ಮೈಸೂರು: ರಾಮನಗರದಲ್ಲಿ ನಡೆದದ್ದು ಕೇವಲ ಘಟನೆಯಲ್ಲ. ಅದು ಸಚಿವರೊಬ್ಬರ ದುರಹಂಕಾರದ ಪರಮಾವಧಿಯ ಪ್ರದರ್ಶನ. ಮುಖ್ಯಮಂತ್ರಿ ವೇದಿಕೆಯಲ್ಲಿದ್ದಾಗ ಹೇಗೆ ನಡೆದುಕೊಳ್ಳಬೇಕೆಂಬುದೇ ಇವರಿಗೆ ಗೊತ್ತಿಲ್ಲ. ಸಿಎಂ ಎದುರು ತೊಡೆ ತಟ್ಟುವುದು, ಗಂಡಸಾ ಎಂದು ಕೇಳುವುದು ಎಷ್ಟರಮಟ್ಟಿಗೆ ಸರಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು. ಆ ಕಾರ್ಯಕ್ರಮದ ಪ್ರತಿಮೆ ಮಾಡಿಸಿದ್ದು ಅವರಲ್ಲ, ನಾನು. ಪೂಜೆ ಮಾಡಲಿ ಉದ್ಘಾಟನೆ ಮಾಡಲಿ. ಆದರೆ ಇಂಥ ಮಾತುಗಳು ಸರಿಯಲ್ಲ. ಸಾರ್ವಜನಿಕ ಜೀವನದಲ್ಲಿ ಧಿಕ್ಕಾರ ಜಯಕಾರಗಳು ಸಾಮಾನ್ಯ. ಅವನ್ನು ತಾಳ್ಮೆಯಿಂದ ಸ್ವೀಕರಿಸಬೇಕು. ಹಿಂದೆ ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಬೇಕು ಎಂದು ಷಡ್ಯಂತ್ರ ಮಾಡಿದ್ದರು. ಇಂದು ಮುಖ್ಯಮಂತ್ರಿಗೆ ಮಾಡಿದ ಅವಮಾನವನ್ನು ಬಿಜೆಪಿಗೆ ಮಾಡಿದ ಅವಮಾನ. ಇದು ಆರ್ಎಸ್ಎಸ್ ಹಾಗೂ ಜನತೆಗೆ ಮಾಡಿರುವ ಅವಮಾನ ಎಂದು ವಿಶ್ಲೇಷಿಸಿದರು. (ಗಂಡಸ್ತನ) ಪದ ಬಳಕೆ ಬಗ್ಗೆ ಚರ್ಚೆ ಆಗಬೇಕು ಎಂದು ಆಗ್ರಹಿಸಿದರು.
ಸಮಾರಂಭದಲ್ಲಿದ್ದ ಶಾಸಕಿ ಅನಿತಾ ಸಹ ಈ ವಿಚಾರಕ್ಕೆ ವಿರೋಧ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ಈ ಪದಬಳಕೆ ಸಮ್ಮತವಾಗಿಲ್ಲ. ಅಭಿವೃದ್ದಿ ವಿಚಾರದ ಬಗ್ಗೆ ಅಶ್ವತ್ಥ ನಾರಾಯಣ ನೀಡಿರುವ ಹೇಳಿಕೆ ವಿಚಾರದ ಬಗ್ಗೆ ಯಾವ ಥರದ ಅಭಿವೃದ್ಧಿ ಎಂದು ಮುಖ್ಯಮಂತ್ರಿಯೇ ಒಂದು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಲಿ ಎಂದು ಸವಾಲು ಹಾಕಿದರು. ಅಶ್ವತ್ಥ ನಾರಾಯಣ ಅವರು ನೀಡಿದ ಹೇಳಿಕೆ ಸರಿಯಿದ್ದರೆ ವೇದಿಕೆಯಲ್ಲಿಯೇ ಇದ್ದ ಅವರ ಪಕ್ಷದವರೇ ಆದ ಯೋಗೇಶ್ವರ ಮತ್ತು ಪುಟ್ಟಣ್ಣ ಏಕೆ ಬೆಂಬಲಕ್ಕೆ ಹೋಗಲಿಲ್ಲ ಎಂದು ಪ್ರಶ್ನಿಸಿದರು.
ನಾವು ಮಾಡ್ತಾ ಇರೋದು ರಾಜಕಾರಣ. ನಮಗೆ ನಮ್ಮದೇ ಆದ ಸ್ವಾಭಿಮಾನ ಇದೆ. ಅವರು ಹೇಳುವುದನೆಲ್ಲಾ ಕೇಳೋಕೆ ಆಗುತ್ತಾ? ಅವರ ಎಲ್ಲ ಸವಾಲುಗಳನ್ನು ಎದುರಿಸಲು ಬದ್ಧರಾಗಿದ್ದೇ. ಇದು ಮುಖ್ಯಮಂತ್ರಿಯನ್ನು ಅಧಿಕಾರದಿಂದ ಇಳಿಸಲು ನಡೆಸಿರುವ ತಂತ್ರಗಾರಿಕೆ ಭಾಗ. ಬಿಟ್ ಕಾಯಿನ್ ಮಾಹಿತಿ ನಮಗೆ ಕೊಟ್ಟಿದ್ದೇ ಸಚಿವ ಅಶ್ವತ್ಥ ನಾರಾಯಣ. ಸಿಎಂ ಇಳಿಸಲು ಹೋರಾಟ ಮಾಡುವಂತೆ ಅವರ ಪಕ್ಷದವರೇ ಮಾಹಿತಿ ನೀಡಿದರು ಎಂದು ಮಾಹಿತಿ ನೀಡಿದರು.
ರಾಮನಗರಕ್ಕೂ, ಸಚಿವ ಅಶ್ವತ್ಥ ನಾರಾಯಣ ಅವರಿಗೂ ಏನು ಸಂಬಂಧ ಎಂದು ಪ್ರಶ್ನಿಸಿದ ಅವರು, ಜಿಲ್ಲೆಗಾಗಿ ಅವರು ಏನು ಮಾಡಿದ್ದಾರೆಂದು ಹೇಳಲಿ. ಅಭಿವೃದ್ಧಿ ವಿಚಾರದಲ್ಲಿ ಪಟ್ಟಿ ಇದ್ದರೆ ಬಿಡುಗಡೆ ಮಾಡಲಿ. ಹೊಸದಾಗಿ ಜಿಲ್ಲೆ ರೂಪಿಸಿದ ಎಚ್.ಡಿ.ಕುಮಾರಸ್ವಾಮಿ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ರಾಜಕೀಯ ಏನೇ ಇರಲಿ ಎಚ್ಡಿಕೆ ಒಂದಿಷ್ಟು ಕಟ್ಟಡ ಕಟ್ಟಿಸಿದ್ದಾರೆ. ಇದು ಒಪ್ಪಿಕೊಳ್ಳುವ ವಿಚಾರ, ಆದರೆ ಅಶ್ವತ್ಥ್ ಯಾರು? ರಾಮನಗರ ಜಿಲ್ಲೆಯ ಅಭಿವೃದ್ಧಿಗೆ ನಮ್ಮ ಕೊಡುಗೆಯೂ ಇದೆ ಎಂದು ವಿವರಿಸಿದರು. ರಾಮನಗರದಲ್ಲಿ ಅಂಬೇಡ್ಕರ್, ಕೆಂಪೇಗೌಡ ಪ್ರತಿಮೆ ಸ್ಥಾಪಿಸಿದ್ದು ಯಾರು? ಅಶ್ವತ್ಥ ನಾರಾಯಣ್ ಸ್ಥಾಪಿಸಿದ್ದಾ? ಅದು ನಮ್ಮ ಕೊಡುಗೆ. ವೇದಿಕೆಯಲ್ಲಿ ಅವರು ಅದೇನು ಸುಳ್ಳು ಹೇಳಿದರೋ, ಏಕೆ ಗಲಾಟೆ ಆಯ್ತೋ ನನಗೆ ಗೊತ್ತಿಲ್ಲ. ಈ ಬಗ್ಗೆ ಮಾಹಿತಿ ಪಡೆದು ಮಾತನಾಡುತ್ತೇನೆ. ಈವರೆಗೂ ಸೌಜನ್ಯಕ್ಕಾದರೂ ಯಾವ ವಿಚಾರವನ್ನು ಅಶ್ವತ್ಥ ನಾರಾಯಣ್ ನಮ್ಮ ಜೊತೆ ಮಾತನಾಡಿಲ್ಲ ಎಂದು ದೂರಿದರು.
ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆ ನಿಲ್ಲಿಸಲು ಬಿಜೆಪಿ ಕುಂಟು ನೆಪ ಹೇಳುತ್ತಿದೆ. ನಮ್ಮ ಹೋರಾಟ ಕಂಡು ಅವರ ಹೊಟ್ಟೆಯಲ್ಲಿ ಸಂಕಟ ಬಂದಿದೆ. ನಾವು ಬದುಕಿರುವವರೆಗೆ ನಮ್ಮ ಹೋರಾಟ ನಿಲ್ಲಿಸಲು ಸಾಧ್ಯವಿಲ್ಲ. ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವವರಿಗೆ ಸಿದ್ದರಾಮಯ್ಯ ಮತ್ತು ನನ್ನ ಸಹಿ ಇರುವ ಸರ್ಟಿಫಿಕೆಟ್ ನೀಡುತ್ತೇವೆ ಎಂದು ತಿಳಿಸಿದರು. ಪಾದಯಾತ್ರೆಗೆ ಯಾರೆಲ್ಲಾ ಬರುತ್ತಾರೆ ಎಂಬುದನ್ನು ತಿಳಿದುಕೊಳ್ಳಲು ವಿಡಿಯೊ ಮಾಡಿಸುತ್ತಿದ್ದೇವೆ. ಅವರು ಪಾದಯಾತ್ರೆಯ ಬಗ್ಗೆ ಮಾಹಿತಿ ಕಲೆಹಾಕುತ್ತಾರೆ ಎಂದು ಮಾಹಿತಿ ನೀಡಿದರು.
ರೈತರ ಆದಾಯ ದ್ವಿಗುಣಗೊಳಿಸುವ ಭರವಸೆ ನೀಡಿದ್ದ ಬಿಜೆಪಿ ಕೃಷಿ ಕಾಯ್ದೆಗಳಿಗೆ ತಿದ್ದುಪಡಿ ತಂದಿತ್ತು. ರೈತರ ಪರ ಸಂಸತ್ನಲ್ಲಿ ಹೋರಾಟ ಮಾಡಿದ್ದು ಕಾಂಗ್ರೆಸ್ ಪಕ್ಷ. ಅದರ ಪ್ರತಿಫಲವಾಗಿ ಪ್ರಧಾನಿ ಮೋದಿ ಅವರು ಕಾಯ್ದೆಗಳನ್ನು ಹಿಂಪಡೆದರು. ಅನ್ನದಾತರಿಗೆ ಕೈಮುಗಿದು ಕ್ಷಮಿಸಿ ಎಂದು ಬೇಡಿಕೊಂಡಿದ್ದರು. ಕಾಂಗ್ರೆಸ್ ಪಕ್ಷ ನಮ್ಮ ದೇವಾಲಯ. ಬಿಜೆಪಿ ದುರಾಡಳಿತ ಅಂತ್ಯಗೊಳಿಸಲು ಈ ಪಾದಯಾತ್ರೆ ಎಂದು ತಿಳಿಸಿದರು. ಇದು ನಮ್ಮ ಕುಡಿಯವ ನೀರಿಗಾಗಿ ಜನಜಾಗೃತಿ ಅಭಿಯಾನ ಎಂದು ವಿವರಿಸಿದರು.
ಇದನ್ನೂ ಓದಿ: ಮಂಡ್ಯದಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋದ ಬೆಂಬಲಿಗರ ವಿರುದ್ಧ ಡಿಕೆ ಶಿವಕುಮಾರ್ ಗರಂ; ಮೊಬೈಲ್ ಕಸಿದುಕೊಂಡು ಸಿಡಿಮಿಡಿಗೊಂಡ ಡಿಕೆಶಿ