ಯಸೂಚಿ ಅನ್ವಯ ಮೇಲಾಧಿಕಾರಿಗಳ ಆದೇಶದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ಇಲಾಖಾ ಪಶು ವೈಧ್ಯಾಧಿಕಾರಿಗಳ ತಂಡ ಒಳಗೊಂಡಂತೆ ಸಾಕಾನೆಗಳೊಂದಿಗೆ ಸದರಿ ಸ್ಥಳದ ಸುತ್ತಾ-ಮುತ್ತಾ ದಾರಿ ತಪ್ಪಿದ ಹುಲಿಯನ್ನು ಸುರಕ್ಷತೆಯಾಗಿ ಸೆರೆ ಹಿಡಿಯುವ ಕಾರ್ಯಾಚರಣೆಯನ್ನು ಸೋಮವಾರದಿಂದ ನಡೆಸುತ್ತಿತ್ತು. ಹುಲಿಯ ಚಲನ ವಲನವನ್ನು ಅತೀ ಸೂಕ್ಷ್ಮವಾಗಿ ನಿಗಾವಹಿಸಲಾಗುತ್ತಿತ್ತು.
ಈ ಹಂತಕ ಹುಲಿಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಸತತ ಪ್ರಯತ್ನ ಮಾಡುತ್ತಲೇ ಇತ್ತು. ಸಾಕಾನೆಗಳಾದ ಭೀಮ, ಮಹೇಂದ್ರ ಇವರ ಸಹಾಯದಿಂದ ಹುಲಿ ಕಾರ್ಯಾಚರಣೆ ಮುಂದುವರೆದಿತ್ತು. ಮಂಗಳವಾರ ಸಂಜೆ ಯಡಿಯಾಲ ಅರಣ್ಯ ವಲಯದ ಅಂಜನಾಪುರದ ಬಳಿ ಅರಣ್ಯ ಇಲಾಖೆಯ ಅರವಳಿಕೆ ತಜ್ಞ ಶೂಟರ್‌ಗಳ ಸಹಾಯದಿಂದ ಹುಲಿಯನ್ನು ಸೆರೆ ಹಿಡಿಯಲಾಗಿದೆ.
ಸೆರೆ ಸಿಕ್ಕ ಹುಲಿಗೂ ರೈತನ ಕೊಲೆಗೂ ಏನೂ ಸಂಬಧವಿಲ್ಲ
ರೈತನ ಮೇಲೆ ದಾಳಿ ಮಾಡಿದ ಸ್ಥಳದಿಂದ 10-15 ಕಿಮೀ ದೂರದಲ್ಲಿ ಈ ಹುಲಿ ಸಿಕ್ಕ ಕಾರಣ ಇದೇ ಹುಲಿ ರೈತನ ಹತ್ಯೆ ಮಾಡಿದೆ ಎಂದು ಊಹಿಸಲಾಗಿತ್ತು. ಸೆರೆ ಸಿಕ್ಕ ಹುಲಿಯನ್ನು ಪರಿಶೀಲಿಸಿರುವಾಗ ಇದು ಸುಮಾರು 7 ವರ್ಷದ ಹೆಣ್ಣು ಹುಲಿಯಾಗಿದ್ದು, ರೈತನ ಮೇಲೆ ದಾಳಿ ಮಾಡಿದ ಹುಲಿ ಇದಲ್ಲ ಎಂದು ತಿಳಿದು ಬಂದಿದೆ. ರಾಜಶೇಖರ್ ಮೇಲೆ ದಾಳಿ ಮಾಡಿದ ಹುಲಿಗಾಗಿ ಶೋಧ ಮುಂದುವರೆದಿದೆ.
ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ದೃಶ್ಯಗಳ ಬಗ್ಗೆ ಇಲಾಖೆ ಸ್ಪಷ್ಟನೆ
ಅಕ್ಟೋಬರ್ 28 ರಿಂದ ಸಾಮಾಜಿಕ ಜಾಲತಾಣಗಳಲ್ಲಿ ಬೆಣ್ಣೆಗೆರೆ ಗ್ರಾಮದಲ್ಲಿ 3 ಹುಲಿ ಮರಿಗಳು ಸಿಕ್ಕಿರುವುದಾಗಿ ಡ್ರೋನ್ನಲ್ಲಿ ಸೆರೆ ಹಿಡಿದ ಕೆಲವು ದೃಶ್ಯಗಳು ಹರಿದಾಡಿದ್ದವು. ಈ ಕುರಿತು ಸ್ಪಷ್ಟನೆ ನೀಡಿರುವ ಅರಣ್ಯ ಇಲಾಖೆ, ಸದರಿ ಚಿತ್ರದಲ್ಲಿರುವ ಹುಲಿ ಮರಿಗಳು ಈ ವಲಯಕ್ಕೆ ಸಂಭಂದಿಸಿರುವುದಿಲ್ಲ ಎಂದು ಹೇಳಿದೆ.
ಇದನ್ನೂ ಓದಿ ಹುಲಿ ದಾಳಿಯಿಂದ ರೈತ ಸಾವು: ಅರಣ್ಯ ಸಚಿವ ಈಶ್ವರ್ ಖಂಡ್ರೆಗೆ ಮೈಸೂರಲ್ಲಿ ಘೇರಾವ್
ಯಶಸ್ವಿ ಕಾರ್ಯಾಚರಣೆಯಿಂದ ಗ್ರಾಮಸ್ಥರ ನಿಟ್ಟುಸಿರು
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರೈತರು ಪ್ರತಿಭಟನೆಯನ್ನು ಸಹ ನಡೆಸಿದ್ದರು. ಮೈಸೂರು ಕೆಆರ್ ಆಸ್ಪತ್ರೆ ಶವಾಗಾರದ ಬಳಿ ಆಗಮಿಸಿದ್ದ ಸಚಿವ ಈಶ್ವರ್ ಖಂಡ್ರೆಗೆ ರೈತರು ಘೇರಾವ್ ಹಾಕಿದ್ದರು. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಮಹದೇವಪ್ಪ ಕೂಡ ಸ್ಥಳಕ್ಕೆ ಭೇಟಿ ನೀಡಿದ್ದರು. ಈ ವೇಳೆ ಪ್ರತಿಭಟನಾಕಾರರು ಸಚಿವ ಈಶ್ವರ್ ಖಂಡ್ರೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಅರಣ್ಯ ಇಲಾಖೆಯ ಈ ಯಶಸ್ವಿ ಕಾರ್ಯಾಚರಣೆಯಿಂದ ಗ್ರಾಮದ ಜನರು ನಿಶ್ಚಿಂತರಾಗಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:27 pm, Wed, 29 October 25



