ಮೈಸೂರು: ಕರ್ನಾಟಕದ ವಿದ್ಯಾರ್ಥಿಗಳಿಗೆ ವಿತರಿಸುವ ಪಠ್ಯಪುಸ್ತಕಗಳ ಮುದ್ರಣ (Text Book Printing) ಈಗಾಗಲೇ ಪೂರ್ಣಗೊಂಡಿದೆ. ಈ ಹಂತದಲ್ಲಿ ದೇವನೂರು ಮಹಾದೇವ (Devanur Mahadeva) ಅವರ ಬರಹವನ್ನು ಕೈಬಿಡಲು ಸಾಧ್ಯವಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ (BC Nagesh) ಹೇಳಿದರು. ನಗರದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ತನ್ನ ಪಾಠ ತೆಗೆಯುವಂತೆ ಸಾಹಿತಿ ದೇವನೂರು ಹೇಳಿಕೆ ನೀಡಿದ್ದಾರೆ. ಅವರು ಮೊದಲೇ ಹೀಗೆ ಹೇಳಿದ್ದರೆ ಚರ್ಚಿಸಬಹುದಿತ್ತು. ಆದರೆ ಈಗಾಗಲೇ ಪಠ್ಯಪುಸ್ತಕಗಳ ಮುದ್ರಣ ಕಾರ್ಯ ಪೂರ್ಣಗೊಂಡಿದೆ. ಇನ್ನೇನು ಅದು ಮಕ್ಕಳ ಕೈಸೇರಲಿದೆ. ಈ ಹಂತದಲ್ಲಿ ಪಠ್ಯ ತೆಗೆಯಲು ಸಾಧ್ಯವಿಲ್ಲ ಎಂದು ಹೇಳಿದರು.
ಈ ಅಂಶವನ್ನು ದೇವನೂರು ಮಹದೇವ ಅವರಿಗೂ ಮನವರಿಕೆ ಮಾಡಿಕೊಡುತ್ತೇನೆ. ದೇವನೂರು ಮಹದೇವಗೆ ತಾತ್ವಿಕ ಭಿನ್ನಾಭಿಪ್ರಾಯ ಇರಬಹುದು. ಆದರೆ ನಮಗೆ ಇಲ್ಲ. ಈ ವಿಚಾರದ ಬಗ್ಗೆ ಮಾತನಾಡಿ ಸಮಸ್ಯೆ ಬಗೆಹರಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ದೇವನೂರು ಮಹದೇವ ಹೇಳುತ್ತಿರುವುದು ಸತ್ಯದ ಮಾತು. ನಾವು ಎಲ್ಲವನ್ನೂ ಬದಲಾವಣೆ ಮಾಡಿದ್ದೇವೆ. ಹಿಂದಿನಿಂದಲೂ ಬ್ರಿಟಿಷರು ತಯಾರಿಸಿದ ಪಠ್ಯವೇ ಇತ್ತು. ನಾವು ಬಂದ ಮೇಲೆ ರಾಷ್ಟ್ರೀಯತೆಯನ್ನು ಪಠ್ಯದಲ್ಲಿ ಸೇರಿಸಿದ್ದೇವೆ. ಈ ಹಿಂದೆ ಎಲ್ಲವೂ ಅಮೆರಿಕ ಹೇಳಿದಂತೆ ನಡೆಯುತ್ತಿತ್ತು. ವಾಜಪೇಯಿ ಪ್ರಧಾನಿಯಾದ ಮೇಲೆ ಎಲ್ಲವೂ ಬದಲಾಯಿತು. ಪರಿವರ್ತನೆ ಅನ್ನೋದು ಜಗದ ನಿಯಮ ಎಂದು ತಿಳಿಸಿದರು.
ಕಾಂಗ್ರೆಸ್ಸಿನವರಂತೆ ನಾವು ಕಂಡಕಂಡವರ ಹಿತಕ್ಕಾಗಿ ರಾಜಕಾರಣ ಮಾಡಿಲ್ಲ. ನಾವು ಜನರ ಹಿತಕ್ಕಾಗಿ, ಜನಪರವಾಗಿ ರಾಜಕಾರಣ ಮಾಡಿದ್ದೇವೆ. ನಮ್ಮ ದೇಶದ ಜನರಿಗೆ ಯಾವುದು ಒಳ್ಳೆಯದೋ ಅದನ್ನು ಮಾಡಿದ್ದೇವೆ. ಎಲ್ಲಾ ವಾದ ಮುಗಿದ ಬಳಿಕ ಈಗ ಚಾತುರ್ವರ್ಣ ಬಂದಿದೆ ಎಂದು ವ್ಯಂಗ್ಯವಾಡಿದರು.
ತಮ್ಮ ಬರಹವನ್ನು ಪಠ್ಯವಾಗಿ ಬಳಸಬಾರದು ಎಂದು ದೇವನೂರು ಮಹದೇವ ಪತ್ರಬರೆದಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾಗಿದೆ. ಆದರೆ ನನಗೆ ಅಂಥ ಯಾವುದೇ ಪತ್ರ ಬಂದಿಲ್ಲ. ಈ ವಿಚಾರವಾಗಿ ನಾನು ಯಾವುದೇ ಪ್ರತಿಕ್ರಿಯೆ ಕೊಡುವುದಿಲ್ಲ. ನಮ್ಮದು ಓನ್ಲಿ ಸಂಸ್ಕೃತಿ ಅಲ್ಲ. ಆಲ್ ಆಫ್ ಯು ಸಂಸ್ಕೃತಿ. ಎಲ್ಲಾ ಬಗೆಯ ಒಳ್ಳೆಯದನ್ನು ಪಡೆದು ಪಠ್ಯದಲ್ಲಿ ಅಳವಡಿಕೆ ಮಾಡಿದ್ದೇವೆ. ಕಾಂಗ್ರೆಸ್ ನಾಯಕರದ್ದು ನೀಚ ಬುದ್ಧಿ. ವಿಚಾರಗಳ ಚರ್ಚೆಯಲ್ಲಿ ಸೋತು ವ್ಯಕ್ತಿಗತವಾಗಿ ಟಾರ್ಗೆಟ್ ಮಾಡಿ ಮಾತನಾಡುತ್ತಿದ್ದಾರೆ ಎಂದು ಅವರು ಹೇಳಿದರು.
ಶಿಕ್ಷಣದ ಜೊತೆಗೆ ಇತರ ಹಲವು ಕ್ಷೇತ್ರಗಳಲ್ಲಿಯೂ ನಾವು ಬದಲಾವಣೆಗಳನ್ನು ತಂದಿದ್ದೇವೆ. ಕೇಂದ್ರದಲ್ಲಿ ವಾಜಪೇಯಿ ನೇತೃತ್ವದ ಬಿಜೆಪಿ ಸರ್ಕಾರ ಬರುವವರೆಗೂ ಅಂತಾರಾಜ್ಯ ರಸ್ತೆ ಇರಲಿಲ್ಲ. ರಸ್ತೆಗಳ ಅಭಿವೃದ್ಧಿ ಮಾಡಿದ್ದೇವೆ, ಅದರ ಬಗ್ಗೆಯೂ ಮಾತನಾಡಿ. ಬರಗೂರು ರಾಮಚಂದ್ರಪ್ಪ ಪಠ್ಯ ಬದಲಾಯಿಸಿದರೆ, ಒಂದೇ ಪಂಥದ ಬರಹಗಳನ್ನು ಸೇರಿಸಿದರೆ ಅದು ತಪ್ಪಲ್ಲ ಅಲ್ವಾ? ಈಗ ಮಾತ್ರ ನಿಮಗೆ ಪಂಥಗಳು ಕಾಣುತ್ತಿವೆ ಎಂದು ವ್ಯಂಗ್ಯವಾಡಿದರು. ನಾವು ಎಲ್ಲವನ್ನೂ ಒಪ್ಪಿಕೊಂಡು ಶ್ರೇಷ್ಠವಾದುದ್ದನ್ನು ಕೊಡುತ್ತಿದ್ದೇವೆ ಎಂದು ಹೇಳಿದರು.
ಪಠ್ಯಪರಿಷ್ಕರಣೆಗೆ ಕರವೇ ವಿರೋಧ
ಪಠ್ಯ ಪುರಷ್ಕರಣೆ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಧ್ವನಿ ಎತ್ತಿದೆ. ಸರ್ಕಾರ ಕೂಡಲೇ ಸಮಿತಿಯ ಎಲ್ಲ ಪರಿಷ್ಕರಣೆಯನ್ನೂ ತಿರಸ್ಕರಿಸಬೇಕು. ಈಗಾಗಲೇ ಮುದ್ರಿಸಿರುವ ಹಳೆಯ ಪಠ್ಯಪುಸ್ತಕಗಳನ್ನೇ ಶಾಲೆಗಳಿಗೆ ನೀಡಬೇಕು. ಶಾಲೆಗಳು ಆರಂಭವಾಗಿರುವುದರಿಂದ ವಿದ್ಯಾರ್ಥಿಗಳಿಗೆ ಅನಾನುಕೂಲವಾಗದಂತೆ, ಕೂಡಲೇ ಹಳೆಯ ಪಠ್ಯ ಪುಸ್ತಕಗಳನ್ನೇ ಒದಗಿಸಬೇಕು. ಇಷ್ಟೆಲ್ಲ ಅವಾಂತರಕ್ಕೆ ಕಾರಣವಾದ ಸಮಿತಿಯನ್ನು ಈ ಕೂಡಲೇ ವಿಸರ್ಜಿಸಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡದ್ರೋಹದ ಕೆಲಸವನ್ನೇ ಮಾಡುತ್ತ ಬಂದ ವ್ಯಕ್ತಿಯನ್ನು ಪಠ್ಯಪುಸ್ತಕ ಪರಿಶೀಲನೆಗೆ ಬಿಟ್ಟರೆ ಏನಾಗಬಹುದು ಎಂಬುದನ್ನು ಇಂದು ನಾವು ನೋಡುತ್ತಿದ್ದೇವೆ ಎಂದು ಕರವೇ ಅಧ್ಯಕ್ಷ ನಾರಾಯಣಗೌಡ ಸರಣಿ ಟ್ವೀಟ್ ಮಾಡಿದ್ದಾರೆ.
ಈ ಬೆಳವಣಿಗೆಯ ಬಗ್ಗೆ ಕನ್ನಡದ ಸಾರಸ್ವತ ಲೋಕ ಎದ್ದು ನಿಂತು ಪ್ರತಿಭಟಿಸುತ್ತಿದೆ. ಮಕ್ಕಳ ಪಠ್ಯದಲ್ಲಿ ನಂಜು ತುಂಬುವ ಇಂಥವರ ವಿರುದ್ಧ ಶೈಕ್ಷಣಿಕ, ಬುದ್ಧಿಜೀವಿ ವಲಯ ಧ್ವನಿ ಎತ್ತಿದೆ. ಕರ್ನಾಟಕದ, ಕನ್ನಡದ ಕೀರ್ತಿಶಿಖರಗಳಲ್ಲಿ ಒಬ್ಬರಾದ ಮೇರುಸಾಹಿತಿ ದೇವನೂರು ಮಹಾದೇವ ತಮ್ಮ ಲೇಖನ ಹಿಂದಕ್ಕೆ ಪಡೆದಿರುವುದನ್ನು ಕೇಳಿ ಆಘಾತವಾಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕ್ಷಣಕಾಲವೂ ತಡಮಾಡದೆ ಮಧ್ಯೆ ಪ್ರವೇಶಿಸಿ ಬಿಕ್ಕಟ್ಟನ್ನು ಬಗೆಹರಿಸಬೇಕು ಎಂದು ಆಗ್ರಹಿಸಿದ್ದಾರೆ.
ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:51 am, Wed, 25 May 22